ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವರ್ಗಾವಣೆ ದಂಧೆ ಸೇರಿದಂತೆ ಅಭಿವೃದ್ಧಿ ಕೆಲಸಗಳಲ್ಲೂ ಸಾಕಷ್ಟು ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ಆರೋಪಗಳು ಮೊದಲಿನಿಂದಲೂ ಬರುತ್ತಿದ್ದವು. ಅದಾದ ಬಳಿಕ ಸ್ವತಃ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲೂ 5 ಪರ್ಸೆಂಟ್ ಕಮಿಷನ್ಕೊಡಬೇಕು ಎನ್ನುವ ಆರೋಪ ಮಾಡಿದ್ದರು. ಆದರೆ, ಯಾವುದಕ್ಕೂ ಸೂಕ್ತ ದಾಖಲೆಗಳು ಸಿಗದ ಕಾರಣ ಬಿಜೆಪಿ ನಾಯಕರು ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಇದೀಗ ರಾಜ್ಯ ಸರ್ಕಾರದ ಅಧೀನದಲ್ಲೇ ಬರುವ ಎಸಿಬಿ (Anti Corruption Bureau) ದಾಳಿ ನಡೆಸಿದ್ದು ಲಕ್ಷಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದಿದೆ.
ಗುರುವಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮ ಮೇಲೆ ದಾಳಿ ನಡೆಸಿರುವ ಎಸಿಬಿ ಕಂತೆ ಕಂತೆ ಹಣವನ್ನು ಜಪ್ತಿ ಮಾಡಿದೆ. ಬೆಂಗಳೂರಿನ ವಸಂತನಗರದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಮೇಲೆ ದಾಳಿ ವೇಳೆ ನಾಲ್ವರ ಬಂಧನ ಕೂಡ ಮಾಡಲಾಗಿದೆ. ಜನರಲ್ ಮ್ಯಾನೇಜರ್ ನಾಗೇಶ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮಂಜುಳಾ, ಮ್ಯಾನೇಜರ್ ಸುಬ್ಬಯ್ಯನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 82 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ನಾಗೇಶ್ ನಿವಾಸದಲ್ಲಿ 32.5 ಲಕ್ಷ ರೂಪಾಯಿ ಹಣ, ಸುಬ್ಬಯ್ಯ ನಿವಾಸದಲ್ಲಿ 27.5 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದಿದ್ದು, ಕಚೇರಿಯಲ್ಲಿಯೇ 22 ಲಕ್ಷ ರೂಪಾಯಿ ಹಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಭೂ ಒಡೆತನ ಯೋಜನೆ ಅಡಿ, ಭೂಮಿ ಖರೀದಿಸಿ, ಭೂ ರಹಿತ ಪರಿಶಿಷ್ಟ ಪಂಗಡದ ಬಡವರಿಗೆ ಹಂಚಿಕೆ ಮಾಡುವ ಯೋಜನೆಯಲ್ಲಿ ಗೋಲ್ಮಾಲ್ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿದ್ದು, ಮೇಲ್ನೋಟಕ್ಕೆ ಸಾಬೀತಾಗಿದೆ. ಕಡಿಮೆ ಬೆಲೆ ಬಾಳುವ ಭೂಮಿಯನ್ನು ಭೂ ಮಾಲಿಕರಿಂದ ಹೆಚ್ಚಿನ ಬೆಲೆಗೆ ಖರೀದಿ ಮಾಡುವುದು. ಮಧ್ಯವರ್ತಿಗಳ ಮೂಲಕ ಖರೀದಿಸಿ ಬಡ ಜನರಿಗೆ ನೀಡುವ ಮೂಲಕ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು. ಸಾರ್ವಜನಿಕರು ನೀಡಿದ್ದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಕೋವಿಡ್19 ವಸ್ತುಗಳ ಖರೀದಿಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಗರಣ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಅದಕ್ಕೆ ಬೇಕಿರುವ ಸೂಕ್ತ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದರು. ಆದರೆ, ಸರ್ಕಾರ ಮಾತ್ರ ಎಲ್ಲವನ್ನೂ ಕೇಳಿಕೊಂಡು ಮೌನಕ್ಕೆ ಶರಣಾಗುವ ಮೂಲಕ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿತ್ತು.
