ವಿಶ್ವ ವಿಖ್ಯಾತ ಮೈಸೂರು ದಸರಾ ನಂತರದ ಸಾಲಿನಲ್ಲಿರುವ ಮಡಿಕೇರಿ ದಸರಾ ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಾ0 ಬಂದಂತೆ ದಸರಾ ಆಚರಣೆಗೂ ಸೇರುವ ಜನರ ಸಂಖ್ಯೆ ಹಿಗ್ಗುತ್ತಲೇ ಸಾಗಿತ್ತು. ಮಡಿಕೇರಿ ದಸರಾ ಸವಿಯಲು ಮಂಡ್ಯ, ಮೈಸೂರು, ಹಾಸನ, ಮಂಗಳೂರಿನಿಂದಲೂ ಸಾವಿರಾರು ಜನರು ಆಗಮಿಸುತ್ತಾರೆ. ಜಿಲ್ಲೆಯ ಎಲ್ಲ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳು ತುಂಬಿ ತುಳುಕಿದ್ದು ಅಕ್ಟೋಬರ್ ತಿಂಗಳಿನಲ್ಲಿ ಕೊಠಡಿಯೇ ಸಿಗುವುದಿಲ್ಲ. ಆದರೆ ಕಳೆದ ವರ್ಷದಿಂದ ಹೋಟೆಲ್ ಮತ್ತು ಹೋಂಸ್ಟೇಗಳ ಕೊಠಡಿಗಳು ಶೇಕಡಾ 50 ರಷ್ಟು ಖಾಲಿಯೇ ಉಳಿಯುತ್ತಿವೆ.
ಅಂದ ಹಾಗೆ ಮಡಿಕೇರಿಯಲ್ಲಿ ದಸರಾ ಆಚರಣೆ ಆರಂಭವಾದದ್ದು 1950 ರ ದಶಕದಲ್ಲಿ. ಕೊಡಗನ್ನು ಆಳಿದ ಲಿಂಗಾಯತ ಅರಸರ ಕಾಲದಲ್ಲಿ ವರ್ಷಕ್ಕೊಮ್ಮೆ ಇದೇ ಸಮಯದಲ್ಲಿ ಮಾರಿಯಮ್ಮ ಹಬ್ಬ ವನ್ನು ಆಚರಿಸಲಾಗುತಿತ್ತು. ಮಡಿಕೇರಿಯಲ್ಲಿ ನೆಲೆಸಿದ್ದ ರಾಜಾಸ್ಥಾನಿ ಮೂಲದ ಭೀಮ್ ಸಿಂಗ್ ಎನ್ನುವ ವರ್ತಕರೇ ದಸರಾ ಆಚರಣೆ ಪ್ರಾರಂಭಿಸಿದರು. ಮೊದಲಿಗೆ ಭೀಮ್ ಸಿಂಗ್ ಅವರು ದೇವರ ಮೂರ್ತಿಯನ್ನು ತಲೆಯ ಮೇಲೆ ಇಟ್ಟುಕೊಂಡು ಮನೆ ಮನೆಗೆ ತೆರಳುತಿದ್ದರು ಎಂದು ಹಿರಿಯ ನಾಗರಿಕರು ಈಗಲೂ ನೆನೆಸಿಕೊಳ್ಳುತ್ತಾರೆ. ನಂತರ ನಿಧಾನವಾಗಿ ಕರಗದ ಜತೆಗೇ ಟ್ರಾಕ್ಟರ್ ಗಳಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಕೊಂಡೊಯ್ಯುವ ಪರಂಪರೆ ಆರಂಭಗೊಂಡಿತು.
ಜಿಲ್ಲೆಯ ಜನಪ್ರತಿನಿಧಿಗಳಾದ ಕೆ ಜಿ ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತು ಸುನೀಲ್ ಸುಬ್ರಮಣಿ ಅವರನ್ನೊಳಗೊಂಡ ದಸರಾ ಸಮಿತಿ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಳೆದ ವಾರ ಭೇಟಿಯಾಗಿ ದಸರಾ ಹಬ್ಬದ ಆಚರಣೆಗೆ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಿತ್ತು. ಯಡಿಯೂರಪ್ಪ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಒಂದು ಕೋಟಿ ರೂಪಾಯಿ ಅನುದಾನ ನೀಡಲಿರುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ ಜಿ ಬೋಪಯ್ಯ ತಿಳಿಸಿದ್ದಾರೆ. ಆದರೆ ಸರ್ಕಾರ ಎಷ್ಟು ಬಿಡುಗಡೆ ಮಾಡುತ್ತದೆ ಎಂದು ಬಿಡುಗಡೆ ಮಾಡಿದ ನಂತರವಷ್ಟೇ ತಿಳಿಯಲಿದೆ. ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ ರಾ ಮಹೇಶ್ ಅವರು ಮಡಿಕೇರಿ ದಸರಾಗಾಗಿ 50 ಲಕ್ಷ ರೂಪಾಯಿ ಮತ್ತು ಗೋಣಿಕೊಪ್ಪ ದಸರಾಗಾಗಿ 25 ಲಕ್ಷ ರೂಪಾಯಿಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ದಸರಾ ಸಿದ್ದತೆ ಮಾಡಿಕೊಂಡಾಗ ಹಣ ಬರಲಿಲ್ಲ. ದಸರಾ ಆಚರಣೆ ಮುಗಿದು ಹೋದರೂ ಸರ್ಕಾರದಿಂದ ಚಿಕ್ಕಾಸೂ ಅನುದಾನ ಬರಲೇ ಇಲ್ಲ.
ಮಡಿಕೇರಿ ದಸರಾ ಆಚರಣೆಗೆ ರಾಜ್ಯ ಸರ್ಕಾರ ಪ್ರತೀ ವರ್ಷವೂ 50 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುತ್ತದೆ. ರಾಜ್ಯ ಸರ್ಕಾರ ನೀಡಿದರೂ ದಸರಾ ಸಮಿತಿಗೆ ಹೆಚ್ಚುವರಿಯಾಗಿ 20 ರಿಂದ 25 ಲಕ್ಷ ರೂಪಾಯಿಗಳ ವರೆಗೆ ಖರ್ಚು ಬರುತ್ತದೆ ಎಂದು ದಸರಾ ಸಮಿತಿಯ ಈ ವರ್ಷದ ಅದ್ಯಕ್ಷರಾದ ರಾಬಿನ್ ದೇವಯ್ಯ ಅವರು ಪ್ರತಿಧ್ವನಿಗೆ ತಿಳಿಸಿದರು. ಆದರೆ ಕಳೆದ ವರ್ಷ ರಾಜ್ಯ ಸರ್ಕಾರದಿಂದ ಚಿಕ್ಕಾಸೂ ಬಿಡುಗಡೆ ಆಗಿಲ್ಲದಿರುವುದು ದುರಂತ ಎಂದ ಅವರು ಕಳೆದ ವರ್ಷದ ಸಮಿತಿ ಮೇಲೆ ಇನ್ನೂ ಲಕ್ಷಗಟ್ಟಲೆ ಸಾಲ ಇದೆ ಎಂದರು. ಈ ಬಾರಿ ಸರ್ಕಾರದ ಅನುದಾನ ಸಕಾಲಕ್ಕೆ ಬಂದರೆ ಕೆಲವು ವೈವಿದ್ಯಮಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಸೊರಗಿರುವ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ಆಶಯ ಇದೆ ಎಂದೂ ಅವರು ಹೇಳಿದರು. ಈ ಬಾರಿ ದಸರಾಗೆ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಪ್ರತಿಧ್ವನಿಯೊಂದಿಗೆ ಮಾತನಾಡಿದ ಮಡಿಕೇರಿಯ ಹೋಟೆಲ್ ಒಂದರ ಮಾಲೀಕರು ದೃಶ್ಯ ಮಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಭೂ ಕುಸಿತದ ಕುರಿತು ಹರಿದಾಡಿದ ಸಂದೇಶಗಳು ಮತ್ತು ವೈಭವೀಕರಣದಿಂದಾಗಿ ಪ್ರವಾಸಿಗರ ಸಂಖ್ಯೆಯೇ ಕಡಿಮೆ ಆಗಿದೆ ಎಂದರು. ಕಳೆದ ಮೂರು ತಿಂಗಳಿನಿಂದ ಹೋಟೆಲ್ ನ ಕೊಠಡಿಗಳ ಬುಕಿಂಗ್ ತೀರಾ ಕುಸಿದಿದೆ. ಈ ವರ್ಷ ಈ ತನಕ ಶೇಕಡಾ 50 ರಷ್ಟೂ ಕೊಠಡಿಗಳು ಬುಕ್ ಆಗಿಲ್ಲ ಎಂದರು. ಎರಡು ವರ್ಷಗಳ ಹಿಂದೆ ಸೆಪ್ಟೆಂಬರ್ 15 ಕ್ಕೂ ಮುಂಚಿತವಾಗಿ ಸಂಪೂರ್ಣ ಕೊಠಡಿಗಳು ಬುಕ್ ಆಗಿಬಿಡುತಿದ್ದವು ಎಂದೂ ಅವರು ನೆನೆಸಿಕೊಂಡರು.
