ಇತ್ತೀಚೆಗೆ ಮಹಾರಾಷ್ಟ್ರದ ಬಹುತೇಕ ಎಲ್ಲ ಸುದ್ದಿವಾಹಿನಿಗಳಲ್ಲೂ ಒಂದೇ ಬಗೆಯ ವಿಡಿಯೋ ತುಣುಕುಗಳು ಪ್ರಸಾರ ಕಂಡು ಭಾರಿ ಸುದ್ದಿ ಮಾಡಿದ್ದವು. ಆ ಎಲ್ಲ ವಿಡಿಯೋಗಳಲ್ಲೂ, ಮಕ್ಕಳು, ವಯಸ್ಸಾದವರು, ಹೆಣ್ಣುಮಕ್ಕಳು ಸೇರಿದಂತೆ ಇಡೀ ಹಳ್ಳಿಗೆ ಹಳ್ಳಿಯೇ ನೀರಿನಲ್ಲಿ ಕುಣಿದು ಕುಪ್ಪಣಿಸಿ ಖುಷಿಪಡುತ್ತಿತ್ತು. ಅವರೆಲ್ಲರೂ ಅಷ್ಟು ನೀರನ್ನು ಕಂಡಿದ್ದು ಅದೇ ಮೊದಲು. ಇದೆಲ್ಲ ಸಾಧ್ಯವಾಗಿದ್ದು ಅವರ ಹಳ್ಳಿ ಸ್ಪರ್ಧೆಯೊಂದರಲ್ಲಿ ಗೆದ್ದಿದ್ದರಿಂದ. ಆ ಸ್ಪರ್ಧೆಯ ಹೆಸರು ‘ಸತ್ಯಮೇವ ಜಯತೆ ವಾಟರ್ ಕಪ್.’
ಇಂಥದ್ದೊಂದು ಮ್ಯಾಜಿಕ್ ಮಾಡಿರುವುದು ನಟ ಆಮಿರ್ ಖಾನ್ ಸ್ಥಾಪಿಸಿರುವ ‘ಪಾನಿ ಫೌಂಡೇಶನ್.’ ‘ಸ್ಟಾರ್ ಪ್ಲಸ್’ ಟಿವಿವಾಹಿನಿಯಲ್ಲಿ ‘ಸತ್ಯಮೇವ ಜಯತೆ’ ಹೆಸರಿನ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿದ್ದುದು ಬಹುತೇಕರಿಗೆ ನೆನಪಿರಬಹುದು. ಆಮಿರ್ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ಅನೇಕ ಕಾರಣಗಳಿಂದ ಹೆಸರು ಮಾಡಿತ್ತು. ಈ ಕಾರ್ಯಕ್ರಮವನ್ನು ತೀರಾ ಹಚ್ಚಿಕೊಂಡಿದ್ದ ಆಮಿರ್, ತಾವು ಆರಂಭಿಸಿದ ‘ಪಾನಿ ಫೌಂಡೇಶನ್’ನ ಅಭಿಯಾನವೊಂದಕ್ಕೆ ಆ ಕಾರ್ಯಕ್ರಮದ ಹೆಸರನ್ನೇ ಕೊಟ್ಟಿದ್ದಾರೆ. 2016ರಿಂದ ಆರಂಭವಾಗಿ ಪ್ರತಿವರ್ಷ ನಡೆಯುತ್ತಿರುವ ‘ಸತ್ಯಮೇವ ಜಯತೆ ವಾಟರ್ ಕಪ್’ ಸ್ಪರ್ಧೆ ಈಗ ಮಹಾರಾಷ್ಟ್ರದಲ್ಲಿ ಮನೆಮಾತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಾವಿರಾರು ಹಳ್ಳಿಗಳ ಬದುಕನ್ನೇ ಬದಲಿಸಿದೆ.
ಈ ವಾಟರ್ ಕಪ್ ಸ್ಪರ್ಧೆ ಆರಂಭವಾದದ್ದು 2016ರಲ್ಲಿ. ಆ ವರ್ಷ 3 ಜಿಲ್ಲೆಯ 3 ತಾಲೂಕಿನ 116 ಹಳ್ಳಿಗಳು ಭಾಗವಹಿಸಿದ್ದವು. 2017ರಲ್ಲಿ ಈ ಸಂಖ್ಯೆ ಹೆಚ್ಚಿ, 13 ಜಿಲ್ಲೆಯ 30 ತಾಲೂಕಿನ 1,321 ಗ್ರಾಮಗಳು ಪೈಪೋಟಿ ನಡೆಸಿದ್ದವು. 2018ರಲ್ಲಿ ವಾಟರ್ ಕಪ್‌ನ ಜನಪ್ರಿಯತೆ ಎತ್ತರಕ್ಕೇರಿತ್ತು; 24 ಜಿಲ್ಲೆಯ 75 ತಾಲೂಕಿನ ಬರೋಬ್ಬರಿ 4,025 ಹಳ್ಳಿಗಳ ಮಂದಿ ಈ ಸ್ಪರ್ಧೆಗೆ ಅಸ್ತು ಎಂದಿದ್ದರು. 2019, ಅಂದರೆ ಈ ವರ್ಷ ಸ್ಪರ್ಧೆಯ ಕಾವು ಇನ್ನಷ್ಟು ಹೆಚ್ಚಿ, 24 ಜಿಲ್ಲೆಯ 76 ತಾಲೂಕಿನ 4,706 ಗ್ರಾಮಗಳು ಸ್ಪರ್ಧಿಸಿದ್ದವು.
ಬರ ಅಂತ ಸಪ್ಪಗಿದ್ದವರು ನೀರಿನಲ್ಲಿ ಹುಚ್ಚೆದ್ದು ಕುಣಿದರು!
ಹಳ್ಳಿ ಜನ ಹೆಚ್ಚು ಸ್ವಾಭಿಮಾನಿಗಳು ಎಂಬುದು ಬಲ್ಲವರ ಮಾತು. ಇದನ್ನೇ ದಾಳ ಮಾಡಿಕೊಂಡ ಪಾನಿ ಫೌಂಡೇಶನ್, ಹಳ್ಳಿಗಳಿಗೆ ಜಲಮೂಲಗಳನ್ನು ಕಂಡುಕೊಳ್ಳುವ ಕೆಲಸಕ್ಕೆ ಸ್ಪರ್ಧೆಯ ರೂಪು ಕೊಟ್ಟಿತು. “ನಾವು ಹೇಳಿದಂತೆ ಮಾಡಿದರೆ ಸ್ಪರ್ಧೆಯಲ್ಲಿ ಸಲೀಸಾಗಿ ಗೆಲ್ಲಬಹುದು. ಸ್ಪರ್ಧೆಯಲ್ಲಿ ಗೆದ್ದರೆ ನಿಮ್ಮೂರಿನ ಬರ ನೀಗುತ್ತದೆ. ಗುಳೆ ತಪ್ಪುತ್ತದೆ. ಕುಡಿಯಲು ಅತ್ಯುತ್ತಮ ನೀರು ಸಿಗುತ್ತದೆ. ಊರಿನ ಸುತ್ತ ಹಸಿರು ಕಂಗೊಳಿಸುತ್ತದೆ,” ಎಂದು ಸಾರಲಾಯಿತು. ಹಳ್ಳಿಯ ಮಂದಿ ನೋಡೇಬಿಡೋಣ ಎಂದುಕೊಂಡರು. ಹಾಗಂದುಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂದಿಯ ಹಳ್ಳಿಗಳ ಸುತ್ತ ಇದೀಗ ಹಸಿರು ನಳನಳಿಸುತ್ತಿದೆ.