ತಪ್ಪನ್ನೇ ಮಾಡಿಲ್ಲ ಎಂದ ಬಳಿಕ ಯಾವುದೇ ತನಿಖೆಯ ಅವಶ್ಯಕತೆ ಇಲ್ಲ, ಸೆಪ್ಟೆಂಬರ್21 ರಿಂದ ರಾಜ್ಯದಲ್ಲಿ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ನಾವು ಸದನದಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರ ಕೊಡುತ್ತೇವೆ ಎಂದಿದ್ದಾರೆ. ಇನ್ನೂ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ, ಎಂ ಲಕ್ಷ್ಮಣ್, ಒಂದು ವರ್ಷ ಅವಧಿಯಲ್ಲಿ ಸರಿಸುಮಾರು 5 ಸಾವಿರ ಕೋಟಿ ಹಣ ಸಂಪಾದಿಸಿದ್ದಾರೆ. ಈ ಬಗ್ಗೆ ಆಡಿಯೋ, ವಿಡಿಯೋ ತುಣುಕಿನ ಸಾಕ್ಷಿಗಳಿದ್ದು, ಸೆಪ್ಟೆಂಬರ್ 2ನೇ ವಾರದಲ್ಲಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಇದೀಗ ಎಸಿಬಿ ದಾಳಿ ಮಾಡಿ ಸಣ್ಣ ಸಣ್ಣ ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ.
ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಒಂದಿಷ್ಟು ಹಣವನ್ನು ವಶಪಡಿಸಿಕೊಂಡು ಕೆಲವು ಜನರನ್ನು ಬಂಧನ ಮಾಡುತ್ತಾರೆ. ಆದರೆ ಮುಂದಿನ ವಿಚಾರಣೆ ಯಾವ ಹಂತಕ್ಕೆ ಹೋಯಿತು. ಯಾವ ಭ್ರಷ್ಟರಿಗೆ ಶಿಕ್ಷೆಯಾಗುವಂತೆ ಎಸಿಬಿ ಅಧಿಕಾರಿಗಳು ಮಾಡಿದರು ಎನ್ನುವ ಅಂಕಿಅಂಶಗಳು ಇಲ್ಲೀವರೆಗೂ ಸಿಕ್ಕಿಲ್ಲ. ಹಾಗಾಗಿ ಲೋಕಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಹುಟ್ಟುಹಾಕಿದ ಸಂಸ್ಥೆ ಎಸಿಬಿ ಮೇಲೆ ಜನರಿಗೆ ನಂಬಿಕೆ ಬಂದಿಲ್ಲ. ಲೋಕಾಯುಕ್ತ ಸಂಸ್ಥೆಗೆ ಬಂಧನ ಮಾಡುವ ಅಧಿಕಾರ ಇಲ್ಲದಿದ್ದರೂ ತನಿಖೆ ಮಾಡಿ ಸಾಕ್ಷ್ಯಗಳನ್ನು ಸಂಗ್ರಹ ಮಾಡುವ ಮೂಲಕ ಕೋರ್ಟ್ಗೆ ಆರೋಪಿಗಳನ್ನು ಎಳೆದು ತರುತ್ತಿತ್ತು.
ಆರೋಪಿಗಳು ತಪ್ಪು ಮಾಡಿದ್ದಾರೆ ಎನ್ನುವುದು ಸಾಬೀತಾಗುತ್ತಿದ್ದ ಹಾಗೆ ಜೈಲು ವಾಸಕ್ಕೆ ಹೋಗುತ್ತಿದ್ದರು. ಆದರೆ ಪೊಲೀಸ್ ಇಲಾಖೆ ಒಳಗೇ ಎಸಿಬಿ ರಚನೆಯಾದರೆ, ಬಂಧಿಸುವ ಅಧಿಕಾರವೂ ಇರುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವಧಿಯಲ್ಲಿ ರಚನೆಯಾದ ಸಂಸ್ಥೆ ಇಲ್ಲೀವರೆಗೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ. ಇದಕ್ಕೆ ಕೂಡಲೇ ಎಸಿಬಿ ಸಂಸ್ಥೆಯೇ ತನ್ನತನವನ್ನು ಸಾಬೀತು ಮಾಡಬೇಕಿದೆ. ಈ ಪ್ರಕರಣದಲ್ಲಾದರೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕಿದೆ.