ಬೆಳಗಾವಿ ಸಮೀಪದ ಕೆ. ಎಚ್. ಕಂಗ್ರಾಳಿ ಗ್ರಾಮದಲ್ಲಿ ಮರಾಠಿಗರ ದಬ್ಬಾಳಿಕೆಗೆ ಒಳಗಾಗಿದ್ದ ಕನ್ನಡ ಕಂದಮ್ಮಗಳಿಗೆ ಒಂದು ಚಿಕ್ಕ ಕೊಠಡಿ ಒದಗಿಸಬೇಕೆಂದು ಬೆಳಗಾವಿ ಕನ್ನಡ ಸಂಘಟನೆಗಳು 1986 ರಿಂದ 1997 ರವರೆಗೂ ಹೋರಾಟ ನಡೆಸಬೇಕಾಯಿತು. ಆ ಗ್ರಾಮವು ಎಮ್. ಇ. ಎಸ್. ಶಾಸಕರೊಬ್ಬರ ಸ್ವಂತ ಗ್ರಾಮ. ಅಲ್ಲಿಯ ಮರಾಠಿ ಶಾಲೆಯ ಒಂದು ಎಕರೆ ಜಾಗೆಯಲ್ಲಿ 16 ಕೊಠಡಿಗಳಿದ್ದರೂ ಒಂದೇ ಒಂದು ಕೊಠಡಿಯನ್ನೂ ಕನ್ನಡಿಗರ ಮಕ್ಕಳಿಗೆ ಕೊಡಲಿಲ್ಲ.
ಪಾಟೀಲ ಪುಟ್ಟಪ್ಪ ಅವರು 1985 ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ ನಂತರ ಅಲ್ಲಿ ಕನ್ನಡ ಶಾಲೆ ಆರಂಭಿಸಿದರು. ಆದರೆ, ನಮ್ಮ ಮಕ್ಕಳು ಗಾಳಿ, ಮಳೆ, ಬಿಸಿಲಿದ್ದರೂ ಮರಾಠಿ ಶಾಲೆಯ ಆವರಣದ ಮರದ ಕೆಳಗೇ ಕುಳಿತು ಕಲಿಯಬೇಕು. ಮಳೆ ಬಂದರೆ ಕೊಠಡಿಗಳ ಹೊರಗಿನ ಪ್ಯಾಸೇಜ್ ನಲ್ಲಿ ಕೂಡಬೇಕು. ಮರಾಠಿಗರ ಪ್ರಚೋದನೆಯಿಂದಾಗಿ ಮರಾಠಿಗರ ಮಕ್ಕಳು ಕನ್ನಡ ಕಂದಮ್ಮಗಳ ಪಾಟಿ, ಪುಸ್ತಕಗಳ ಮೇಲೆ ಬೂಟುಗಾಲಿಟ್ಟು ಹೋಗುವಂಥ ಕರಳು ಚುರಕ್ ಎನ್ನುವ ಪ್ರಸಂಗಗಳೂ ನಡೆದು ಹೋದವು!
1997 ರ ಅಕ್ಟೋಬರ್ ತಿಂಗಳಲ್ಲಿ ಕನ್ನಡ ಸಂಘಟನೆಗಳು ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ, ಕಂಗ್ರಾಳಿ ಕನ್ನಡ ಮಕ್ಕಳಿಗೆ ಒಂದು ಕೊಠಡಿ ಒದಗಿಸದಿದ್ದರೆ ರಾಜ್ಯೋತ್ಸವವನ್ನು ಬಹಿಷ್ಕಾರ ಹಾಕುತ್ತೇವೆ” ಎಂದು ಬೆದರಿಕೆ ಹಾಕಿದಾಗಲೇ ಆ ಗ್ರಾಮದ ಪಂಚಾಯಿತಿ ಕಟ್ಟಡ ಸಿಕ್ಕಿತು!
ಕೊನೆಗೆ ಸರಕಾರಿ ಜಾಗ ಸಿಕ್ಕಿತು. ಕನ್ನಡ ಶಾಲೆಯ ಕಟ್ಟಡವೂ ತಯಾರಾಯಿತು. 1999 ರ ಜನವರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಭೇಟಿ ನೀಡಿದರು. ಅದೇ ದಿನ ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ “ಗಡಿಭಾಗದ ಕನ್ನಡ ಶಾಲೆ ಸ್ಥಿತಿಗತಿ’: ಒಂದು ಸಂವಾದ” ಕಾರ್ಯಕ್ರಮ ಏರ್ಪಾಡಾಯಿತು.
