ದೆಹಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ದೇಶವ್ಯಾಪಿ ಚುನಾವಣಾಸಕ್ತರ ಕಣ್ಣು ಹೊರಳಿದ್ದು ಚಳವಳಿಗಳ ನೆಲ ಬಿಹಾರದತ್ತ. ವಿಧಾನಸಭಾ ಚುನಾವಣೆಗೆ ಕೇವಲ ಏಳು ತಿಂಗಳು ಬಾಕಿ ಇರುವಾಗ, ಯಾತ್ರಾ ಮತ್ತು ಕ್ಷಾತ್ರ(ಡಿಎನ್ಎ) ರಾಜಕಾರಣದ ನೆಲದಲ್ಲಿ ಹೊಸ ರಾಜಕೀಯ ಸಮೀಕರಣಗಳು ತಲೆ ಎತ್ತತೊಡಗಿವೆ.
ಕಳೆದ ಬಾರಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ, ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಮತ್ತು ಇತರ ಕೆಲವು ಪ್ರಾದೇಶಿಕ್ಷ ಪಕ್ಷಗಳು ಸೇರಿ ಮಹಾಘಟಬಂಧನ್ ಮಹಾಮೈತ್ರಿ ರಚಿಸಿಕೊಂಡು ಚುನಾವಣೆ ಎದುರಿಸಿದ್ದವು. ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮಹಾಮೈತ್ರಿ ಅಧಿಕಾರಕ್ಕೂ ಬಂದಿತ್ತು. ಜೆಡಿಯು ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿಯೂ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿಯೂ ಸರ್ಕಾರ ರಚಿಸಿದ್ದರು. ಆದರೆ, ಕೇವಲ ಒಂದೂವರೆ ವರ್ಷದಲ್ಲೇ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಬಿಜೆಪಿ ಮೈತ್ರಿ ಸರ್ಕಾರ ರಚಿಸಿದ್ದರು.
ಹೀಗೆ ಮೈತ್ರಿ ಕಟ್ಟುವ, ಮುರಿಯುವ ರೋಚಕ ಇತಿಹಾಸ ಹೊಂದಿರುವ ಬಿಹಾರದ ಚುನಾವಣಾ ಹೊಸ್ತಿಲಲ್ಲಿ, ಇದೀಗ ಕಳೆದ ಒಂದು ವಾರದಿಂದ ನಡೆಯುತ್ತಿರುವ ಕ್ಷಿಪ್ರ ಮತ್ತು ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಮತ್ತೊಂದು ಸುತ್ತಿನ ಮೈತ್ರಿಯ ಪ್ರಯತ್ನದ ಸೂಚನೆ ನೀಡಿವೆ.
ಒಂದು ಕಡೆ ಕೇವಲ ಎರಡು ವರ್ಷದ ಹಿಂದೆ ಪರಸ್ಪರ ಕಿತ್ತಾಡಿ ಸರ್ಕಾರವನ್ನೇ ಬಲಿಕೊಟ್ಟು ಮುಖ ತಿರುಗಿಸಿಕೊಂಡು ಹೋಗಿದ್ದ ಮತ್ತು ಎನ್ ಡಿಎ ಬೆಂಬಲಿತ ನಿತೀಶ್ ಕುಮಾರ್ ಸರ್ಕಾರ ಮತ್ತು ಸ್ವತಃ ಮುಖ್ಯಮಂತ್ರಿ ನಿತೀಶ್ ವಿರುದ್ಧ ನಿರಂತರ ವಾಗ್ದಾಳೀ, ಹೋರಾಟಗಳನ್ನು ನಡೆಸುತ್ತಲೇ ರಾಜಕೀಯವಾಗಿ ಪ್ರಸ್ತುತತೆ ಉಳಿಸಿಕೊಂಡಿದ್ದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಸಿಎಂ ನಿತೀಶ್ ಕುಮಾರ್ 48 ಗಂಟೆಗಳ ಅಂತರದಲ್ಲಿ ಎರಡು ಭಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ಸಹಜವಾಗೇ ನಿತೀಶರ ಜೆಡಿಯು ಮಿತ್ರಪಕ್ಷ ಬಿಜೆಪಿಯಲ್ಲಿ ಆತಂಕದ ಬೇಗುದಿಗೆ ಕಾರಣವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಚುನಾವಣಾ ಹೊಸ್ತಿಲಲ್ಲಿ ನಿತೀಶ್ ತನಗೆ ಕೈಕೊಟ್ಟು ಮಹಾಘಟಬಂಧನದ ಮೈತ್ರಿಯಲ್ಲಿ ಚುನಾವಣೆಗೆ ಹೋಗುತ್ತಾರೆಯೇ? ಎಂಬುದು ಬಿಜೆಪಿಯ ಆತಂಕದ ಪ್ರಶ್ನೆ. ಇದೊಂದು ಸೌಹಾರ್ಧ ಭೇಟಿ, ಅದಕ್ಕೆ ಹೆಚ್ಚಿನ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ವತಃ ತೇಜಸ್ವಿ ಯಾದವ್ ಹೇಳಿದ್ದರೂ, ಸಿಎಎ-ಎನ್ ಆರ್ ಸಿ ಚರ್ಚೆಗೆ ಮಾತ್ರ ಭೇಟಿ ಸೀಮಿತವಾಗಿತ್ತು ಎಂಬ ಸಮಜಾಯಿಷಿ ನೀಡಿದ್ದರೂ, ಸದ್ಯದ ಬಿಹಾರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆ ಭೇಟಿಗೆ ಸಹಜವಾಗೇ ರಾಜಕೀಯ ಬಣ್ಣ ಬಂದಿದೆ.
ಅದಕ್ಕೆ ಪೂರಕವಾಗಿ ಮಹಾಘಟಬಂಧನ್ ನಾಯಕರಾದ ಹಿರಿಯ ಕಾಂಗ್ರೆಸ್ ನಾಯಕ ಅವಧೀಶ್ ಸಿಂಗ್ ಮತ್ತು ಮಾಜಿ ಸಿಎಂ ಜತಿನ್ ರಾಮ್ ಮಾಂಝಿ ಕೂಡ ‘ನಿತೀಶ್ ಮತ್ತೆ ಮಹಾಘಟಬಂಧನ್ ಗೆ ಮರಳಿದರೆ ತಪ್ಪೇನು? ಅವರ ಜಾತ್ಯತೀತ ನಿಲುವನ್ನು ಯಾರೂ ಪ್ರಶ್ನಿಸಲಾಗದು’ ಎಂದಿದ್ದಾರೆ.
ಈ ನಡುವೆ ಬಿಹಾರದ ರಾಜಕಾರಣದಲ್ಲಿ ನಡೆದಿರುವ ಕೆಲವು ಬೆಳವಣಿಗೆಗಳು ಕೂಡ ನಿತೀಶ್ ಕುಮಾರ್ ಅವರ ನಡೆ ಮಹಾಘಟಬಂಧನದ ಕಡೆ ಎಂಬ ಸೂಚನೆಗಳನ್ನು ನೀಡುತ್ತಿವೆ ಎಂಬುದು ಕೂಡ ನಿತೀಶ್ ಮತ್ತು ತೇಜಸ್ವಿ ಭೇಟಿಗೆ ರಾಜಕೀಯ ರೆಕ್ಕೆಪುಕ್ಕ ಮೂಡಿಸಿವೆ. ಆ ಪೈಕಿ ಪ್ರಮುಖವಾದದು; ಬಿಜೆಪಿ ಪಾಲಿಗೆ ಅತ್ಯಂತ ಪ್ರತಿಷ್ಠಿತ ರಾಜಕೀಯ ಸಂಗತಿಯಾಗಿರುವ ಸಿಎಎ-ಎನ್ ಆರ್ ಸಿ ವಿರುದ್ಧ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಬಿಹಾರ ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿರುವುದು. ಇಡೀ ದೇಶಾದ್ಯಂತ ಈ ಕಾಯ್ದೆ ಜಾರಿಯನ್ನು ಬಿಜೆಪಿ ತನ್ನ ರಾಜಕೀಯ ಬದ್ಧತೆಯ ಸಂಗತಿಯಾಗಿ ಬಿಂಬಿಸುತ್ತಿರುವಾಗ, ಸ್ವತಃ ಆ ಪಕ್ಷವೇ ಪಾಲುದಾರನಾಗಿರುವ ಒಂದು ಸರ್ಕಾರ ತದ್ವಿರುದ್ಧ ನಿರ್ಣಯ ಕೈಗೊಳ್ಳುವುದು ಎಂಥ ಮುಜುಗರದ ಸಂಗತಿ ಮತ್ತು ಕಾಯ್ದೆ ಅನುಷ್ಠಾನದ ಅದರ ಪಟ್ಟುಬಿಡದ ಯತ್ನಕ್ಕೆ ಎಷ್ಟು ದೊಡ್ಡ ಹಿನ್ನಡೆ ಎಂಬ ಹಿನ್ನೆಲೆಯಲ್ಲಿ ನಿತೀಶ್ ಅವರ ಈ ನಡೆ ಖಂಡಿತವಾಗಿಯೂ ರಾಜಕೀಯವಾಗಿ ದೊಡ್ಡ ಸಂದೇಶವನ್ನು ರವಾನಿಸಿದೆ.
