ಗದುಗಿನಲ್ಲಿ ಬಡವರಿಗಾಗಿ ನೂತನ ತಂತ್ರಜ್ಞಾನದ ಮನೆಗಳನ್ನು ಕಟ್ಟಲಾಗುತ್ತಿದೆ. ಈ ಮನೆಗಳು ಭೂಕಂಪ ಸಂಭವಿಸಿದರೂ ಬೀಳಲ್ಲ. ಹೀಗೊಂದು ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ ಗದಗ್ ಜಿಲ್ಲಾಡಳಿತ ಮತ್ತು ನಗರಸಭೆ. ಹೌದು ಬಡವರಿಗಾಗಿ ಗಟ್ಟಿಮುಟ್ಟಾದ ಸೂರು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ನಗರದ ಗಂಗಿಮಡಿ ಪ್ರದೇಶದಲ್ಲಿ ಸಾವಿರಾರು ಮನೆಗಳು ತಯಾರಾಗುತ್ತಿವೆ. ಈ ಮನೆಗಳಿಗಾಗಿ ಈಗಾಗಲೇ ಹಲವರು ಅರ್ಜಿ ಸಲ್ಲಿಸಿದ್ದು ಜನ ಕಾಮಗಾರಿ ಪೂರ್ಣಗೊಳ್ಳುವುದನ್ನು ಕಾಯುತ್ತ ಕುಳಿತಿದ್ದಾರೆ.
ಭೂಕಂಪದಿಂದ ಈ ಮನೆಗಳಿಗೆ ಏನಾಗುವುದಿಲ್ಲ ಎಂಬ ಸುದ್ದಿ ತಿಳಿದ ತಕ್ಷಣ ಆವಾಸ ಯೋಜನೆ ಅಡಿ ಅರ್ಜಿ ಹಾಕಿದ ಜನರೆಲ್ಲ ಕಚೇರಿಗಳತ್ತ ಓಡೋಡಿ ಬರುತ್ತಿದ್ದಾರೆ. ನಮಗೆ ಇಂತಹ ಗಟ್ಟಿ ಮನೆಗಳೇ ಬೇಕು ಎಂದು ಹಠ ಹಿಡಿದಿದ್ದಾರೆ. ಕೆಲವರು ಈ ಮನೆಗಳು ಬೇಕೇಂದು ವಶೀಲಿ ಹಚ್ಚುತ್ತಿದ್ದಾರೆ. ಆದರೆ ನಗರ ಸಭೆ ಅಧಿಕಾರಿಗಳು ಇನ್ನೂ ಅಧಿಕೃತ ಪಟ್ಟಿ ಬಿಡುಗಡೆ ಮಾಡಿಲ್ಲ.
ಹೇಗೆ ಬಂತು ಈ ಯೋಚನೆ?
ಚುನಾವಣೆ ಸಮಯದಲ್ಲಿ ಗಂಗಿಮಡಿ ಭಾಗದಲ್ಲಿ ಪ್ರಚಾರಕ್ಕಾಗಿ ಹೋಗುತ್ತಿದ್ದ ಎಚ್. ಕೆ. ಪಾಟೀಲರಿಗೆ ಅಲ್ಲಿನ ಜನರು ಮಳೆ ಬಂದಾಗ ಇಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಕೆಸರು ಮಯವಾಗುತ್ತದೆ ಎಂದಿದ್ದರು. ಆಗ ಎಚ್. ಕೆ. ಪಾಟೀಲರು ಗಟ್ಟಿಯಾದ ಮನೆ ಹಾಗೂ ಉತ್ತಮ ರಸ್ತೆಗಳ ವ್ಯವಸ್ಥೆ ಮಾಡುತ್ತೇವೆ ಎಂದರು. ಸ್ವಲ್ಪ ದಿನಗಳ ನಂತರ ಬೆಂಗಳೂರಿನ ಗೇಟೆಡ್ ಕಮ್ಯೂನಿಟಿ ಶೈಲಿಯಲ್ಲಿ ಮನೆ ನಿರ್ಮಾಣ ಮಾಡುವ ವಿಚಾರವನ್ನು ಶಾಸಕರು ಸಭೆಯಲ್ಲಿ ಹಂಚಿಕೊಂಡರು. ಇದನ್ನರಿತ ನಗರ ಸಭೆ ಕೆಲವು ಅಭಿಯಂತರರು ಗೂಗಲ್ ನಲ್ಲಿ ಭೂಕಂಪರಹಿತ ಮನೆಗಳ ಸುದ್ದಿಗಳನ್ನು ನೋಡಿದ್ದೇವೆ. ಆ ರೀತಿ ಇಲ್ಲಿ ಮಾಡಬಹುದೇ ಎಂದು ವಿಚಾರಿಸುತ್ತಿದ್ದರು. ಈ ಮಾತು ಶಾಸಕರಿಗೂ ತಿಳಿಯಿತು. ಆಗ ಅವರು ಭೂಕಂಪರಹಿತ ಮನೆಗಳನ್ನೇ ಕಟ್ಟೋಣ, ಹೆಚ್ಚು ಖರ್ಚಾದರೂ ಪರವಾಗಿಲ್ಲ, ಯೋಜನೆಯ ಅನುಷ್ಠಾನಕ್ಕೆ ಮುಂದಾಗಿ ಎಂದು ಹಸಿರು ನಿಶಾನೆ ತೋರಿದರು. ಇದರ ಫಲವೇ ಈಗ ಭೂಕಂಪರಹಿತ ಮನೆಗಳು ಸಿದ್ಧವಾಗುತ್ತಿವೆ. ಒಟ್ಟು 36,000 ಮನೆಗಳು ಸಿದ್ಧವಾಗಲಿವೆ. ಈಗಾಗಲೆ 2,000 ಮನೆಗಳು ಅಂತಿಮ ರೂಪಕ್ಕೆ ಬಂದಿದ್ದು ಉಳಿದವು ಪ್ರಾರಂಭಿಕ ಹಂತದಲ್ಲಿವೆ.