ಏಪ್ರಿಲ್‌ನಿಂದ ಆರಂಭವಾಗಿ ಮೇ ಅಂತ್ಯದವರೆಗೆ ನಡೆಯುವ ಈ ಸ್ಪರ್ಧೆ ಅತ್ಯಂತ ವ್ಯವಸ್ಥಿತ. ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದೆ ಬರುವ ಹಳ್ಳಿಗಳ ಜನರಿಗೆ, ತಮ್ಮೂರಿನ ನೀರಿನ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬಹುದು, ಏನು ಮಾಡಿದರೆ ಸಮಸ್ಯೆ ಬಗೆಹರಿದೀತು ಅಂತ ವಿಷಯತಜ್ಞರು ವಿವರಿಸುತ್ತಾರೆ. ಊರಿನ ನಕ್ಷೆ ಇಟ್ಟುಕೊಂಡು ಜಲಮೂಲಗಳನ್ನು ಗುರುತಿಸಲಾಗುತ್ತದೆ. ಯಾವ ಬಗೆಯಲ್ಲಿ ಹೊಂಡ ಮಾಡಿದರೆ, ಕಾಲುವೆ ಮಾಡಿದರೆ ಆ ಊರಿನ ಜಲಮೂಲ ಬದುಕಬಹುದು ಎಂದು ತಿಳಿಸಲಾಗುತ್ತದೆ. ಈಗಾಗಲೇ ಯಶಸ್ಸು ಕಂಡ ಹಳ್ಳಿಗಳ ಜನರನ್ನು ಭೇಟಿ ಮಾಡಿಸಲಾಗುತ್ತದೆ, ಆ ಊರಿನ ವಿಡಿಯೋ ಕಾಣಿಸಲಾಗುತ್ತದೆ. ಒಟ್ಟಾರೆ, ಭರ್ಜರಿ ತರಬೇತಿಯೊಂದಿಗೆ ಸಾಕಷ್ಟು ಐಡಿಯಾ ತಲೆಯೊಳಗೆ ಬಿಟ್ಟುಕೊಂಡು ಹಳ್ಳಿಗೆ ಹಿಂತಿರುಗುವ ಮಂದಿ ಮರುದಿನವೇ ಸಭೆ ನಡೆಸಿ, ಹಾರೆ, ಗುದ್ದಲಿ, ಪಿಕಾಸಿ, ಬುಟ್ಟಿಗಳೊಂದಿಗೆ ಜಲಮೂಲ ಸೃಷ್ಟಿಗೆ ಮುಂದಾಗುತ್ತಾರೆ (ಬೆಟ್ಟಗಳ ಸುತ್ತ ಮಳೆನೀರು ಇಂಗುವಂತೆ ವರ್ತುಲಾಕಾರದ ಗುಣಿಗಳನ್ನು ನಿರ್ಮಿಸುವುದು, ಹಳ್ಳಗಳ ಪಾತ್ರಗಳನ್ನು ಸರಿಪಡಿಸುವುದು, ನೀರು ಹರಿಯುವ ಜಾಗೆಗಳಲ್ಲಿ ಹೊಂಡಗಳನ್ನು ನಿರ್ಮಿಸುವುದು ಇತ್ಯಾದಿ ಕೆಲಸಗಳು). ಮಳೆ ಬಂದ ನಂತರ ತಮ್ಮ ಶ್ರಮದಿಂದಾದ ಜಾದೂಗೆ ಬೆರಗಾಗಿ ನೀರಿಗಿಳಿದು ಕುಣಿದು ಕುಪ್ಪಣಿಸುತ್ತಾರೆ. ಅಸಲಿಗೆ, ಭಾರತದಲ್ಲೇ ಅತ್ಯಂತ ಹೆಚ್ಚು ಶ್ರೀಮಂತ ರೈತರಿರುವ ಹಳ್ಳಿ ಎನಿಸಿಕೊಂಡ ಮಹಾರಾಷ್ಟ್ರದ ಹಿವ್ರೇ ಬಜಾರ್ (ಅಹ್ಮದ್ ನಗರ ಜಿಲ್ಲೆ) ಯಶಸ್ಸಿನ ರಹಸ್ಯ ಕೂಡ ಇದೇ ಎಂಬುದು ಗಮನಾರ್ಹ.
ನೋ ಪೊಲಿಟಿಕ್ಸ್!











ಸ್ಥಳೀಯ ರಾಜಕೀಯ ನಾಯಕರು ಪಕ್ಷಾಭಿಮಾನ ಪಕ್ಕಕ್ಕಿಡುವಂತೆ ಮಾಡುವಲ್ಲಿ ಕೂಡ ಈ ಅಭಿಯಾನ ಯಶ್ವಸಿಯಾಗಿದೆ. ಹಾಗಾಗಿ, ನೀರು ಕಂಡ ಹಳ್ಳಿಗಳ ಮಂದಿ ಪಾನಿ ಫೌಂಡೇಶನ್, ಆಮಿರ್ ಖಾನ್, ದೇವೇಂದ್ರ ಫಡ್ನವಿಸ್ ಹೆಸರು ಹೇಳಿ ಧನ್ಯವಾದ ಅರ್ಪಿಸುತ್ತಾರೆಯೇ ವಿನಾ ಅಪ್ಪಿತಪ್ಪಿಯೂ ಯಾವುದೇ ಪಕ್ಷದ ಹೆಸರು ತೆಗೆಯುವುದಿಲ್ಲ.
ಇನ್ನು, ಪಾನಿ ಫೌಂಡೇಶನ್‌ನ ಈ ಅಭಿಯಾನಕ್ಕೆ ಮಹಾರಾಷ್ಟ್ರದ ಸರ್ಕಾರದ ಜೊತೆಗೆ ಟಾಟಾ ಮತ್ತು ರಿಲಯನ್ಸ್‌ನಂಥ ಕಾರ್ಪೊರೇಟ್ ಸಂಸ್ಥೆಗಳೂ ಸಹಾಯ ಮಾಡುತ್ತಿವೆ. ವಾಟರ್ ಕಪ್ ಶ್ರಮಾದಾನದಲ್ಲಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಕೂಡ ಪಾಲ್ಗೊಂಡು ಗಮನ ಸೆಳೆದದ್ದುಂಟು.
ಮಹಾರಾಷ್ಟ್ರ ವರ್ಸಸ್ ಕರ್ನಾಟಕ
“ಎನ್‌ಜಿಒಗಳು ಮತ್ತಿತರ ಸಾಮಾಜಿಕ ಸೇವಾ ಸಂಸ್ಥೆಗಳು ತಮ್ಮ ಕೆಲಸಗಳಿಗಾಗಿ ಸರ್ಕಾರದ ನೆರವು ಕೇಳಿಕೊಂಡು ಬರುವುದುಂಟು. ಆದರೆ, ಪಾನಿ ಫೌಂಡೇಶನ್‌ನ ಅಭಿಯಾನ ಕಂಡು ಖುಷಿಯಾಗಿ ನಾವೇ ಮುಂದಾಗಿ ಸಾಥ್ ನೀಡಿದೆವು. ಬರಗಾಲವನ್ನು ಹೇಗಪ್ಪ ನಿಭಾಯಿಸುವುದು ಅಂತ ಪ್ರತಿ ಬೇಸಿಗೆಯಲ್ಲೂ ತಲೆನೋವು ತಂದುಕೊಳ್ಳುತ್ತಿದ್ದ ನಮಗೀಗ ತಕ್ಕ ಮಟ್ಟಿಗೆ ನೆಮ್ಮದಿ ಸಿಕ್ಕಿದೆ. ಹಳ್ಳಿ ಜನರಿಗೆ ಮುಖ ತೋರಿಸುವ ಧೈರ್ಯ ಬಂದಿದೆ ನನಗೆ,” ಎಂದು ಮುಖ ಅರಳಿಸುತ್ತಾರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್.
ಮಹಾರಾಷ್ಟ್ರ ಸಿಎಂ ಫಡ್ನವಿಸ್ ಈ ಹೇಳಿಕೆ ಕೊಟ್ಟ ಸರಿಸುಮಾರು ಅದೇ ಸಮಯಕ್ಕೆ ಇತ್ತ ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಿದೆ. ಆ ಆದೇಶ ಹೀಗೆ ಹೇಳುತ್ತದೆ: “ಉತ್ತಮ ಮಳೆ, ಬೆಳೆಗಾಗಿ ಹಿಂದಿನಿಂದಲೂ ಪೂಜೆ, ಅಭಿಷೇಕ, ಜಪ ತಪ, ಪೂಜೆ ಅನುಷ್ಟಾನ ಮಾಡಿಕೊಂಡು ಬಂದಿರುವ ಸಂಪ್ರದಾಯವಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಎದುರಿಸುತ್ತಿರುವ ಬರಗಾಲ ಸಂಕಷ್ಟದಿಂದ ಪಾರಾಗಲು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ವಿಶೇಷ ಪೂಜೆ , ಹೋಮ ನಡೆಸುವುದು ಅವಶ್ಯಕವೆಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ, ದೇವಾಲಯಗಳಲ್ಲಿ ಜೂನ್ 6ರ ಗುರುವಾರದಂದು ಬ್ರಾಹ್ಮೀ ಮುಹೂರ್ತದಿಂದ ಈ ವಿಶೇಷ ಪೂಜಾ ಅಭಿಯಾನ ಆರಂಭಿಸಿ ನಿರಂತರವಾಗಿ ವಿಶೇಷ ಪೂಜೆ, ಅಭಿಷೇಕ, ಹೋಮ ಹಾಗೂ ಪರ್ಜನ್ಯ ಜಪಗಳನ್ನು ಅನುಷ್ಟಾನಗೊಳಿಸುವಂತೆ ಸೂಚಿಸಲಾಗಿದೆ. ವಿಶೇಷ ಪೂಜೆಗೆ ಗರಿಷ್ಟ 10,001 ರೂ. ಖರ್ಚು ಮಾಡಲು ಹಾಗೂ ಆರ್ಥಿಕವಾಗಿ ಶಕ್ತಿಯುಳ್ಳ ದೇವಾಲಯಗಳಲ್ಲಿ ದೇವಸ್ಥಾನದ ನಿಧಿಯಿಂದ ಬಳಸಲು ಅನುಮತಿ ನೀಡಿದೆ.”
