ಕಳೆದ ವಾರದ ಕೊನೆಯಲ್ಲಿ ಮಲೆನಾಡಿನಲ್ಲಿ ಮಳೆ ಸುರಿದೇ ಬಿಡುತ್ತೇನೋ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈ ವಾರ ಪುನಃ ಬಿಸಿಲ ಝಳದೊಂದಿಗೆ ದಿನ ಆರಂಭವಾಯ್ತು. ಮಲೆನಾಡಿನ ಹಳ್ಳ, ಕೆರೆ, ಬಾವಿ, ತೊರೆ ಹಾಗೂ ನದಿಗಳೆಲ್ಲಾ ಬತ್ತಿ ಹೋಗುವುದನ್ನು ನೋಡುತ್ತಾ ಈ ತರಹದ ಬರ ನೋಡಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಾ ಕುಡಿಯುವ ನೀರಿಗೆ ತತ್ವಾರ ಉಂಟಾಗಬಹುದೆಂದು ಮರುಗುತ್ತಿದ್ದರು.
ಹೆಚ್ಚು ಓದಿದ ಸ್ಟೋರಿಗಳು
ಇದೇ ಸಮಯಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ ಅಧಿಕಾರಿಗಳನ್ನ ಕೂರಿಸಿಕೊಂಡು ಶರಾವತಿ ನದಿ ನೀರನ್ನ ಬೆಂಗಳೂರಿಗೆ ಹರಿಸಲು ಡಿಪಿಆರ್ ಸಿದ್ಧಪಡಿಸಿ ಎನ್ನುತ್ತಾ ಶರಾವತಿಯ ಜೀವಜಲಕ್ಕೆ ಜಾಲವನ್ನ ಹೆಣೆದುಬಿಟ್ಟರು. ಅಲ್ಲಿ ಹೊತ್ತಿಕೊಂಡ ಕಿಡಿ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳ ಮೂಲಕ ಮಲೆನಾಡಿನಲ್ಲಿ ಹೋರಾಟದ ಕಾಡ್ಗಿಚ್ಚನ್ನ ಹೊತ್ತಿಸಿದೆ.
ವಿದ್ಯುತ್‌ಗಾಗಿಯೇ ನಿರ್ಮಿಸಲಾದ ಲಿಂಗನಮಕ್ಕಿ ಜಲಾಶಯ ಪೂರ್ತಿ ತುಂಬಿದಾಗ ಅದರಲ್ಲಿ ಸಂಗ್ರಹಣೆಯಾಗುವುದು 151 ಟಿಎಂಸಿ ನೀರು. 6 ಟಿಂಎಂಸಿ ನೀರನ್ನ ಉಪಯೋಗಿಸಲಾಗದು. ಇದರ ಮಧ್ಯೆ 30 ಟಿಎಂಸಿ ನೀರಿಗೆ ಕನ್ನ ತೋಡಲು ಸರ್ಕಾರ ಮುಂದಾಗಿದೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ಸಾಗರದ ನೌಕರರ ಭವನದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿತ್ತು. ಇದರಲ್ಲಿ ಪರಿಸರ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಪತ್ರಕರ್ತರು, ರಾಜಕೀಯ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಸೇರಿಕೊಂಡರು. ಈಗಾಗಲೇ ಸೇವ್ ಮಲೆನಾಡು, ಸೇವ್ ಶರಾವತಿ ಹ್ಯಾಷ್ ಟ್ಯಾಗ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಹರಿದಾಡುತ್ತಿವೆ. ಹೋರಾಟದ ಜಿಲ್ಲೆ ಶಿವಮೊಗ್ಗ ಕಾಗೋಡು ಚಳವಳಿಯ ಸಾಗರದಲ್ಲಿ ಮತ್ತೊಮ್ಮೆ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.
ಬೆಂಗಳೂರಿನ ಅಡ್ಡಾದಿಡ್ಡಿ ಬೆಳವಣಿಗೆ, ನೀರಿನ ಅವಲಂಬನೆ
ಹಲವು ಚಿಂತಕರು, ಪರಿಸರವಾದಿಗಳು ಹಾಗೂ ಲೇಖಕರು ಬೆಂಗಳೂರಿನ ಬೆಳವಣಿಗೆಯೇ ರಾಜ್ಯಕ್ಕೆ ಮಾರಕ ಎನ್ನುತ್ತಾರೆ. ಬೆಂಗಳೂರಿನ ಕೆರೆ, ಪರಿಸರವನ್ನ ಒತ್ತುವರಿ ಹೆಸರಲ್ಲಿ ನಾಶಮಾಡಲಾಗಿದೆ. ಆಂಧ್ರ, ತಮಿಳುನಾಡಿನ ರಾಜಧಾನಿಯಂತಿರುವ ಬೆಂಗಳೂರಿನ ಕಾರ್ಖಾನೆಗಳನ್ನ ಕಂಪನಿಗಳನ್ನ ರಾಜ್ಯಾದ್ಯಂತ ವಿಸ್ತರಿಸುವ ಅವಶ್ಯಕತೆ ಇದೆ ಎನ್ನುತ್ತಾರೆ. ಗಜಾನನ ಶರ್ಮಾ ಹೇಳುವಂತೆ, ಶರಾವತಿ ನೀರನ್ನೆತ್ತುವುದು ಅವೈಜ್ಞಾನದಿಂದ ಕೂಡಿದ ಯೋಜನೆ.
ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರವಿರುವ ಬೆಂಗಳೂರಿಗೆ 1818 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದಿಂದ ತಳ್ಳಬೇಕು. ಅದೂ ಕೂಡ ಸುಮಾರು 430 ಕಿಲೋಮೀಟರ್..! ಒಂದು ಅಂದಾಜಿನ ಪ್ರಕಾರ ನೀರನ್ನ ಎತ್ತಲು ಒಂದು ಮೆಗಾವ್ಯಾಟ್‌ಗೆ 10 ಕ್ಯೂಸೆಕ್ ನೀರನ್ನ ಬಳಸಿದರೆ ಶರಾವತಿ ವಿದ್ಯುದಾಗಾರದ ವಿದ್ಯುತ್ ಬಹುತೇಕ ಇದಕ್ಕೇ ಬೇಕು. ನೀರನ್ನ ತಳ್ಳಲು ಎಷ್ಟು ಖರ್ಚಾಗಬಹುದು ಎಂಬುದನ್ನ ಲೆಕ್ಕ ಹಾಕಿದರೆ ತಲೆ ಬುಡವಿಲ್ಲದ ಯೋಜನೆ ಬಗ್ಗೆ ಅರಿವಾಗುತ್ತದೆ. ಈ ಹರಸಾಹಸಕ್ಕೆ ಕೈಹಾಕುವುದಕ್ಕಿಂತ ಬೆಂಗಳೂರನ್ನೇ ಮಧ್ಯ ಕರ್ನಾಟಕ, ಮಲೆನಾಡಿಗೆ ಹಂಚಿ ಬಿಡಿ ಎನ್ನುವವರೂ ಇದ್ದಾರೆ.

ಪಶ್ಚಿಮಘಟ್ಟ ಉಳಿಸಲು ಸದಾ ಹೋರಾಟ ಮಾಡಿಕೊಂಡು ಬಂದಿರುವ ಪರಿಸರಪ್ರೇಮಿ ಅಖಿಲೇಶ್ ಚಿಪ್ಪಳಿ ಈ ಯೋಜನೆಯ ಎಳೆ ಎಳೆಯನ್ನ ಬಿಚ್ಚಿಡುತ್ತಾರೆ. ಈ ಹಿಂದೆ ವಿವಿಧ ಯೋಜನೆಗಳಿಗಾಗಿ 326 ಚದರ ಕಿಲೋಮೀಟರ್ ಅರಣ್ಯ ನಾಶ ಮಾಡಲಾಗಿದೆ. ಅದು ಬರೀ ಅರಣ್ಯ ಅಲ್ಲ. ಜನರ ಬದುಕು ಹಾಗೂ ಜೀವವೈವಿಧ್ಯತೆ ಕೂಡ. ಇಡೀ ಶಿವಮೊಗ್ಗದಲ್ಲಿ ಕೊಡಲಿ ಪೆಟ್ಟಿಗೆ ಬಲಿಯಾದ ಅರಣ್ಯಕ್ಕೆ ಲೆಕ್ಕವೇ ಇಲ್ಲ. ಈಗಾಗಲೇ ಸರ್ವಋತು ಜೋಗ ಮಾಡ್ತೀವಿ ಅಂತ ಗುಳೇ ಎಬ್ಬಿಸಲು ಅರಣ್ಯ ನಾಶ ಮಾಡಲು ಸಿದ್ಧರಾದವರನ್ನ ತಣ್ಣಗೆ ಮಾಡಿದ್ದೇವೆ. ಎರಡನೆಯದು ಶರಾವತಿ ಪಂಪ್ ಪ್ರಾಜೆಕ್ಟ್ (ಶರಾವತಿ ಜಲಾಂತರ್ಗಾಮಿ ಯೋಜನೆ) ಅಂದರೆ, ಹರಿಸಿದ ನೀರನ್ನ ಪುನಃ ಎತ್ತಿ ಮರುವಿದ್ಯುತ್ ಬಳಕೆ ಮಾಡುವುದು. ಅಮೇಜಾನ್‌ಗಿಂತಲೂ ದಟ್ಟವಾಗಿರುವ ಕಾಡು ಅತೀ ಸೂಕ್ಷ್ಮವಾಗಿದೆ. ಪ್ರಪಂಚದಲ್ಲಿ ಮೂರೇ ಸಾವಿರದಷ್ಟು ಇರುವ ಸಿಂಹಬಾಲದ ಸಿಂಗಳೀಕಗಳು ಇಲ್ಲಿವೆ. ವಿವಿಧ ಪ್ರಬೇಧದ ಉದ್ದನೆಯ ಮರಗಳನ್ನ ಆಶ್ರಯಿಸಿವ ಈ ಮಂಗಗಳ ಆವಾಸ ಅಂದರೆ ಅದು ಅತೀ ಆರೋಗ್ಯಕರ ಪರಿಸರ ಎಂದೇ ಪರಿಗಣಿಸಲಾಗುತ್ತೆ. ಈ ಎರಡು ಅನಾಹುತಗಳ ನಡುವೆ ಮೂರನೆಯದು ಶರಾವತಿ ನೀರನ್ನ ಬೆಂಗಳೂರಿಗೆ ಹರಿಸುವುದು.
ಮೊದಲನೆಯದಾಗಿ, ಈ ಭಾಗವನ್ನ ಮುಳುಗಿಸಿದಾಗ ಇದರ ಧ್ಯೇಯ ವಿದ್ಯುತ್ ತಯಾರಿಕೆ ಎಂದಷ್ಟೇ ಇತ್ತು. ಮೂವತ್ತು ಟಿಎಂಸಿ ನೀರನ್ನ ಒಯ್ಯಲು ಹೊರಟಿರುವ ಇವರಿಗೆ ಕಳೆದ ವರ್ಷಗಳಲ್ಲಾದ ಬರಡು ಅರಿವಿಲ್ಲ. ಪ್ರತಿದಿನ 81 ಲಕ್ಷ ಲೀಟರ್ ಶರಾವತಿ ನೀರನ್ನ ಸಾಗರಕ್ಕೆ ತರಲಾಗ್ತಿದೆ. ಇದಕ್ಕೆ ನಾಲ್ಕುನೂರ್ ಎಚ್‌ಬಿ ಎರಡು ಪಂಪ್‌ಸೆಟ್ ಹದಿನಾಲ್ಕು ಗಂಟೆ ಬಳಸಲಾಗುತ್ತಿದೆ. ಪ್ರತಿ ತಿಂಗಳು ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಒಂಬತ್ತು ಲಕ್ಷ ರೂಪಾಯಿಯನ್ನ ಸಾಗರದ ನಗರಸಭೆ ಪಾವತಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪಂಪ್ ಮಾಡುವ ಯೋಜನೆಗೆ ತಗುಲುವ ಹಾಗೂ ನಿರ್ವಹಣೆ ( ಪ್ರತೀ ಕಿಲೋಮೀಟರ್‌ಗೆ ಚೀಫ್ ಎಂಜಿನಿಯರ್ ಹಾಗೂ ವಾಹನ ಕಚೇರಿ) ಮಾಡುವ ವೆಚ್ಚವನ್ನ ನಾವು ಅರ್ಥೈಸಿಕೊಳ್ಳಬೇಕಿದೆ. ನೇತ್ರಾವತಿ ನೀರಿಗೆ ಕನ್ನಹಾಕಲು ಎತ್ತಿನಹೊಳೆ ಯೋಜನೆ ಮಾಡಿದ್ರು. ಈಗ ನಾಲ್ಕು ಟಿಎಂಸಿ ನೀರೂ ಇಲ್ಲ. ಈ ಬಾರಿ ನೇತ್ರಾವತಿಯ ಎಲ್ಲಾ ಉಪನದಿಗಳು ಬತ್ತಿಹೋಗಿದ್ದು ಇಂತಹದೇ ಪ್ರಾಜೆಕ್ಟ್ ಇಲ್ಲಿ ಹೆಕ್ಟೇರ್‌ಗಟ್ಟಲೆ ಕಾಡನ್ನ ನಾಶಮಾಡಿ ಅದರ ಪರಿಣಾಮ ಕಾಣುತ್ತಿದೆ.
