ಸರಕಾರಿ ವೈಬ್ ಸೈಟ್ ಪ್ರಕಾರ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳು ಹಸಿರಾಗಿವೆ. ಅರ್ಥಾತ್, “ಬಯಲು ಬಹಿರ್ದೆಸೆ ಮುಕ್ತ” Open Defecation Free (ODF) ಗ್ರಾಮಗಳೆಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಉಪಯೋಗ ಪರಿಣಾಮಕಾರಿ ಅನುಷ್ಠಾನ ಆಗಿಲ್ಲ. ಶೌಚಾಲಯ ನಿರ್ಮಾಣದ ಬಹುದೊಡ್ಡ ಆಂದೋಲನಕ್ಕೆ ಚಾಲನೆ ನೀಡಿ ಐದು ವರ್ಷಗಳು ಕಳೆಯಿತು. ಗ್ರಾಮೀಣ ಮಟ್ಟದಲ್ಲಿ ಅದರ ಪರಿಣಾಮ ಮಾತ್ರ ಆಗಿಲ್ಲ.
ಕಳೆದ ಭಾನುವಾರ ಅಮೆರಿಕಾದಲ್ಲಿ ಭಾಷಣ ಮಾಡಿದ ಭಾರತ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿರುವ ದೇಶವು ಬಯಲು ಬಹಿರ್ದೆಸೆ ಮುಕ್ತ ದೇಶ ಕೂಡ ಆಗಲಿದೆ ಎಂದು ಘೋಷಿಸಿದರು.
ಛತ್ತೀಸಗಢ ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆಯೇ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನು ಘೋಷಿಸಲಾಗಿದೆ. ಹೀಗಿ ಘೋಷಣೆ ಮಾಡಲಾದ ಗ್ರಾಮಗಳಲ್ಲಿ ಶೌಚಾಲಯಗಳೇ ಇಲ್ಲ. ಬಹುತೇಕ ಶೌಚಾಲಯಗಳು ಈಗಲೂ ನಿರ್ಮಾಣ ಹಂತದಲ್ಲಿ ಇವೆ. ಶೌಚಾಲಯಗಳ ನಿರ್ಮಾಣ ಸ್ಥಗಿತ ಆಗಿದೆ.

ಪಶ್ಚಿಮ ಬಂಗಾಳ ರಾಜ್ಯವನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳ ನಗರಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಈಗಾಗಲೇ ಘೋಷಿತವಾಗಿವೆ. ಪಶ್ಚಿಮ ಬಂಗಾಳ ರಾಜ್ಯ ಇದುವರೆಗೆ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಒಪ್ಪಿಗೆ ನೀಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ ಶೌಚಾಲಯ ನಿರ್ಮಾಣ ಕಾರ್ಯಕ್ರಮ ಅನುಷ್ಠಾನ ಆಗಿಲ್ಲ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಆಗಿದೆಯೋ ಅಲ್ಲೆಲ್ಲ ಶೌಚಾಲಯದ ಉಪಯೋಗ ಆಗುತ್ತಿಲ್ಲ ಎಂಬುದು ಕಟು ಸತ್ಯ. ಕರ್ನಾಟಕ ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಕ್ಕೂ ಮುನ್ನವೇ ಬಯಲು ಬಹಿರ್ದೆಸೆ ನಿರ್ಮೂಲನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಸುದೀರ್ಘ ಪ್ರಯತ್ನದ ಅನಂತರ ನಿರೀಕ್ಷಿತ ಮಟ್ಟದ ಬದಲಾವಣೆ ಆಗುತ್ತಿಲ್ಲ.
ಸ್ವಚ್ಛ ಭಾರತ್ ಮಿಷನ್ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ ಬಯಲು ಬಹಿರ್ದೆಸೆ ಮುಕ್ತ ಕಾರ್ಯಕ್ರಮ ವಿಶ್ವದಲ್ಲೇ ಅತೀ ದೊಡ್ಡ ಮುನುಷ್ಯನ ದೈನಂದಿನ ಅಭ್ಯಾಸ ಬದಲಾವಣೆಯ ಪ್ರಯತ್ನವಾಗಿದೆ. ಹುಟ್ಟಿದಾಗ ಕಲಿತ ಅಭ್ಯಾಸಗಳು ಬೇಗನೇ ಬಿಟ್ಟು ಹೋಗುವುದಿಲ್ಲ ಎಂಬ ಇಂಗ್ಲೀಷ್ ನಾಣ್ನುಡಿಯಂತೆ ಭಾರತದ ಜನರ ಬಯಲು ಮಲ ವಿಸರ್ಜನೆ ಅಭ್ಯಾಸ ಸುಲಭದಲ್ಲಿ ಬದಲಾಗಲು ಸಾಧ್ಯವಿಲ್ಲ.

ಕರ್ನಾಟಕ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಮತ್ತು ಬಯಲು ಸೀಮೆಗಳಲ್ಲಿ ದಶಕಗಳ ಹಿಂದೆಯೇ ತ್ರಿಸ್ತರ ಪಂಚಾಯತುಗಳ ಮೂಲಕ ಶೌಚಾಲಯ ನಿರ್ಮಾಣ ಮಾಡಿಕೊಡಲಾಗುತಿತ್ತು. ಶೌಚಾಲಯ ಇಲ್ಲದ ಮನೆ ಮಂದಿ ಪಂಚಾಯತು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವೂ ಬಂತು. ಆದರೆ, ಸರಕಾರ ನಿರ್ಮಿಸಿಕೊಟ್ಟ ಶೌಚಾಲಯಗಳನ್ನು ಗ್ರಾಮೀಣ ಜನರು ದಾಸ್ತಾನು ಕೊಠಡಿಯಾಗಿ ಮಾಡಿಕೊಂಡಿದ್ದರು.
2014ರಲ್ಲಿ ದೇಶದಲ್ಲಿ ಶೇಕಡ 38ರಷ್ಟು ಜನರು ಬಹಿರ್ದೆಸೆಗೆ ಬಯಲು ಶೌಚಾಲಯ ಅಲವಂಬಿಸುತ್ತಿದ್ದರು ಎಂದು ಕೇಂದ್ರ ಸರಕಾರದ ಅಂಕಿ ಅಂಶ ಹೇಳುತ್ತದೆ. ಕಳೆದ ಐದು ವರ್ಷದ ಅವಧಿಯಲ್ಲಿ ಅದು ಶೂನ್ಯ ಆಗಬೇಕಾಗಿತ್ತು. ಅಕ್ಟೋಬರ್ 2 ಗಾಂಧಿ ಜಯಂತಿಯಂದು ದೇಶದ 699 ಜಿಲ್ಲೆಗಳು ಶೇಕಡ 100 ಓಡಿಎಫ್ ಜಿಲ್ಲೆಗಳು ಆಗುತ್ತವೆ ಎನ್ನುತ್ತಾರೆ ಅಧಿಕಾರಿಗಳು.
ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರತಿದಿನ ಓಡಿಎಫ್ ಅಂಕಿ ಅಂಶಗಳನ್ನು ಪ್ರಕಟಿಸುತ್ತದೆ. ದೇಶದ 5,99,963 ಗ್ರಾಮಗಳ ಓಡಿಎಫ್ ಸ್ಥಿತಿಗತಿಯನ್ನು ಅದು ತೋರಿಸುತ್ತದೆ. ಈ ಪ್ರಕಾರ ಶೇಕಡ 99ರಷ್ಟು ಓಡಿಎಫ್ ಗ್ರಾಮಗಳು ಆಗಿವೆ.
ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಬಖಾರಿ ಗ್ರಾಮವನ್ನು ಕೂಡ ಶೇಕಡ 100 ಓಡಿಎಫ್ ಗ್ರಾಮ ಎಂದು ಘೋಷಿಸಲಾಗಿದೆ. ಆದರೆ, ಆ ಗ್ರಾಮದಲ್ಲಿ ಉಪಯೋಗಿಸಲಾಗದ, ಹಳೆಯ ಮತ್ತು ಮುರಿದುಬಿದ್ದ ಶೌಚಾಲಯಗಳ ಸಂಖ್ಯೆಯೇ ಹೆಚ್ಚಿದೆ ಎನ್ನುತ್ತದೆ ವರದಿ.

ನಮ್ಮ ರಾಜ್ಯಕ್ಕೆ ಸಂಬಂಧಿಸದಂತೆ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್.ಈಶ್ವರಪ್ಪನವರೇ ಒಪ್ಪಿಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣ ಆಗಿಲ್ಲ ಎಂದು ಈಶ್ವರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಭಾರತ್ ಮಿಷನ್ –ಗ್ರಾಮೀಣ ಯೋಜನೆಯಡಿ ಗ್ರಾಮೀಣ ಕರ್ನಾಟಕವನ್ನು “ಬಯಲು ಬಹಿರ್ದೆಸೆ ಮುಕ್ತ” ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಓಡಿಎಫ್ ಘೋಷಣೆಗೂ ಮುನ್ನ ಥರ್ಡ್ ಪಾರ್ಟಿ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಒಟ್ಟು 65 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿ, 47 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ಕಳೆದ ವರ್ಷಗಳಲ್ಲಿ ನೀಡಲಾಗಿದೆ.
ಮಾತ್ರವಲ್ಲದೆ, ಗ್ರಾಮೀಣ ಸಮುದಾಯದಲ್ಲಿ ಶೌಚಾಲಯ ಬಳಕೆ ಮತ್ತು “ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2019”ರ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಕೈಗೊಳ್ಳಲಾಗಿದೆ. ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸಂಚಾರಿ ವಾಹನದ ಮೂಲಕ, ಕಲಾಜಾಥ ಮೂಲಕ ಶ್ರಾವ್ಯ, ದೃಶ್ಯ ಮಾಧ್ಯಮ, ಬೀದಿ ನಾಟಕ, ಇತ್ಯಾದಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ, ಡಾಕ್ಯುಮೆಂಟರಿ, ಜಾಹೀರಾತು, ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯೋಜಿಸಿದ ಹೊರತಾಗಿಯೂ ನಿರ್ದಿಷ್ಟ ಪ್ರಮಾಣದ ಬದಲಾವಣೆ ಸಾಧ್ಯವಾಗಿಲ್ಲ ಎಂಬುದು ಕಟು ವಾಸ್ತವ.