ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವಾಗಿ ಹತ್ತು ವರ್ಷಗಳಾಗಿವೆ. ಇದರ ಮಧ್ಯೆ ನಿಷೇಧ ತೆರವಿಗೆ ನೆರೆಯ ಕೇರಳ ಸರ್ಕಾರ ಸಾಕಷ್ಟು ಹರ ಸಾಹಸ ಮಾಡಿತ್ತು. ಕಾನೂನು ಹೋರಾಟದ ಮೂಲಕ ಅದು ಅಸಾಧ್ಯ ಎಂದಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಿಷೇಧ ತೆರವಿಗೆ ಪ್ರಯತ್ನಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಕೇರಳದ ಸತತ ಪ್ರಯತ್ನಕ್ಕೆ ಪೂರ್ಣ ವಿರಾಮ ಹಾಕಿದೆ. ಬಂಡೀಪುರ ರಾಷ್ಟ್ರೀಯ ಹೆದ್ದಾರಿ- 766ರಲ್ಲಿ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಜತೆಗೆ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿನ ಕೋರ್ ವಲಯಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ರಸ್ತೆಯ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಂತೆಯೂ ಹೇಳಿದೆ. ಸುಪ್ರೀಂನ ಈ ಆದೇಶಕ್ಕೆ ಮೂಲ ಕಾರಣ ವನ್ಯಜೀವಿ ಸಂರಕ್ಷಣೆ ಜತೆಗೆ ಕೇರಳಕ್ಕೆ ಸಂಪರ್ಕ ಕಲ್ಪಿಸಲು ಕರ್ನಾಟಕ ಸರ್ಕಾರ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿರುವುದು.
ಇದು ಮೇಲ್ನೋಟಕ್ಕೆ ಕರ್ನಾಟಕ ಮತ್ತು ಕೇರಳ ಸರ್ಕಾರದ ನಡುವಿನ ಕಾನೂನು ಹೋರಾಟವಾಗಿದ್ದರೂ ನಿಜವಾದ ಹೋರಾಟ ಇದ್ದುದು ಟಿಂಬರ್ ಲಾಬಿ ಮತ್ತು ವನ್ಯಜೀವಿಗಳ ಮಧ್ಯೆ. ಕೇರಳ ಸರ್ಕಾರ ಟಿಂಬರ್ ಲಾಬಿ ಪರ ನಿಂತರೆ ಕರ್ನಾಟಕ ವನ್ಯಜೀವಿಗಳ ಪರ ಇತ್ತು. ಹೀಗಾಗಿ ಈ ಕಾನೂನು ಹೋರಾಟದಲ್ಲಿ ನಿಜವಾಗಿಯೂ ಗೆದ್ದಿರುವುದು ಬಂಡೀಪುರದ ವನ್ಯಜೀವಿಗಳು.
ಒಂದೊಮ್ಮೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದರ ಜತೆಗೆ ಬಂಡೀಪುರ ಅಭಯಾರಣ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಿದರೆ ಬಂಡೀಪುರ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳು ಯಾವುದೇ ಅಪಾಯವಿಲ್ಲದೆ ಓಡಾಡಬಹುದು. ವನ್ಯಜೀವಿಗಳ ಜತೆಗೆ ಅರಣ್ಯವೂ ಇನ್ನಷ್ಟು ಅಭಿವೃದ್ಧಿ ಕಾಣಬಹುದು.
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 (ಹಿಂದೆ 212) ಮತ್ತು 67ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಅದರಲ್ಲೂ ರಾತ್ರಿ ವೇಳೆ ವಾಹನಗಳ ಸಂಚಾರದಿಂದ ವನ್ಯಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿದ್ದವು. ಇದನ್ನು ತಡೆಗಟ್ಟಲು ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲೂ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಬೇಕು ಎಂದು ಹುಲಿ ಯೋಜನೆ ನಿರ್ದೇಶಕರಾಗಿದ್ದ ರಾಜು ಅವರು 2009ರಲ್ಲಿ ಆಗಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ 2009 ಜೂ.3ರಂದು ರಾತ್ರಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದರು. ಆ ನಂತರದಲ್ಲಿ ಬಂಡೀಪುರದಲ್ಲಿ ವನ್ಯಜೀವಿಗಳು ಅಪಘಾತದಲ್ಲಿ ಸಾವನ್ನಪ್ಪುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು.

ಟಿಂಬರ್ ಲಾಬಿಗೆ ಮಣಿಯದ ರಾಜ್ಯ
ಈ ರಸ್ತೆ ಕೇರಳದ ಜತೆಗೆ ತಮಿಳುನಾಡಿಗೂ ಸಂಪರ್ಕ ಕಲ್ಪಿಸುತ್ತದೆಯಾದರೂ ತಮಿಳುನಾಡು ಸರ್ಕಾರ ರಾತ್ರಿ ಸಂಚಾರ ನಿಷೇಧಕ್ಕೆ ಸಮ್ಮತಿ ಸೂಚಿಸಿತ್ತು. ಆದರೆ, ಕೇರಳ ಸರ್ಕಾರ ಮಾತ್ರ ಆರಂಭದಿಂದಲೇ ವಿರೋಧಿಸುತ್ತಾ ಬಂದಿತ್ತು. ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಕೇಂದ್ರ ಸರ್ಕಾರದ ಮೇಲೂ ಒತ್ತಡ ತರುತ್ತಿತ್ತು. ಕೇರಳದ ಈ ಪ್ರಯತ್ನಕ್ಕೆ ಪ್ರಮುಖ ಕಾರಣ ಟಿಂಬರ್ ಲಾಬಿ. ಬಂಡೀಪುರ ಮೂಲಕ ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಭಾಗವಿಡೀ ಅರಣ್ಯ ಪ್ರದೇಶಗಳಿಂದ ಕೂಡಿದ್ದು, ರಾತ್ರಿ ವೇಳೆ ಅಕ್ರಮ ಟಿಂಬರ್ ವಹಿವಾಟು ಹೇರಳವಾಗಿ ನಡೆಯುತ್ತಿತ್ತು. ಆದರೆ, ರಾತ್ರಿ ವಾಹನ ಸಂಚಾರ ನಿಷೇಧದಿಂದ ಟಿಂಬರ್ ವಹಿವಾಟಿಗೆ ಕಡಿವಾಣ ಬಿದ್ದಿತ್ತು. ಇದು ಕೇರಳದ ಟಿಂಬರ್ ಉದ್ಯಮಿಗಳ ಕಣ್ಣು ಕೆಂಪಗಾಗಿಸಿದ್ದು, ಅಲ್ಲಿನ ಸರ್ಕಾರದ ಮೂಲಕ ನಿಷೇಧ ತೆರವಿಗೆ ಸತತ ಒತ್ತಡ ಹೇರಿದ್ದರು.
ರಾತ್ರಿ ನಿಷೇಧ ಹೇರಿದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ನಂತರ ಬಂದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರ ಮೇಲೆ ನಿಷೇಧ ತೆರವಿಗೆ ಸಾಕಷ್ಟು ಒತ್ತಡ ಹೇರಿದ್ದ ಕೇರಳ ಸರ್ಕಾರ, ಮುಖ್ಯಮಂತ್ರಿಗಳ ನೇತೃತ್ವದಲ್ಲೇ ನಿಯೋಗದ ಮೂಲಕ ಬಂದು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಒಬ್ಬ ಸಚಿವರ ಮೂಲಕವೇ (ಕೇರಳ ಮೂಲದವರು) ನಿಷೇಧ ತೆರವಿಗೆ ಪ್ರಯತ್ನಿಸಿತ್ತು. ಆ ಸಚಿವರು ಹೈಕಮಾಂಡ್ ಮೂಲಕ. ಒತ್ತಡ ತಂದರೂ ಸಿದ್ದರಾಮಯ್ಯ ಮಾತ್ರ ಅದಕ್ಕೆ ಮಣಿಯಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ಇದೇ ಪರಿಸ್ಥಿತಿ ಎದುರಾಯಿತಾದರೂ ಅವರೂ ಮಣಿಯಲಿಲ್ಲ.
ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ವಿಫಲವಾಗುವುದರೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದ ಕಾನೂನು ಹೋರಾಟದಲ್ಲೂ ಯಶಸ್ಸು ಸಿಗುವುದಿಲ್ಲ ಎಂದು ಅರಿತ ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಯಿತು. ಆದರೆ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೇರಳದ ಕೋರಿಕೆಯನ್ನು ಸಾರಾ ಸಗಾಟಾಗಿ ನಿರಾಕರಿಸಿತ್ತು. ಆಗ ಕೇರಳ ಸರ್ಕಾರದ ನೆರವಿಗೆ ನಿಂತಿದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ. ಬಂಡೀಪುರದ ಜೈವಿಕ ಸೂಕ್ಷ್ಮ ವಲಯದ 25 ಕಿ.ಮೀ. ರಸ್ತೆಯಲ್ಲಿ 5 ಕಡೆ ತಲಾ 1ಕಿ.ಮೀ. ಉದ್ದದ ಮೇಲ್ಸೇತುವೆಗಳನ್ನು ನಿರ್ಮಿಸಿ ಉಳಿದ ರಸ್ತೆಯಲ್ಲಿ 15 ಮೀಟರ್ ಎತ್ತರದ ತಡೆಗೋಡೆ ನಿರ್ಮಿಸುವ ಪ್ರಸ್ತಾಪವನ್ನು 2018ರ ಮಧ್ಯಂತರದಲ್ಲಿ ಇಲಾಖೆ ರಾಜ್ಯ ಸರ್ಕಾರದ ಮುಂದಿಟ್ಟಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿತ್ತು. ಆಗ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಇದಕ್ಕೆ ಒಪ್ಪಿಗೆ ನೀಡಿದರಾದರೂ ಅರಣ್ಯ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಪ್ರತಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದರು.
ವರದಿಗಳ ಮೇಲೆ ವರದಿಗಳು
ಈ ಮಧ್ಯೆ ಕೇರಳ ಸರ್ಕಾರ ಹೇಗಾದರೂ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಆದರೆ, ನಿಷೇಧದ ಬಳಿಕ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಮೇಲೆ ಆಗುತ್ತಿದ್ದ ದುಷ್ಪರಿಣಾಮಗಳು ಕಮ್ಮಿಯಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಈ ಕುರಿತಂತೆ ಸಾಕಷ್ಟು ತಜ್ಞರ ವರದಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ರಾತ್ರಿ ರಸ್ತೆ ಸಂಚಾರ ನಿಷೇಧದ ನಂತರ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದ ವನ್ಯಪ್ರಾಣಿಗಳ ಸಂಖ್ಯೆ ಶೇ.90ರಷ್ಟು ಕಡಿಮೆಯಾಗಿದೆ. ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗಿದೆ. ವನ್ಯಪ್ರಾಣಿಗಳ ವಲಸೆಗೆ ಸಹಕಾರಿಯಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರವಿಲ್ಲದೇ ನಿಶ್ಯಬ್ಧವಾಗಿರುವಾಗ ವನ್ಯಜೀವಿಗಳು ರಸ್ತೆಯಲ್ಲಿ ನಿರ್ಭಯದಿಂದ ಸಂಚಾರ ಮಾಡುವುದಲ್ಲದ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಹಾರ ಅರಸಿ ವಲಸೆ ಹೋಗುತ್ತಿವೆ. ಇದರಿಂದ ವನ್ಯಪ್ರಾಣಿಗಳ ಜೀವನ ಶೈಲಿ, ಸಂತಾನೋತ್ಪತ್ತಿ ಜತೆಗೆ ಹುಲಿ, ಚಿರತೆಗಳಂತ ಮುಖ್ಯವಾದ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಈ ವರದಿಗಳು ಹೇಳಿದ್ದವು. ಜತೆಗೆ ರಾತ್ರಿ ಸಂಚಾರ ನಿಷೇಧದಿಂದ ಕಾಡಿನಿಂದ ಗ್ರಾಮಗಳ ಕಡೆಗೆ ಆಹಾರ ಅರಿಸಿ ಪ್ರಾಣಿಗಳು ಹೊರ ಬರುವುದು ಕಡಿಮೆಯಾಗಿವೆ ಎಂದೂ ತಿಳಿಸಲಾಗಿತ್ತು.
ಇದೆಲ್ಲವನ್ನೂ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಅಲ್ಲದೆ, ಪ್ರಸಕ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದು ವಿಹಿತವಲ್ಲ. ಆದ್ದರಿಂದ ಪರಿಸರ ಮತ್ತು ಅರಣ್ಯ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಈ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿದೆ. ಅಲ್ಲದೆ, ದೀರ್ಘಾವಧಿಯಲ್ಲಿ ಈ ಮಾರ್ಗವನ್ನು ಮುಚ್ಚಲು ಪೂರಕವಾಗುವಂತಹ ಸಲಹೆಯನ್ನು ನಾಲ್ಕು ವಾರದಲ್ಲಿ ಪ್ರಮಾಣಪತ್ರದ ಮೂಲಕ ಸಲ್ಲಿಸಿ ಎಂದೂ ಆದೇಶಿಸಿದೆ. ಇದರಿಂದಾಗಿ ಬಂಡೀಪುರದ ವನ್ಯಜೀವಿಗಳು ಇನ್ನಷ್ಟು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುವಂತಾಗಿದೆ.