2019ರ ಲೋಕಸಭಾ ಚುನಾವಣೆಯ ಅಂಗವಾಗಿ ಬೆಂಗಳೂರಿನಲ್ಲಿ ಮತದಾನ ಕೊನೆಗೊಂಡಿದ್ದು, ಎಂದಿನಂತೆ ತನ್ನ ಕಳಪೆ ಮತ ಚಲಾವಣಾ ಪ್ರಮಾಣವು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡ 54.63ರಷ್ಟು ಮತದಾನ ದಾಖಲಾಗಿದ್ದರೆ, ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಶೇಕಡ 53.47 ಮತ್ತು ಶೇಕಡ 53.50ರಷ್ಟು ಮತ ಚಲಾವಣೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಶೇಕಡ 64.07ರಷ್ಟು ಮತದಾನವನ್ನು ದಾಖಲಿಸಿ ತನ್ನ ನಗರದ ಕ್ಷೇತ್ರಗಳನ್ನು ಮೀರಿಸಿದ್ದರೆ, ರಾಜ್ಯದ ಹದಿನಾಲ್ಕು ಕ್ಷೇತ್ರಗಳ ಸರಾಸರಿ ಶೇಕಡ ೬೮.೫೨ಕ್ಕೆ ಮುಕ್ತಾಯಗೊಂಡಿದೆ. ಮಂಡ್ಯ (ಶೇಕಡ 80.23) ಹಾಗೂ ದಕ್ಷಿಣ ಕನ್ನಡ (ಶೇಕಡ77.68) ಕ್ಷೇತ್ರಗಳು ಅತಿ ಹೆಚ್ಚು ಮತದಾನವನ್ನು ದಾಖಲಿಸಿವೆ.
ಸರಣಿ ಸರ್ಕಾರಿ ರಜೆ ಹಾಗೂ ವಾರಾಂತ್ಯದ ಮಧ್ಯದಲ್ಲಿ ಚುನಾವಣೆ ದಿನಾಂಕ ನಿಗದಿ ಆಗಿದ್ದರಿಂದ ಸ್ವಲ್ಪ ಕಡಿಮೆ ಪ್ರಮಾಣದ ಮತದಾನ ಆಗಬಹುದೆಂಬ ನಿರೀಕ್ಷೆ ಇತ್ತಾದರೂ, ಸಂಜೆಯ ಹೊತ್ತಿಗೆ ಅರ್ಧದಷ್ಟೂ ಮತದಾನ ಆಗದಿರುವುದು ಬೆಂಗಳೂರಿಗರ ಬೇಜವಾಬ್ದಾರಿತನದ ಪರಮಾವಧಿ ಎಂದು ಬಹುತೇಕ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಪ್ರತಿ ಚುನಾವಣೆಯಲ್ಲೂ ಕಳಪೆ ಮತದಾನ ದಾಖಲಿಸುವ ಬೆಂಗಳೂರಿಗರು ಅಷ್ಟು ಬೇಜವಾಬ್ದಾರರೇ? ಎಲ್ಲರೂ ಮತ ಚಲಾಯಿಸುವುದನ್ನು ಬಿಟ್ಟು ಮನೆಯಲ್ಲಿ ಹಾಯಾಗಿ ಕುಳಿತುಕೊಳ್ಳುವವರೇ? ದೀರ್ಘಾವಧಿ ರಜೆ ಸಿಕ್ಕಿತೆಂದು ಊರಾಚೆ ದೌಡುವವರೇ?
ಇವೆಲ್ಲವನ್ನೂ ಮಾಡುವ ಹಲವರು ನಮ್ಮ ನಡುವೆ ಇದ್ದರೂ ಇಂಥವರಿಂದಲೇ ಇಷ್ಟು ಕಳಪೆ ಮತದಾನ ಆಗಿರಲಿಕ್ಕಿಲ್ಲ. ಇದರ ಹಿಂದಿರುವ ಮುಖ್ಯ ಕಾರಣ, ನಗರದ ಮತದಾರರ ಪಟ್ಟಿ. ಈ ಪಟ್ಟಿಯಲ್ಲಿನ ತೊಡಕುಗಳಿಂದಲೇ ಬೆಂಗಳೂರಿನ ಮತದಾನ ವಾಸ್ತವಕ್ಕಿಂತ ಶೇಕಡ 10-15ರಷ್ಟು ಕಡಿಮೆ ಕಂಡುಬಂದು ಎಲ್ಲರ ಕೆಂಗಣ್ಣಿಗೆ ನಗರದ ಜನ ಗುರಿಯಾಗುತ್ತಿದ್ದಾರೆ. ಚಿಕ್ಕಪುಟ್ಟ ಪಟ್ಟಣಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಪಟ್ಟಿಯನ್ನು ಸುಲಭವಾಗಿ ನಿಭಾಯಿಸಬಹುದು. ಅದರೆ, ಹೊರವಲಸೆ, ಒಳವಲಸೆ ಹಾಗೂ ಆಂತರಿಕ ವಲಸೆಗಳನ್ನು ದೊಡ್ಡ ಮಟ್ಟದಲ್ಲಿ ಕಾಣುವ, ಒಂದು ಕೋಟಿಗೂ ಹೆಚ್ಚು ಜನ ವಾಸವಿರುವ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಬೃಹನ್ನಗರಗಳಲ್ಲಿ ಮತದಾರರ ಪಟ್ಟಿಯನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ.
