ಫೇಸ್ ಬುಕ್ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಆಪ್ತ ಸಂಬಂಧದ ಕುರಿತ ವರದಿಗಳನ್ನು ಜಾಗತಿಕ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ನಿರಾಕರಿಸುತ್ತಿದ್ದರೂ, ಆ ನಂಟಿನ ಹೊಸಹೊಸ ವಿವರಗಳು ಬಹಿರಂಗವಾಗುತ್ತಲೇ ಇವೆ.
ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸೇರಿದಂತೆ ದೇಶದ ಪ್ರಜಾಪ್ರಭುತ್ವದ ಬುನಾದಿಗಳನ್ನೇ ಅಲುಗಾಡಿಸುವಂತಹ ಪ್ರಯತ್ನಗಳಲ್ಲಿ ಫೇಸ್ ಬುಕ್ ಭಾಗಿಯಾಗಿದ್ದು, ಆಡಳಿತ ಪಕ್ಷ ಮತ್ತು ಪ್ರಧಾನಿ ಮೋದಿಯವರ ಪರ ಆ ಸಂಸ್ಥೆ ಕೆಲಸ ಮಾಡಿದೆ ಎಂಬ ಗಂಭೀರ ಸಂಗತಿಯನ್ನು ಮೊದಲು ಬಹಿರಂಗಗೊಳಿಸಿದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್, ಇದೀಗ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಧಾನಿ ಮೋದಿಯವರು ಭಾರೀ ಜಯಭೇರಿ ಭಾರಿಸಿದ 2014ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನಾ ದಿನ ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖೀ ದಾಸ್, “ಅವರ ಸಾಮಾಜಿಕ ಜಾಲತಾಣ ಪ್ರಚಾರಕ್ಕೆ ನಾವೊಂದು ಕಿಡಿ ಹೊತ್ತಿಸಿದೆವು. ಅದರ ಪ್ರತಿಫಲವೇನು ಎಂಬುದು ಈಗ ಇತಿಹಾಸ ನಿರ್ಮಿಸುತ್ತಿದೆ” ಎಂದು ತಮ್ಮ ಸಂಸ್ಥೆಯ ಆಂತರಿಕ ಜಾಲತಾಣ ಗುಂಪಿನಲ್ಲಿ ಬೆನ್ನುತಟ್ಟಿಕೊಂಡಿದ್ದರು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್ ಆಧಾರಸಹಿತವಾಗಿ ಬಹಿರಂಗಪಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2011ರಿಂದ ಫೇಸ್ ಬುಕ್ ಕಂಪನಿಯ ಭಾರತದ ವ್ಯವಹಾರಗಳ ಹೊಣೆ ಹೊತ್ತಿರುವ ಅಂಖೀ ದಾಸ್, ಆರಂಭದಿಂದಲೂ ಬಿಜೆಪಿ ಮತ್ತು ಮೋದಿ ಪರವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ನಿರಂತರವಾಗಿ ಸಂದೇಶಗಳನ್ನು ಕಂಪನಿಯ ಸಿಬ್ಬಂದಿಯ ಆಂತರಿಕ ಬಳಕೆಯ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಆ ಮೂಲಕ ತಾನು ಯಾವುದೇ ಪಕ್ಷ- ಸಿದ್ಧಾಂತದ ಪರವಾಗಿ ಇಲ್ಲ, ರಾಜಕೀಯವಾಗಿ ನಿರ್ಲಿಪ್ತ ನಿಲುವು ತನ್ನದು. ಚುನಾವಣೆಗಳ ವಿಷಯದಲ್ಲಿ ಕೂಡ ಅದೇ ನಿರ್ಲಿಪ್ತ ನಿಲುವಿಗೆ ಬದ್ಧವಾಗಿರುವುದಾಗಿ ಹೇಳಿಕೊಳ್ಳುವ ಫೇಸ್ ಬುಕ್ ಕಂಪನಿಯ ಸಾಂಸ್ಥಿಕ ನೈತಿಕತೆಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಆಕೆಯ ಸಹೋದ್ಯೋಗಿಗಳೇ ಹೇಳಿರುವುದಾಗಿ ವರದಿ ಹೇಳಿದೆ.
