ಬೆಳಗಾವಿ ಜಿಲ್ಲೆ ಈ ಬಾರಿ ಪ್ರವಾಹದಿಂದ ತತ್ತರಿಸಿ ಹೋಗಿದ್ದು ಅನೇಕ ಗ್ರಾಮಗಳು ಜಲಾವೃತವಾಗಿದ್ದವು. ನೆರೆ ಬಂತು ನೆರೆ ಹೋಯಿತು, ಆದರೆ ನೆಮ್ಮದಿಯಿಂದ ಕೂಡಿದ ಜೀವನವನ್ನೇ ನಾಶ ಮಾಡಿ ಹೋಯಿತು. ಹೊಲ ಗದ್ದೆಗಳು ಕೊಚ್ಚಿಕೊಂಡು ಹೋದವು, ಸೇತುವೆಗಳು ನೀರು ಪಾಲಾದವು. ಮನೆಗಳಲ್ಲಿ ರಾಡಿ, ಸರ್ಪ, ಸೊಳ್ಳೆಗಳ ಕಾಟ. ಜನರು ತಮ್ಮ ಮನೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ಇನ್ನೂ ಹೆಣಗಾಡುತ್ತಿದ್ದಾರೆ. ಹಲವು ಮನೆಗಳು ಕುಸಿತಗೊಂಡಿವೆ. ಮನೆಯಲ್ಲಿದ್ದ ಚಿನ್ನ, ಒಡವೆ ಹಾಗೂ ಕೂಡಿಟ್ಟ ಹಣ ಎಲ್ಲ ಕೊಚ್ಚಿಕೊಂಡು ಹೋಗಿವೆ. ಜನರು ಸರ್ಕಾರದಿಂದ ಬರುವ ಹಣಕ್ಕಾಗಿಯೇ ಕಾದುನೋಡಬೇಕಾಗಿದೆ. ಯಾರು ಎಷ್ಟೇ ಕೊಟ್ಟರೂ ಒಮ್ಮೆ ಹಾಳಾದ ಬದುಕು ಕಟ್ಟಿಕೊಳ್ಳಲು ವರುಷವೇ ಬೇಕೆಂಬುದು ಹಲವು ಗ್ರಾಮಸ್ಥರ ಅಭಿಪ್ರಾಯ.
ಈಗ ಅಥಣಿ ತಾಲೂಕಿನ 25ಕ್ಕೂ ಹೆಚ್ಚು ಗ್ರಾಮಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಮನೆಗಳು ಯಾವಾಗ ಬೀಳುತ್ತವೆ ಎಂದು ಕಾದು ಕುಳಿತು ನೋಡುವಂತಾಗಿದೆ. ಮನೆ ಸ್ವಚ್ಛ ಮಾಡುತ್ತ ಹಗಲು ಕಳೆದರೆ, ರಾತ್ರಿ ಕರೆಂಟ್ ಇಲ್ಲದೆ ಸೊಳ್ಳೆಗಳ ಕಾಟ ಸಹಿಸಿಕೊಂಡು ಬದುಕಬೇಕಾಗಿದೆ. ಬೇರೆ ದಾರಿಯಿಲ್ಲ, ಬಿಟ್ಟುಹೋಗುವಂತಿಲ್ಲ. ಅಥಣಿ ತಾಲೂಕಿನ ಹಳ್ಯಾಳ, ನದಿ ಇಂಗಳಗಾವ, ಸತ್ತಿ, ಶಿನಾಳ, ಬಳವಾಡ, ನಾಗನೂರು ಮತ್ತು ಹುಲುಗಬಾಳ ಇನ್ನೂ ಮುಂತಾದ ಗ್ರಾಮಗಳಲ್ಲಿ ಪರಿಹಾರ ಕಾರ್ಯ ತ್ವರಿತ ಗತಿ ಪಡೆಯಬೇಕಿದೆ.

ಇನ್ನು ರಾಮದುರ್ಗದಲ್ಲಿಯೂ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿತು. ಬೆಳೆಗಳು ಕೊಚ್ಚಿಹೋಗಿ ರೈತರು ಇತ್ತ ಬೆಳೆಯೂ ಇಲ್ಲ, ಹಣವೂ ಇಲ್ಲ, ಭೂಮಿಯೂ ಈಗ ಕೆಸರುಮಯವಾಗಿ ಬದುಕೇ ಅಯೋಮಯ ಪರಿಸ್ಥಿತಿ ಎಂಬಂತಾಗಿದೆ ಎಂದು ಪರದಾಡುತ್ತಿದ್ದಾರೆ. ಶಾಲಾ ಸಿಬ್ಬಂದಿಗಳು ಮಕ್ಕಳ ದಾಖಲಾತಿ ಪತ್ರಗಳನ್ನು ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಒಣಗಿಸುವತ್ತ ಶ್ರಮಿಸುತ್ತಿದ್ದಾರೆ. ರಸ್ತೆಗಳು ಕೆಸರುಮಯವಾಗಿ ಓಡಾಡಲು ತೊಂದರೆಯಾಗುತ್ತಿದೆ. ಹೊಲಗಳಲ್ಲಿ ನೀರು ನಿಂತು ಬೆಳೆಗಳು ಕೊಳೆಯುತ್ತಿವೆ.
ಪ್ರವಾಹ ಅಧ್ಯಯನ ತಂಡ ವೀಕ್ಷಣೆಗೆ ಗ್ರಾಮಸ್ಥರ ಬೇಸರ
ಕೇಂದ್ರದಿಂದ ಪ್ರವಾಹ ಅಧ್ಯಯನ ತಂಡ ಬರಲಿದೆ ಎಂಬು ಸುದ್ದಿ ಕೇಳಿದೊಡನೆ ಸಂತಸದಿಂದ ಕಾಯುತ್ತಿದ್ದ ಗ್ರಾಮಸ್ಥರಿಗೆ ರವಿವಾರ ಬೇಸರವಾಯಿತು. ಪ್ರವಾಹದ ಅಬ್ಬರಕ್ಕೆ ನಾಶವಾದ ನೂರಾರು ಎಕರೆ ಬೆಳೆಯನ್ನು ಕೇವಲ 5 ನಿಮಿಷದಲ್ಲಿ ವೀಕ್ಷಣೆ ಮಾಡಿ ಮುಂದೆ ಕೆಲವು ಗ್ರಾಮಗಳಿಗೆ 5 ನಿಮಿಷ ಭೇಟಿ ನೀಡಿ ಬೆಳಗಾವಿ ಪ್ರವಾಸಿ ಮಂದಿರದಲ್ಲೇ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಅವರಲ್ಲಿ ಎಲ್ಲ ಮಾಹಿತಿ ಕಲೆಹಾಕಿದ ತಂಡದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು. ರೈತರನ್ನು ಮಾತನಾಡಿಸಲಿಲ್ಲ, ಸಮಸ್ಯೆ ಆಲಿಸಲಿಲ್ಲ, ಅಧಿಕಾರಿಗಳು ಕೊಟ್ಟ ಮಾಹಿತಿಯನ್ನೇ ಆಧರಿಸಿ ಮಾಡುವುದಾದರೆ ಇಲ್ಲಿಯವರೆಗೆ ಏಕೆ ಬರಬೇಕು ಎಂದು ಮಹೇಶ ಕುಮುಟಾ ಎಂಬ ಚಿಕ್ಕೋಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ತಂಡ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೆಲಕಾಲ ನಿಂತಿದ್ದು ಮುಂದೆ ಸಾಗಿತು ಎಂದು ಅಧಿಕಾರಿಗಳ ನಡೆಯನ್ನು ಸಂತ್ರಸ್ತರು ಪ್ರತಿಭಟಿಸಿದರು. ಆಗ ಅಲ್ಲಿಯೇ ಇದ್ದ ಜಿಲ್ಲೆಯ ಇನ್ನೊಬ್ಬ ಅಧಿಕಾರಿ ಬೆಳೆ ಹಾನಿ ವೀಕ್ಷಿಸಲು ಕೇಂದ್ರದಿಂದ ಬೇರೆ ತಂಡ ಬರಲಿದೆ ಎಂದು ಸಂತ್ರರನ್ನು ಸಂತೈಸಿದರು. ಬರ ಅಧ್ಯಯನ ತಂಡ ಚಿಕ್ಕೋಡಿ, ಕಾಗವಾಡ, ರಾಯಬಾಗ, ಗೋಕಾಕ ಮತ್ತು ರಾಮದುರ್ಗ ತಾಲೂಕಿನಲ್ಲಿ ವೀಕ್ಷಣೆ ನಡೆಸಿತು.
