ರಾಜ್ಯ ಸರ್ಕಾರ ತಂದಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷನಾಯಕ ಸಿದ್ಧರಾಮಯ್ಯ, ಬಡವರಿಂದ ಜಮೀನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವುದೇ ಸರ್ಕಾರದ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸುಗ್ರೀವಾಜ್ಞೆ ಮಾಡದು ಎಂದುಕೊಂಡಿದ್ದೆ. ರಾಜ್ಯ ಸರ್ಕಾರ ಇಂತಹ ಸಂಧರ್ಭವನ್ನು ತನ್ನ ಸರ್ವಾಧಿಕಾರ ಪ್ರದರ್ಶಿಸಲು ಬಳಸುತ್ತಿದೆ. ಸರ್ಕಾರ ತಿದ್ದುಪಡಿ ತರಲು ಹೊರಟಿರುವ ಭೂಸುಧಾರಣೆ ಕಾಯ್ದೆ, ರೈತರ, ಕೂಲಿಕಾರ್ಮಿಕರ, ಹಿಂದುಳಿದವರ ವಿರೋಧಿಯಾದಂತಹ ತಿದ್ದುಪಡಿಯ ಸುಗ್ರೀವಾಜ್ಞೆ ಹೊರಡಿಸಿರುವ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ ಎಂದು ಹೇಳಿದ್ದಾರೆ.
ಭೂಸುಧಾರಣೆ ಕಾಯ್ದೆ(1961)ಗೆ 1974ರಲ್ಲಿ ದೇವರಾಜ ಅರಸು ಅವರು ಸೆಕ್ಷನ್ 63, ಸೆಕ್ಷನ್ 79 ಎ , ಸೆಕ್ಷನ್ 79 ಬಿ ,ಸೆಕ್ಷನ್ 79 ಸಿ ಹಾಗೂ ಸೆಕ್ಷನ್ 80 ಇವುಗಳನ್ನು ಸೇರ್ಪಡೆಗೊಳಿಸಿ ಪ್ರಗತಿಪರವಾದ, ಸಾಮಾಜಿಕ ನ್ಯಾಯದಿಂದ ಕೂಡಿದಂತಹ ಕ್ರಾಂತಿಕಾರಕ ನಿರ್ಣಯ ತೆಗೆದುಕೊಂಡರು. ʼಉಳುವವನೇ ಹೊಲದೊಡೆಯʼ ಎಂಬ ಘೋಷವ್ಯಾಕ್ಯದಂತೆ ಗೇಣಿಗೆ ಹೊಲ ಉಳುತ್ತಿದ್ದ ರೈತರಿಗೆ ಗೇಣಿ ಮಾಡುತ್ತಿದ್ದಂತಹ ಜಮೀನಿನ ಮಾಲಿಕತ್ವದ ಹಕ್ಕು ನೀಡಿದ್ದರು.
ತಿದ್ದುಪಡಿಯಲ್ಲಿ ಹಲವು ಕ್ರಾಂತಿಕಾರಕ ನಿಲುವು ತೆಗೆದುಕೊಳ್ಳಲಾಗಿತ್ತು. ಅದರಂತೆ ಕೃಷಿ ಭೂಮಿಯನ್ನು ರೈತರಲ್ಲದವರು ಯಾರೂ ಖರೀದಿ ಮಾಡದಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಸೆಕ್ಷನ್ 79 (ಎ) ಪ್ರಕಾರ ಜಮೀನುದಾರರಿಗೆ ಕೃಷಿಯೇತರ ಆದಾಯ 25 ಲಕ್ಷಕ್ಕಿಂತ ಮೀರಿರಬಾರದು. ಸೆಕ್ಷನ್ 79 (ಬಿ) ಪ್ರಕಾರ ರೈತರಲ್ಲದೆ ಬೇರೆ ಯಾರೂ ಕೂಡ ಕೊಂಡುಕೊಳ್ಳುವಂತಿಲ್ಲ,ಸೆಕ್ಷನ್ 79 (ಸಿ) ಸಲ್ಲಿಸಿದ ಅಫಿಡವಿಟ್‌ನಲ್ಲಿ ಸುಳ್ಳು ಕಂಡುಬಂದರೆ ಶಿಕ್ಷೆಗೆ ಒಳಪಡಿಸಬಹುದು, ಸೆಕ್ಷನ್ 80 ಪ್ರಕಾರ ಕೃಷಿಕರಲ್ಲದಿರೋರು ಕೊಂಡುಕೊಳ್ಳಕೂಡದು.

1974ರಲ್ಲಿ ಅರಸು ಅವರು ತಂದಿದ್ದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಅಂತಹ ಪ್ರಗತಿಪರವಾದ ನಿರ್ಣಯವನ್ನು ಕರ್ನಾಟಕ ರಾಜ್ಯ ಸರ್ಕಾರ ಈಗ ರದ್ದು ಗೊಳಿಸುತ್ತಿದೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ 118ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ..? ರೈತರು ಅಷ್ಟು ಜಮೀನು ತೆಗೆದುಕೊಳ್ಳುತ್ತಾರಾ..? ಇದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಹೀಗಾದರೆ ಆಹಾರ ಉತ್ಪಾದನೆ, ಆಹಾರ ಸ್ವಾವಲಂಬನೆ ಏನಾಗಬೇಕು ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಟೀಕಿಸಿದ ವಿಪಕ್ಷ ನಾಯಕ, ಮುಖ್ಯ ಕಾರ್ಯದರ್ಶಿಗೆ ಲೆಕ್ಕ ಕೊಡಿ ಎಂದು ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಎರಡು ಮೂರು ದಿನಗಳಲ್ಲಿ ಲೆಕ್ಕ ಕೊಡುವುದಾಗಿ ಅವರು ಹೇಳಿದ್ದಾರೆ. ಲೆಕ್ಕ ಕೊಟ್ಟ ಬಳಿಕ ಮತ್ತೆ ನಿಮ್ಮ ಮುಂದೆ ಬರುತ್ತೇನೆ ಎಂದು ಪತ್ರಕರ್ತರೊಂದಿಗೆ ಹೇಳಿದ್ದಾರೆ.
ಇನ್ನು ಕೋವಿಡ್ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ಟೀಕಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರೋಗ ತಡೆಗಟ್ಟಲು ಸೂಕ್ತ ನಿರ್ಣಯಗಳನ್ನು ಕೈಗೊಂಡಿಲ್ಲ. ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲಗೊಂಡಿದೆ, ಬಿಬಿಎಂಪಿ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದಾರೆ.