Also Read: ಹಿಂದುತ್ವದ ಧ್ವೇಷವನ್ನು ಫೇಸ್ಬುಕ್ ಬೆಂಬಲಿಸುತ್ತಿದೆ- ವಾಲ್ ಸ್ಟ್ರೀಟ್ ಜರ್ನಲ್ ವರದಿ
ಚುನಾವಣೆಯಲ್ಲಿ ಭಾರೀ ಜನಾದೇಶದೊಂದಿಗೆ ಮೋದಿ ಪ್ರಧಾನಿಯಾಗಿ ಹೊರಹೊಮ್ಮಿದ ಬೆನ್ನಲ್ಲೇ ಅಂಖೀ ದಾಸ್, “ಭಾರತವನ್ನು ಸಮಾಜವಾದಿ ರಾಷ್ಟ್ರ ಎಂಬ ಕಳಂಕದಿಂದ ಮುಕ್ತಗೊಳಿಸಲು ಬರೋಬ್ಬರಿ 30 ವರ್ಷಗಳ ಕಠಿಣ ಪರಿಶ್ರಮದ ಬೆಲೆ ತೆರಬೇಕಾಯಿತು” ಎಂದು ಪೋಸ್ಟ್ ಹಾಕುವ ಮೂಲಕ ಕಾಂಗ್ರೆಸ್ ಸೋಲನ್ನು ಸಂಭ್ರಮಿಸಿದ್ಧಾರೆ. ಜೊತೆಗೆ, ಹಿಂದಿನ ಆಡಳಿತ ಪಕ್ಷದ ಆಡಳಿತವನ್ನು ಮುರಿದ ಹೆಗ್ಗಳಿಕೆಯ ಮೋದಿಯವರನ್ನು, “ಉಕ್ಕಿನ ಮನುಷ್ಯ” ಎಂದೂ ಬಣ್ಣಿಸಿದ್ದಾರೆ. ಅದೇ ಹೊತ್ತಿಗೆ, ಆ ಚುನಾವಣಾ ಪ್ರಚಾರಾಂದೋಲನದಲ್ಲಿ ಮೋದಿ ಪರವಾದ ಪ್ರಚಾರಕ್ಕೆ ತಮ್ಮೊಂದಿಗೆ ‘ಬಹುದಿನಗಳ ಕಾಲ ತಮ್ಮ ಸಹಚಾರಿ’ಯಾಗಿದ್ದರು ಎಂದು ಫೇಸ್ ಬುಕ್ನ ಜಾಗತಿಕ ಚುನಾವಣಾ ಉಸ್ತುವಾರಿ ಕ್ಯಾಟಿ ಹರ್ಬತ್ ಅವರನ್ನೂ ಬಣ್ಣಿಸಿದ್ದಾರೆ. ಈ ಸಂದೇಶದೊಂದಿಗೆ ಮೋದಿ ಮತ್ತು ಹರ್ಬತ್ ನಡುವೆ ನಗುತ್ತಾ ನಿಂತಿರುವ ತನ್ನ ಫೋಟೋವೊಂದನ್ನೂ ಗುಂಪಿನಲ್ಲಿ ಹಂಚಿಕೊಂಡಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ಯಾವ ವಿವರಗಳೂ ಈ ಮೊದಲು ಸಾರ್ವಜನಿಕಗೊಂಡಿರಲಿಲ್ಲ ಎಂದಿರುವ ವಾಲ್ ಸ್ಟ್ರೀಟ್ ಜರ್ನಲ್, 2012ರಿಂದ 2014ರ ನಡುವೆ ಮೋದಿ ಮತ್ತು ಬಿಜೆಪಿಗೆ ಬೆಂಬಲವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಇಂತಹ ಹಲವು ಪೋಸ್ಟ್ ಗಳನ್ನು ತಮ್ಮ ಆಂತರಿಕ ಗುಂಪಿನಲ್ಲಿ ಹಂಚಿಕೊಂಡಿದ್ದಾಗಿ ಹೇಳಿದೆ. ಜಾಗತಿಕವಾಗಿ ಫೇಸ್ ಬುಕ್ ನ ಯಾವುದೇ ಉದ್ಯೋಗಿಯೂ ಆ ಗುಂಪಿನಲ್ಲಿ ಪಾಲ್ಗೊಳ್ಳಬಹುದಾಗಿತ್ತು ಮತ್ತು ಸಾವಿರಾರು ಉದ್ಯೋಗಿಗಳ ಅದರ ಸದಸ್ಯರಾಗಿದ್ದರು ಎಂಬ ವಿವರವನ್ನೂ ಉಲ್ಲೇಖಿಸಲಾಗಿದೆ.

2011ರಿಂದಲೇ ಮೋದಿಯವರ ಗುಜರಾತ್ ಉಪ ಚುನಾವಣಾ ಪ್ರಚಾರದ ವಿಷಯದಲ್ಲಿಯೂ ಅವರ ತಂಡಕ್ಕೆ ತರಬೇತಿ ನೀಡಿದ್ದ ಅಂಖೀ ದಾಸ್, 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರು ಉಪಚುನಾವಣೆಯಲ್ಲಿ ಗೆಲವು ದಾಖಲಿಸುತ್ತಿದ್ದಂತೆ, ”ನಮ್ಮ ಗುಜರಾತ್ ಕ್ಯಾಂಪೇನ್ ಭರ್ಜರಿ ಯಶಸ್ಸು ಕಂಡಿದೆ” ಎಂದು ಪೋಸ್ಟ್ ಹಾಕಿದ್ದರು. ಅಲ್ಲದೆ, 2013ರಲ್ಲಿ ತಮ್ಮ ಸಹೋದ್ಯೊಗಿ ಕ್ಯಾಟಿ ಹರ್ಬತ್ ಅವರಿಗೆ, ‘ಮೋದಿ, ಭಾರತದ ಜಾರ್ಜ್ ಡಬ್ಲ್ಯೂ. ಬುಷ್’ ಎಂದು ಬಣ್ಣಿಸಿದ್ದರು. ಜೊತೆಗೆ 2014ರ ಲೋಕಸಭಾ ಚುನಾವಣೆಗೆ ಮುನ್ನಾ ಪಕ್ಷದ ಪ್ರಚಾರದಲ್ಲಿ ಫೇಸ್ ಬುಕ್ ಕಂಪನಿಯ ಪ್ರಮುಖ ಆದ್ಯತೆಗಳನ್ನು ಪರಿಗಣಿಸುವಂತೆ ಬಿಜೆಪಿಯೊಂದಿಗೆ ಕಂಪನಿ ಲಾಬಿ ಬಹಳ ದೀರ್ಘಾವಧಿಯ ಪ್ರಯತ್ನ ನಡೆಸಿದೆ. ಅದರಲ್ಲೂ ಪ್ರಮುಖವಾಗಿ ಹೆಚ್ಚು ನಿರ್ಬಂಧವಿರದ, ಆದರೆ ವ್ಯಾಪಕ ಜಾಲ ಹೊಂದಿರುವ ಇಂಟರ್ ನೆಟ್ ಸೇವೆಯ ಬಗ್ಗೆ ಕಂಪನಿ ಬಿಜೆಪಿಯೊಂದಿಗೆ ಲಾಬಿ ನಡೆಸಿತ್ತು ಎಂದೂ ಬರೆದುಕೊಂಡಿದ್ದರು ಎನ್ನಲಾಗಿದೆ.
