‘ಆಂಧ್ರ ಪ್ರದೇಶದ (ವಿಜಯ) ಮಲ್ಯ’ರೆಂದೇ ಭಾರತೀಯ ಜನತಾ ಪಕ್ಷದಿಂದ ಲೇವಡಿಗೆ ಒಳಗಾಗಿದ್ದ ಇಬ್ಬರ ಸಹಿತ ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಮಹಾ ಭ್ರಷ್ಟ ರಾಜಕಾರಣಿಗಳು ಮತ್ತು ಕೈಗಾರಿಕೋದ್ಯಮಿಗಳು ಬಿಜೆಪಿ ಸೇರಿ ಪರಿಶುದ್ಧರಾಗುತ್ತಿರುವುದು ಇದೇ ಮೊದಲಲ್ಲ. ಆದರೆ, ಆರು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಹಗರಣದ ಇಬ್ಬರನ್ನು ಒಳಗೆ ಸೇರಿಸಿಕೊಂಡಿರುವ ಬಿಜೆಪಿ, ಅವರನ್ನು ಹೇಗೆ ಪರಿಶುದ್ಧರನ್ನಾಗಿ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಭ್ರಷ್ಟಾಚಾರ ವಿಚಾರವನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರವು ಅನಂತರ ಸಾಲು-ಸಾಲು ಕಾಂಗ್ರೆಸ್ ಮತ್ತಿತರ ಪಕ್ಷಗಳ ಭ್ರಷ್ಟ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ, ಆಂಧ್ರ ಪ್ರದೇಶದ ತೆಲುಗು ದೇಶಂನ ನಾಲ್ವರು ರಾಜ್ಯಸಭಾ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಬಿಜೆಪಿಯ ಅಸಲಿ ಮುಖವನ್ನು ಬಹಿರಂಗಪಡಿಸಿದಂತಿದೆ.
ಈಗ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಮಾಜಿ ಕೇಂದ್ರ ಸಚಿವ, ಕೈಗಾರಿಕೋದ್ಯಮಿ ವೈ.ಎಸ್.ಚೌಧುರಿ ಮತ್ತು ಸಿ.ಎಂ.ರಮೇಶ್ ಅವರ ವ್ಯವಹಾರಗಳ ಬಗ್ಗೆ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ ನಿಗಾ ಇರಿಸಿದ್ದಲ್ಲದೆ, ಹಲವು ಪ್ರಕರಣಗಳು ಕೂಡ ದಾಖಲಾಗಿವೆ.
ಮಾಜಿ ಸಚಿವ ಚೌಧುರಿ ಅವರ ಮನೆ ಮೇಲೆ ಕಳೆದ ನವೆಂಬರ್ ತಿಂಗಳಲ್ಲಿ ಆದಾಯ ತೆರಿಗೆ ದಾಳಿ ನಡೆದಿತ್ತು. ಕಳೆದ ಏಪ್ರಿಲ್ ತಿಂಗಳಲ್ಲಿ ಅಂದರೆ, ಕೇವಲ ಎರಡು ತಿಂಗಳ ಹಿಂದೆ ಚೌಧುರಿ ಅವರಿಗೆ ಸೇರಿದ 315 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ (ED) ಜಪ್ತಿ ಮಾಡಿತ್ತು. ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಮೂರು ವಾರಗಳ ಹಿಂದೆ ಸಿಬಿಐ ದಾಳಿ ನಡೆಸಿತ್ತು. ಆಂಧ್ರ ಬ್ಯಾಂಕಿನ 71 ಕೋಟಿ ರೂಪಾಯಿ ವಂಚನೆ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.
ಕಳೆದ ವರ್ಷ ರಮೇಶ್ ಅವರ 100 ಕೋಟಿ ರೂಪಾಯಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆ ನಡೆಸಿತ್ತು. ರಮೇಶ್ ಅವರಿಗೆ ಸೇರಿದ ರಿತ್ವಿಕ್ ಎಂಬ ಕಂಪನಿಯ ಮೂಲಕ 74 ಕೋಟಿ ರೂಪಾಯಿಯನ್ನು ಪತ್ತೆಯಾಗದ ವ್ಯವಹಾರಗಳ ಮೂಲಕ ಗುಳುಂ ಮಾಡಲಾಗಿದ್ದರೆ, ಇನ್ನುಳಿದ 25 ಕೋಟಿ ರೂಪಾಯಿ ವ್ಯವಹಾರಗಳು ಕೂಡ ಸಾಚಾ ಆಗಿರಲಿಲ್ಲ. ಇದಕ್ಕಿಂತಲೂ ಮುಖ್ಯವಾಗಿ, ಈ ರಾಜ್ಯಸಭಾ ಎಂಪಿ ರಮೇಶ್ ಸಿಬಿಐ ನಿರ್ದೇಶಕರ ಮೇಲೇ ಪ್ರಭಾವ ಬೀರುವ ವ್ಯವಹಾರಸ್ಥ. ಕಳೆದ ವರ್ಷ ಸಿಬಿಐ ನಿರ್ದೇಶಕರ ಜಗಳ ಉಂಟಾದಾಗ ಈತನ ಹೆಸರು ಹೊರಬಂದಿತ್ತು. ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿಯನ್ನು ರಕ್ಷಿಸಲು ರಮೇಶ್ ಪ್ರಯತ್ನ ನಡೆಸಿದ್ದರು ಎಂದು ಅಂದಿನ ಸಿಬಿಐನ ವಿಶೇಷ ನಿರ್ದೇಶಕರು ಸಿವಿಸಿಗೆ (ಚೀಫ್ ವಿಜಿಲೆನ್ಸ್ ಕಮೀಷನ್) ಪತ್ರ ಬರೆದಿದ್ದರು.
ಇವರಿಬ್ಬರ ಬ್ಯಾಂಕ್ ವಂಚನೆ ಪ್ರಕರಣಗಳು ತನಿಖೆ ನಡೆಯುತ್ತಿರುವಾಗಲೇ ಬಿಜೆಪಿಯ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಅವರು ಇವರನ್ನು ಕರ್ನಾಟಕದ ವಿಜಯ ಮಲ್ಯಗೆ ಹೋಲಿಸಿ ‘ಆಂಧ್ರ ಪ್ರದೇಶದ ಮಲ್ಯರು’ ಎಂದು ಹೇಳಿಕೆ ನೀಡಿದ್ದರು.

“ಇಂದಿರಾ ಗಾಂಧಿ ವಿರುದ್ಧ ತೆಲುಗು ಅಸ್ಮಿತೆಗಾಗಿ ಎನ್ ಟಿ ಆರ್ ಹೋರಾಡಿದ್ದರೆ, ಚಂದ್ರಬಾಬು ನಾಯ್ಡು ಅವರು ತಮ್ಮಿಬ್ಬರು ಭ್ರಷ್ಟ ಸಂಸದರನ್ನು ರಕ್ಷಿಸಲು ರಾಹುಲ್ ಗಾಂಧಿಗೆ ಶರಣಾಗಿದ್ದಾರೆ. ರಮೇಶ್ ಮತ್ತು ಚೌಧುರಿ ಐಟಿ ಮತ್ತು ಇಡಿ ಎದುರು ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ,” ಎಂದು ಟ್ವೀಟ್ ಮಾಡಿದ್ದ ಬಿಜೆಪಿ ವಕ್ತಾರ ರಾವ್, ‘ಯುನೈಟೆಡ್ ಲೂಟರ್ಸ್ ಅಲಯನ್ಸ್ (ಯುಎಲ್‌ಎ)’ ಎಂದು ಒಕ್ಕಣೆ ಮಾಡಿದ್ದರು.
ಈಗ ಬಿಜೆಪಿ ವಕ್ತಾರ @GVLNRAO ಟ್ವೀಟ್ ಮತ್ತೆ ಸುದ್ದಿಯಾಗುತ್ತಿದೆ. ಟಿಡಿಪಿಯ ರಾಜ್ಯಸಭಾ ಸದಸ್ಯರ ಬಿಜೆಪಿ ಸೇರ್ಪಡೆ ಬಗ್ಗೆ ಟ್ವಿಟರಿನಲ್ಲಿ ಟಿಪ್ಪಣಿ ಮಾಡಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಈಗ ಬಿಜೆಪಿಯ ವೈಟ್ ವಾಷಿಂಗ್ ಮೇಷಿನ್ ಮೂಲಕ ಇವರೆಲ್ಲರೂ ಪರಿಶುದ್ಧರಾಗಲಿದ್ದು, ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು,” ಎಂದಿದ್ದಾರೆ. “ನಾ ಖಾನೆ ದೂಂಗ’ದಿಂದ ದೂರ ಹೋಗಿರುವ ಸರಕಾರ ಇದೀಗ ‘ಖಾನೆ ವಾಲೋಂಕೊ ಸಾಥ್ ಲೇ ಲೂಂಗ ಸರಕಾರ’ವಾಗಿದೆ,” ಎಂದೂ ಟೀಕಿಸಿದ್ದಾರೆ.
ಇವರಿಬ್ಬರ ಮೇಲೆ ತನಿಖಾ ಸಂಸ್ಥೆಗಳಿಂದ ಗಂಭೀರ ಆರ್ಥಿಕ ಅಪರಾಧ ಪ್ರಕರಣಗಳ ತನಿಖೆ ನಡೆಯುತ್ತಿರುವಾಗಲೇ ಆಡಳಿತ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಭ್ರಷ್ಟಾಚಾರದ ಕುರಿತಾದ ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸುತ್ತಿದೆ. ಇದು ಮುಂಬರುವ ದಿನಗಳ ಭ್ರಷ್ಟಾಚಾರದ ಟ್ರೈಲರ್ ಕೂಡ ಆಗಿರುವ ಸಾಧ್ಯತೆ ಇದೆ.
ಭ್ರಷ್ಟಾಚಾರದಿಂದ ತುಂಬಾ ದೂರ ಎಂದು ಹೇಳಲಾಗುತ್ತಿದೆಯಾದರೂ, ದೇಶದ ಯಾವುದೇ ಪಕ್ಷ ಕೂಡ ಭ್ರಷ್ಟರಿಂದ ಮತ್ತು ಭ್ರಷ್ಟಾಚಾರದಿಂದ ದೂರ ಉಳಿದಿಲ್ಲ. ಇದಕ್ಕೆ ಆಡಳಿತರೂಢ ಪಕ್ಷ ಕೂಡ ಹೊರತಲ್ಲ. ಇದಕ್ಕೆ ಸಾಕಷ್ಟು ದೃಷ್ಟಾಂತಗಳು ಇವೆ.
ಹಾಗಿದ್ದರೂ, ರಾಜ್ಯಸಭೆಯಲ್ಲಿ ಬಹುಮತವನ್ನು ಹೊಂದುವ ಏಕೈಕ ಉದ್ದೇಶದಿಂದ ಬಿಜೆಪಿ ಈ ಮಟ್ಟಕ್ಕೆ ಇಳಿಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರಬಲ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾ ಪಡೆ ಕಟ್ಟಿಕೊಂಡಿರುವ ಬಿಜೆಪಿಗೆ ಇಂತಹ ಪ್ರಕರಣವೊಂದನ್ನು ತಿಪ್ಪೆಸಾರಿಸುವುದು ದೊಡ್ಡ ಕೆಲಸವೇನೂ ಅಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು