ಬೆಂಗಳೂರು ನಗರದಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಪ್ರದೇಶಗಳು ಅಕ್ಷರಶಃ ನಲುಗಿ ಹೋಗಿತ್ತು.
ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಕೆಂಗೇರಿ, ರಾಜಾಜಿನಗರ, ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್ ಮಾರ್ಕೆಟ್ ಮೊದಲಾದ ಪ್ರದೇಶಗಳಲ್ಲಿ ಮಳೆನೀರು ಚರಂಡಿಯಿಂದ ರಸ್ತೆಗೆ ಬಂದಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಗಿನ ಜಾವ 5.30 ರವರೆಗೆ 66.8 ಮಿಲಿಮೀಟರ್ ಮಳೆಯಾಗಿತ್ತು. ಅಲ್ಲದೆ ಇಂದೂ ಕೂಡ 3-4 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಒಂದೇ ದಿನ ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರದಲ್ಲಿ 87.5 ಎಂಎಂ, ಚನ್ನೇಹಳ್ಳಿ 126.5 ಎಂಎಂ, ನೆಲಗುಳಿ 65.5 ಎಂಎಂ, ಬಸವನಗುಡಿ 64.45 ಎಂಎಂ, ಮಚೋಹಳ್ಳಿ 74.5 ಎಂಎಂ, ಕೊಡಿಗೇಹಳ್ಳಿ 66 ಎಂಎಂ ಮಳೆಯಾಗಿದೆ.
ಬುಧವಾರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದೆ.