ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆ. 3ರಿಂದ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರ ಕಸ್ಟಡಿ ಅವಧಿಯನ್ನು ಇ ಡಿ ವಿಶೇಷ ನ್ಯಾಯಾಲಯ ಸೆ. 17 ರವರೆಗೆ ವಿಸ್ತರಿಸಿದೆ. ಈ ಮಧ್ಯೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೆ. 16ಕ್ಕೆ ಮುಂದೂಡಿದೆ. ಅವರ ಬಿಡುಗಡೆಗಾಗಿ ಮಾಡಿದ ಪೂಜೆ, ಪುನಸ್ಕಾರಗಳು ಪ್ರಯೋಜನವಿಲ್ಲದಂತಾಗಿದೆ. ಇಡಿ ವಶದಿಂದ ಹೊರಬರುತ್ತಾರೆ ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಅಂದರೆ, ಪ್ರಕರಣ ಎಲ್ಲರೂ ಅಂದುಕೊಂಡದ್ದಕ್ಕಿಂತಲೂ ಗಂಭೀರವಾಗಿದೆ ಎಂಬುದು ಇಲ್ಲಿ ಸ್ಪಷ್ಟ.
ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ಶಿವಕುಮಾರ್ ಪರ ವಕೀಲರ ವಾದ ಮಂಡನೆಯ ವೈಖರಿಯೇ ಪ್ರಕರಣ ಎಷ್ಟೊಂದು ಗಂಭೀರವಾಗುತ್ತಿದೆ ಎಂಬುದನ್ನು ಹೇಳುತ್ತದೆ. ಶಿವಕುಮಾರ್ ಅವರನ್ನು ಬಂಧಿಸಿದ್ದ ಇಡಿ ಅಧಿಕಾರಿಗಳು ಸೆ. 4ರಂದು ನ್ಯಾಯಾಲಯಕ್ಕೆ ಕರೆತಂದು ತಮ್ಮ ವಶಕ್ಕೆ ನೀಡುವಂತೆ ಕೋರಿಕೆ ಸಲ್ಲಿಸಿದಾಗ, ಕೇಂದ್ರ ಸರ್ಕಾರವನ್ನು ನಾಯಿಗೂ, ಇಡಿ ಅಧಿಕಾರಿಗಳನ್ನು ನಾಯಿ ಬಾಲಕ್ಕೂ ಹೋಲಿಸಿ ನಾಯಿ ಹೇಳಿದಂತೆ ಬಾಲ ಕೇಳುತ್ತದೆ. ಇಡಿ ಪರ ವಕೀಲರು ತಲೆಯನ್ನೇ ಉಪಯೋಗಿಸುತ್ತಿಲ್ಲ ಎಂದು ಆಕ್ರಮಣಕಾರಿಯಾಗಿ ವಾದ ಮಂಡಿಸಿದ್ದ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಯಾವುದೇ ಕಾರಣಕ್ಕೂ ಅವರನ್ನು ಇಡಿ ವಶಕ್ಕೆ ಒಪ್ಪಿಸಬಾರದು ಎಂದು ಕೋರಿದ್ದರು. ಆದರೆ, ಅದೇ ವಕೀಲರು ಶುಕ್ರವಾರ, ಡಿ. ಕೆ. ಬಸು ಕಸ್ಟೋಡಿಯಲ್ ಡೆತ್ ಪ್ರಕರಣವನ್ನು ಮುಂದಿಟ್ಟುಕೊಂಡು ಅನಾರೋಗ್ಯದಿಂದ ಬಳಲುತ್ತಿರುವ ಡಿ. ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ಕೋರಿದ್ದಾರೆ. ಇಡಿ ಅಧಿಕಾರಿಗಳ ಬಳಿ ಇರುವ ದಾಖಲೆಗಳು ಶಿವಕುಮಾರ್ ಮಾತ್ರವಲ್ಲ, ಅವರ ವಕೀಲರನ್ನೂ ತಣ್ಣಗೆ ಮಾಡಿದೆ.
Also Read: ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಡಿಕೆಶಿ ಬಂಧನಕ್ಕೆ ಕಾರಣವೇ ಅಲ್ಲ!
ಇಷ್ಟಕ್ಕೆಲ್ಲಾ ಕಾರಣ ಇಡಿ ಅಧಿಕಾರಿಗಳು ನ್ಯಾಯಾಲಯದಲ್ಲೇ ಶಿವಕುಮಾರ್ ಅವರ ಆಸ್ತಿ ಕುರಿತಂತೆ ನೀಡಿರುವ ಮಾಹಿತಿ. ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾದ 8.59 ಕೋಟಿ ರೂ. ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬಗೆದಷ್ಟೂ ಬಯಲಾಗುತ್ತಿದೆ ಎಂಬಂತೆ ಶಿವಕುಮಾರ್ ಅವರ ಬೇನಾಮಿ ವ್ಯವಹಾರಳು ಕಂತೆಗಟ್ಟಲೆ ಬೆಳಕಿಗೆ ಬರುತ್ತಿವೆ. ಇದರಲ್ಲಿ ಎಷ್ಟು ಸತ್ಯವೋ? ಯಾವುದಕ್ಕೆಲ್ಲಾ ದಾಖಲೆಗಳಿಲ್ಲ? ಇಡಿ ಮಾಡಿದ ಅಧಿಕಾರಿಗಳು ಮಾಡಿದ ಆರೋಪಗಳೆಲ್ಲವೂ ನಿಜವೇ? ಎಂಬುದು ನ್ಯಾಯಾಲಯದ ವಿಚಾರಣೆ ಬಳಿಕ ಗೊತ್ತಾಗಬೇಕು. ಆದರೆ, ಸದ್ಯಕ್ಕಂತೂ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಮಾತ್ರ ಆಘಾತಕಾರಿ. ಅಷ್ಟೇ ಅಲ್ಲ, ‘It is a classic case of money laundering’ ಎಂಬ ಇಡಿ ಪರ ವಕೀಲರ ಹೇಳಿಕೆ ಈ ತನಿಖೆ ಅಕ್ರಮದ ಮತ್ತೊಂದು ಮಜಲನ್ನು ಬಹಿರಂಗಪಡಿಸುವ ಮುನ್ಸೂಚನೆ ನೀಡಿದೆ.

ಡಿಕೆಶಿ ಪರ ವಕೀಲರನ್ನು ತಣ್ಣಗಾಗಿಸಿತೇ ಇಡಿ ಮಾಹಿತಿ
ಇಡಿ ಪರ ವಕೀಲರು ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಪ್ರಕಾರ ಡಿ. ಕೆ. ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ನಡೆಸುತ್ತಿರುವ ತನಿಖೆ ದೆಹಲಿಯ ಫ್ಲಾಟ್ ಗಳಲ್ಲಿ ಪತ್ತೆಯಾದ 8.59 ಕೋಟಿ ರೂಪಾಯಿಗೆ ಸಂಬಂಧಿಸಿದ್ದಷ್ಟೇ ಅಲ್ಲ. ಅವರ ಬೇನಾಮಿ ಆಸ್ತಿಯ ಮೂಲಕ್ಕೇ ತನಿಖಾಧಿಕಾರಿಗಳು ಕೈ ಹಾಕಿದ್ದಾರೆ. 800 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಇದು ಘೋಷಿತ ಆಸ್ತಿಯಾದರೂ ಆ ಆಸ್ತಿ ಸಂಪಾದಿಸಿದ್ದು ಹೇಗೆ ಯಾವ ಮೂಲಗಳಿಂದ ಸಂಪಾದಿಸಲಾಗಿದೆ ಎಂಬಿತ್ಯಾದಿ ಮಾಹಿತಿ ಸಿಗುತ್ತಿಲ್ಲ. ಸುಮಾರು 200 ಕೋಟಿ ರೂ. ಆಸ್ತಿಯ ಮೂಲವೇ ಪತ್ತೆಯಾಗುತ್ತಿಲ್ಲ (ಅದು ಅಕ್ರಮ ಆಸ್ತಿ ಎಂಬುದು ವಾದ).
ಸುಮಾರು 20 ದೇಶಗಳಲ್ಲಿ ಅವರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಅವರಿಗೆ ಸಂಬಂಧಿಸಿದ 17 ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ಇದೆ ಮತ್ತು ವರ್ಗಾವಣೆಯಾಗಿದೆ. ಈ ಖಾತೆಗಳ ಹಣದ ಮೂಲಗಳು ಪತ್ತೆಯಾಗಬೇಕಿದೆ. ಸುಮಾರು 317 ಬ್ಯಾಂಕ್ ಖಾತೆಗಳಲ್ಲಿ ಹಣದ ವಹಿವಾಟು ನಡೆಸಿದ್ದಾರೆ (ಶಿವಕುಮಾರ್ ಹೇಳುವಂತೆ ಅವರ ಹೆಸರಿನಲ್ಲಿ ಕೇವಲ ಐದು ಖಾತೆಗಳಿವೆಯಷ್ಟೆ. 317 ಖಾತೆಗಳಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ). ಬೇನಾಮಿ ಆಸ್ತಿಗಳಲ್ಲಿ ಹೂಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ. 22 ವರ್ಷದ ಅವರ ಮಗಳು 108 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಇಡಿ ವಕೀಲರು ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ.
ಸೆ. 4ರಂದು ಆಕ್ರಮಣಶೀಲತೆಯೊಂದಿಗೆ ವಾದ ಮಂಡಿಸಿದ್ದ ಶಿವಕುಮಾರ್ ಪರ ವಕೀಲರು ಶುಕ್ರವಾರ ತಣ್ಣಗಾಗಿ ಮೆರಿಟ್ ಆಧಾರದ ಮೇಲೆ ವಾದ ಮಾಡುವುದಕ್ಕಿಂತ ಶಿವಕುಮಾರ್ ಅವರ ಅನಾರೋಗ್ಯವನ್ನೇ ಪ್ರಧಾನವಾಗಿಟ್ಟುಕೊಂಡು ವಾದ ಮಂಡಿಸಲು ಬಹುಷಃ ಇಡಿ ಪರ ವಕೀಲರು ನ್ಯಾಯಾಲಯಕ್ಕೆ ನೀಡಿದ್ದ ಮಾಹಿತಿಯೇ ಕಾರಣವಾಗಿರಬೇಕು. ಏಕೆಂದರೆ, ಮೊದಲ ದಿನವೇ ಆಕ್ರಮಣಕಾರಿಯಾಗಿದ್ದವರು ನಂತರದಲ್ಲಿ ಮತ್ತಷ್ಟು ಆಕ್ರಮಣಶೀಲತೆಯೊಂದಿಗೆ ಬರುವ ಬದಲು ದಯನೀಯವಾಗಿ ಬರಲು ಕಾರಣವೇನು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಶಿವಕುಮಾರ್ ಪರ ಶುಕ್ರವಾರ ವಾದ ಮಂಡಿಸಿದ್ದ ಅಭಿಷೇಕ್ ಮನು ಸಿಂಘ್ವಿ ಆರಂಭದಲ್ಲಿ ಪ್ರಬಲ ವಾದವನ್ನೇ ಮಾಡಿದ್ದರು. ಶಿವಕುಮಾರ್ ವಿರುದ್ಧ ದೆಹಲಿಯ ಫ್ಲಾಟ್ ಗಳಲ್ಲಿ ಸಿಕ್ಕಿದ 8.59 ಕೋಟಿ ರೂ.ಗೆ ಸಂಬಂಧಿಸಿದಂತೆ ಇಡಿ ತನಿಖೆ ಆರಂಭಿಸಿತ್ತು. ನಿಗದಿತ ಪ್ರಕರಣ ಹೊರತುಪಡಿಸಿ ಇತರೆ ಪ್ರಕರಣಗಳನ್ನು ಮುಂದಿಟ್ಟು ಅನಗತ್ಯ ವಿಚಾರಣೆ ನಡೆಸುವುದು ಸರಿಯಲ್ಲ. ಈಗ ನೂರಾರು ಕೋಟಿ ಅಕ್ರಮ ಎಂದು ಹೇಳುತ್ತಿದ್ದವರು ಹಿಂದೆ ಕೇವಲ 41 ಕೋಟಿ ರೂ. ಅಕ್ರಮದ ಬಗ್ಗೆ ಮಾತ್ರ ಯಾವ ಆಧಾರದ ಮೇಲೆ ಪ್ರಸ್ತಾಪಿಸಿದ್ದರು, ಮಧ್ಯರಾತ್ರಿವರೆಗೂ ವಿಚಾರಣೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ, ಎಂದೆಲ್ಲಾ ಆರೋಪಿಸಿದ್ದರು.
