ಕರ್ನಾಟಕ ರಾಜಕೀಯದಲ್ಲಿ ರಾಜಿನಾಮೆ ಪರ್ವ ಮುಂದುವರಿದಿದೆ. ಆದರೆ, ರಾಜಿನಾಮೆ ಕೊಟ್ಟವರಲ್ಲಿ ಕೇವಲ ಶಾಸಕರಿಲ್ಲ, ಸರ್ಕಾರದ ಎಲ್ಲಾ ಸಚಿವರು! ಸರ್ಕಾರ ಬೀಳುವುದನ್ನು ತಪ್ಪಿಸಲು ದೋಸ್ತಿ ಪಕ್ಷಗಳು ಇಂಥದ್ದೊಂದು ತಂತ್ರಕ್ಕೆ ಶರಣಾಗಿದ್ದಾಗಿದೆ. ಅತ್ತ ಬಿಜೆಪಿ, ರಾಜ್ಯಪಾಲರತ್ತ ಒಂದು ಕಣ್ಣು ಮತ್ತು ರಾಜಿನಾಮೆ ನೀಡಿದ ಶಾಸಕರತ್ತ ಒಂದು ಕಣ್ಣಿಟ್ಟುಕೊಂಡು ಬಹುಮತದ ಹೆಸರಿನಲ್ಲಿ ಸರ್ಕಾರ ರಚಿಸಿಬಿಡಲು ತುದಿಗಾಲಿನಲ್ಲಿ ನಿಂತಿದೆ. ಈ ಮಧ್ಯೆ, ವಿಧಾನಸೌಧದ ಪರಿಸ್ಥಿತಿ ಏನು? ಅದರ ಸುತ್ತಮುತ್ತ ದಿನವೂ ದಾಖಲಾತಿಗಳನ್ನು ಹಿಡಿದು ಅಂಡಲೆಯುವ ಜನಸಾಮಾನ್ಯರ ಕತೆ ಏನು? ಈ ಕುರಿತ ಕುತೂಹಲಕರ ಮಾಹಿತಿಗಳ ಬರಹ ಸರಣಿ ಇದು.
ಬೀದರಿನ ಹಿಪ್ಪಳಗಾಂವ ಎಂಬ ಹಳ್ಳಿಯಿಂದ ಬಂದಿದ್ದವರು ಈ ಮೂವರು – ಓಜಿನಾಥ್, ಶಾಂತಪ್ಪ, ಶರಣಪ್ಪ. ಬೆಳ್ಳಂಬೆಳಗ್ಗೆಯ ಬೀದರ್-ಯಶವಂತಪುರ ರೈಲು ಹತ್ತಿ ಮಧ್ಯಾಹ್ನ ಕರಗುತ್ತಲೇ ವಿಧಾನಸೌಧದ ಬಳಿ ಹಾಜರು. ವಿಕಾಸಸೌಧದ ಬಳಿಯ ಗೇಟ್‌ನಲ್ಲಿ ಹೋಗಿ, “ಪ್ರಿಯಾಂಕ್ ಖರ್ಗೆ ಸಾಹೇಬ್ರನ್ನ ನೋಡ್ಬೇಕಿತ್ರಿ. ಕೆಲ್ಸ ಇತ್ರಿ,” ಎಂದಿದ್ದಾರೆ ಅಲ್ಲಿದ್ದ ಪೊಲೀಸರ ಬಳಿ. “ಸಾಹೇಬ್ರು ಇವತ್ತು ಸಿಗಲ್ಲ, ನಾಳೆ ಬನ್ನಿ ಹೋಗಿ,” ಅಂತ ಅವರನ್ನು ಸಾಗಹಾಕಲಾಗಿತ್ತು. ಎದುರಿನ ಕಬ್ಬನ್ ಪಾರ್ಕಿನಲ್ಲಿ ಕುಳಿತು ವಿಚಾರ ವಿಮರ್ಶೆ ನಡೆದಿತ್ತು. ಮೊದಲೇ ತಂದಿದ್ದರೋ ಅಥವಾ ಅಕ್ಕಪಕ್ಕದ ಏರಿಯಾಗೆ ಹೋಗಿದ್ದರೋ ಗೊತ್ತಿಲ್ಲ, ಮೂವರ ಬಾಯಿಂದಲೂ ಬಿಯರಿನ ಗಂಧ.