ಇದೇ ಸಂದರ್ಭದಲ್ಲಿ ಚಂಪಾ ಅವರು ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದರು. “ಚಂದರಗಿ ಸಮಿತಿ” ವರದಿ ನೀಡಿದ್ದು 1999 ರ ಮೇ 17 ರಂದು. ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಂಪಾ ಅವರೇ ವರದಿ ಸ್ವೀಕರಿಸಿದರು. ನಂತರ ಜೂನ್ ಒಂದರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ವರದಿ ಅಂಗೀಕಾರಗೊಂಡು ಅನುಷ್ಠಾನಕ್ಕಾಗಿ ಸರಕಾರಕ್ಕೆ ಶಿಫಾರಸಾಯಿತು. ಸರಕಾರವು ಗಡಿ ಭಾಗದ ಶಿಕ್ಷಣಾಧಿಕಾರಿಗಳಿಗೆ ವರದಿ ಕಳಿಸಿ ಕ್ರಮ ಕೈಗೊಳ್ಳಲು ಸೂಚಿಸಿತು.

ಸಮಿತಿಯು ವರದಿ ಕೊಟ್ಟಾಗ ಬೆಳಗಾವಿ ನಗರದ ಕನ್ನಡ ಶಾಲೆಗಳ ಸ್ಥಿತಿಯು ಅಯೋಮಯ. ಬೆಳಗಾವಿ ತಾಲೂಕಿನ 28 ಮರಾಠಿ ಪ್ರಾಬಲ್ಯದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ. ಈಗ ಕನ್ನಡ ಶಾಲೆಯಿರದ ಒಂದೂ ಹಳ್ಳಿ ಉಳಿದಿಲ್ಲ!
ಬೆಳಗಾವಿ ನಗರದ ಮಾಳೀಗಲ್ಲಿ ಶಾಲೆ, ವಡಗಾವಿಯ ಶಾಲೆಗಳ ಇಂದಿನ ಸ್ಥಿತಿಗೂ ಅಂದಿನ ಸ್ಥಿತಿಗೂ ಅಜಗಜಾಂತರವಿದೆ. ಕನ್ನಡ ಶಾಲೆಗಳಿಗಾಗಿ ಹೋರಾಟವೂ ನಮ್ಮದೇ. ಅಧ್ಯಯನವೂ ನಮ್ಮದೇ. ವರದಿಯೂ ನಮ್ಮದೇ. ಅದರ ಅನುಷ್ಠಾನಕ್ಕಾಗಿ ಹೋರಾಟವೂ ನಮ್ಮದೇ!
ಕನ್ನಡ ಸಂಘಟನೆಗಳ ಒಟ್ಟು9 ಸದಸ್ಯರಿಗೆ “ಚಂದರಗಿ ಸಮಿತಿ ವರದಿಯ” ಮುದ್ರಣಕ್ಕಾಗಿ ರೂ. 2800 ರೂ. (ಎರಡು ಸಾವಿರಾರು ಎಂಟು ನೂರು ರೂಪಾಯಿ)ಗಳನ್ನು ಮಾತ್ರ ನೀಡಿತು!
ಅನೇಕ ವರದಿಗಳು ಸರಕಾರದಲ್ಲಿ ಧೂಳು ತಿನ್ನುತ್ತ ಬಿದ್ದಿವೆ. ನಿಮ್ಮ ವರದಿಯೊಂದೇ ಅನುಷ್ಠಾನವಾಗಿದ್ದು” ಎಂದು ಖ್ಯಾತ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಒಮ್ಮೆ ನನಗೆ ನಗುತ್ತಲೇ ಹೇಳಿದ್ದು ನೆನಪಿದೆ. ಈ ಬಗ್ಗೆ ನನಗೂ ಸಮಾಧಾನ ಮತ್ತು ತೃಪ್ತಿಯಿದೆ. ಆದರೆ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆಗಳ ಬಗ್ಗೆ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ.
ಅಂಕಣಕಾರರು ಹಿರಿಯ ಪತ್ರಕರ್ತರು