ಆದರೆ, ಯಾವಾಗ ಇಡಿ ಪರ ವಕೀಲರು ನ್ಯಾಯಾಲಯದಲ್ಲಿ ಶಿವಕುಮಾರ್ ಆಕ್ರಮ ಆಸ್ತಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದರೋ ಆಗ ವಕೀಲರ ವಾದ ಸರಣಿಯೇ ಬದಲಾಯಿತು. ಎಲ್ಲಕ್ಕಿಂತ ಪ್ರಾಣ ಮುಖ್ಯ. ಪ್ರಾಣ ಉಳಿದರೆ ತಾನೆ ಉಳಿದೆಲ್ಲವೂ. ಶಿವಕುಮಾರ್ ಅವರಿಗೆ ಹೈ ಬಿ.ಪಿ, ಹೈ ಶುಗರ್ ಇದೆ. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು. ಆದ್ದರಿಂದ ಜಾಮೀನು ನೀಡದೇ ಇದ್ದರೂ ಪರವಾಗಿಲ್ಲ, ಇಡಿ ವಶಕ್ಕೆ ಒಪ್ಪಿಸಬೇಡಿ. ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿ ಎಂದು ಕೋರಿದರು. ಜತೆಗೆ ಡಿ. ಕೆ. ಬಸು ಅವರ ಕಸ್ಟೋಡಿಯಲ್ ಡೆತ್ ಪ್ರಕರಣವನ್ನು ಪ್ರಸ್ತಾಪಿಸಿ ನ್ಯಾಯಾಧೀಶರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಿದರು. ಅಷ್ಟರ ಮಟ್ಟಿಗೆ ಇಡಿ ತನಿಖೆ ಶಿವಕುಮಾರ್ ಮತ್ತು ಅವರ ಪರ ವಕೀಲರನ್ನೂ ಮೆತ್ತಗೆ ಮಾಡಿದೆ.
ಮುಂದಿನ ದಾರಿ?
ಸದ್ಯ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿಯನ್ನು ಸೆ. 17ರವರೆಗೆ (ಮಂಗಳವಾರದವರೆಗೆ) ವಿಸ್ತರಿಸಿರುವ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ. 16ಕ್ಕೆ (ಸೋಮವಾರಕ್ಕೆ) ಮುಂದೂಡಿದೆ. ಸೋಮವಾರ ಇಡಿ ಪರ ವಕೀಲರು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಿ ನ್ಯಾಯಾಧೀಶರು ಮಂಗಳವಾರವೇ ಜಾಮೀನು ಅರ್ಜಿ ಇತ್ಯರ್ಥಗೊಳಿಸಬಹುದು (ಅಂದಿಗೆ ಇಡಿ ಕಸ್ಟಡಿ ಅವಧಿಯೂ ಮುಗಿದಿರುತ್ತದೆ). ಆದರೆ, ಜಾಮೀನು ಸಿಗುವುದೋ ಅಥವಾ ನ್ಯಾಯಾಂಗ ಬಂಧನಕ್ಕೆ ಕಳುಹಿಸುತ್ತಾರೋ ಕಾದು ನೋಡಬೇಕು.