ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 15,000ಕ್ಕೂ ಹೆಚ್ಚು ಎಕರೆ ಕಾಡು ಕಾಳ್ಗಿಚ್ಚಿಗೆ ನಾಶವಾದ ಸುದ್ದಿ ಹಳೆಯದು. ಕಾಳ್ಗಿಚ್ಚಿನ ಸಂದರ್ಭದಲ್ಲಿ ನಾಡಿನಾದ್ಯಂತದಿಂದ ಖಂಡನೆ ವ್ಯಕ್ತವಾಯಿತು, ಆರೋಪ-ಪ್ರತ್ಯಾರೋಪಗಳು ಕೇಳಿ ಬಂದವು, ನೂರಾರು ಜನ ಬೆಂಗಳೂರಿನಿಂದ ಬಂಡೀಪುರಕ್ಕೆ ಸ್ವಯಂಸೇವಕರಾಗಿ ಧಾವಿಸಿದರು, ನಾಯಕ ನಟರು ಕೂಡಾ ಅವರೊಂದಿಗೆ ಕೈಜೋಡಿಸಿದರು, ಸರಕಾರ ಎಲ್ಲರ ಒತ್ತಡಕ್ಕೆ ಮಣಿದು ಹೆಲಿಕಾಪ್ಟರ್ ಮೂಲಕ ಕಾಳ್ಗಿಚ್ಚು ನಂದಿಸಲು ಯತ್ನಿಸಿತು, ಕೊನೆಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ನಡೆಸಿದರು….ಕೊನೆಗೊಂದು ದಿನ ಕಾಳ್ಗಿಚ್ಚು ನಂದಿತು. ಫೆಬ್ರವರಿ ಕೊನೆ ವಾರದಲ್ಲಿ ಭರ್ಜರಿ ಮಳೆಯೊಂದಿಗೆ ಕಾಳ್ಗಿಚ್ಚಿನ ಕಥೆ ಮುಕ್ತಾಯಗೊಂಡದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಇದು ಹಳೆಯ ಕತೆ. ಆದರೆ ಕಾಳ್ಚಿಚ್ಚಿನ ಬಳಿಕ ಏನಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಏಕೆಂದರೆ ಈ ಕಾಳ್ಗಿಚ್ಚಿಗೊಂದು ಸೂಕ್ಷ್ಮ ಹಿನ್ನಲೆ ಇದೆ. ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯ ಇತಿಹಾಸವಿದೆ. ಸ್ಥಳೀಯರ ಸ್ವಾರ್ಥವಿದೆ. ಇವೆಲ್ಲವೂ ಮೊನ್ನೆಯ ಮಳೆಯೊಂದಿಗೆ ಕೊಚ್ಚಿ ಹೋಗಿದೆ.
ಇಡೀ ಕತೆಯ ಫ್ಲ್ಯಾಶ್‍ಬ್ಯಾಕ್ ಹೀಗಿದೆ
ಸಾವಿರಾರು ಎಕರೆ ಅರಣ್ಯವನ್ನು ಬೂದಿ ಮಾಡಿದ ಕಾಡ್ಗಿಚ್ಚು, ಸುಮಾರು ಏಳು ಕಿಲೋ ಮೀಟರ್ ವ್ಯಾಪ್ತಿಯವರೆಗೂ ಬೆಂಕಿಯ ಜ್ವಾಲೆಯನ್ನು ಹಬ್ಬಿಸಿತ್ತು. ಇದರಿಂದಾಗಿ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯನ್ನು ಕೆಲಕಾಲ ನಿರ್ಬಂಧಿಸಲಾಗಿತ್ತು.
ಕುಂಡಕೆರೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಬೆಂಕಿ , ಬಾರಾಕಟ್ಟೆ, ಗುಡ್ಡಕೆರೆಗೆ ಹರಡುತ್ತಾ ಹಿಮವತ್ ಗೋಪಾಲಸ್ವಾಮಿ ಬೆಟ್ಟಕ್ಕೂ ಹರಡಿತ್ತು. ನೂರಾರು ಹಾವುಗಳು, ಮೊಲಗಳು, ಸರೀಸೃಪಗಳು ಮತ್ತು ಮಂಗಗಳು ಬೆಂಕಿಗೆ ಆಹುತಿಯಾದವು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸ್ವಯಂ ಸೇವಕರು ಹಗಲಿರುಳೆನ್ನದೆ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಐದು ದಿನಗಳ ಕಾಲ ಈ ಅರಣ್ಯದ ಕಾಡ್ಗಿಚ್ಚನ್ನು ಆರಿಸಲು ಅವರೆಲ್ಲರು ಸತತವಾಗಿ ಹೆಣಗಾಡಿದರು. ಆದರೂ ಕಾಡ್ಗಿಚ್ಚು ಮಿಂಚಿನಂತೆ ಹಬ್ಬಲಾರಂಭಿಸಿದಾಗ ಹೆಲಿಕ್ಯಾಪ್ಟರ್‍ಗಳ ಸಹಾಯ ಪಡೆದುಕೊಳ್ಳಬೇಕಾಯಿತು. 2 ಹೆಲಿಕಾಫ್ಟರ್‍ಗಳು ಸತತ ಕಾರ್ಯಾಚಾರಣೆಯನ್ನು ನಡೆಸಿ, ಸುಮಾರು 30,00 ಲೀಟರ್ ನೀರನ್ನು ಬಳಸಿ ಕಾಳ್ಗಿಚ್ಚನ್ನು ನಂದಿಸಿದವು. ಆದರೆ ಆಗಿರುವ ನಷ್ಟದ ಪ್ರಮಾಣ ಮಾತ್ರ ಅಗಾಧ, ಅಂದಾಜಿಗೆ ಸಿಗದಷ್ಟು. ಈಗ ಇನ್ನು ಎರಡು-ಮೂರು ತಿಂಗಳವರೆಗೂ ಕಾಳ್ಗಿಚ್ಚಿನ ದುಷ್ಪರಿಣಾಮಗಳನ್ನು ಎದುರಿಸುವುದು ದೊಡ್ಡ ಸಾಹಸವೇ ಸರಿ. ಈ ನಷ್ಟವನ್ನು ಸರಿಪಡಿಸಲು ಸರಿಸುಮಾರು 25 ವರ್ಷಗಳೇ ಬೇಕಾಗಬಹುದು ಎಂದು ಪರಿಸರವಾದಿಗಳು ಅಂದಾಜಿಸುತ್ತಾರೆ.
ಇದು ಇಡೀ ಘಟನೆಯ ಸೂಕ್ಷ್ಮ ಚಿತ್ರಣ. ಕಳೆದ ಎರಡು ಮೂರು ವರ್ಷಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸರಹದ್ದಿನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿರಲಿಲ್ಲ.

ಕಾಡ್ಗಿಚ್ಚು ಹರಡಿದ್ದು ಹೇಗೆ?
ಅರಣ್ಯ ಇಲಾಖೆಯ ಮೂಲಗಳು ಈ ಕಾಳ್ಗಿಚ್ಚಿನ ಹಿಂದಿರುವ ಹಲವು ಮುಖಗಳನ್ನು ಅನಾವರಣ ಮಾಡುತ್ತದೆ. ಇವುಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.