ಏನಿದು ವಿಶಿಷ್ಟ ತಂತ್ರಜ್ಞಾನ?
ಈ ಮನೆಗಳನ್ನು ಕಟ್ಟಲು ಮೊನೊಲಿಥಿಕ್ ಶೀರ್ ವಾಲ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರ ಪ್ರಕಾರ ಭೂಕಂಪವಾದರೆ ಎಲ್ಲ ಮನೆಗಳ ಗೋಡೆಗಳು ಒಟ್ಟಿಗೆ ಸರಿದಾಡುತ್ತವೆ ಅಂದರೆ ಬೀಳುವುದಿಲ್ಲ. ಈ ಎಲ್ಲ ಮನೆಗಳು ಅಂದರೆ ನಾಲ್ಕು ಫ್ಲ್ಯಾಟುಗಳ ಒಂದು ಸಾಲಿನ ಕೆಳಗಡೆ ಕಟ್ಟುವಾಗ ಉದ್ದವಾದ ಬೀಮ್ ಗಳನ್ನು ಅಳವಡಿಸಲಾಗುತ್ತದೆ. ಉದ್ದುದ್ದ ಬೀಮ್ ಗಳ ಮೇಲೆ ನಾಲ್ಕು ಫ್ಲ್ಯಾಟುಗಳನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ಭೂಕಂಪವಾದರೂ ಮನೆಗಳಿಗೆ ಹಾನಿಯಾಗಲ್ಲ. ಈ ರೀತಿ ತಂತ್ರಜ್ಞಾನ ಬಳಸಿದ್ದು ಗದಗ್ ನಲ್ಲೂ ಹಾಗು ಉತ್ತರ ಕರ್ನಾಟಕದಲ್ಲೂ ಇದೇ ಮೊದಲು ಎಂಬ ಅಭಿಪ್ರಾಯವನ್ನು ನಗರ ಸಭೆ ಅಧಿಕಾರಿಗಳು ‘ಪ್ರತಿಧ್ವನಿ’ ತಂಡಕ್ಕೆ ತಿಳಿಸಿದರು.
ಗದಗ್ ನಲ್ಲಿ ಭೂಕಂಪವಾಗುತ್ತದೆಯೇ?
ಈ ಮನೆಗಳನ್ನು ನೋಡಿದಾಗ ಅಥವಾ ಇದರ ಸುದ್ದಿ ಕೇಳಿದಾಗ ಈ ಪ್ರಶ್ನೆ ಹಲವರ ಮನದಲ್ಲಿ ಸುಳಿದಿದ್ದು ನಿಜ. ಆದರೆ ಗದಗ್ ನಲ್ಲಿ ಇವರೆಗೆ ಭೂಕಂಪ ಹಾನಿ ಮಾಡುವಷ್ಟು ಸಂಭವಿಸಿಲ್ಲ. ಆದರೆ ಲೆಕ್ಕವಿಲ್ಲದಷ್ಟು ಬೆಳೆಯುತ್ತಿರುವ ಈ ನಗರಕ್ಕೆ ಸುರಕ್ಷತೆ ಇರಲಿ ಎಂಬ ಕಾರಣಕ್ಕೆ ಈ ಮನೆಗಳು ಮಾದರಿಯಾಗಲಿವೆ ಎಂಬುದು ಅಧಿಕಾರಿಗಳ ಅಂಬೋಣ.
ಬಡವರಿಗೆ ಯಾವಾಗ ಸಿಗಲಿವೆ?
ಮೊದಲನೆಯ ಹಂತದಲ್ಲಿ ಎರಡು ಸಾವಿರ ಮನೆಗಳನ್ನು ಆಗಸ್ಟ್ 15 ಕ್ಕೆ ಕೊಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಈ ಮನೆಗಳ ನಿರ್ಮಾಣಕ್ಕೆ ಸಮಯ ಜಾಸ್ತಿ ಬೇಕಾಗಿದ್ದರಿಂದ ಎರಡು ತಿಂಗಳು ವಿಳಂಬವಾಗಲಿದೆ ಎಂದು ಗದಗ್ ನಗರಸಭೆ ಅಧಿಕಾರಿಗಳು ತಿಳಿಸಿದರು.