ಬೆಂಗಳೂರಿನ ಮತದಾರರ ಪಟ್ಟಿಯ ಪ್ರಕಾರ ನಗರದಲ್ಲಿ ಸುಮಾರು 91 ಲಕ್ಷ ಮತದಾರರಿದ್ದಾರೆ. ಇದು ಮೇಲ್ನೋಟಕ್ಕೇನೇ ವಾಸ್ತವಕ್ಕಿಂತ ಹೆಚ್ಚಿನ ಸಂಖ್ಯೆಯೆಂದು ಸುಲಭವಾಗಿ ತಿಳಿದುಬರುತ್ತದೆ. ಏಕೆಂದರೆ, ಬೆಂಗಳೂರಿನ ಜನಸಂಖ್ಯೆ ಸುಮಾರು 1.3 ಕೋಟಿಯಷ್ಟಿದ್ದು, ಇದರಲ್ಲಿ ಸುಮಾರು 60 ಪ್ರತಿಶತದಷ್ಟು ಜನ ಮಾತ್ರ 18ಕ್ಕೆ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ. ಇವರನ್ನಷ್ಟೇ ಪರಿಗಣಿಸಿದರೆ ನಗರದ ಮತದಾರರ ಸಂಖ್ಯೆ ಸುಮಾರು 78-80 ಲಕ್ಷಕ್ಕೆ ಬರುತ್ತದೆ. ಇದರಲ್ಲಿ ಸುಮಾರು 3-5 ಲಕ್ಷ ಜನರು ನಗರದಲ್ಲಿ ವಾಸವಿದ್ದರೂ ರಾಜ್ಯದ ಇನ್ನಿತರ ಭಾಗಗಳ ಹಾಗೂ ನೆರೆರಾಜ್ಯಗಳ ಮತದಾರರಾಗಿದ್ದಾರೆ. ಇವರನ್ನೂ ಹೊರತುಪಡಿಸಿದರೆ ಬೆಂಗಳೂರಿನ ಮತದಾರರ ಸಂಖ್ಯೆ ಸುಮಾರು 75 ಲಕ್ಷಕ್ಕೆ ಬಂದು ನಿಲ್ಲುತ್ತದೆ. ಇದರಲ್ಲಿ ಸುಮಾರು 1-2 ಲಕ್ಷ ಜನ ಓದು ಅಥವಾ ಕೆಲಸಕ್ಕಾಗಿ ಭಾರತದಿಂದಾಚೆ ತೆರಳಿದ್ದಾರೆ ಎಂದುಕೊಂಡರೆ, ಬೆಂಗಳೂರಿನಲ್ಲೇ ಇರುವ ನಗರದ ಮತದಾರರ ಸಂಖ್ಯೆ ಸರಿಸುಮಾರು 73 ಲಕ್ಷ.

ಈ 73 ಲಕ್ಷ ಮತದಾರರಲ್ಲಿ ಹಿಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 50 ಲಕ್ಷ ಜನ ಮತ ಚಲಾಯಿಸಿದ್ದರೆ, ನಿನ್ನೆಯ ಲೋಕಸಭೆ ಚುನಾವಣೆಯಲ್ಲಿ ಸುಮಾರು 48 ಲಕ್ಷ ಜನ ಮತ ಚಲಾಯಿಸಿದ್ದಾರೆ. ಹಾಗಾಗಿ, ಈ ಎರಡು ಚುನಾವಣೆಗಳಲ್ಲಿ 68.49 ಹಾಗೂ 65.76 ಪ್ರತಿಶತದಷ್ಟು ಮತದಾನವಾಗಿವೆ. ಇದು ರಾಜ್ಯದ ಸರಾಸರಿಗೆ ಹತ್ತಿರಕ್ಕಿದ್ದು, ಕಳಪೆ ಮತದಾನವೆಂದಂತೂ ಹೇಳಲು ಆಗುವುದಿಲ್ಲ. ಆದರೆ, ಮತದಾರರ ಪಟ್ಟಿಯ ಪ್ರಕಾರ, ನಗರದ ಮತದಾರರ ಸಂಖ್ಯೆ ಸುಮಾರು 91 ಲಕ್ಷ ಇರುವುದರಿಂದ ಬೆಂಗಳೂರಿನಲ್ಲಿ ಕೇವಲ 53-54 ಪ್ರತಿಶತದಷ್ಟು ಮತದಾನವಾದಂತೆ ಕಂಡುಬಂದು, ಕಳಪೆ ಮತದಾನ ಆಗಿರುವಂತೆ ಭಾಸವಾಗುತ್ತದೆ.
