ಬೆಳಗಾವಿ ಜಿಲ್ಲೆಯ ಜಾತಕವೇ ಹೀಗಿದೆಯೆನಿಸುತ್ತಿದೆ. ಬೆಳಗಾವಿ ನೆಲದಲ್ಲಿ ಒಂದಿಲ್ಲೊಂದು ಬಂಡಾಯ ನಡೆದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿದ್ದು ಕೇವಲ ನಿನ್ನೆ ಮೊನ್ನೆಯ ಮಾತಲ್ಲ. ಎಪ್ಪತ್ತರ ದಶಕದಿಂದಲೂ ಇದು ನಡೆದುಕೊಂಡೇ ಬಂದಿದೆ. ಯಾವದೇ ಪಕ್ಷದ ಸರಕಾರವಿರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ, ಇಲ್ಲಿಯ ರಾಜಕಾರಣಿಗಳು ಹೇಳಿದ್ದನ್ನು ಕೇಳಿಕೊಂಡು ಸುಮ್ಮನೇ ಕೂಡುವ ಜಾಯಮಾನದವರಲ್ಲ.
ಬೆಳಗಾವಿಯ ರಾಜಕೀಯ ನಾಯಕರು ತಮಗೆ “ಅನ್ಯಾಯವಾಗಿದೆ” ಎಂದು ಅನಿಸಿದಾಗಲೆಲ್ಲ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿಯೇ ಬಂಡೆದ್ದಿದ್ದಾರೆ. ಸರಕಾರವನ್ನೇ ಕೆಡವಿದ್ದಾರೆ. ಮುಖ್ಯಮಂತ್ರಿಗಳನ್ನು ಮನೆಗೆ ಕಳಿಸಿದ್ದಾರೆ. ಕೆಲವರು ಮಾಜಿ ಮುಖ್ಯಮಂತ್ರಿಗಳನ್ನು ಚುನಾವಣೆಯ ಕಣದಲ್ಲಿಯೇ ಹೀನಾಯವಾಗಿ ಸೋಲಿಸಿ ಕಳಿಸಿದ್ದಾರೆ.
ಎಪ್ಪತ್ತರ ದಶಕದ ಆರಂಭದಲ್ಲಿ ವಿರೇಂದ್ರ ಪಾಟೀಲರ ಸರಕಾರದ ಪತನಕ್ಕೆ ಕಾರಣರಾದವರಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗದ ಹುಲಿ, ಬೆಂಕಿಯ ಚೆಂಡು ದಿ. ವಸಂತರಾವ ಪಾಟೀಲರೂ ಒಬ್ಬರು. ಗದಗಿನ ಹುಲಕೋಟಿ ಹುಲಿ ದಿ. ಕೆ. ಎಚ್. ಪಾಟೀಲ, ವಿಜಯಪುರದ ದಿ. ಬಿ. ಎಮ್. ಪಾಟೀಲರು ವಸಂತರಾವ ಜೊತೆ ಕೈಗೂಡಿಸಿ ವಿರೇಂದ್ರ ಪಾಟೀಲರ ವಿರುದ್ಧ ಬಂಡೆದ್ದು ರಾಜಿನಾಮೆ ನೀಡಿ ಸರಕಾರದಿಂದ ಹೊರಬಂದಾಗ ಸರಕಾರ ಪತನವಾಗಿ ವಿಧಾನಸಭೆ ಚುನಾವಣೆ ನಡೆದಾಗ ಅಧಿಕಾರಕ್ಕೆ ಬಂದದ್ದೇ ದಿ. ದೇವರಾಜ ಅರಸು ಸರಕಾರ. 1978 ರಲ್ಲಿ ಅರಸು ವಿರುದ್ಧ ಮತ್ತೆ ಬಂಡಾಯದ ಬಾವುಟ ಹಾರಿದಾಗಲೂ ಬೆಳಗಾವಿಯ ವಸಂತರಾವ ಅವರೇ ಮುಂಚೂಣಿಯಲ್ಲಿದ್ದವರು. ಆದರೆ, ಅರಸು ತಂತ್ರಕ್ಕೆ ಸೋತು ಸೊರಗಿದ ವಸಂತರಾವ 1982 ರವರೆಗೂ ರಾಜಕೀಯ ಅಜ್ಞಾತವಾಸ ಅನುಭವಿಸಬೇಕಾಯಿತು.
1983 ರಲ್ಲಿ ರಾಜ್ಯದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರಕಾರ ರಾಮಕೃಷ್ಣ ಹೆಗಡೆಯವರ ನಾಯಕತ್ವದಲ್ಲಿ ರಚನೆಯಾದಾಗ ವಸಂತರಾವ ಪಾಟೀಲ ಕಂದಾಯ ಮಂತ್ರಿ. ಪ್ರಕರಣವೊಂದರ ಹಿನ್ನೆಲೆಯಲ್ಲಿ ಮಂತ್ರಿಪದ ತ್ಯಾಗ ಮಾಡಿದರು. ಹೆಗಡೆಯವರೇ ತಮ್ಮ ಪದತ್ಯಾಗಕ್ಕೆ ಕಾರಣವಾದ ಸ್ಕ್ರಿಪ್ಟ್ ಬರೆದವರು ಎಂಬ ಭಾವನೆ ವಸಂತರಾವ ನನ್ನೆದುರು ಅನೇಕ ಸಲ ಹೇಳಿಕೊಂಡಿದ್ದರು!
ವಸಂತರಾವ ಮತ್ತು ಹೆಗಡೆ ಮಧ್ಯೆ ಸಾಕಷ್ಟು ಸಲ ಶೀತಲ ಸಮರ ನಡೆದೇ ಇತ್ತು. ಅದು ಬಹಿರಂಗಕ್ಕೆ ಬಂದದ್ದು 1991 ರ ಲೋಕಸಭೆ ಚುನಾವಣೆಯಲ್ಲಿ. ಬೆಳಗಾವಿ ಲೋಕಸಭೆ ಮತಕ್ಷೇತ್ರದಿಂದ ವಸಂತರಾವ ಅವರ ಪುತ್ರ ಹಾಗೂ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ (1987 ರಿಂದ 1991ವರೆಗೆ) ಬ್ಯಾರಿಸ್ಟರ್ ಅಮರಸಿಂಹ ಪಾಟೀಲರಿಗೆ ಜನತಾದಳದ ಟಿಕೆಟ್ ನಿರಾಕರಿಸಿದಾಗ ವಸಂತರಾವ ಬಂಡಾಯದ ಕಹಳೆ ಊದಿದರು. ಬಾಗಲಕೋಟೆಯಿಂದ ಸ್ಪರ್ಧಿಸಿದ ಹೆಗಡೆಯವರನ್ನು ಸೋಲಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಸೇರಿದರು. ತಮ್ಮೊಂದಿಗೆ ಮಾಜಿ ಸಚಿವ ಡಿ. ಬಿ. ಇನಾಂದಾರ, ಲಕ್ಷ್ಮೀಸಾಗರ ಮತ್ತಿತರರನ್ನೂ ಕರೆದೊಯ್ದರು. ಬಾಗಲಕೋಟೆಯಲ್ಲಿ ಹೆಗಡೆಯವರು ಕಾಂಗ್ರೆಸ್ಸಿನ ದಿ. ಸಿದ್ದು ನ್ಯಾಮಗೌಡರ ಎದುರು 22 ಸಾವಿರ ಮತಗಳಿಂದ ಪರಾಭವಗೊಂಡಾಗ ವಸಂತರಾವ ಬಂಡಾಯಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿತ್ತು.
1988 ರಲ್ಲಿ ಟೆಲಿಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ರಾಜಿನಾಮೆ ಕೊಟ್ಟ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದಿದ್ದ ದಿ. ಎಸ್. ಆರ್. ಬೊಮ್ಮಾಯಿ ಅವರ 11 ತಿಂಗಳ ಸರಕಾರಕ್ಕೆ 20 ಶಾಸಕರು ಬೆಂಬಲ ಹಿಂತೆಗೆದುಕೊಂಡು ಸರಕಾರ ಪತನಗೊಂಡಾಗಲೂ ಬೆಳಗಾವಿ ನಾಯಕರ ಕೈವಾಡವಿದ್ದೇ ಇತ್ತು!

2018 ರಲ್ಲಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಸರಕಾರದ ವಿರುದ್ಧ ಬೆಳಗಾವಿ ಜಿಲ್ಲೆಯ ಗೋಕಾಕ ಶಾಸಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬಂಡಾಯವೇಳಲು ಬೆಳಗಾವಿಯ ಒಂದು ಸಣ್ಣ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯೇ ಕಾರಣವಾಗಿದ್ದು ಈಗ ಇತಿಹಾಸ. ಅಂದಿನ ಬಂಡಾಯದ ಕಿಡಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕದ ಪರಿಣಾಮವಾಗಿ ಇಡೀ ಸರಕಾರವೇ ಸಂಕಷ್ಟಕ್ಕೆ ಸಿಲುಕಿ ಕೊನೆಗೆ ಪತನಗೊಳ್ಳಬೇಕಾಯಿತು.
ಅತ್ಯಂತ ಕಠಿಣ ಸಮಯದಲ್ಲಿ, ಕಾಂಗ್ರೆಸ್ ಜೆಡಿಎಸ್ ಬಂಡಾಯಗಾರ ನೆರವಿನಿಂದಾಗಿ ಸರಕಾರ ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸೆರಗಿನಲ್ಲಿ ಬೆಂಕಿ ಬಿದ್ದಿದ್ದು ಬೆಳಗಾವಿಯಿಂದಲೇ! ಈ ಬೆಂಕಿಯನ್ನು ಯಡಿಯೂರಪ್ಪ ಅವರೇ ಹಾಕಿಕೊಂಡರೊ ಅಥವಾ ದಿಲ್ಲಿಯ ನಾಯಕರ ಮೂಲಕವೇ ಯಾರಾದರೂ ಸ್ವಪಕ್ಷಿಯರೇ ಹಾಕಿಸಿದರೊ ಎಂಬುದು ಇನ್ನೂ ಸ್ಪಷ್ಟವಾಗಬೇಕಾಗಿದೆ.
ಅಥಣಿಯಲ್ಲಿ 2018 ರ ವಿಧಾನಸಭೆಯ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಧಿಡೀರಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದು ಕೇವಲ ಬೆಳಗಾವಿಯಿಂದಲ್ಲದೇ ಬಿಜೆಪಿಯ ಎಲ್ಲ ವಲಯದಿಂದಲೂ ಪ್ರತಿರೋಧ ವ್ಯಕ್ತವಾಗಿದ್ದು ಈಗಾಗಲೇ ಹೈಕಮಾಂಡಿಗೆ ಬಿಸಿ ಮುಟ್ಟಿದೆಯೆನ್ನಲಾಗಿದೆ. ಒಬ್ಬ ಸೋತ ಅಭ್ಯರ್ಥಿಯನ್ನು ಸಂಪುಟಕ್ಕೆ ಸೇರಿಸಿಕೊಂಡ ಉದಾಹರಣೆ ಮುಂಬಯಿ ಕರ್ನಾಟಕದಲ್ಲಿಯೇ ಇಲ್ಲ. ಅಲ್ಲದೇ ಸವದಿಯವರೇನೂ ಮೂಲತಃ ಬಿಜೆಪಿ ಅಥವಾ ಆರ್.ಎಸ್.ಎಸ್.ದವರೂ ಅಲ್ಲ. ಅವರೂ ಜನತಾ ಪರಿವಾರ, ಲೋಕಶಕ್ತಿ ಮೂಲದವರೇ. ಹಾಗಾದರೆ ಅವರಲ್ಲಿ ಅಂತಹ ಅಸಾಧಾರಣ ಶಕ್ತಿಯನ್ನು ಬಿಜೆಪಿ ರಾಷ್ಟ್ರ ನಾಯಕರು ಕಂಡಿದ್ದಾರೆಯೇ ಎಂದು ರಾಜ್ಯ ಬಿಜೆಪಿ ನಾಯಕರು ಕೇಳುತ್ತಿರುವ ಪ್ರಶ್ನೆ.
ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಸವದಿ ಮತ್ತು ಹುಕ್ಕೇರಿಯಿಂದ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಉಮೇಶ ಕತ್ತಿ ಅವರಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಒಂದು ಕಾಲಕ್ಕೆ ಕತ್ತಿಯವರ ಗುಂಪಿನಲ್ಲೇ ಗುರುತಿಸಿಕೊಂಡಿದ್ದ ಸವದಿ ನಾಲ್ಕು ವರ್ಷಗಳ ಹಿಂದೆ ಕತ್ತಿ ಸಹೋದರ ರಮೇಶ ಕತ್ತಿ ವಿರುದ್ಧ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತರು. ಅಲ್ಲದೇ 2018 ರ ವಿಧಾನಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ಅಥಣಿಯಲ್ಲೇ ಬಿಡಾರ ಹೂಡಿ ಸವದಿ ಅವರನ್ನು ಸೋಲಿಸಿ ಮಹೇಶ ಕುಮಠಳ್ಳಿ ಅವರ ಗೆಲುವಿಗೆ ಕಾರಣರಾದರು.