ಮತ್ತೊಂದು ಬೆಳವಣಿಗೆ ಕೂಡ ಬಿಜೆಪಿಗೆ ಮುಜುಗರ ತರುವಂಥದ್ದೇ. ಬಿಜೆಪಿಯ ಮಿತ್ರಪಕ್ಷ ಮತ್ತು ಕಳೆದ ಚುನಾವಣೆಯಲ್ಲಿ ಅದರೊಂದಿಗೆ ಪ್ರಮುಖ ಪ್ರಾದೇಶಿಕ ಪಾಲುದಾರನಾಗಿದ್ದ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಈ ಬಾರಿ ಬಿಜೆಪಿಯಿಂದ ಪ್ರತ್ಯೇಕವಾಗುವ ಬಗ್ಗೆ ಗಂಭೀರ ಚಿಂತನೆ ನಡೆಸಿರುವುದು. ಅದರಲ್ಲೂ ಪಕ್ಷದ ಚುಕ್ಕಾಣಿ ರಾಮ್ ವಿಲಾಸ್ ಪಾಸ್ವಾನ್ ಅವರಿಂದ ಪುತ್ರ ಚಿರಾಗ್ ಪಾಸ್ವಾನ್ ಕೈಗೆ ಹೋದ ಬಳಿಕ ಪಕ್ಷದ ನಿಲುವಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಂತಹ ಬದಲಾವಣೆಗಳ ಮುಂದುವರಿದ ಭಾಗವಾಗಿ ಇದೀಗ ಚಿರಾಗ್, ಕನಿಷ್ಠ 119 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆಗೆ ತಯಾರಿ ನಡೆಸಿದ್ದು, ಅದರ ಅಂಗವಾಗಿಯೇ ‘ಬಿಹಾರ್ ಫಸ್ಟ್ ಬಿಹಾರ್ ಫಸ್ಟ್’ ಯಾತ್ರೆ ಆರಂಭಿಸಿದ್ದಾರೆ. ಚಿರಾಗ್ ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರುವುದು ಮತ್ತು ಮಹತ್ವಾಕಾಂಕ್ಷಿಯಾಗಿರುವುದು ಸಹಜವಾಗೇ ಬಿಹಾರದ ಎರಡು ಪ್ರಬಲ ರಾಜಕೀಯ ಶಕ್ತಿಗಳಾದ ಜೆಡಿಯು ಮತ್ತು ಆರ್ ಜೆಡಿಯಲ್ಲಿ ಆತಂಕ ಮೂಡಿಸಿದೆ. ಆ ಆತಂಕವೇ ಹೊಸ ದೋಸ್ತಿಗೆ ತಳಹದಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು ಎಂಬುದು ಅಲ್ಲಿನ ರಾಜಕೀಯ ಪಂಡಿತರ ವಾದ.ಈ ನಡುವೆ, ಬಿಹಾರದ ಇಡೀ ರಾಜಕಾರಣ ನಿತೀಶ್ ಅವರನ್ನು ಹೊರತುಪಡಿಸಿ ಎರಡನೇ ತಲೆಮಾರಿನ ಯುವ ಪೀಳಿಗೆಯ ಕೈಗೆ ಜಾರುತ್ತಿದೆ. ಒಂದು ಕಡೆ ಲಾಲೂ ವಾರಸುದಾರನಾಗಿ ತೇಜಸ್ವಿ ಯಾದವ್ ಆರ್ ಜೆಡಿಯ ಚುಕ್ಕಾಣಿ ಹಿಡಿದು ರಾಜ್ಯವ್ಯಾಪಿ ‘ಬೆಹರೋಜ್ ಗಾರಿ’ ಯಾತ್ರೆಯ ಮೂಲಕ ಚುನಾವಣಾ ತಯಾರಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ರಾಮ್ ವಿಲಾಸ್ ಉತ್ತರಾಧಿಕಾರಿಯಾಗಿ ಚಿರಾಗ್ ‘ಬಿಹಾರ್ ಫಸ್ಟ್’ ಯಾತ್ರೆ ಆರಂಭಿಸಿದ್ದಾರೆ. ಈ ನಡುವೆ ಎಡಪಕ್ಷಗಳ ಉತ್ತರಾಧಿಕಾರಿ ಕನ್ಹಯ್ಯಕುಮಾರ್ ಕೂಡ ಈ ಬಾರಿಯ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಕೆಲವು ತಿಂಗಳುಗಳಿಂದಲೇ ಅವರು ‘ಜನಗಣಮನ’ ಯಾತ್ರೆಯ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಕೂಡ ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳ ಮೂಲಕ ಈ ಬಾರಿ ಬಿಹಾರ ಚುನಾವಣೆಯಲ್ಲಿ ನೇರ ಸ್ಪರ್ಧೆಗೆ ಇಳಿಯುವ ತಯಾರಿ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹಾಘಟಬಂಧನದ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್, ಇದೀಗ ನಿತೀಶ್ ಕುಮಾರ್ ಅವರ ಪ್ರಮುಖ ಟೀಕಾಕಾರರಾಗಿ ರಾಜಕೀಯವಾಗಿ ಮುಂಬಡ್ತಿ ಪಡೆದಿದ್ದಾರೆ. ಅಲ್ಲದೆ, ಈ ನಡುವೆ ಕಳೆದ ವಾರ, ಆರ್ ಜೆಡಿ ಹೊರತುಪಡಿಸಿ ಮಹಾಘಟಬಂಧನದ ಕಾಂಗ್ರೆಸ್, ರಾಷ್ಟ್ರೀಯ ಲೋಕಸಮತಾ ಪಕ್ಷ, ಎಚ್ ಎಎಂ(ಎಸ್), ವಿಐಪಿ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಬೆಳವಣಿಗೆ ಕೂಡ ಬಿಹಾರದ ರಾಜಕೀಯ ಧ್ರುವೀಕರಣದ ಸೂಚನೆ ನೀಡಿದ್ದು, ಪ್ರಶಾಂತ್ ಅವರ ಈ ಮಾತುಕತೆ ತೇಜಸ್ವಿ ಯಾದವ್ ಮತ್ತು ನಿತೀಶ್ ನಡುವಿನ ರಾಜಕೀಯ ಸಮೀಕರಣದ ದಿಢೀರ್ ಸ್ಥಿತ್ಯಂತರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಮಹಾಘಟಬಂಧನದ ಕಾಂಗ್ರೆಸ್ ಮತ್ತು ಇತರೆ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಗೆ ಪ್ರಶಾಂತ್ ಕಿಶೋರ್ ಪ್ರಯತ್ನ ನಡೆಸುತ್ತಿರುವಂತಿದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ, ಆರ್ ಜೆಡಿ ಮಹಾಮೈತ್ರಿಯಿಂದ ಹೊರಬಂದು, ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋದರೂ ಅಚ್ಚರಿಯಿಲ್ಲ ಎಂಬ ವಿಶ್ಲೇಷಣೆಗಳೂ ಇವೆ.
ಒಟ್ಟಾರೆ, ದಶಕಗಳಿಂದಲೂ ರಾಷ್ಟ್ರರಾಜಕಾರಣದ ಹೊಸ ಪ್ರಯೋಗಗಳ ಪ್ರಯೋಗಶಾಲೆಯಾಗಿಯೇ ಗುರುತಿಸಿಕೊಂಡಿರುವ ಬಿಹಾರದಲ್ಲಿ ಈ ಬಾರಿಯ ಚುನಾವಣೆ ಕೂಡ ಹೊಸ ಸಮೀಕರಣಕ್ಕೆ ಕಾರಣವಾಗುವ ಲಕ್ಷಣಗಳು ಸ್ಪಷ್ಟವಾಗಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಅಲ್ಲಿನ ಬೆಳವಣಿಗೆಗಳು ಇನ್ನಷ್ಟು ನಿಖರವಾಗಲಿವೆ.
