ಕಾಂಗ್ರೆಸ್-ಜೆಡಿಎಸ್ ನ 17 ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅನುಮೋದನೆಯ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗಿದೆ. ಒಂದು ತಿಂಗಳಲ್ಲಿ ನಾಲ್ಕು ಏಕವ್ಯಕ್ತಿ ಸಂಪುಟ ಸಭೆ ನಡೆಸಿದ್ದ ಯಡಿಯೂರಪ್ಪ, ಹಲವು ವಿಘ್ನಗಳನ್ನು ದಾಟಿ ಕೊನೆಗೂ ಸಂಪುಟಕ್ಕೆ ಸಹೋದ್ಯೋಗಿಗಳನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಡಿಯೂರಪ್ಪಗೆ ವಿರುದ್ಧವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸ್ವೀಕರ್ ಆಗಿ ಆಯ್ಕೆ ಮಾಡುವ ಮೂಲಕ ಸಂಘ ಪರಿವಾರದ ನಾಯಕರು ಮೇಲ್ನೋಟಕ್ಕೆ ಅಧಿಕಾರ ಯಡಿಯೂರಪ್ಪ ಅವರ ಬಳಿ ಇದ್ದಂತೆ ಭಾಸವಾದರೂ ಸೂತ್ರ ಮಾತ್ರ ಸಂಘ ಪರಿವಾರದ ಕೈಯಲ್ಲಿರಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಡಿಯೂರಪ್ಪನವರ ನೂತನ ಸಚಿವ ಸಂಪುಟದಲ್ಲಿ ಸಂಘ ಪರಿವಾರದ ನಾಯಕರ ಪ್ರತಿನಿಧಿಗಳ ಆಯ್ಕೆ ಢಾಳಾಗಿ ಗೋಚರಿಸದೇ ಇದ್ದರೂ ಪ್ರಭಾವ ಮಾತ್ರ ನಿಚ್ಚಳವಾಗಿದೆ. ಇದಕ್ಕೆ ಪೂರಕವೆಂಬಂತೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಯಡಿಯೂರಪ್ಪ ಬೆಂಗಳೂರಿನ ಆರ್ ಎಸ್ ಎಸ್ ಕಾರ್ಯಾಲಯ ಕೇಶವ ಕೃಪಾ ಹಾಗೂ ಈಚೆಗೆ ದೆಹಲಿಗೆ ತೆರಳಿದ್ದಾಗ ತಮ್ಮ ಪಾಲಿನ ಮಗ್ಗುಲ ಮುಳ್ಳು, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಆರ್ ಎಸ್ ಎಸ್ ನಿಷ್ಠರಾದ ಬಿ ಎಲ್ ಸಂತೋಷ್ ಅವರನ್ನು ಅನಿವಾರ್ಯವಾಗಿ ಭೇಟಿ ಮಾಡಿರುವುದು ಯಡಿಯೂರಪ್ಪನವರು ಸಿಲುಕಿರುವ ಸಂದಿಗ್ಧತೆಗೆ ಉದಾಹರಣೆಯಾಗಿದೆ.
ಜನ ಹೋರಾಟದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಿದ ಯಡಿಯೂರಪ್ಪ ಇಂದು ವಯಸ್ಸಿನಲ್ಲಿ ತಮಗಿಂತ ಕಿರಿಯರಾದ ಮೋದಿ, ಶಾ, ಸಂತೋಷ್ ಅವರಂತಹವರ ಎದುರು ನಿಸ್ಸಾಹಯಕರಾಗಿ ನಿಲ್ಲಲೇಬೇಕಾದ ಸ್ಥಿತಿಗೆ ಬಂದಿದ್ದಾರೆ. ಅಧಿಕಾರ ಸಿಕ್ಕರೂ ಅದನ್ನು ಘನತೆಯಿಂದ ನಿಭಾಯಿಸುವ ಸಂದರ್ಭ ಅವರಿಗೆ ಒದಗಿಬರಲೇ ಇಲ್ಲ ಎಂಬುದು ಅವರ ರಾಜಕೀಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮನನವಾಗುತ್ತದೆ. ಅಂದಹಾಗೆ, ಯಡಿಯೂರಪ್ಪನವರ ಸಂಕಟ ಇಷ್ಟಕ್ಕೆ ನಿಂತಿಲ್ಲ.