ಹಾಗಾದರೆ, ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆ ಏಕೆ ಹೆಚ್ಚಿರಬಹುದು? ಇದಕ್ಕೆ ಹಲವಾರು ಕಾರಣಗಳಿವೆ. ರಾಜಕಾರಣಿಗಳು ಹಿಂದಿನಿಂದಲೂ ತಮಗೆ ಅನುಕೂಲವಾಗಲೆಂದು ನಕಲಿ ಮತದಾರರನ್ನು ಸೃಷ್ಟಿಸುತ್ತ ಬಂದಿದ್ದಾರೆಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವುಗಳ ದಾಖಲೆಗಳು ಪಟ್ಟಿಯಲ್ಲಿ ಹಾಗೆಯೇ ಉಳಿದಿರಬಹುದು. ಬೇರೆ-ಬೇರೆ ವಾರ್ಡುಗಳ ಮತದಾರರ ಮಾಹಿತಿಗಳನ್ನು ಜೋಡಿಸಿ ಮತದಾರರ ಪಟ್ಟಿಯನ್ನು ತಯಾರು ಮಾಡುವಾಗ ಹಲವಾರು ನಕಲಿ ದಾಖಲೆಗಳು ಉದ್ಭವವಾಗಬಹುದು. ಜನ ನಗರದೊಳಗೆಯೇ ಒಂದು ಕಡೆಯಿಂದ ಇನ್ನೊಂದು ಕಡೆ ವಾಸ್ತವ್ಯ ಬದಲಿಸಿದಾಗ ತಮ್ಮ ಹೊಸ ವಿಳಾಸದಲ್ಲಿ ಮತದಾರರಾಗಿ ನಮೂದಿಸಿಕೊಂಡರೂ ಹಳೆ ವಿಳಾಸದಲ್ಲೂ ಮತದಾರರಾಗಿ ಮುಂದುವರಿಯಬಹುದು. ನಮ್ಮನ್ನಗಲಿ ಹೋಗಿರುವ ಎಷ್ಟೋ ಜನರು ಇನ್ನೂ ಮತದಾರರ ಪಟ್ಟಿಯಲ್ಲಿ ಉಳಿದಿರಬಹುದು. ಇವೆಲ್ಲದರ ಪರಿಣಾಮವಾಗಿ ನಗರದ ಮತದಾರರ ಪಟ್ಟಿಯು ಇರುವ ಅರ್ಹ ಮತದಾರರಿಗಿಂತ ಬಹಳಷ್ಟು ಹೆಚ್ಚಿನ ಸಂಖ್ಯೆಯನ್ನು ಸೂಚಿಸುತ್ತದೆ.
ಮುಂದಿನ ವರ್ಷ ಬರುವ ಬಿಬಿಎಂಪಿ ಚುನಾವಣೆಯ ಹೊತ್ತಿಗಾದರೂ ಚುನಾವಣಾ ಆಯೋಗವು ನಗರದ ಮತದಾರರ ಪಟ್ಟಿಯನ್ನು ಸರಿಯಾದ ರೀತಿಯಲ್ಲಿ ಪರಿಷ್ಕರಿಸಬೇಕು. ಆದರೆ, ಅವಸರದಲ್ಲಿ ಸರಿಪಡಿಸಲು ಹೋದರೆ ಬಹಳಷ್ಟು ಅರ್ಹ ಮತದಾರರ ಹೆಸರುಗಳೂ ಪಟ್ಟಿಯಿಂದ ಅಳಿಸಿಹೋಗುವ ಸಾಧ್ಯತೆಗಳಿವೆ. ಮತ ಚಲಾಯಿಸುವುದು ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕಾದ್ದರಿಂದ ಈ ರೀತಿ ಆಗದಂತೆ ಚುನಾವಣಾ ಆಯೋಗ ಜಾಗೃತವಾಗಿರಬೇಕು. ನಿನ್ನೆಯ ಚುನಾವಣೆಯಲ್ಲಿ ನಗರದ ಬೇರೆ-ಬೇರೆ ಕ್ಷೇತ್ರಗಳಲ್ಲಿ ಬಹಳಷ್ಟು ಜನರು ತಮ್ಮ ಹೆಸರು ದಿಢೀರನೆ ಮತದಾರರ ಪಟ್ಟಿಯಿಂದ ಅಳಿಸಿಹೋಗಿರುವ ಕುರಿತು ದೂರು ನೀಡಿದ್ದಾರೆ. ಇದು ಅವಸರದಲ್ಲಿ ಪಟ್ಟಿ ಸರಿಪಡಿಸಲು ಹೋಗಿ ಆಗಿರುವ ಅನಾಹುತವಿದ್ದರೂ ಇರಬಹುದು. ಮತದಾರರ ಪಟ್ಟಿ ಸರಿಪಡಿಸುವುದರ ಜೊತೆಗೆ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ.
ಲೇಖಕರು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪಬ್ಲಿಕ್ ಪಾಲಿಸಿ ವಿದ್ಯಾರ್ಥಿ