Also Read: ರಾಹುಲ್ ಗಾಂಧಿ vs ರವಿಶಂಕರ್ ಪ್ರಸಾದ್ ವಾಕ್ಸಮರಕ್ಕೆ ಕಾರಣವಾದ ಫೇಸ್ಬುಕ್
ಆ ಹಿನ್ನೆಲೆಯಲ್ಲಿಯೇ, ತಮ್ಮ ಕಡೆಯಿಂದ ಏನೆಲ್ಲಾ ಬೇಕೋ ಅದೆಲ್ಲವೂ ಮಾಡಲಾಗಿದೆ ಎಂಬ ಅರ್ಥದಲ್ಲಿ, “ಈಗ ಅವರು ಚುನಾವಣೆಗೆ ಹೋಗಿ ಜಯಭೇರಿ ಭಾರಿಸುವುದಷ್ಟೇ ಬಾಕಿ” ಎಂದು ಅಂಖೀ ದಾಸ್ ಬಿಜೆಪಿಯ ಜಯಭೇರಿಯನ್ನು ಊಹಿಸಿದ್ದರು. ಜೊತೆಗೆ, ಅಂದಿನ ಪ್ರಧಾನಿ ಅಭ್ಯರ್ಥಿ ಮೋದಿಯವರ ವೈಯಕ್ತಿಕ ಫೇಸ್ ಬುಕ್ ಪುಟಕ್ಕಿಂತ, ಕಾಂಗ್ರೆಸ್ ಪಕ್ಷದ ಪುಟಕ್ಕೆ ಹೆಚ್ಚು ಫಾಲೋಯರ್ಸ್ ಇರುವ ಬಗ್ಗೆ ಸಂಸ್ಥೆಯ ಸಹೋದ್ಯೋಗಿಯೊಬ್ಬರು ಪ್ರಸ್ತಾಪಿಸಿದಾಗ, ಅಂಖೀ ದಾಸ್, “ಕಾಂಗ್ರೆಸ್(ಐಎನ್ ಸಿ) ಪಕ್ಷದೊಂದಿಗೆ ಹೋಲಿಸಿ ಅವರ ಘನತೆಯನ್ನು ಕುಗ್ಗಿಸಬೇಡಿ” ಎಂದು ತಾಕೀತು ಮಾಡಿದ್ದರು ಎಂಬ ವಿವರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲ; ಅಂಖೀ ದಾಸ್ ಮತ್ತು ಬಿಜೆಪಿ ಉನ್ನತ ನಾಯಕರ ನಡುವಿನ ನಂಟು ಎಷ್ಟು ಆಪ್ತವಾಗಿತ್ತು ಎಂದರೆ; 2014ರ ಚುನಾವಣೆಯಲ್ಲಿ ಮೋದಿಯವರ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿದೆ. ಯಾವ ಪ್ರಮಾಣದ ಜಯಭೇರಿ ಭಾರಿಸಲಿದೆ ಎಂಬ ಕುರಿತ ಆ ಪಕ್ಷದ ಉನ್ನತ ನಾಯಕರ ನಡುವಿನ ರಹಸ್ಯ ಮಾಹಿತಿಯನ್ನು ಕೂಡ ತಾನು ಪಡೆದುಕೊಂಡಿರುವುದಾಗಿಯೂ, ‘ತನ್ನ ಪರಮಾಪ್ತರಾಗಿರುವ ಪಕ್ಷದ ಉನ್ನತ ನಾಯಕರೇ ತನಗೆ ಆ ಮಾಹಿತಿ ನೀಡಿರುವುದಾಗಿಯೂ’ ಹೇಳಿ, ದಾಸ್ ಆ ಮಾಹಿತಿಯನ್ನು ತಮ್ಮ ಸಂಸ್ಥೆಯ ಸಿಬ್ಬಂದಿಗಳ ಆಂತರಿಕ ಗುಂಪಿನಲ್ಲಿ ಹಂಚಿಕೊಂಡಿದ್ದರು ಎಂಬ ಸಂಗತಿಯನ್ನೂ ವಾಲ್ ಸ್ಟ್ರೀಟ್ ಜರ್ನಲ್ ಬಹಿರಂಗಪಡಿಸಿದೆ.