ಕೇಂದ್ರ ತಂಡದಲ್ಲಿ ಇದ್ದವರು:
ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟ ತಂಡದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ಕಾರ್ಯದರ್ಶಿ ಶ್ರೀಪ್ರಕಾಶ್, ಹಣಕಾಸು ಇಲಾಖೆಯ ಎಫ್. ಸಿ. ಡಿ. ನಿರ್ದೇಶಕ ಎಸ್. ಸಿ. ಮೀನಾ, ಕೃಷಿ ಮತ್ತು ರೈತರ ಸಹಕಾರ ಇಲಾಖೆಯ ಎಣ್ಣೆ ಬೀಜಗಳ ಕಚೇರಿಯ ಜಂಟಿ ನಿರ್ದೇಶಕ ಡಾ. ಪುನ್ನುಸ್ವಾಮಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಜಿತೇಂದ್ರ ಪನ್ವಾರ್, ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ವಿಜಯಕುಮಾರ್, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಕೇಂದ್ರ ಇಂಧನ ಇಲಾಖೆಯ ಉಪ ನಿರ್ದೇಶಕ ಓ. ಪಿ. ಸುಮನ್ ಇದ್ದರು.

ಪರಿಹಾರ ಯಾವಾಗ?
ಎಲ್ಲವನ್ನು ವೀಕ್ಷಿಸಿದ ಬಳಿಕ ಕೇಂದ್ರ ತಂಡದ ಇನ್ನೊಂದು ಗುಂಪು ಮಂಗಳವಾರ ಬೆಳೆ ಹಾನಿಯನ್ನು ಪರಿಶೀಲಿಸಿತು. ಎರಡೂ ವರದಿಯನ್ನು ಆಧರಿಸಿ ಪರಿಹಾರ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿದವು.
ಗದಗ:
ಗದುಗಿನಲ್ಲಿ ಒಟ್ಟು 14 ಗ್ರಾಮಗಳು ಮಲಪ್ರಭಾ ನದಿ ಮತ್ತು ಬೆಣ್ಣೆಯ ಉಕ್ಕಿ ಬಂದಿದ್ದರಿಂದ ಪ್ರವಾಹಕ್ಕೆ ತುತ್ತಾಗಿದ್ದವು. ಸುರಕೋಡ, ಲಖಮಾಪುರ ಹಾಗೂ ಕುರ್ಲಗೇರಿ ಗ್ರಾಮಗಳೂ ಸಂಪೂರ್ಣ ಜಲಾವೃತವಾಗಿ ಐದಾರು ದಿನಗಳವರೆಗೆ ಸಂಪರ್ಕವನ್ನು ಕಡಿದುಕೊಂಡು ನಡುಗಡ್ಡೆಗಳಾಗಿದ್ದವು. ಒಂದು ವಾರದ ಬಳಿಕವೂ ಲಖಮಾಪುರದ ಜನರು ಈಜಿಕೊಂಡು ಗ್ರಾಮಕ್ಕೆ ಹೋಗಿ ಮನೆಗಳನ್ನು ಸ್ವಚ್ಛಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹುಬ್ಬಳ್ಳಿ ವಿಜಯಪುರ ರಸ್ತೆಯಲ್ಲಿರುವ ಕೊಣ್ಣೂರಿನ ಮುಖ್ಯ ರಸ್ತೆ ಕೊಚ್ಚಿ ಹೋಗಿ ದುರಸ್ತಿ ಒಂದು ವಾರವೇ ನಡೆದಿತ್ತು. ಹೊಳೆಆಲೂರ, ಕಪ್ಪಲಿ, ಗುಳಗುಂದಿ, ಮೆಣಸಗಿ, ಅಮರಗೋಳ, ಹೊಳೆಹಡಗಲಿ, ಬಿ.ಎಸ್. ಬೇಲೇರಿ, ಕುರುವಿನಕೊಪ್ಪ, ಬೂದಿಹಾಳ, ಭೈರನಹಟ್ಟಿ, ಶಿರೋಳ ಮುಂತಾದ ಗ್ರಾಮಗಳು ಪ್ರವಾಹಕ್ಕೆ ತತ್ತರಿಸಿದ್ದವು. ಇನ್ನೂ 26 ಗ್ರಾಮಗಳಿಗೆ ಸ್ವಲ್ಪ ನೀರು ನುಗ್ಗಿದ್ದು ಅಷ್ಟೇನು ಹಾನಿ ವರದಿಯಾಗಿಲ್ಲ.

ಹೊಳೆ ಆಲೂರ ಗ್ರಾಮದ ಕಥೆ
ಹೊಳೆ ಆಲೂರಿನ ಗ್ರಾಮದ ಮಲ್ಲವ್ವ ಎಂಬಾಕೆ ಶ್ರಾವಣ ಮಾಸವನ್ನು ಚೆನ್ನಾಗಿ ಆಚರಿಸಬೇಕೆಂದು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಗಂಡ ಮತ್ತು ಮಕ್ಕಳು ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರಿಂದ ಮಲ್ಲವ್ವ ತಮ್ಮ ಸಂಬಂಧಿಕರಿಗೂ ಈ ಬಾರಿ ಹೊಳೆ ಆಲೂರಿನಲ್ಲಿ ಪೂಜೆ ಮಾಡಲು ಆಮಂತ್ರಣ ನೀಡಿದ್ದರು. ಅಂದು ಅಗಸ್ಟ್ 7 ರ ರಾತ್ರಿ ಊಟ ಮಾಡಿ ಮಲ್ಲವ್ವ ಮಲಗಿದ್ದರು. ತಡರಾತ್ರಿಯಲ್ಲಿ ಯಾರೋ ಬಾಗಿಲು ಬಡಿದರು. ಮಲ್ಲವ್ವ ಊರಾಗ ನೆರೆ ಬರತೈತಿ, ಲಘುನ ಜಾಗ ಖಾಲಿ ಮಾಡಬೆಕಂತ, ಒಂದು ದೊಡ್ಡ ಗಾಡಿ ಬಂದೈತಿ, ಬಡ ಬಡ ಬೇಕಾದ ಸಾಮಾನು ಕಟ್ಟಿಗೊ ಹೋಗೋಣ ಅಂದರಂತೆ. ಆಗ ಏನೂ ತಿಳಿಯದ ಮಲ್ಲವ್ವ ನಾ ಈ ಮನಿ ಬಿಟ್ಟ ಬರಂಗಿಲ್ಲ ಅಂತ ಹಠ ಹಿಡಿದು ಒಳಗೆ ಕುಳಿತಳು.