ಕಾಡು ಪ್ರಾಣಿಗಳ ಉಪಟಳ: ಪ್ರಸ್ತುತ ಬೆಂಕಿಗೆ ಆಹುತಿಯಾಗಿರುವ ಕಾಡಿನ ಭಾಗಗಳು ಸ್ಥಳೀಯರ ಜಾನುವಾರುಗಳನ್ನು ಮೇಯಿಸುವ ತಾಣಗಳಾಗಿದ್ದವು. ಹೆಚ್ಚುತ್ತಿರುವ ಹುಲಿಗಳ ಸಂಖ್ಯೆಯಿಂದಾಗಿ ಸ್ಥಳೀಯ ಗ್ರಾಮಸ್ಥರ ಕುರಿಗಳು ಮತ್ತು ದನಗಳು ಆಗಾಗ ಕಾಡಿನ ಹುಲಿಗಳಿಗೆ ಆಹುತಿಯಾಗುತ್ತಿದ್ದವು. ಸ್ಥಳೀಯ ಜನರಿಗೆ ಜೀವನಾಧಾರವಾಗಿದ್ದ ಪ್ರಾಣಿಗಳು ದಿನೇ ದಿನೇ ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿದ್ದದ್ದು, ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಅರಣ್ಯ ಇಲಾಖೆಯಿಂದಲೂ ಸರಿಯಾದ ಪ್ರತಿಸ್ಪಂದನೆ ಸಿಕ್ಕಿರಲಿಲ್ಲ. ಈ ಸಮಸ್ಯೆಗೆ ಬೇರೇನು ಪರಿಹಾರ ಕಾಣದೆ, ಬಹುಶಃ ಊರಿನವರು ಕಾಡಿಗೆ ಬೆಂಕಿ ಕೊಟ್ಟಿರಬಹುದು. ಈ ರೀತಿಯಾಗಿ ಬೆಂಕಿ ಹಚ್ಚಿದರೆ ಕಾಡು ಪ್ರಾಣಿಗಳು ಸ್ವಲ್ಪ ದಿನ ಮರೆಯಾಗುತ್ತವೆ. ಅವರ ಕುರಿಗಳನ್ನು ಮತ್ತು ದನಗಳನ್ನು ರಕ್ಷಿಸಿಕೊಳ್ಳಬಹುದು ಎಂಬುದು ಗ್ರಾಮಸ್ಥರು ಊಹಿಸಿರಬಹುದು.
ಬೇಟೆಗಾರರು ಮತ್ತು ಕಾಡ್ಗಳ್ಳರ ಕೈವಾಡ: ಬೇಟೆಗಾರರು ಅಥವಾ ಕಾಡ್ಗಳ್ಳರು ಇಲಾಖೆಯ ಗಮನವನ್ನು ಬೇರೆಡೆ ಸೆಳೆದು ತಮ್ಮ ಅಕ್ರಮ ವ್ಯವಹಾರಗಳ ದಾರಿಯನ್ನು ಸುಗಮ ಮಾಡಿಕೊಳ್ಳಲು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎನ್ನುತ್ತವೆ ಅರಣ್ಯ ಇಲಾಖೆಯ ಮೂಲಗಳು. ಈ ರೀತಿಯಿಂದಾಗಿ ಇಲಾಖೆಯ ಕಣ್ಣು ತಪ್ಪಿಸಿ ಅನಧಿಕೃತವಾಗಿ ಬೇಟೆಯಾಡಿರುವ ಅಥವಾ ಕಾಡಿನಲ್ಲಿರುವ ಉತ್ಪನ್ನಗಳನ್ನು ಅಧಿಕಾರಿಗಳ ಕಣ್ನು ತಪ್ಪಿಸಿ ಬೇರೆಡೆಗೆ ಸಾಗಿಸಿದ್ದರ ಬಹುದು. ಆದರೆ ಇದನ್ನು ಸ್ಥಳೀಯರ ನೆರವಿಲ್ಲದೆ ಬೇರೆಯವರು ಮಾಡುವುದು ಅಸಾಧ್ಯ. ಅಪರಾಧಿಗಳು ಹೊರಗಿನವರು ಇರಬಹುದು ಆದರೆ ಅವರ ಏಜೆಂಟ್‍ಗಳು ಒಳಗಿನವರಾಗಿರುತ್ತಾರೆ ಎಂದು ಸಂಶಯ ವ್ಯಕ್ತ ಪಡಿಸುತ್ತಾರೆ ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿ.
ಬೆಂಕಿ ವಿಚಕ್ಷಕರು ಮತ್ತು ಅಗ್ನಿ ನಂದಿಸುವವರ ನೇಮಕಾತಿಯಲ್ಲಿ ವಿಳಂಬ: ಬೆಂಕಿ/ಅಗ್ನಿ ವಿಚಕ್ಷಕರು ಮತ್ತು ಬೆಂಕಿ ನಂದಿಸುವವರನ್ನು ಇಲಾಖೆ ಜನವರಿಯಿಂದ ಮೇ ವರೆಗೆ ಎಂದರೆ ಸುಮಾರು ಐದು ತಿಂಗಳ ಕಾಲ ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುತ್ತದೆ. ಸುಮಾರು 395 ಜನರನ್ನು ಇಲಾಖೆ ಅಗ್ನಿ ವಿಚಕ್ಷರರಾಗಿ ನೇಮಿಸಿಕೊಳ್ಳುತ್ತದೆ. ಅವರಿಗೆ ದಿನವೊಂದಕ್ಕೆ ರೂಪಾಯಿ 320 ರ ಜೊತೆಗೆ 65 ರೂಪಾಯಿಯನ್ನು ಊಟ ಭತ್ಯೆಯಾಗಿ ನೀಡಲಾಗುತ್ತದೆ. ಜೊತೆಗ ಅವರ ಹಣವನ್ನು ನೇರವಾಗಿ ಅವರ ಬ್ಯಾಂಕ್‍ನ ಖಾತೆಗೆ ವರ್ಗಾಯಿಸಲಾಗುತ್ತದೆ. ದಿನಗೂಲಿ ಆಧಾರದ ಮೇಲೆ ನೇಮಕಾತಿ ಆಗುವ ಇವರನ್ನು ಈ ವರ್ಷ, ಈ ವರೆಗೂ ಇಲಾಖೆ ನೇಮಿಸಿಕೊಂಡಿರಲಿಲ್ಲ. ಅರಣ್ಯದ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರಿಗೆ ಇದೊಂದು ಜೀವನಾಧಾರವಾಗಿದ್ದ ಉದ್ಯೋಗವಾಗಿತ್ತು. ಇಲಾಖೆಯ ಈ ವಿಳಂಬ ನೀತಿಯಿಂದಾಗಿ ಅಸಮಾಧಾನ ಹೊಂದಿದ್ದ ಸ್ಥಳೀಯರು ಈ ಕೃತ್ಯ ಎಸಗಿರಬಹುದೆಂಬ ಸಂಶಯವೂ ಇದೆ.
ಆದರೆ ಇವರನ್ನು ನೇಮಿಸಿಕೊಂಡಿದ್ದರೆ ಈ ಬೆಂಕಿ ಅನಾಹುತವನ್ನು ತಪ್ಪಿಸಬಹುದಿತ್ತು ಎನ್ನುವ ಸಂಶಯವನ್ನು ಕೆಲವು ಅಧಿಕಾರಿಗಳು ತಳ್ಳಿಹಾಕುತ್ತಾರೆ. ಹೊರಗೆ ಕಾಡಿನಲ್ಲಿ ಓಡಾಡಿಕೊಂಡು ಕಾಳ್ಗಿಚ್ಚನ್ನು ವೀಕ್ಷಿಸುವ ಬದಲು ಹೆಚ್ಚಾಗಿ ಕಚೇರಿಯಲ್ಲಿಯೇ ಕಾಲ ಕಳೆಯುವ ಇವರು ಈ ಅಗ್ನಿ ದುರಂತವನ್ನು ತಪ್ಪಿಸುವುದು ಹೇಗೆ ಸಾಧ್ಯ ಎನ್ನುವುದು ಅವರ ಅಭಿಪ್ರಾಯ.
ಕಾಡಂಚಿನ ಜನರ ಒಕ್ಕಲೆಬ್ಬಿಸುವಿಕೆ: ಇತ್ತೀಚೆಗಷ್ಟೇ ನ್ಯಾಯಾಲಯ ಕಾಡಿನಂಚಿನ ಜನರ ಒಕ್ಕಲೆಬ್ಬಿಸುವ ಬಗ್ಗೆ ನೀಡಿರುವ ತೀರ್ಪು ಜನರಲ್ಲಿರುವ ಆಕ್ರೋಶವನ್ನು ಮತ್ತು ಅಸಮಾಧಾನವನ್ನು ಮೂಡಿಸಿರುವ ಸಾಧ್ಯತೆಗಳು ಹೆಚ್ಚಿವೆ. ತಮ್ಮ ಅಸಮಾಧಾನವನ್ನು ಅವರು ಈ ರೀತಿ ತೀರಿಸಿಕೊಂಡರಬಹುದು ಎಂಬುದು ಇನ್ನೊಂದು ವಾದ.
ಇಲಾಖೆಯ ವೈಫಲ್ಯ: ಕಾಳ್ಗಿಚ್ಚು ಹರಡುವುದನ್ನು ತಪ್ಪಿಸಲು ಅರಣ್ಯ ಇಲಾಖೆಗೆ ಸಾಧ್ಗವಾಗಲಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ಇಲ್ಲಿವೆ ಇದಕ್ಕೆ ನಿರ್ದಿಷ್ಟ ಕಾರಣಗಳು:
ಅವೈಜ್ಞಾನಿಕ ಅಗ್ನಿ ಅಂಬುಲೆನ್ಸ್: ಅಗ್ನಿ ಅಂಬುಲೆನ್ಸ್‍ಗಳು ಗಾತ್ರದಲ್ಲಿ ಅಗ್ನಿ ಶಾಮಕದಳದ ವಾಹನಗಳಿಗಿಂತ ಚಿಕ್ಕದಿರುತ್ತವೆ. ಸಾಮಾನ್ಯವಾಗಿ ಬೆಂಕಿ ಅನಾಹುತಗಳನ್ನು ತಡೆಯಲು ಇದನ್ನು ಬಳಸಲಾಗುತ್ತದೆ. ಆದರೆ ಇವು ಕಾಡಿನ ರಕ್ಷಣೆಯಲ್ಲಿ ಎಷ್ಟರಮಟ್ಟಿಗೆ ಪಾತ್ರ ನಿರ್ವಹಿಸುತ್ತವೆ? ಅಗ್ನಿ ಅಂಬುಲೆನ್ಸ್‍ಗಳು ಕಾಡಿನ ದಾರಿಯಲ್ಲಿ ಚಲಿಸಲಾರವು. ನೇರವಾಗಿರುವ ಓರೆಕೋರೆಗಳಿಲ್ಲದ, ಎತ್ತರ ತಗ್ಗುಗಳಿಲ್ಲದ ಸಮತಟ್ಟಾದ ರಸ್ತೆಯಲ್ಲಿ ಮಾತ್ರ ಅದು ಚಲಿಸಬಲ್ಲದು. ಕಾಡಿನ ಗುಡ್ಡಗಾಡಿನ ದಾರಿಯಲ್ಲಿ ಅದು ಮುಂದೆ ಸಾಗಲಾರದು. `ರಸ್ತೆಯ ಬದಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚನ್ನು ಮಾತ್ರ ಅದು ನಂದಿಸಬಲ್ಲದು. ಹೊರತು ಕಾಡ್ಗಿಚ್ಚನ್ನು ನಂದಿಸಲು ಅದಕ್ಕೆ ಸಾಧ್ಯವಿಲ್ಲ. ಕಾಡಿನ ಬೆಂಕಿ ನಂದಿಸಲು ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ವಾಹನದ ಅವಶ್ಯಕತೆ ಇದೆ. ಅದು ಉಬು ತಗ್ಗುಗಳಲ್ಲಿ ಎಲ್ಲಾ ಕಡೆ ಚಲಿಸುವಂತಿರಬೇಕು ‘ ಎನ್ನುವುದು ಇಲಾಖೆಯ ಕೆಲ ಅಧಿಕಾರಿಗಳ ಅಭಿಮತ.
ಅಗ್ನಿ ರೇಖೆಗಳು: ಕಾಳ್ಗಿಚ್ಚನ್ನು ಅರಣ್ಯದ ಇತರ ಭಾಗಗಳಿಗೂ ವ್ಯಾಪಕವಾಗಿ ಹರಡದಂತೆ ತಡೆಯಲು ಈ ಬೆಂಕಿ ರೇಖೆಗಳನ್ನು ಅರಣ್ಯ ಇಲಾಖೆ ನಿರ್ಮಿಸುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದ ಕಾರಣ ಕಾಡ್ಗಿಚ್ಚು ಅರಣ್ಯದಲ್ಲಿ ಹಬ್ಬುತ್ತಾ ಹೋಯಿತು ಎಂಬ ವಾದವೂ ಅರಣ್ಯ ಇಲಾಖೆಯ ಮೇಲಿದೆ.
ಅಗ್ನಿ ರೇಖೆಗಳನ್ನು ನಿರ್ಮಿಸಲು ಅರಣ್ಯವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸುತ್ತಾ ಹೋಗಲಾಗುತ್ತದೆ, ಆ ವಿಂಗಡಿಸಿದ ಭಾಗದ ನಾಲ್ಕೂ ಭಾಗಗಳ ಅಂಚಿನಲ್ಲಿ ಭೂಮಿ ಮೇಲಿನ ಒಣಗಿದ ಹುಲ್ಲುಗಳನ್ನು ಸುಡಲಾಗುತ್ತದೆ. ಈ ಮೂಲಕ ಬೆಂಕಿ ಹುಲ್ಲಿನ ಮೂಲಕ ಅರಣ್ಯದ ಇತರ ಭಾಗಕ್ಕೆ ಹರಡುವುದನ್ನು ತಪ್ಪಿಸಲಾಗುತ್ತದೆ. ಆದರೆ ಕೇವಲ ನೆಲ ಮಟ್ಟದಲ್ಲಿ ಬೆಂಕಿ ಹರಡಿದಾಗ ಮಾತ್ರ ಈ ಅಗ್ನಿ ರೇಖೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬಲ್ಲವು. ಅರಣ್ಯದ ಇತರ ಭಾಗಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಬಲ್ಲದು. ಆದರೆ ಅರಣ್ಯದ ಮೇಲ್ಭಾಗದಲ್ಲಿ ಬೆಂಕಿ ಹಬ್ಬಲಾರಂಭಿಸಿದಾಗ ಈ ಅಗ್ನಿ ರೇಖೆಗಳು ನಿಷ್ಪ್ರಯೋಜಕವಾಗುತ್ತದೆ ಎಂಬುದು ತಜ್ಞರ ಅಭಿಮತ.
ಆದರೆ ಈ ಅಗ್ನಿ ರೇಖೆಗಳನ್ನು ವ್ಯವಸ್ಥಿತವಾಗಿ ರೂಪಿಸಿರಲಿಲ್ಲ. ಕೇವಲ ರಸ್ತೆಯ ಕೆಲಭಾಗದಲ್ಲಿ ಮಾತ್ರ ಇದನ್ನು ನಿರ್ಮಿಸಲಾಗಿದ್ದು, ಅರಣ್ಯದ ಒಳಭಾಗದಲ್ಲಿ ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿತ್ತು ಎಂಬ ಆರೋಪವೂ ಇಲಾಖೆಯ ಮೇಲಿದೆ.

ಬೆಂಕಿಯ ಕೆನ್ನಾಲಗೆ ಆಹುತಿ ತೆಗೆದುಕೊಂಡ ಜಾಗದಲ್ಲಿ ಬಿದಿರನ್ನು ನೆಡುವ, ಹುಲ್ಲು ಹಾಗು ಹೊಂಗೆ ಮತ್ತಿತ್ತರ ಬೀಜಗಳನ್ನು ಬಿತ್ತುವ ಆಲೋಚನೆಯನ್ನು ಇಲಾಖೆ ಮಾಡುತ್ತಿದೆ. ಬಿದಿರನ್ನು ಮಾಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ತರಿಸಿಕೊಳ್ಳುವ ಬಗ್ಗೆ ಮಾತುಕತೆಯನ್ನೂ ಇಲಾಖೆ ನಡೆಸಿದೆ. `ಇದಕ್ಕಾಗಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಹಾಗು ಸ್ವಯಂ ಸೇವಕರೂ ಮುಂದೆ ಬಂದಿದ್ದಾರೆ. ಒಂದೆರಡು ಮಳೆಗಾಗಿ ನಿರೀಕ್ಷಿಸುತ್ತಿದ್ದೇವೆ. ನಂತರ ಈ ಕಾರ್ಯವನ್ನು ಕೂಡಲೇ ಜಾರಿಗೊಳಿಸುತ್ತೇವೆ. ಬೀಜದುಂಡೆ (ಸೀಡ್ ಬಾಲ್) ಗಳನ್ನು ಇಲ್ಲಿ ಬಿತ್ತುವ ಬಗ್ಗೆ ಪ್ರಸ್ತಾಪನೆಯೂ ಬಂದಿದೆ. ಆದರೆ ಇಲ್ಲಿಗೆ ಯಾವುದು ಸೂಕ್ತ ಎಂಬುದನ್ನು ಚರ್ಚಿಸಿ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ‘ ಎನ್ನುತ್ತಾರೆ ಬಾಲಚಂದ್ರ.
ಆದರೆ ನೈಸರ್ಗಿಕವಾಗಿ ಕಾಡು ಬೆಳೆಯುವುದೇ ಹೊರತು ಈ ಕೃತಕ ವಿಧಾನಗಳು ಕಾಡಿನ ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಪೂರಕ ಎಂಬುದರ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.
ವಿಚಾರಣೆ ಎಂಬ ಕಣ್ಣೊರೆಸುವ ತಂತ್ರ: ವಿಚಾರಣೆ ಕೇವಲ ಜನರ ಕಣ್ಣೊರೆಸಲು ನಡೆದಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ವಿಚಾರಣೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಎನ್ನುವ ಆರೋಪಗಳು ಕೇಳಿ ಬರುತ್ತಿವೆ. `ನಾವು ವಿಚಾರಣೆಯನ್ನು ನಡೆಸುತ್ತಿದ್ದೇವೆ. ಈಗಾಗಲೇ ಒಬ್ಬ ಅರಣ್ಯ ಅಧಿಕಾರಿಯನ್ನು ಈಗಾಗಲೇ ಅಮಾನತು ಗೊಳಿಸಿದ್ದೇವೆ. ಇನ್ನೊಬ್ಬರ ವಿಚಾರಣೆಯೂ ನಡೆದಿದೆ. ವರದಿಯನ್ನೂ ತಯಾರಿಸುತ್ತಿದ್ದೇವೆ. ಅನೇಕ ತಂಡಗಳು ಕಾಡ್ಗಿಚ್ಚು ಪ್ರಾಣಿ, ಪಕ್ಷಿಗಳು ಹಾಗು ಪರಿಸರದ ಮೇಲೆ ಉಂಟೊಮಾಡಿರುವ ಪ್ರಭಾವವನ್ನು ಅಧ್ಯಯನ ನಡೆಸಲು ಬರುತ್ತಿವೆ. ಅವರ ಅಧ್ಯಯನದ ವರದಿಯ ಪ್ರಮುಖ ಅಂಶಗಳನ್ನೂ ನಾವು ನಮ್ಮ ವರದಿಯಲ್ಲಿ ಸೇರಿಸಿಕೊಳ್ಳಲಿದ್ದೇವೆ’ ಎನ್ನುತ್ತಾರೆ ಬಾಲಚಂದ್ರ.
ಆಧುನಿಕತೆಯಿಂದ ಕೂಡಿದ ಸೌಲಭ್ಯಗಳು ವಿಚಾರಣೆಗೆ ಅತೀ ಅಗತ್ಯ. ಆದರೆ ಇಲಾಖೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇಲಾಖೆಗೆ ಸರ್ಕಾರ ಕರೆಗಳ ವಿವರಗಳನ್ನು ಪಡೆಯಬಹುದಾದ ಅಧಿಕಾರ ನೀಡಿದೆ. ಕೆಲವೊಂದು ವಿಚಾರಣೆಗಳಲ್ಲಿ ಇದು ಅಗತ್ಯ. ಅದರೆ ಇಲಾಖೆ ಅದನ್ನು ನವೀಕರಣಗೊಳಿಸಿಲ್ಲ.
ಮಾಡುತ್ತಿರುವ ವಿಚಾರಣೆ ವೈಜ್ಞಾನಿಕವಾಗಿಲ್ಲ. ದಿನನಿತ್ಯವೂ ವಿಚಾರಣೆಯ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆದ್ಯಾವುದೂ ಆಗುತ್ತಿಲ್ಲ. ಕೇವಲ ಕಾಟಾಚಾರಕ್ಕೆ ಎಂಬಂತೆ ವಿಚಾರಣೆ ನಡೆಸಲಾಗಿದೆ.
