ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಘನತ್ಯಾಜ ನಿರ್ವಹಣೆ ವಿಭಾಗದಲ್ಲಿ ಖಾಲಿ ಇರುವ ಗ್ರೂಪ್ ‘ಡಿ’ ವೃಂದದ 4000 ಪೌರಕಾರ್ಮಿಕರ ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದಕ್ಕೆ ಆಹ್ವಾನಿಸಿದೆ. ಬಿಬಿಎಂಪಿಯಲ್ಲಿ 01.02.2018ಕ್ಕೆ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಎನ್.ಎಂ.ಆರ್/ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ ಪೌರಕಾರ್ಮಿಕರು ಹಾಗೂ ಇತರರು ಗ್ರೂಪ್ ‘ಡಿ’ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ಹೊರಡಿಸಿದೆ.
ಹೆಚ್ಚು ಓದಿದ ಸ್ಟೋರಿಗಳು
ಆದರೆ ಹುದ್ದೆ ನೇಮಕಾತಿಗಾಗಿ ವಿಧಿಸಿರುವ ಷರತ್ತುಗಳನ್ನು ಪೌರಕಾರ್ಮಿಕರು ಗಮನಿಸಿದರೆ, ಪೌರಕಾರ್ಮಿಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಈಗಾಗಲೇ ಸುಮಾರು 15-20 ವರ್ಷಗಳಿಂದ ಗುತ್ತಿಗೆ / ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ 45 ವರ್ಷ ವಯಸ್ಸು ಮೀರಿದವರು ಸಹ ಸಾಕಷ್ಟು ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ ಹುದ್ದೆ ನೇಮಕಾತಿಯಲ್ಲಿ 45 ವರ್ಷ ವಯಸ್ಸಿನ ಒಳಗಿನವರಾಗಿರಬೇಕು ಎಂದು ಅಧಿಸೂಚನೆ ಹೊರಡಿಸಿದೆ. ಎರಡು ದಶಕಗಳ ಕಾಲ ಘನತ್ಯಾಜ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಎಲ್ಲಿಗೆ ಹೋಗಬೇಕು ಎಂಬುದು ಪ್ರಶ್ನೆ.
ಆನ್ ಲೈನ್ ಅರ್ಜಿ ತಂದಿದೆ ಆತಂಕ:
ಬಿಬಿಎಂಪಿಯ ಸಾಕಷ್ಟು ಇಲಾಖೆಗಳೇ ಇನ್ನೂ ಕಂಪ್ಯೂಟರಿಕರಣಗೊಂಡಿಲ್ಲ. ಆದರೆ ಪೌರ ಕಾರ್ಮಿಕ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿರುವುದಿಲ್ಲ ಎಂದು ಅಧಿಸೂಚನೆ ಹೊರಡಿಸಿ, ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ಮಾರ್ಗ ಸರಿಯೇ? ಕಂಪ್ಯೂಟರ್ ಜ್ಞಾನವಿಲ್ಲದ ಹಾಗೂ ಶಿಕ್ಷಣವಿಲ್ಲದ ಸಾಕಷ್ಟು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಪರಿಜ್ಞಾನ ಬಿಬಿಎಂಪಿಗೆ ಇರಬೇಕಿತ್ತು. ಇಕ್ಕಟ್ಟಿಗೆ ಸಿಲುಕಿಕೊಳ್ಳುವಂತಹ ಅಧಿಸೂಚನೆಯನ್ನು ಹೊರಡಿಸಿರುವುದು ವಿಷಾದನೀಯ.
ಸುಮಾರು ವರ್ಷಗಳಿಂದಲೂ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಹೋರಾಟ ನಡೆಯುತ್ತಲೇ ಇದೆ. ನೇರ ನೇಮಕಾತಿಗೆ ಆಸ್ಪದ ಕೊಡದೆ, ಹೊಸ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಎಂಬುದನ್ನು ಬಿಬಿಎಂಪಿ ತನ್ನನ್ನೇ ಪ್ರಶ್ನಿಸಿಕೊಳ್ಳಬೇಕು.

ಗುತ್ತಿಗೆದಾರರು ನೀಡುವ ವೇತನ, ESI ಮತ್ತು EPF ಸೌಲಭ್ಯದಲ್ಲೇ ದೋಷ
ಗುತ್ತಿಗೆ ಪೌರಕಾರ್ಮಿಕರು ರಜೆಯನ್ನು ಲೆಕ್ಕಿಸದೆ ತಿಂಗಳು ಪೂರ್ತಿ ಕೆಲಸ ಮಾಡುತ್ತಿರುತ್ತಾರೆ. ಆದರೆ ವೇತನ ಕೊಡುವಾಗ ಶೇಕಡ 70-80ರಷ್ಟು ಕಾರ್ಮಿಕರಿಗೆ ವೇತನ ಚೀಟಿಯನ್ನು ನೀಡುವುದಿಲ್ಲ. ಹಾಗೂ ಸಾಕಷ್ಟು ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕೇವಲ 15-20 ದಿನಗಳ ಮಾತ್ರ ಭವಿಷ್ಯ ನಿಧಿ (EPF) ಹಣವನ್ನು ಪಾವತಿಸುತ್ತಿದ್ದಾರೆ. ನಮ್ಮ ಮನೆ ಹಾಗೂ ನಗರ ಸ್ವಚ್ಛವಾಗಿರಬೇಕಾದರೆ ಪೌರ ಕಾರ್ಮಿಕರ ಪಾತ್ರ ಬಹಳ ದೊಡ್ಡದಿರುತ್ತದೆ. ಇವರ ಶ್ರಮಕ್ಕೆ ತಕ್ಕಂತೆ ಫಲ ಸಿಗದೇ, ಅಲ್ಪ ಮಟ್ಟದ ಭವಿಷ್ಯ ಹಣದ ಸೌಲಭ್ಯ ಯಾವುದಕ್ಕೂ ಸಾಕಾಗುವುದಿಲ್ಲ. ಗುತ್ತಿಗೆದಾರರೂ ಸರಿಯಾದ ಆರೋಗ್ಯ ಸೌಲಭ್ಯ ಒದಗಿಸದ ಕಾರಣ ಸಾಕಷ್ಟು ಪೌರಕಾರ್ಮಿಕರು 40 ವರ್ಷವಾಗುತ್ತಿದ್ದಂತೆ ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಸಹ ಇದುವರೆಗೂ ಯಾವುದೇ ರೀತಿಯ ಸರಿಯಾದ ಕ್ರಮವನ್ನು ತೆಗದುಕೊಂಡಿಲ್ಲ. ಸಾಕಷ್ಟು ಜನ ಇ ಎಸ್ ಐ ಸೌಲಭ್ಯ ಸಿಗದೆ, ತಮ್ಮ ಸಂಬಳದ ಬಹುತೇಕ ಹಣ ಆಸ್ಪತ್ರೆಗೆಂದೇ ಮೀಸಲಿಟ್ಟಿರುತ್ತಾರೆ. ಹೀಗಿರುವಾಗ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಲ್ಲಿ ದೈಹಿಕ ಧೃಢತೆ ಇರಲು ಸಾಧ್ಯವೇ? ಇದರ ಬಗ್ಗೆ ಗಮನಹರಿಸದ ಬಿಬಿಎಂಪಿ ಸರ್ಕಾರಿ ವೈದ್ಯರಿಂದ ದೈಹಿಕ ಧೃಡತೆಯ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರಬೇಕು ಮತ್ತು ESI ಮತ್ತು EPF ಸೌಲಭ್ಯ ಹೊಂದಿರಲೇಬೇಕು ಹಾಗೂ ಸೌಲಭ್ಯ ಹೊಂದಿರುವವರಿಗೆ ಮೊದಲ ಆದ್ಯತೆ ಎಂದು ಪರಿಗಣಿಸಿರುವುದು ದೊಡ್ಡ ದುರಂತ.
ಆಯ್ಕೆಯ ವಿಧಾನದಲ್ಲಿ ತಾರತಮ್ಯ
ಹೆಚ್ಚು ವರ್ಷ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಿಂತ ಕಡಿಮೆ ಸಂಖ್ಯೆಯ ವರ್ಷಗಳು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಆದ್ಯತೆ ನೀಡುವುದು ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಕಡಿಮೆ ವಯಸ್ಸಾದ ವ್ಯಕ್ತಿಗಿಂತ ಹಿರಿಯನೆಂದು ಪರಿಗಣಿಸಿ, ಅದರಂತೆ ವಯಸ್ಸಿನ ಆಧಾರದ ಮೇರೆಗೆ ಆಯ್ಕೆ ಮಾಡಿಕೊಂಡರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಬಿಬಿಎಂಪಿಯೇ ತಾರತಮ್ಯ ಸೃಷ್ಟಿಸಿದಂತಾಗುತ್ತದೆ.