ಮರುದಿನ ಬೆಳಿಗ್ಗೆ ಎದ್ದ ಕೂಡಲೇ ಮಲ್ಲವ್ವನ ಮನೆ ಸುತ್ತ ನೀರು. ಮನೆಯ ಮೊದಲನೆಯ ಮಹಡಿಗೆ ಹೋಗಿ ಕೂಗಿದರೆ ಊರಲ್ಲಿ ಒಬ್ಬರು ಇಲ್ಲ. ಊರ ತುಂಬಾ ನೀರೋ ನೀರೋ..ಮಲ್ಲವ್ವ 26 ತಾಸು ಕಾಯುತ್ತ ಕುಳಿತಿದ್ದಾಳೆ. ಮಲ್ಲವ್ವನ ಮನೆ ಊರ ಒಳಗಡೆ ಇದ್ದುದರಿಂದ ಅವಳ ಕೂಗು ಯಾರಿಗೂ ಕೇಳಿಸಿಲ್ಲ. ಹಸಿವೆ ಆದಾಗ ಉಳಿದಿದ್ದ ಸ್ವಲ್ಪ ಚುರುಮರಿ ತಿಂದು ಹಸಿವು ನೀಗಿಸಿಕೊಂಡಿದ್ದಾಳೆ. ಕೊನೆಗೆ ರಕ್ಷಣಾ ಪಡೆಯವರು ಅತ್ತ ಕೆಲವರನ್ನು ರಕ್ಷಿಸುತ್ತಿದ್ದಾಗ ಮಲ್ಲವ್ವನ ಕೂಗು ಕೇಳಿಸಿತು. ಒಬ್ಬ ಯೋಧ ಅವಳ ಮನೆಯತ್ತ ಈಜಿಕೊಂಡು ಹೋಗಿ ಹೊತ್ತುಕೊಂಡು ಬಂದು ಪಾರು ಮಾಡಿದ. ಕೊನೆಗೂ ಮಲ್ಲವ್ವ ಬದುಕಿದಳು, ಬದುಕಿಸಿದವರನ್ನು ಹರಸಿದಳು.
ಎಷ್ಟು ಹಾನಿ?
ಗದಗ್ ಜಿಲ್ಲೆಯನ್ನು ಒಟ್ಟು ರೂ 305 ಕೋಟಿಯಷ್ಟು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಒಟ್ಟು ನರಗುಂದ ಹಾಗೂ ರೋಣ ತಾಲೂಕಿನಲ್ಲಿ 3,571 ಹೆಕ್ಟರ್ ಪ್ರದೇಶ ತೋಟಗಾರಿಕೆ ವ್ಯಾಪ್ತಿಯಲ್ಲಿ ಬರುವ ಬೆಳೆಗಳು ಮತ್ತು 11,809 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ತಂಡ ಸಂಭ್ರಮ ನೋಡಿ ಬೆರಗಾಯಿತು!
ಕೇಂದ್ರ ತಂಡ ಶ್ರಾವಣ ಸೋಮವಾರದಂದು ಗದಗ್ ಜಿಲ್ಲೆಗೆ ಭೇಟಿ ನೀಡಿದ್ದು, ಬಹುತೇಕ ಗ್ರಾಮಗಳಲ್ಲಿ ಜಾತ್ರೆಗಳಿದ್ದವು. ಪ್ರವಾಹ ಬಂದು ಬದುಕು ಮೂರಾಬಟ್ಟೆಯಾದರೂ ಸಂತೋಷದಿಂದ ಸಂಭ್ರಮ ಪಡುತ್ತಿದ್ದ ಗ್ರಾಮಸ್ಥರನ್ನು ನೋಡಿ ಕೇಂದ್ರ ತಂಡದ ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದರು. ಆಗ ಅಲ್ಲಿದ್ದ ಕೆಲ ಗ್ರಾಮಸ್ಥರು ವರುಷಕ್ಕೊಮ್ಮೆ ಬರುವ ಜಾತ್ರೆ ಸರ್ ಇದು, ನೆರೆ ಬರ ಬರ್ತಾವ್ರಿ ಹೋಗ್ತಾವ್ರಿ, ಅದಕ್ಕಂತ ಸುಮ್ಮನ ಕೂಡಾಕಾಗಂಗಿಲ್ಲ ಎಂದು ತಿಳಿಸಿದರು.