ನಾವು ಕರೆಗಳ ಮಾಹಿತಿಯನ್ನು ಪಡೆಯಬಹುದು. ಆದರೆ ಅಪರಾಧ ಮಾಡುವವರಿಗೆ ನಾವು ಅವರ ಕರೆಗಳ ಮಾಹಿತಿ ಪಡೆಯುತ್ತೇವೆ ಎಂಬ ಮಾಹಿತಿ ಇರುತ್ತದೆ. ಹೀಗಾಗಿ ಅವರು ಅದರ ಬಗ್ಗೆ ಜಾಗರೂಕರಾಗಿರುತ್ತಾರೆ ಎನ್ನುತ್ತಾರೆ ಬಾಲಚಂದ್ರ.
ಹಾಗಾದರೆ ಪರಿಹಾರವೇನು?
ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಪ್ರಾಣಿಗಳಿಗೆ ರಕ್ಷಣೆ ಒದಗಿಸಬೇಕು. ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಗ್ರಾಮಸ್ಥರನ್ನು ತೊಡಗಿಸಿಕೊಳ್ಳಬೇಕು. ಆಗ ಸ್ಥಳೀಯರು ಕಾಡಿಗೆ ಯಾವುದೇ ವಿಧದ ಸಂಕಷ್ಟ ತಂದು ಒಡ್ಡಲಾರರು.ಇದಲ್ಲದೆ ಕಾಳ್ಗಿಚ್ಚನ್ನು ನಿಗಾ ವಹಿಸುವುದಕ್ಕೆಂದೇ ಕಾಡಿನಲ್ಲಿ ವಿಚಕ್ಷಣಾ ಗೋಪುರಗಳಿರುತ್ತವೆ.
ಅಲ್ಲಿರುವ ವಿಚಕ್ಷಣಾ ತಂಡದವರು ಮತ್ತು ಅಗ್ನಿ ನಂದಿಸುವ ದಳದವರೊಂದಿಗೆ ಸರಿಯಾದ ಹೊಂದಾಣಿಕೆ ಇರಬೇಕಾಗುತ್ತದೆ. ಮುಂಜಾಗ್ರತೆ ವಹಿಸಿ ಉಳಿದವರಿಗೂ ಶೀಘ್ರವೇ ವಿಚಾರವನ್ನು ತಿಳಿಸಿ ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ಒಟ್ಟು ಅರಣ್ಯದ ಜಾಗವನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ವಿಭಾಗಕ್ಕೂ ಈ ರೀತಿ ವೀಚಕ್ಷರನ್ನು ನೇಮಿಸಿ ಅರಣ್ಯವನ್ನು ಗಮನಿಸುತ್ತಿರಬೇಕಾಗುತ್ತದೆ. ಹೀಗೆ ತುರ್ತಾಗಿ ಮಾಹಿತಿಯನ್ನು ಹರಡಿ ಕಾರ್ಯ ಪ್ರವೃತ್ತರಾದಾಗ ಮಾತ್ರ ಬೆಂಕಿಯನ್ನು ನಂದಿಸಬಹುದು. ಬೆಂಕಿ ಹೆಚ್ಚಿನ ಪ್ರದೇಶವನ್ನು ಆಕ್ರಮಿಸುವ ಮೊದಲೇ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದರೆ ಮಾತ್ರ ಅದು ಮುಂದೆ ಹರಡುವುದನ್ನು ತಡೆಯಬಹುದು. ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿ ಬಿಡುತ್ತದೆ. ಅದು ವ್ಯಾಪಕವಾಗಿ ಹರಡುತ್ತಾ ಹೋಗುತ್ತದೆ. ಹೀಗಾಗಿ ಎಲ್ಲರ ನಡುವೆ ಉತ್ತಮ ಸಹಕಾರ-ಸಂಪರ್ಕ ಅತೀ ಅಗತ್ಯ.