ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿತ್ತು. ಈ ಆರ್ಥಿಕ ವರ್ಷದ ಲೆಕ್ಕಾಚಾರವನ್ನು ನರೇಂದ್ರ ಮೋದಿ ಸಂಪುಟದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಎದುರು ಬಜೆಟ್ ಮೂಲಕ ತೆರೆದಿಟ್ಟಿದ್ದಾರೆ. ಬಜೆಟ್ ಮಂಡನೆ ಬಳಿಕ ಬಿಜೆಪಿ ಪಕ್ಷದ ನಾಯಕರು ಉಘೇ ಉಘೇ ಎಂದರೆ, ವಿರೋಧ ಪಕ್ಷದ ನಾಯಕರುಗಳು ಮಾತ್ರ ಕೇಂದ್ರ ಬಜೆಟ್ನಲ್ಲಿ ಆರ್ಥಿಕ ದೂರದೃಷ್ಟಿಯಿಲ್ಲ ಎಂದು ಟೀಕಿಸಿದ್ದರು. ಆ ಬಜೆಟ್‌ನಲ್ಲಿ ಹೇಳಿರುವ ಮಾಹಿತಿಗೂ ಅಸಲಿ ಇರುವ ಅಂಕಿ ಅಂಶಗಳಿಗೂ ತುಂಬಾ ವ್ಯತ್ಯಾಸ ಇದೆ ಎನ್ನುವುದು ಗೊತ್ತಾಗಿತ್ತು. ಬಜೆಟ್ ಭಾಷಣದಲ್ಲಿ ಹೇಳಿದ ಅನುದಾನ ಮಾಹಿತಿಗೂ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಿದ್ದ ಅಂಶಕ್ಕೂ ತಾರತಮ್ಯವಿತ್ತು. ರಾಷ್ಟ್ರೀಯ ಮಾಧ್ಯಮ ಗಮನಸೆಳೆದ ಬಳಿಕ ತಿದ್ದುಪಡಿ ಮಾಡಿ ಸರಿಪಡಿಸಲಾಗಿತ್ತು. ಇದೀಗ ಕರ್ನಾಟಕಕ್ಕೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೋಸ ಮಾಡಿದೆ ಎನ್ನುವ ಅಂಶ ಬಯಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2020ರ ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ದೇಶ, ವಿದೇಶದಿಂದಲೂ ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ ಸೇರಿದಂತೆ ಸಾಕಷ್ಟು ಸೌಕರ್ಯಗಳಿಗಾಗಿ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಜನಸಂದಣಿ ಹೆಚ್ಚಾದಂತೆಲ್ಲಾ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವೇ ಕಿಲೋ ಮೀಟರ್ ಸಂಚಾರಕ್ಕೆ ಗಂಟೆಗಳ ಕಾಲ ಕಾಯುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮೆಟ್ರೋ ಸ್ವಲ್ಪ ಸಹಾಯವಾಗಿದ್ದರೆ, ಸಬ್ಅರ್ಬನ್ ರೈಲು ಟ್ರಾಫಿಕ್ ಕಿರಿಕಿರಿಗೆ ಸಂಪೂರ್ಣವಾಗಿ ಮುಕ್ತಿ ನೀಡಲಿದೆ ಎನ್ನಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಅನುದಾನದಲ್ಲಿ ಭಾರಿ ಮೊತ್ತಕ್ಕೆ ಕತ್ತರಿ ಹಾಕಿದೆ. ಈ ಮೊದಲು ಯೋಜನೆಗೆ 18,600 ಕೋಟಿ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಅಸಲಿಗೆ ಕೊಟ್ಟಿರೋದು 1 ಕೋಟಿ ರೂಪಾಯಿ ಮಾತ್ರ ಎನ್ನುವ ಅಂಶ ಪಿಂಕ್ ಬುಕ್‌ನಲ್ಲಿ ಬಯಲಾಗಿದೆ. 2018ರಲ್ಲಿ ಯೋಜನೆ ಘೋಷಣೆ ಮಾಡಿದಾಗ 2018-19ನೇ ಸಾಲಿನಲ್ಲಿ ಕೊಟ್ಟಿರುವುದು ಕೇವಲ 1 ಕೋಟಿ, 2019-20ನೇ ಸಾಲಿನಲ್ಲಿ ಕೊಟ್ಟಿರುವುದು ಕೇವಲ 10 ಕೋಟಿ, ಇದೀಗ 2020-2021ನೇ ಸಾಲಿನಲ್ಲಿ ಕೊಡುವುದು ಕೇವಲ 1 ಕೋಟಿ ಎನ್ನುವ ಮಾಹಿತಿ ಕರುನಾಡಿನ ಜನರನ್ನು ಬೆಚ್ಚಿ ಬೀಳಿಸಿದೆ. 1 ಕೋಟಿ ಹಣವನ್ನು ಟೋಕನ್ ಅಮೌಂಟ್ ಎಂದು ಕೊಟ್ಟಿದ್ದು, ಸಂಪೂರ್ಣ ಯೋಜನೆ ಸಿದ್ಧವಾದ ಮೇಲೆ ಬಾಕಿ ಹಣ ಕೊಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ?
ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಜೊತೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 2ನೇ ಶಾಕ್ ನೀಡಿದೆ. ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿತ್ತು. ಆದರೆ ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ವರ್ಕ್ ಶಾಪ್ ಸ್ಥಾಪನೆ ಮಾಡಲು ಮುಂದಾಗಿದೆ. ರೈಲ್ವೆ ಬಜೆಟ್‌ನ ಪಿಂಕ್ ಬುಕ್‌ನಲ್ಲಿ ಈ ಮಾಹಿತಿ ಕೂಡ ಬಹಿರಂಗವಾಗಿದೆ. ಕೇಂದ್ರದ ನಿರ್ಧಾರದಿಂದ ಕರ್ನಾಟಕದ ಯುವಕರಿಗೆ ಉದ್ಯೋಗ ಖೋತಾ ಆಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿನ ಉದ್ಯೋಗ ಸೃಷ್ಟಿಸುವ ಆಸೆಗೆ ಕಲ್ಲು ಬಿದ್ದಂತಾಗಿದೆ. ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ನಿರ್ಮಾಣವಾಗಿದ್ದರೆ ಬರೋಬ್ಬರಿ 5 ಸಾವಿರ ಯುವಕರಿಗೆ ಉದ್ಯೋಗ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಇದೀಗ ರೈಲ್ವೆ ವರ್ಕ್ ಶಾಪ್ ನಿರ್ಮಾಣದಿಂದ ಕೇವಲ 2 ಸಾವಿರ ಉದ್ಯೋಗ ಅಷ್ಟೇ ಸೃಷ್ಟಿಯಾಗಲಿದೆ ಎನ್ನಲಾಗಿದೆ. ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,460 ಕೋಟಿ ರೂಪಾಯಿ ಯೋಜನೆ ಹಾಕಿಕೊಂಡಿತ್ತು. ಮೋದಿ ಸರ್ಕಾರ ದೊಡ್ಡ ಯೋಜನೆಗೆ ಎಳ್ಳು ನೀರು ಬಿಟ್ಟು ಕೇವಲ 495 ಕೋಟಿ ರೂಪಾಯಿಯ ಯೋಜನೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಜನಸಾಮಾನ್ಯರಿಗೆ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡ ನಿರ್ಮಲಾ
ನರೇಂದ್ರ ಮೋದಿ ಸರ್ಕಾರದ ಮೋಸದ ಬಗ್ಗೆ ತಿಳಿಯುತ್ತಿದ್ದ ಹಾಗೆ ಬಿಜೆಪಿ ಸಂಸದ ಮುನಿಸ್ವಾಮಿ ಸಮರ್ಥನೆಗೆ ಮುಂದಾಗಿದ್ದಾರೆ. ರೈಲ್ವೆ ಕೋಚ್ ಫ್ಯಾಕ್ಟರಿಗೆ ಕತ್ತರಿ ಬೀಳುತ್ತಿದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಂಸದ ಮುನಿಸ್ವಾಮಿ ಕೋಲಾರ ಜನತೆಗೆ ಅನ್ಯಾಯ ಆಗೋದಿಲ್ಲ, ದೇಶದಲ್ಲಿ ಸಾಕಷ್ಟು ಕೋಚ್ ಫ್ಯಾಕ್ಟರಿಗಳಿವೆ. ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ನಿರ್ಮಾಣವಾದರೂ ಉದ್ಯೋಗ ನಷ್ಟವಾಗಲ್ಲ ಎಂದಿದ್ದಾರೆ. ಹಿಂದೆ ಇರಿಸಿದ್ದ ಅನುದಾನ 900 ಕೋಟಿ ರೂಪಾಯಿ ಹಾಗೆ ಇದೆ. ಅದನ್ನು ವರ್ಕ್ ಶಾಪ್ ಯೋಜನೆಗೆ ಬಳಸಲಾಗುತ್ತೆ. ಶೀಘ್ರದಲ್ಲಿ ಯೋಜನೆ ಪ್ರಾರಂಭವಾಗಲಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರ ಕೋಚ್ ಫ್ಯಾಕ್ಟರಿ ಬದಲಿಗೆ ವರ್ಕ್ ಶಾಪ್ ಮಾಡುವ ನಿರ್ಧಾರವನ್ನು ಧೃಢೀಕರಿಸಿದ್ದಾರೆ. ಒಟ್ಟಾರೆ ಕಳೆದ 7 ವರ್ಷಗಳ ಹಿಂದೆ ಘೋಷಣೆಯಾಗಿದ್ದ ರೈಲ್ವೆ ಕೋಚ್ ಫ್ಯಾಕ್ಟರಿಗೆ ಮೋದಿ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಅಷ್ಟೇ ಅಲ್ಲ ಬೆಂಗಳೂರಿನ ಜನರು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಾತುರದಿಂದ ಕಾಯುತ್ತಿರುವ ಸಬ್ ಅರ್ಬನ್ ರೈಲು ಯೋಜನೆಗೂ ತುಪ್ಪ ಸವರುವ ಕೆಲಸ ಮಾಡಿದೆ.