Also Read: ವಿಶ್ವಾಸ ಉಳಿಸಿಕೊಳ್ಳಲು ಫೇಸ್ಬುಕ್ ಚಟುವಟಿಕೆಗಳನ್ನು ತನಿಖೆ ಮಾಡಿ: ಶ್ರೀನಿವಾಸ್ ಬಿ.ವಿ.
ಎರಡು ವಾರದ ಹಿಂದೆ ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆಗಳ ವಿಷಯದಲ್ಲಿ ಅಂಖೀ ದಾಸ್, ಬಿಜೆಪಿ ನಾಯಕರು ಮತ್ತು ಪಕ್ಷದ ಪರವಾಗಿ ಕಂಪನಿಯಲ್ಲಿ ಆಂತರಿಕವಾಗಿ ಹೇಗೆ ಲಾಬಿ ಮಾಡುತ್ತಿದ್ದಾರೆ . ಬಿಜೆಪಿಯೊಂದಿಗಿನ ಕಂಪನಿಯ ಮೈತ್ರಿ ವ್ಯವಹಾರ ಕಂಪನಿಗೆ ಲಾಭ ತಂದುಕೊಟ್ಟಿದೆ. ಹಾಗಾಗಿ ಆ ಪಕ್ಷ ಮತ್ತು ಅದರ ನಾಯಕರ ವಿರುದ್ಧ ವ್ಯತಿರಿಕ್ತ ಕ್ರಮ ಬೇಡ ಎಂದು ಸಮರ್ಥಿಸಿಕೊಂಡ ಕುರಿತು ಹಲವು ಸಾಕ್ಷ್ಯಾಧಾರ ಸಹಿತ ವಾಲ್ ಸ್ಟ್ರೀಟ್ ಜರ್ನಲ್ ಎಕ್ಸ್ ಕ್ಲೂಸಿವ್ ವರದಿ ಮಾಡಿತ್ತು.
ಆ ವರದಿ ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಾಕಷ್ಟು ಕೆಸರೆರಚಾಟಕ್ಕೂ ನಾಂದಿ ಹಾಡಿತ್ತು. ಈ ನಡುವೆ ವರದಿಯ ಹಿನ್ನೆಲೆಯಲ್ಲಿ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ತನಗೆ ರಕ್ಷಣೆ ಒದಗಿಸಿ ಎಂದು ಅಂಖೀ ದಾಸ್ ಪತ್ರಕರ್ತರೊಬ್ಬರು ಸೇರಿದಂತೆ ಹಲವರ ವಿರುದ್ದ ಪೊಲೀಸ್ ದೂರು ಕೂಡ ನೀಡಿದ್ದರು. ಅದೇ ಹೊತ್ತಿಗೆ, ಫೇಸ್ ಬುಕ್ ಕಂಪನಿಯ ರಾಜಕೀಯ ಪಕ್ಷಪಾತ ಧೋರಣೆ ಮತ್ತು ಚುನಾವಣೆಗಳ ಮೇಲೆ ಪ್ರಭಾವ ಬೀರುವ ನೀತಿಯ ಕುರಿತು ವಿಚಾರಣೆ ನಡೆಸುವುದಾಗಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ಹೇಳಿತ್ತು. ದೆಹಲಿ ವಿಧಾನಸಭೆ ಕೂಡ ಫೇಸ್ ಬುಕ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಕಳೆದ ಫೆಬ್ರವರಿಯ ದೆಹಲಿ ಗಲಭೆಯಲ್ಲಿ ಫೇಸ್ ಬುಕ್ ಭಾರತೀಯ ಅಧಿಕಾರಿಗಳ ಪಾತ್ರವಿತ್ತೆ ಎಂಬ ಕುರಿತು ತನಿಖೆ ನಡೆಸಲು ನಡಾವಳಿ ಅಂಗೀಕರಿಸಿದೆ. ಈ ನಡುವೆ, ಸ್ವತಃ ಫೇಸ್ ಬುಕ್ ನ ಜಾಗತಿಕ ಮಟ್ಟದ ವಿವಿಧ ಸಿಬ್ಬಂದಿ ವರ್ಗ ಕೂಡ ಈ ಪ್ರಕರಣದ ಹಿನ್ನೆಲೆಯಲ್ಲಿ ಕಂಪನಿ ನೈತಿಕ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದರು.
Also Read: ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು
ಮತ್ತೊಂದು ಬೆಳವಣಿಗೆಯಲ್ಲಿ, ಫೇಸ್ ಬುಕ್ ಮತ್ತು ಆಡಳಿತ ಪಕ್ಷದ ನಡುವಿನ ಅಪವಿತ್ರ ಮೈತ್ರಿಯ ಕುರಿತ ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್ ಬುಕ್ ನ ದ್ವೇಷ ಭಾಷಣ ಮತ್ತು ಅಸಹಿಷ್ಣುತೆ ಕುರಿತ ನೀತಿಗಳ ಕುರಿತ ಪರಿಶೀಲನೆ ನಡೆಸುವಂತೆ 54 ಮಂದಿ ಮಾಜಿ ಐಎಎಸ್ ಅಧಿಕಾರಿಗಳ ಗುಂಪು ಫೇಸ್ ಬುಕ್ ಕಂಪನಿಯ ಸಿಇಒ ಝೂಕರ್ ಬರ್ಗ್ಗೆ ಬಹಿರಂಗ ಪತ್ರ ಬರೆದಿದೆ.
ಈ ನಡುವೆ, “ಭಾರತೀಯ ಮುಸ್ಲಿಮರು ಅಧಃಪತನ ಹೊಂದಿದ ಸಮುದಾಯ(indian muslims a degenerate community)” ಎಂಬ ಹೇಳಿಕೆಯನ್ನು ಫೇಸ್ ಬುಕ್ ನಲ್ಲಿ ಹಾಕಿದ ಅಂಖೀ ದಾಸ್, ತಮ್ಮ ಸಹೋದ್ಯೋಗಿಗಳ ತೀವ್ರ ವಿರೋಧಕ್ಕೆ ಈಡಾಗಿದ್ದರು. ಸಹೋದ್ಯೋಗಿಗಳ ವಿರೋಧದ ಹಿನ್ನೆಲೆಯಲ್ಲಿ ಬಳಿಕ ಆ ಪೋಸ್ಟನ್ನು ಅಳಿಸಿ, ಆ ಬಗ್ಗೆ ಕ್ಷಮೆಯಾಚಿಸಿದ್ದರು. ಇಷ್ಟಾಗಿಯೂ ಫೇಸ್ ಬುಕ್ ಅಂಖೀ ದಾಸ್ ಅವರನ್ನು ಸಮರ್ಥಿಸಿಕೊಂಡಿದ್ದು,” ಈ ಪೋಸ್ಟುಗಳನ್ನು ಅವುಗಳನ್ನು ಹಾಕಿದ ಸಂದರ್ಭದಿಂದ ಹೊರಗಿಟ್ಟು ನೋಡಲಾಗುತ್ತಿದೆ. ಭಾರತದ ಎಲ್ಲಾ ರಾಜಕೀಯ ಪಕ್ಷಗಳಿಗೂ ಫೇಸ್ ಬುಕ್ ತನ್ನ ವೇದಿಕೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಕ್ತ ಅವಕಾಶ ನೀಡಿದೆ. ಅಂತಹ ಪ್ರಯತ್ನದ ಹಿನ್ನೆಲೆಯಲ್ಲಿ ಈ ಪೋಸ್ಟುಗಳಿವೆ” ಎಂದು ಕಂಪನಿಯ ವಕ್ತಾರ ಆ್ಯಂಡಿ ಸ್ಟೋನ್ ಪ್ರತಿಕ್ರಿಯಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.