ಬೆಂಗಳೂರಿನ ಗೇಟೆಡ್ ಕಮ್ಯೂನಿಟಿ ರೀತಿ ಬರಲಿವೆ ಈ ಮನೆಗಳು
ಈ ಎಲ್ಲ ಮನೆಗಳು ಬೆಂಗಳೂರಿನ ಗೇಟೆಡ್ ಕಮ್ಯೂನಿಟಿ ರೀತಿ ಬರಲಿವೆ. ಪ್ರವೇಶ ಬಾಗಿಲನ್ನು ದೊಡ್ಡದಾಗಿ ಮಾಡಲಿದ್ದು, ಮನೆಯಲ್ಲಿರುವ ಎಲ್ಲ ಮಾಲೀಕರ ಹೆಸರನ್ನು ಬೋರ್ಡನಲ್ಲಿ ಬರೆಯಲಾಗುತ್ತದೆ. ಇದರಿಂದ ಪಾರದರ್ಶಕತೆ ಇರಲಿದ್ದು ಈ ಮಾಲೀಕರು ಬೇರೆ ಯೋಜನೆ ಅಥವಾ ಇನ್ನೊಂದು ಮನೆಗೆ ಅರ್ಜಿ ಹಾಕುವುದನ್ನು ತಪ್ಪಿಸಿದಂತಾಗುತ್ತದೆ. ಜೊತೆಗೆ ಇಲ್ಲಿ ಒಬ್ಬ ಸೆಕ್ಯೂರಿಟಿ ಗಾರ್ಡ ಅನ್ನು ನೇಮಿಸಿ ಅವರ ಸಂಬಳ ವನ್ನು ಎಲ್ಲರ ಕಡೆಯಿಂದ ಸಂಗ್ರಹಿಸಿದ ಹಣದಿಂದ ಕೊಡಮಾಡುವ ವ್ಯವಸ್ಥೆ ಬಗ್ಗೆ ಚಿಂತನೆ ನಡೆದಿದೆ. ಪ್ರತಿ ಮನೆಗಳನ್ನೂ ಉತ್ತಮ ಗುಣಮಟ್ಟದ ಸಾಮಗ್ರಿಗಳಿಂದ ಕಟ್ಟಲಾಗುತ್ತಿದ್ದು, ಹೈ ಟೆಕ್ ಲುಕ್ ರೀತಿ ಪೇಂಟಿಂಗ್ ಮಾಡಿಸಲಾಗುತ್ತದೆ ಎಂದು ನಗರ ಸಭೆಯ ಅಧಿಕಾರಿಗಳು ತಿಳಿಸಿದರು.
ಶರಣಪ್ಪ ನರಗುಂದ, ಮನೆಗೆ ಅರ್ಜಿ ಹಾಕಿದವರಲ್ಲೊಬ್ಬರು, “ನಮಗೆ ಈ ಮನೆಗಳು ಸಿಗುತ್ತವೆ ಎಂದು ಕೇಳಿದೊಡನೆ ಖುಷಿಯಾಯಿತು. ಈ ಮನೆಗಳು ಭೂಕಂಪವಾದರೂ ಏನಾಗುವುದಿಲ್ಲ ಹಾಗೂ ಸಂಕೀರ್ಣ ರೀತಿಯಲ್ಲಿ ಕಟ್ಟುವುದನ್ನು ನೋಡಿದಾಗ ಮನದಲ್ಲೇ ಇದನ್ನು ಕಾರ್ಯಗತ ಮಾಡಿದವರೆಲ್ಲರಿಗೂ ವಂದಿಸಿದೆವು. ಆದರೂ ಈ ಮನೆ ಯಾರಿಗೆಲ್ಲಾ ಸಿಗುತ್ತವೆ ಎಂಬುದಿನ್ನು ಗೊತ್ತಾಗಿಲ್ಲ. ಒಟ್ಟು 36,000 ಮನೆಗಳು ತಯಾರಾಗುತ್ತಿವೆ. ಅದರಲ್ಲಿ ನಾನು ಮತ್ತು ನನ್ನ ಕೆಲ ಸ್ನೇಹಿತರೂ ಇರಲಿ ಎಂಬುದು ನನ್ನ ಮನದಾಸೆ. ಹಾಗೆಯೇ ಅವಶ್ಯವಿದ್ದರಿಗೆ ಮಾತ್ರ ಈ ಮನೆಗಳು ಸಿಗಲಿ. ಒತ್ತಡವಿಲ್ಲದೇ ಬಡವರಿಗೆ ಸೂರು ಸಿಗಲಿ ಎಂಬುದಷ್ಟೇ ನಮ್ಮೆಲ್ಲರ ಕೋರಿಕೆ”.