“ರಾಜ್ಯದಲ್ಲಿ ಸುಮಾರು 45000ಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಎಲ್ಲರನ್ನೂ ಖಾಯಂ ಮಾಡಬೇಕು. ಈ ಹೊಸ ನಿಯಮ ರೂಪಿಸಿರುವುದು ನಿಜಕ್ಕೂ ಅನ್ಯಾಯ. 20 ವರ್ಷಗಳಿಂದ ಗುತ್ತಿಗೆದಾರರ ಬಳಿ ಕೆಲಸ ಮಾಡಿದ ಪೌರಕಾರ್ಮಿಕರು ಹೊರಗೆ ಉಳಿಯುತ್ತಾರೆ. ವಯಸ್ಸನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ಮಾಡಿಕೊಳ್ಳುವುದು ಒಪ್ಪುವ ಮಾತಲ್ಲ. ಬಿಬಿಎಂಪಿ ಪೌರಕಾರ್ಮಿಕರ ನಡುವೆ ತಾರತಮ್ಯ ಸೃಷ್ಟಿಸುತ್ತಿದೆ. ಎಲ್ಲಾ ಪೌರ ಕಾರ್ಮಿಕರನ್ನು ಸಮಾನತೆಯಿಂದ ಕಾಣಬೇಕು. ಸುಮಾರು ವರ್ಷಗಳಿಂದ ಬಹುತೇಕ ದಲಿತರು ಹಾಗೂ ಮಾದಿಗರು ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮೀಸಲಾತಿ ಪ್ರಕ್ರಿಯೆಯಿಂದ ಎಲ್ಲಾ ವರ್ಗದ ಜನರಿಗೂ ಅವಕಾಶ ಕೊಟ್ಟಿದೆ. ಆದರೆ ಎಲ್ಲಾ ವರ್ಗದವರೂ ಈ ಕೆಲಸವನ್ನು ಮಾಡಲು ಸಾಧ್ಯವೇ? ಕಸದ ಕೆಲಸ ಮಾಡುವವರು ಎಂಬ ತಾರತಮ್ಯ ನೇಮಕಾತಿಯಲ್ಲಿಯೂ ಬಳಸಿರುವುದು ದುರಂತ” -ಸಯ್ಯದ್ ಮುಜೀಬ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘ
“ನಗರದ ಎಲ್ಲಾ ಪೌರಕಾರ್ಮಿಕರನ್ನು ಒಟ್ಟಿಗೆ ಖಾಯಂ ಕಾರ್ಮಿಕರನ್ನಾಗಿ ಮಾಡಬೇಕೆಂದು ನಾವು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಬಿಬಿಎಂಪಿ ಹೊರಡಿಸಿರುವ ಈ ಅಧಿಸೂಚನೆ ಯಾರು ಒಪ್ಪುವಂತದಲ್ಲ. 20 ವರ್ಷಗಳಿಂದ ಸಾಕಷ್ಟು ಕಾರ್ಮಿಕರು ಬರೀ ಕೈಯಿಂದ ಕಸವನ್ನೆಲ್ಲಾ ಎತ್ತುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು, ಯಾರಿಗೂ ಅನ್ಯಾಯವಾಗಬಾರದು. ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು. ಇಲ್ಲದಿದ್ದರೆ ಯಾರನ್ನು ಖಾಯಂ ಮಾಡಬಾರದು. ಗುತ್ತಿಗೆದಾರರು ಕೊಡುವ ವೇತನದಲ್ಲೇ ಪೌರಕಾರ್ಮಿಕರು ಕೆಲಸ ಮಾಡುತ್ತಾರೆ. ಬಹುತೇಕ ಪೌರಕಾರ್ಮಿಕರಿಗೆ ಶಿಕ್ಷಣವಿಲ್ಲ, ಹಾಗೂ ಸಾಕಷ್ಟು ಕಾರ್ಮಿಕರಿಗೆ ತಮ್ಮ ಹೆಸರನ್ನು ಸಹ ಬರೆಯುವುದಕ್ಕೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಆನ್ ಲೈನ್ ಮುಖಾಂತರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಖಂಡಿಸುತ್ತೇನೆ” -ನಿರ್ಮಲ, ಅಧ್ಯಕ್ಷರು, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ

ಆನ್ ಲೈನ್ ನೇಮಕಾತಿಯಲ್ಲಿ ಅರ್ಹತೆ ವಿಧಾನ
ಪಾಲಿಕೆಯ ಘನತಾಜ್ಯ ನಿರ್ವಹಣೆ ವಿಭಾಗದಲ್ಲಿ ಪೌರಕಾರ್ಮಿಕ ಯಾವ ರೀತಿ ಸೇವೆ ಸಲ್ಲಿಸುತ್ತಾನೆ ಎಂಬುದು ಬಹಳ ಮುಖ್ಯ. ಆದರೆ ಅಧಿಸೂಚನೆಯಲ್ಲಿ, “ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ನೇಮಕಾತಿಗೆ ಅರ್ಹರಾಗುವುದಿಲ್ಲ’’ ಎಂಬ ವೈಯಕ್ತಿಕ ವಿಷಯವನ್ನು ಪರಿಗಣಿಸಿರುವುದು ಮತ್ತೊಂದು ದುರಂತ.
ಬಿಬಿಎಂಪಿಯ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಇಕ್ಕಟ್ಟಿನ ಅಧಿಸೂಚನೆಯನ್ನು ಹೊರಡಿಸುವುದು ದುರದೃಷ್ಟಕರ. ಆನ್ ಲೈನ್ ನೇಮಕಾತಿಯಂತಹ ಅಸಡ್ಡೆ ಅಧಿಸೂಚನೆ ಸಾಕಷ್ಟು ಪೌರಕಾರ್ಮಿಕರ ದುಃಖಕ್ಕೆ ಕಾರಣವಾಗುವುದಂತು ಸತ್ಯ.