ಬಿರುಸಿನ ಮಳೆಗಾಲ ಕೊಡಗಿಗೆ ಹೊಸತಲ್ಲವಾದರೂ ಈ ಬಾರಿ ಕಳೆದ ನಾಲ್ಕು ದಿನಗಳಿಂದ ಬಿರುಸು ಪಡೆದಿರುವ ಮಳೆಯಿಂದಾಗಿ ಜನತೆ ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷದ ಭೀಕರ ಭೂ ಕುಸಿತ ಹಾಗೂ ಮಳೆಗೆ ಸಿಲುಕಿ ಒಟ್ಟು 15 ಜನ ಪ್ರಾಣ ಕಳೆದುಕೊಂಡಿದ್ದರು. ಈ ವರ್ಷವೂ ಭೂ ಕುಸಿತ ಮುಂದುವರೆದಂತೆ ಕಾಣುತ್ತಿದೆ. ಕಳೆದ ಐದು ದಿನಗಳಿಂದ ಕೊಡಗಿನಲ್ಲಿ ಆರ್ಭಟಿಸುತ್ತಿರುವ ಮಹಾಮಳೆಗೆ ಏಳು ಮಂದಿ ಮೃತರಾಗಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳು ಜಲಾವೃತಗೊಂಡು ಆತಂಕವನ್ನು ಸೃಷ್ಟಿಸಿದೆ.
ಮೊದಲೆಲ್ಲಾ ಕೊಡಗಿನಲ್ಲಿ ಮಳೆಗಾಲದಲ್ಲಿ ಭಾರೀ ಪ್ರವಾಹ ಕಾಣಿಸಿಕೊಂಡ ನಂತರ ಇಳಿಮುಖವಾಗುತಿತ್ತು. ಕಳೆದ ವರ್ಷ ಮಳೆಗಾಲ ಜೂನ್ ತಿಂಗಳ ಕೊನೆಯ ವಾರದಲ್ಲೇ ಆರಂಭಗೊಂಡಿತ್ತು. ಈ ವರ್ಷ ಜುಲೈ ಅಂತ್ಯದವರೆಗೂ ಸರಿಯಾಗಿ ಮಳೆ ಬೀಳದೆ ಜನರು ಆಕಾಶ ನೋಡುವಂತಾಗಿತ್ತು. ಆದರೆ ಕಳೆದ 5 ದಿನಗಳಿಂದ ದಿಢಿರಾಗಿ ಬಿರುಸು ಹೆಚ್ಚಿಸಿಕೊಂಡ ಮಳೆಯಿಂದಾಗಿ ಕೊಡಗಿನ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ. ನೂರಾರು ಹಳ್ಳಿಗಳು ದ್ವೀಪಗಳಂತಾಗಿವೆ. ಬಹುತೇಕ ನಗರ, ಪಟ್ಟಣ, ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ದಿನಗಳೇ ಆಗಿವೆ. ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕೂಡ ಹಾನಿಯಾಗಿದೆ.
ಭಾರೀ ಮಳೆಗೆ ಗುಡ್ಡ ಕುಸಿದ ಪರಿಣಾಮ ಜಿಲ್ಲೆಯ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಅತ್ತೇಡಿ ಯಶವಂತ, ಬೋಳನ ಬಾಲಕೃಷ್ಣ, ಬೋಳನ ಯಮುನಾ, ಕಾಳನ ಉದಯ ಹಾಗೂ ವಸಂತ ಎಂದು ಗುರುತಿಸಲಾಗಿದೆ. ವೀರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂ ಕುಸಿತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರದೇಶದ ನಾಲ್ಕೈದು ಮನೆಗಳು ಕುಸಿದಿದ್ದು, ಒಕ್ಕಲಿಗರ ಪರಮೇಶ್ವರ ಎಂಬುವವರ ಪತ್ನಿ ಮಮತ (40) ಹಾಗೂ ಮಗಳು ಲಿಖಿತಾ (15) ಇವರುಗಳ ಮೃತ ದೇಹ ಪತ್ತೆಯಾಗಿದೆ.
ದುರ್ಘಟನೆಯಲ್ಲಿ ಸಿಲುಕಿ ಶಂಕರ, ಅಪ್ಪು(55), ಲೀಲಾ, ಹರೀಶ ಎಂಬುವರ ಪತ್ನಿ, ಮತ್ತೊಂದು ಕುಟುಂಬದ ದೇವಕ್ಕಿ (65), ಅನು(35), ಅಮೃತ(13) ಹಾಗೂ ಆದಿತ್ಯ(10)ನಾಪತ್ತೆಯಾದ ವ್ಯಕ್ತಿಗಳಾಗಿದ್ದು, ಈ ಭಾಗದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಶೋಧ ಮತ್ತು ರಕ್ಷಣಾ ಕಾರ್ಯವನ್ನು ಶನಿವಾರ ಮುಂದುವರಿಸಲಾಗುವುದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ತೋರ ಪ್ರದೇಶದಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣೆಗಾಗಿ ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಮತ್ತು ಪೊಲೀಸರು ಧಾವಿಸಿ, ಸುಮಾರು 300 ಕುಟುಂಬಗಳನ್ನು ರಕ್ಷಿಸಿದ್ದಾರೆ. ಆದರೆ ದುರದೃಷ್ಟವಶಾತ್ ಇಬ್ಬರು ಮೃತಪಟ್ಟಿರುವುದಲ್ಲದೆ, ಕೆಲವರು ನಾಪತ್ತೆಯಾಗಿದ್ದಾರೆ. ಕೋರಂಗಾಲ ಘಟನೆ ಮತ್ತು ತೋರ ದುರಂತ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7 ಮಂದಿ ಮೃತ ಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸಂಕಷ್ಟದಲ್ಲಿರುವವರ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ತುರ್ತಾಗಿ ರೂ. 5 ಕೋಟಿ ಬಿಡುಗಡೆ ಮಾಡಲು ಆದೇಶಿಸಿದೆ. ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೆ ಶಾಲಾ-ಕಾಲೇಜು ಮತ್ತು ಅಂಗನವಾಡಿಗಳಿಗೆ ನೀಡಿರುವ ರಜೆಯನ್ನು ಆಗಸ್ಟ್ 10ಕ್ಕೆ ವಿಸ್ತರಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಡುಗೆ ಸಾಮಗ್ರಿಗಳು, ಗ್ಯಾಸ್ ಸ್ಟೌ, ಪ್ಲಾಸ್ಟಿಕ್ ಬಕೆಟ್ಸ್, ರೈನ್ ಕೋಟ್ಸ್, ಸ್ವೆಟರ್, ಕಂಬಳಿ, ಪಾದರಕ್ಷೆ , ಸ್ಯಾನಿಟರಿ ನ್ಯಾಫ್ಕಿನ್ಸ್, ಪ್ಲಾಸ್ಟಿಕ್ ಮ್ಯಾಟ್ಸ್, ಬೆಡ್‍ಶೀಟ್, ಪಿಲ್ಲೋಸ್, ಧರಿಸಲು ವಸ್ತ್ರಗಳು, ಶಾಲಾ ಬ್ಯಾಗ್ ಮತ್ತು ಲಗ್ಗೇಜ್ ಬ್ಯಾಗ್‍ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವಂತೆ ಜಿಲ್ಲಾಡಳಿತ ಕೋರಿದೆ.

ಈವರೆಗೆ ಒಟ್ಟು 3120 ಮಂದಿ ಸಂತ್ರಸ್ಥರು ಜಿಲ್ಲೆಯ 34 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರ ಸಂಖ್ಯೆ ಹೆಚ್ಚುತ್ತಲೇ ಇದೆ. 54 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಡಳಿತ ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳ ಸಹಯೋಗದಿಂದ ಪರಿಹಾರ ಕಾರ್ಯದಲ್ಲಿ ತೊಡಗಿದೆ.
ಹಾಗೆ ನೋಡಿದರೆ ಜಿಲ್ಲೆಯಲ್ಲಿ ಅನೇಕ ಪ್ರದೇಶಗಳಲ್ಲಿ ಕಳೆದ ವರ್ಷ ಈ ವೇಳೆಗೆ ಬಿದ್ದಿದ್ದ ಮಳೆಯ ಅರ್ಧದಷ್ಟೂ ಮಳೆ ಆಗಿಲ್ಲ ಆದರೆ ಹಾನಿ ಮಾತ್ರ ಜಾಸ್ತಿ ಆಗಿದೆ. ಕೊಡಗಿನಲ್ಲಿ ಈ ವರೆಗೆ ಸರಾಸರಿ ಒಟ್ಟು 1664.2 ಮಿ.ಮೀ ಮಳೆ ಆಗಿದ್ದುಕಳೆದ ವರ್ಷ ಇದೇ ವೇಳೆಗೆ 2995.3 ಮಿ.ಮೀ ಮಳೆ ಆಗಿತ್ತು. ಇನ್ನೊಂದೆಡೆ, ಕೆ ಆರ್ ಎಸ್ ಜಲಾಶಯದಲ್ಲಿ ಒಂದೇ ದಿನ 10 ಅಡಿ ನೀರು ಏರಿಕೆಯಾಗಿದ್ದು ನೀರಿನ ಮಟ್ಟ 102 ಅಡಿಗಳಿಗೆ ತಲುಪಿದೆ. ದಿಢೀರ್ ಬಿರುಸು ಮಳೆ ನಿಲ್ಲಲಿ ಅಥವಾ ನಿಧಾನವಾಗಿ ಸುರಿಯಲಿ ಎಂದು ಜನತೆ ಮೊರೆ ಇಡುತ್ತಿದ್ದಾರೆ.