“ಏನು ಕೆಲಸ ಇತ್ತು?,” ಅಂತ ಕೇಳುತ್ತಲೇ ಕಾಗದಪತ್ರಗಳಿದ್ದ ತಿಳಿನೀಲಿ ಫೈಲನ್ನು ನನ್ನತ್ತ ಒಗೆದರು. ಆಮೇಲೆ ಏನೋ ಆತಂಕ ಕಾಡಿರಬೇಕು. “ನಮ್ ಅಣ್ಣಾವ್ರು ಇದ್ದಾರೆ ಅಲ್ಲಿ, ಅವ್ರುನ್ ಮಾತಾಡಿಸ್ರಿ…” ಅಂತ ತೊದಲಿದರು. ಅಣ್ಣಾವ್ರು (ಶರಣಪ್ಪ) ಕಾಲು ಚಾಚಿ ಮಲಗಿ ನಿದ್ದೆಯಲ್ಲಿದ್ದರು. ಎಬ್ಬಿಸಿದರೆ ಗಾಬರಿ. ಮಳೆ-ಬೆಳೆ ಬಗ್ಗೆ ಮಾತನಾಡಿಸಿ, ನಂತರ ಕೇಳಿದಾಗ, “ಇವ್ರಿಬ್ರೂ ರೈತರ್ರಿ. ಬದುಕ್ನೇ ಮರ್ತು ಬೇಸಾಯ ಮಾಡ್ಯಾರ್ರಿ. ಆದ್ರೆ ಕ್ಯಾಸ್ಟ್ ಸರ್ಟಿಫಿಕೇಟ್ ಇರ್ಲಿಲ್ಲ. ಅದ್ಕೇ ಪ್ರಿಯಾಂಕ್ ಸಾಹೇಬ್ರ ಹತ್ರ ಅರ್ಜಿ ಕೊಟ್ಟೇವಿ. ಅದನ್ನವ್ರು ಆರ್ಡರ್ ಮಾಡ್ಯಾರಂತ. ಅದರ ಕಾಪಿ ತಗಾಳಕ್ ಬಂದೀವ್ರಿ,” ಅಂದರು. “ರಾತ್ರಿ ಎಲ್ಲಿ ಉಳೀತೀರಿ?” ಅಂದರೆ, ಗಾಂಧಿನಗರದಲ್ಲಿ ಲಾಡ್ಜ್ ಮಾಡಿಕೊಂಡು ಇದ್ದು ಬೆಳಗ್ಗೆ ಬರುವುದಾಗಿ ಹೇಳಿದರು. “ಫೋಟೋ ತಗೋಬಹುದಾ ಒಂದು?” ಎಂದರೆ, “ಬ್ಯಾಡ್ರೀ ಸರ್ರ… ಮಕ್ಳು-ಮರಿ ಇರಾರು, ಬ್ಯಾಡ್ರಿ,” ಎಂದು ನಗು ತರಿಸಿದರು. ಫೋಟೋ ಅಂದಾಕ್ಷಣ ಓಜಿನಾಥ್ ಎದ್ದೇಬಿಟ್ಟರು. ನಂತರ ಅದೇನಾಯಿತೋ ಏನೋ, ಮೂವರಿಗೂ ಸಣ್ಣದೊಂದು ಜಗಳ ಶುರುವಾಯಿತು. ಎದುರಿನಲ್ಲಿ ವಿಧಾನಸೌಧದ ಮೇಲೆ ಸಂಜೆ ಬಿಸಿಲು ಬೀಳುತ್ತಿತ್ತು.

ವಿಕಾಸಸೌಧದ ಗೇಟಿನ ಬಳಿ ತೆಳುಗಡ್ಡ ಬಿಟ್ಟಿದ್ದ ಮುಮ್ತಾಜ್ ಪಾಷಾ ಸ್ವಲ್ಪ ಗಡಿಬಿಡಿಯಿಂದಲೂ, ಸ್ವಲ್ಪ ಅಸಹನೆಯಿಂದಲೂ ಶತಪಥ ಮಾಡುತ್ತಿದ್ದರು. ಅವರ ಅಣ್ಣನ ಮಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ. ಇದ್ದಕ್ಕಿದ್ದಂತೆ ಈ ಕಚೇರಿಯನ್ನು ದೂರದ ದೇವನಹಳ್ಳಿಗೆ ಸ್ಥಳಾಂತರಿಸಲಾಗಿತ್ತು. ಮಕ್ಕಳಿದ್ದ ನಯಾಜ್ ಖಾನ್‌ಗೆ ಇದರಿಂದ ನೆಮ್ಮದಿ ಇಲ್ಲದಂತಾಯಿತು. ಹೆಂಡತಿ ಬೇಗೂರಿನ ಶಾಲೆಯೊಂದರಲ್ಲಿ ಶಿಕ್ಷಕಿ, ಇವರು ದೇವನಹಳ್ಳಿಗೆ ಓಡಾಡುವುದು ಕಷ್ಟ ಎನಿಸಿತು. ತಮ್ಮೂರು ರಾಮನಗರವಲ್ಲವೇ, ಕುಮಾರಸ್ವಾಮಿ ಅವರಿದ್ದಾರೆ, ಅನಿತಾ ಕುಮಾರಸ್ವಾಮಿಯವರಿದ್ದಾರೆ ಎನಿಸಿ ಭಾರೀ ನಂಬಿಕೆಯಿಂದ ಬೆಂಗಳೂರು ನಗರ ಜಿಲ್ಲಾ ಕಚೇರಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದರು. ಇಲಾಖೆಯ ಆಯುಕ್ತರಿಗಲ್ಲದೆ, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಖಾರಿ ಎಂ ಜಿ ಶಿವಲಿಂಗಯ್ಯನವರಿಗೂ ಅರ್ಜಿ ತಲುಪಿತು. ಆದರೆ, ಇದೆಲ್ಲ ಆಗಿ ತಿಂಗಳು ಕಳೆದರೂ ಏನೂ ಪ್ರಯೋಜನವಾಗಲಿಲ್ಲ.
ಇಂದು ವಿಧಾನಸೌಧಕ್ಕೆ ಬರುವ ಮುನ್ನ ಕೂಡ, ಪಾಷಾ ಅವರು ಎಚ್‌ಡಿಕೆ ಮನೆಗೆ ಎಡತಾಕಿ ಬಂದಿದ್ದರು. “ಎಲ್ಲ ಸರಿ ಇದ್ದಾರೆ, ಕಮೀಷನರ್ರೇ ಸರಿ ಇಲ್ಲ, ಡಿಪಾರ್ಟ್‌ಮೆಂಟ್ ಅಧಿಕಾರಿಗಳಿಂದ ನೇರವಾಗಿ ವಿಷಯ ಮುಟ್ಟಿಸಿದ್ರೂ ಇಲ್ಲೀವರ್ಗೆ ಏನೂ ಆಗೇ ಇಲ್ಲ,” ಅನ್ನೋದು ಅವರ ಅಳಲು. ಅಣ್ಣನ ಮಗನ ಕಷ್ಟ ನೋಡಲಾಗದೆ ದಿನವೂ ವಿಧಾನಸೌಧಕ್ಕೆ ಅಲೆಯುತ್ತಿರುವ ಅವರಿಗೆ, ವಿಧಾನಸೌಧ ಪ್ರವೇಶದ ಸಮಯ ಕೂಡ ಕಿರಿಕಿರಿ ತಂದಿಟ್ಟಿದೆ. “ಮಧ್ಯಾಹ್ನ ಎರಡೂವರೆಗೆ ಒಳಕ್ಕೆ ಬಿಡ್ತಾರೆ. ಅವಾಗಷ್ಟೆ ಊಟ ಮಾಡ್ಕೊಂಡು ಬಂದು ಅವ್ರೆಲ್ಲ ರೆಸ್ಟ್ ಮಾಡ್ತಿರ್ತಾರೆ. ಸ್ವಲ್ಪ ಹೊತ್ತಿಗೆಲ್ಲ ಮನೆಗೆ ಹಾರಿಬಿಡ್ತಾರೆ. ನಮ್ ಕೆಲ್ಸ ಹಂಗೇ ಉಳಿಯುತ್ತೆ. ಈ ಟೈಮಿಂಗ್ಸೇ ಸರಿ ಇಲ್ಲ,” ಎನ್ನುವುದು ಅವರ ತಕರಾರು. “ಕುಮಾರಣ್ಣಂಗೆ ಗೊತ್ತಾದ್ರೆ ನಮ್ ಕೆಲ್ಸ ಆಗ್ಬುಡುತ್ತೆ. ರಾಮನಗರದವ್ರು ಅಂದ್ರೆ ಸಾಕು,” ಅನ್ನೋ ನಂಬಿಕೆ ಪಾಷಾ ಅವರದ್ದು.