ರಮೇಶ ಜಾರಕಿಹೊಳಿ ಅವರ ಬಂಡಾಯದಲ್ಲಿ ಮಹೇಶ ಕುಮಠಳ್ಳಿ ಅವರೂ ಕೈಜೋಡಿಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇಂಥ ಸಮಯದಲ್ಲಿ ಸವದಿ ಅವರನ್ನು ಮಂತ್ರಿ ಮಾಡಿದ್ದು ರಮೇಶ ಜಾರಕಿಹೊಳಿಯವರ ಕೋಪಾಗ್ನಿಗೆ ಕಾರಣವಾಗಿದ್ದು ಸಹಜವಾಗಿದೆ. ತಮ್ಮನ್ನು ನಂಬಿ ಬೆನ್ನಿಗೆ ಬಿದ್ದ ಕುಮಠಳ್ಳಿಯವರ ಭವಿಷ್ಯವೇನು? ಮೊದಲು ಅದರ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಜಾರಕಿಹೊಳಿ ಅವರು ಬಿಜೆಪಿ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಸವದಿ ಅವರ ಸಂಪುಟ ಸೇರ್ಪಡೆ ತಮ್ಮ ನಿರ್ಧಾರವಲ್ಲವೆಂದು ಯಡಿಯೂರಪ್ಪ ಅವರು ಈಗಾಗಲೇ ದಿಲ್ಲಿಯಲ್ಲಿ ಬಂಡುಕೋರರಿಗೆ ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಉಮೇಶ ಕತ್ತಿಯವರಿಗಾಗಲಿ, ರಮೇಶ ಜಾರಕಿಹೊಳಿಗಾಗಲಿ ಸವದಿಯವರು “ಕಾಮನ್ ಟಾರ್ಗೆಟ್” ಆಗಿದ್ದು ಸುಳ್ಳೇನಲ್ಲ. ಉಮೇಶ ಕತ್ತಿಯವರನ್ನು ಸಂಪುಟಕ್ಕೆ ತೆಗೆದುಕೊಳ್ಳದೇ ಹೋದರೆ ಆಗುವ ಅನಾಹುತವೇ ಬೇರೆ. ರಮೇಶ ಕತ್ತಿಗೆ ಬಿಜೆಪಿ ಲೋಕಸಭೆ ಟಿಕೆಟ್ ತಪ್ಪಿದಾಗಲೇ ಬಂಡಾಯದ ಬಾವುಟ ಹಾರಿಸಲು ತಯಾರಿ ನಡೆಸಿದ್ದ ಉಮೇಶ ಕತ್ತಿಗೆ ಈಗ “ಮಾಡು ಇಲ್ಲವೇ ಮಡಿ” ಎಂಬ ಸ್ಥಿತಿ. ಉಮೇಶ ಕತ್ತಿ ಅವರನ್ನು ಜಿಲ್ಲಾ ರಾಜಕೀಯದಲ್ಲಿ ತುಳಿಯಬೇಕೆಂದು ಸಂಸದರಾದ ಪ್ರಭಾಕರ ಕೋರೆ, ರೈಲು ಸಚಿವ ಸುರೇಶ ಅಂಗಡಿ ಅವಕಾಶ ಸಿಕ್ಕಾಗಲೆಲ್ಲ ತೆರೆಯ ಮರೆಯಲ್ಲೇ ಯತ್ನಿಸುತ್ತಲೇ ಇರುತ್ತಾರೆ. ಸವದಿ ಅವರು ಮಂತ್ರಿಯಾಗಿರುವುದು ಸಂಸದರಿಗೆ ಅಮೃತ ಕುಡಿದಷ್ಟೇ ಸಂತೋಷವಾಗಿದೆ. ಆದರೆ ಅವರು ಅದನ್ನು ತೋರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಮುಂದಿನ ಒಂದು ವಾರದೊಳಗೆ ನಡೆಯುವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಲ್ಲಿ ಉಮೇಶ ಕತ್ತಿಗೆ ಸ್ಥಾನ ಸಿಕ್ಕರೂ ಅಚ್ಚರಿಯೇನಿಲ್ಲ. ಅವರು ಒಳಗೆ ಬಂದರೂ ಒಂದು ಸಮಸ್ಯೆ, ಹೊರಗೆ ಉಳಿದರೂ ಮತ್ತೊಂದು ಸಮಸ್ಯೆ ಬೆಳಗಾವಿಯಿಂದಲೇ ಉದ್ಭವಿಸಲಿದೆ. ಬೆಳಗಾವಿ ರಾಜಕಾರಣ ಸದಾಕಾಲ ಧಗಿಧಗಿಸುತ್ತಲೇ ಇರುವದಂತೂ ಸ್ಪಷ್ಟ.