ರಾಜ್ಯದ ವಿವಿಧ ಜಿಲ್ಲೆಗಳು ತೀವ್ರ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಂಗೆಟ್ಟಿದ್ದು, ಅವುಗಳನ್ನು ಮರು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಯಡಿಯೂರಪ್ಪ ಮುಂದಿದೆ. ಆರ್ಥಿಕವಾಗಿ ಸಂಪೂರ್ಣವಾಗಿ ಹಳಿತಪ್ಪಿರುವ ಮೋದಿ ಸರ್ಕಾರವನ್ನು ಸರಿದಾರಿಗೆ ತರುವ ಅಗತ್ಯದ ಬಗ್ಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಹಲವು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಹಲವು ಉದ್ಯಮಿಗಳೂ ದೇಶದ ಆರ್ಥಿಕ ಸ್ಥಿತಿಗತಿ ಹಳಿತಪ್ಪಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರ ಸೃಷ್ಟಿತ ಜನಪ್ರಿಯತೆ ಅಲೆಯಲ್ಲಿ ನೈಜ ಸಮಸ್ಯೆಗಳಿಂದ ವಿಮುಖವಾಗುವ ಯತ್ನ ನಡೆಸಿದೆ. ಆದ್ದರಿಂದ, ಮೋದಿ ಸರ್ಕಾರವನ್ನು ನೆಚ್ಚಿಕೊಳ್ಳದೇ ರಾಜ್ಯದ ಪುನರ್ ನಿರ್ಮಾಣ ಕೆಲಸವನ್ನು ಯಡಿಯೂರಪ್ಪ ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು.

ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಬಾಗಲಕೋಟೆ, ದಕ್ಷಿಣದ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಮಳೆಯ ಆರ್ಭಟಕ್ಕೆ ನಲುಗಿವೆ. ಅಂದಾಜಿನ ಪ್ರಕಾರ ಇಲ್ಲಿ ರಸ್ತೆ, ವಸತಿ, ಶಾಲೆ ಸೇರಿದಂತೆ ಮಳೆ-ಪ್ರವಾಹಕ್ಕೆ ಸರ್ವಸ್ವವನ್ನು ಕಳೆದುಕೊಂಡಿರುವ ಜನರ ಪುನವರ್ಸತಿಗೆ ಕನಿಷ್ಠ 30-40 ಸಾವಿರ ಕೋಟಿ ರುಪಾಯಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಕಲ್ಪಿಸಲು ಅನುದಾನ ಹೊಂದಿಸುವುದರ ಜೊತೆಗೆ, ಸಿದ್ದರಾಮಯ್ಯನವರ ಜನಪ್ರಿಯ ಭಾಗ್ಯ ಸರಣಿ ಯೋಜನೆಗಳಿಗೆ ಅನುದಾನ, ಸಮ್ಮಿಶ್ರ ಸರ್ಕಾರದ ರೈತರ ಸಾಲಮನ್ನಾ ಜಾರಿಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆ ಹೆಚ್ಚಾಗಿದೆ. ಅನುದಾನ ಹೊಂದಿಸಲಾಗದೆ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಕಾಲದಲ್ಲಿ ಜಾರಿಗೆ ಬಂದಿದ್ದ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದ್ದರಲ್ಲದೇ, ಬಜೆಟ್ ನಲ್ಲಿ ಹಲವು ಇಲಾಖೆಗಳಿಗೆ ಅನುದಾನ ಹಂಚಿಕೆಯಲ್ಲಿ ವ್ಯತ್ಯಯ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ಕೇಂದ್ರ ಸರ್ಕಾರವನ್ನು ಸ್ಪಷ್ಟ ನುಡಿಗಳಲ್ಲಿಅನುದಾನ ಕೋರುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ ಎಂಬುದು ಅವರ ನಡೆ-ನುಡಿಗಳಿಂದ ಸ್ಪಷ್ಟವಾಗಿದೆ. ಬದುಕಿನಲ್ಲಿ ಹೆಚ್ಚೂ ಕಡಿಮೆ ಕೊನೆಯ ಬಾರಿ ಹಠಕ್ಕೆ ಬಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯಡಿಯೂರಪ್ಪ ಅವರಿಗೆ ಉತ್ತಮ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಬೇಕೆಂಬ ಹಂಬಲವಿದ್ದರೂ ಪರಿಸ್ಥಿತಿ ಅವರಿಗೆ ಪೂರಕವಾಗಿಲ್ಲ.
ಅತಿವೃಷ್ಟಿಯಿಂದ ಉಂಟಾದ ನಷ್ಟ, ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ಯಡಿಯೂರಪ್ಪ ಮೇಲಿದೆ. ಇತ್ತೀಚೆಗೆ ಇದೇ ವಿಷಯವನ್ನು ಪ್ರಸ್ತಾಪಿಸಿದ್ದ ಬೆಳಗಾವಿ ಜಿಲ್ಲೆಯ ಅರಭಾವಿ ಶಾಸಕ ಹಾಗೂ ಜಾರಕಿಹೊಳಿ ಕುಟುಂಬದ ಬಾಲಚಂದ್ರ ಜಾರಕಿಹೊಳಿ “ಪ್ರವಾಹದಿಂದ ಬದುಕು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸದಿದ್ದರೆ ನಾನೇ ಸರ್ಕಾರ ಉರುಳಿಸುತ್ತೇನೆ” ಎಂದು ಹೇಳಿರುವುದು ಕುತೂಹಲಕಾರಿಯಾಗಿದೆ. ಮಂತ್ರಿ ಸ್ಥಾನ ದಕ್ಕದೇ ಇರುವುದು ಅವರೊಳಗಿನ ಅಸಮಾಧಾನವನ್ನು ಬಡಿದೆಬ್ಬಿಸುವುದರಲ್ಲಿ ಅನುಮಾನವಿಲ್ಲ.

ಬಹುತೇಕರ ಆಶಯದಂತೆ ಹಲವು ದಶಕಗಳ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಆದರೆ, ಈಗಿನ ಸ್ಥಿತಿ ಬಿಜೆಪಿಗೆ ಪೂರಕವಾಗಿಲ್ಲ. ಹಿಂದಿನ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ಜನರೂ ಕೇಳುವ ಸ್ಥಿತಿಯಲ್ಲಿಲ್ಲ. ಯಡಿಯೂರಪ್ಪನವರನ್ನು ರಾಜಕೀಯ ತೆರೆಮರೆಗೆ ತಳ್ಳಲು ಸಂದರ್ಭಕ್ಕೆ ಕಾಯುತ್ತಿರುವ ಬಿಜೆಪಿ ವರಿಷ್ಠರಿಗೆ ನೆರೆ ಪರಿಸ್ಥಿತಿಯು ವರದಾನವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ದೆಹಲಿ, ಬಿಹಾರ ಹಾಗೂ ಕಳೆದ ವರ್ಷಾಂತ್ಯದಲ್ಲಿ ನಡೆದ ಪಂಚ ರಾಜ್ಯ ಚುನಾವಣೆಗಳ ಸೋಲುಗಳು ಸೇರಿದಂತೆ ಹಿನ್ನಡೆಗಳನ್ನು ಮತ್ತೊಬ್ಬರ ತಲೆಗೆ ಕಟ್ಟಿ ಅವರನ್ನು ಬಲಿಕೊಡುವುದರಲ್ಲಿ ನಿಷ್ಣಾತರಾದ ಮೋದಿ-ಶಾ ಜೋಡಿ ಯಡಿಯೂರಪ್ಪನವರನ್ನು ನಿವೃತ್ತಿಗೊಳಿಸುವ ಮೂಲಕ ಪಕ್ಷವನ್ನು ಸೂಕ್ಷ್ಮವಾಗಿ ಅವರ ಕಪಿಮುಷ್ಟಿಯಿಂದ ಬಿಡಿಸಲು ನೆರೆ ನಿರ್ವಹಣೆ ವಿಫಲತೆಯನ್ನು ಯಡಿಯೂರಪ್ಪ ಅವರ ತಲೆಗೆ ಕಟ್ಟಲು ಹೊಂಚು ಹಾಕಿದೆ ಎನ್ನಲಾಗುತ್ತಿದೆ. ಎಲ್ಲಾ ದಿಕ್ಕಿನಿಂದಲೂ ಬಂಧಿಯಾಗಿರುವ ಯಡಿಯೂರಪ್ಪ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಸಿಲುಕಿದ್ದಾರೆ. ಖಾಲಿ ಬೊಕ್ಕಸದ ಕೀಲಿ ಹಿಡಿದಿರುವ ಯಡಿಯೂರಪ್ಪ ಪವಾಡ ಸೃಷ್ಟಿಸುವ ಮೂಲಕ ಅತಿವೃಷ್ಟಿ-ಅನಾವೃಷ್ಟಿಯಿಂದ ದಿಕ್ಕು-ದಿಸೆ ಕಳೆದುಕೊಂಡು ನಿರ್ಗತಿಕರಾಗಿರುವ ಜನರನ್ನು ಸಂಕಷ್ಟದಿಂದ ಪಾರು ಮಾಡುವರೇ ಎಂಬುದು ಪ್ರಶ್ನೆ. ಉತ್ತರಕ್ಕಾಗಿ ಕಾಯುವುದು ಅನಿವಾರ್ಯ.