ಗುತ್ತಿಗೆ ಮಾಫಿಯಾ
ಅಖಿಲೇಶ್ ಚಿಪ್ಪಳಿ ನೇರವಾಗಿ ಇಂತಹ ಯೋಜನೆಗಳು ಹಣ ಹೊಡೆಯಲೆಂದೇ ರೂಪಿತವಾಗುತ್ತವೆ ಎಂದು ಆರೋಪಿಸುತ್ತಾರೆ. ಸರ್ಕಾರಗಳಿಗೇಕೆ ಇಂತಹ ದೊಡ್ಡ ಯೋಜನೆ ಬೇಕು. ಟಿಂಬರ್ ಮಾಫಿಯಾ, ಮರಳು ಮಾಫಿಯಾ, ಕಬ್ಬಿಣ ಮಾಫಿಯಾ ಒಟ್ಟಾರೆ ಎಲ್ಲದರಿಂದಲೂ ಹಣದ ಹೊಳೆ. ನೇತ್ರಾವತಿಯನ್ನೂ ಇಂತಹದೇ ಯೋಜನೆಗಳು ಕೊಂದಾಗಿದೆ. ಈಗ ಶರಾವತಿಯ ವಿನಾಶವೂ ಹೀಗೆಯೇ..! ಬೆಂಗಳೂರಿನಲ್ಲಿ ವಾಸಿಸುವ ಈ ಭಾಗದ ಜನರೂ ಹೋರಾಟಕ್ಕೆ ಕೈಜೋಡಿಸಲೇ ಬೇಕು ಎಂದು ಕೇಳಿಕೊಳ್ಳುತ್ತಾರೆ.
ಶರಾವತಿಯ ಹುಟ್ಟು ಹಾಗೂ ಹರಿವು
ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟಿ ಹೊಸನಗರ, ಸಾಗರದಲ್ಲಿ ಹರಿದು, ಜೋಗದಲ್ಲಿ ಜಾರಿಕೊಂಡು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವುದು ಶರಾವತಿ. ಇಪ್ಪತ್ತಕ್ಕೂ ಅಧಿಕ ಹಳ್ಳ, ತೊರೆಗಳು ಇದನ್ನ ಹಿರಿದಾಗಿಸಿ ನಾಡಿನ ಜನರಿಗೆ ವಿದ್ಯುತ್ ನೀಡಲು ಸಹಕಾರಿಯಾಗಿದೆ. 1939 ರಲ್ಲಿ ಮಡೆನೂರಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಮುಂದೆ 1965ರಲ್ಲಿ ಸಾಗರದ ಸಮೀಪದ ತಲಕಳಲೆಯ ಬಳಿ ಲಿಂಗನಮಕ್ಕಿಯಲ್ಲಿ ಬೃಹತ್ ಜಲಾಶಯ ನಿರ್ಮಾಣ ಮಾಡಲಾಯ್ತು. ಈ ಜಲಾಶಯದಿಂದ ಸಾವಿರಾರು ಗ್ರಾಮಗಳು ಜಲಾವೃತವಾದವು. ಅಲ್ಲಿನ ಜನರನ್ನ ಒಕ್ಕಲೆಬ್ಬಿಸಿ ಗೋಂಡಾರಣ್ಯದಲ್ಲಿ ತಂದುಬಿಟ್ಟರು. ಈಗಲೂ ವಾಸಸ್ಥಳದ ಹಕ್ಕುಪತ್ರಗಳೇ ಇಲ್ಲದೇ ಕಾಲಕಳೆಯುತ್ತಿವೆ ಸಾವಿರಾರು ಕುಟುಂಬಗಳು. ಅಂದು ಮುಳುಗಡೆ ಮಾಡಿದ 32,700 ಹೆಕ್ಟೇರ್ ಭೂ ಪ್ರದೇಶದ ಜನರ ಬದುಕಿಗೆ ಆಸೆರೆಯಾಗದ ಸರ್ಕಾರಗಳು ಈಗ ಇಲ್ಲಿಂದ ಪುನಃ ನೀರನ್ನ ಹೆಬ್ಬಾವಿನಂತೆ ಬೆಳೆಯುತ್ತಿರುವ ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಅಣಿಯಾಗಿದ್ದಾರೆ.
ಅಶ್ಚರ್ಯ ಅಂದರೆ ಕಳೆದ ಎರಡು ಮೂರು ದಶಕಗಳಲ್ಲಿ ಈ ಜಲಾಶಯ ತುಂಬಿದ್ದು ನಾಲ್ಕೈದು ಬಾರಿ ಮಾತ್ರ. ಸದಾ ಅದೃಶ್ಯವಾಗಿರುವ ಸಾಗರದ ಸಿಗಂಧೂರು ಬಳಿಯ ಮಡೆನೂರಿನ ಹಿರೇಭಾಸ್ಕರ ಜಲಾಶಯ (ಮೂಲ ಜಲಾಶಯ) ಇತ್ತೀಚೆಗೆ ಬುಡದವರೆಗೆ ಕಾಣುವಷ್ಟು ನೀರು ಕಡಿಮೆಯಾಗುತ್ತಿದೆ. ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆಯಾಗಿರುವುದು ಮುಂದೊಂದು ದಿನ ವಿದ್ಯುತ್ ತಯಾರಿಕೆಯ ಮೇಲೂ ಪರಿಣಾಮ ಉಂಟಾಗಬಹುದು.