ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಸೇರಿದಂತೆ 32 ಮಂದಿಯನ್ನು ನಿರ್ದೋಷಿಗಳೆಂದು ಹೇಳಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದೆ.
1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತ 28 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ವರ್ಷ ಎಲ್ಲಾ 32 ಮಂದಿ ಆರೋಪಿಗಳನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಅಯೋಧ್ಯೆಯ ಇಬ್ಬರು ನಿವಾಸಿಗಳು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಖಿಲ ಭಾರತ ಮುಸ್ಲಿಂ ಖಾಸಗೀ ಕಾನೂನು ಮಂಡಳಿಯ ಪರವಾಗಿ ಅಯೋಧ್ಯೆಯ ಹಾಜಿ ಮೆಹಬೂಬ್ ಮತ್ತು ಹಾಜಿ ಸಯ್ಯದ್ ಅಖ್ಲಾಕ್ ಅಹಮದ್ ಎಂಬ ಇಬ್ಬರು ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠದ ಮುಂದೆ ಈ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
28 ವರ್ಷಗಳ ಸುದೀರ್ಘ ಅವಧಿಯ ವಿಚಾರಣೆಯ ಬಳಿಕವೂ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲಾ 32 ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿದ ಕ್ರಮವನ್ನು ಸಿಬಿಐ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಹಾಗಾಗಿ ಅಂತಿಮವಾಗಿ ಮಂಡಳಿಯ ಪರವಾಗಿ ತನ್ನ ಕಕ್ಷಿದಾರರು ಹೈಕೋರ್ಟ್ ಮೊರೆಹೋಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ 32 ಮಂದಿಯ ವಿರುದ್ಧ ಕರಸೇವಕರಿಗೆ ಪ್ರಚೋದನೆ ನೀಡುವ ಮೂಲಕ ಐತಿಹಾಸಿಕ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ಗಂಭೀರ ಆರೋಪ ಇತ್ತು. ರಾಮ ಜನ್ಮಭೂಮಿಯಲ್ಲಿ ಹಿಂದೆ ಇದ್ದ ರಾಮಮಂದಿರವನ್ನು ನೆಲಸಮ ಮಾಡಿ ಶತಮಾನಗಳ ಹಿಂದೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಕರಸೇವಕರ ವಾದವಾಗಿತ್ತು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಉದ್ರಿಕ್ತ ಕರಸೇವಕರು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ್ದರು.
ಆ ಪ್ರಕರಣದ ಕುರಿತು ಕಳೆದ ವರ್ಷ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ 2300 ಪುಟಗಳ ತನ್ನ ಆದೇಶದಲ್ಲಿ, ಮಸೀದಿ ಧ್ವಂಸದಲ್ಲಿ ಆಡ್ವಾಣಿ ಸೇರಿದಂತೆ 32 ಮಂದಿ ಆರೋಪಿಗಳು ಯಾವುದೇ ಕುಮ್ಮಕ್ಕು ಅಥವಾ ಪ್ರಚೋದನೆ ನೀಡಿದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ತನ್ನದೇ ತನಿಖೆಯ ವಿರುದ್ಧ ಬಂದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಯತ್ನವನ್ನೇ ಸಿಬಿಐ ಮಾಡಿರಲಿಲ್ಲ. ಆ ಹಿನ್ನೆಲೆಯಲ್ಲಿ ಇದೀಗ ಅಖಿಲ ಭಾರತ ಮುಸ್ಲಿಂ ಖಾಸಗೀ ಕಾನೂನು ಮಂಡಳಿಯ ಪರವಾಗಿ ಇಬ್ಬರು ಅಲಹಾಬಾದ್ ಹೈಕೋರ್ಟಿನ ಮೊರೆ ಹೋಗಿರುವುದು ಕುತೂಹಲ ಮೂಡಿಸಿದೆ.
—