ಜವಾಬ್ದಾರಿಯಿಂದ ಜಾರಿಕೊಳ್ಳುವ ಅತ್ಯಂತ ಯಶಸ್ವಿ ತಂತ್ರ!
ಬರಗಾಲ ಎದುರಿಸಲು ಪಕ್ಕದ ಮಹಾರಾಷ್ಟ್ರ ಸರ್ಕಾರ ಅಭಿಯಾನವೊಂದಕ್ಕೆ ಕೈಜೋಡಿಸಿ, ಹಳ್ಳಿಗಳ ನೀರಿನ ಮೂಲಗಳನ್ನು ಜೋಪಾನ ಮಾಡುವ ಕೆಲಸಕ್ಕೆ ಕೈಹಾಕಿದರೆ, ಕರ್ನಾಟಕ ಸರ್ಕಾರವು ಹೋಮ, ವಿಶೇಷ ಪೂಜೆಗಳ ಮೂಲಕ ತೊಡೆ ತಟ್ಟಿದೆ! ಇದರಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಯಾರು ಶತಮೂರ್ಖರಾಗುತ್ತಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಪರ್ಜನ್ಯ ಹೋಮ, ವಿಶೇಷ ಪೂಜೆಯಿಂದ ಬರ ಎದುರಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ, ಮುಜರಾಯಿ ಮಂತ್ರಿ ಪಿ ಟಿ ಪರಮೇಶ್ವರ ನಾಯಕ್ ಅವರಿಗೆ ಹಾಗೂ ಇಂಥದ್ದೊಂದು ಸಂಪ್ರದಾಯ ಹುಟ್ಟುಹಾಕಿ, ತಮ್ಮ ಶ್ರಮ ಕಡಿಮೆ ಮಾಡಿಕೊಂಡು, ಜನರಿಗೆ ಮಂಕುಬೂದಿ ಎರಚುತ್ತ ಬಂದ ಈ ಹಿಂದಿನ ಮುಖ್ಯಮಂತ್ರಿಗಳೆಲ್ಲರಿಗೆ ಮಹಾರಾಷ್ಟ್ರ ಸರ್ಕಾರದ ನಡೆ ಕಣ್ಣು ತೆರೆಸಲಿ.
ಬರದಂಥ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ರಚನಾತ್ಮಕ ಕೆಲಸಗಳಿಗೆ ಕೈಜೋಡಿಸುವುದು, ಹಳ್ಳಿಗಳ ಮಟ್ಟದಲ್ಲಿ ಜಲಮೂಲಗಳ ಸೃಷ್ಟಿ, ಇರುವ ಜಲಮೂಲಗಳ ಶುದ್ಧೀಕರಣ, ಜಲಮೂಲಗಳ ಶಾಶ್ವತ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಹಾಯವಾಗುವ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ. ಬರದಂಥ ಪಿಡುಗಿಗೆ ಇಂಥ ಯೋಜನೆಗಳು ಮಾತ್ರವೇ ಪರಿಹಾರ. ಅದನ್ನು ಮಾಡದೆ, ವಿಶೇಷ ಪೂಜೆಗೆ ಆದೇಶಿಸುವ ಹಾಸ್ಯ ಪ್ರಹಸನ ನಡೆಸಿದರೆ ಅದು ತಮ್ಮ ಮೇಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದೇ ಆಗಿರುತ್ತದೆ. ದೇವರು-ಪೂಜೆ ಮುಂತಾದವುಗಳ ಹೆಸರಿನಲ್ಲಿ ಮೂರ್ಖತನ ಪ್ರದರ್ಶಿಸುವುದನ್ನು ಕರ್ನಾಟಕ ಸರ್ಕಾರ ಇನ್ನಾದರೂ ನಿಲ್ಲಿಸಲಿ.