ದಸರಾ ಸಮಿತಿಯ ಗೌರವಾದ್ಯಕ್ಷ ಮಹೇಶ್ ಜೈನಿ ಅವರನ್ನು ಮಾತನಾಡಿಸಿದಾಗ ಅನುದಾನದ ಕೊರತೆಯನ್ನೇ ಒತ್ತಿ ಹೇಳಿದರು. ಕಳೆದ ವರ್ಷ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಅನುದಾನವೂ ಬಿಡುಗಡೆ ಆಗದ ಕಾರಣದಿಂದ ಈ ಬಾರಿ ದೇವಾಲಯಗಳ ಕಾರ್ಯಕರ್ತರಿಗೆ ಆಸಕ್ತಿ ಕಡಿಮೆ ಆಗಿದೆ ಎಂದರು. ಸರ್ಕಾರದಿಂದ ಬರುವ ಅನುದಾನದಲ್ಲಿ ಮೊದಲೆಲ್ಲ ಪ್ರತೀ ಮಂಟಪಕ್ಕೂ 2-3 ಲಕ್ಷ ಅನುದಾನ ನೀಡಲಾಗುತಿತ್ತು. ದಶ ಮಂಟಪಗಳಲ್ಲಿ ಬಹುಮಾನ ಪಡೆದುಕೊಳ್ಳಲು ತೀವ್ರ ಪೈಪೋಟಿ ಇರುತಿತ್ತು. ಈ ಬಾರಿ ಕುಸಿದಿರುವ ವಾಣಿಜ್ಯ ವಹಿವಾಟು, ನೆಲ ಕಚ್ಚಿರುವ ಕೃಷಿ ಉತ್ಪನ್ನಗಳ ಬೆಲೆ ಮತ್ತು ಬೆಳೆ ನಾಶದಿಂದಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಲು ಕಷ್ಟವಾಗುತ್ತಿದೆ ಎಂದರು. ಈ ಬಾರಿ ಮಂಟಪಗಳ ವೆಚ್ಚವನ್ನು ತಗ್ಗಿಸಲಾಗುವುದಾದರೂ ದಶ ಮಂಟಪ ಸಾಗುವ ನಗರದ ರಸ್ತೆಗಳ ದುರಸ್ತಿ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯೇ ದಶಮಂಟಪಗಳು. ಈ ಮಂಟಪಗಳ ತಯಾರಿಗೆ ಲಕ್ಷಾಂತರ ಹಣ ವ್ಯಯ ಮಾಡಬೇಕಾಗುತ್ತದೆ. ಪ್ರತಿಯೊಂದು ಸಮಿತಿಯ ಸದಸ್ಯರು ಹಗಲು ರಾತ್ರಿ ಎನ್ನದೆ ಓಡಾಡಿ, ಜನರಿಂದ ಹಣ ಸಂಗ್ರಹಿಸಿ ಮಂಟಪಗಳನ್ನು ನಿರ್ಮಾಣ ಮಾಡುತ್ತಿದ್ದರು.
ಪ್ರತಿವರ್ಷವೂ ದಸರಾಕ್ಕೆ ಮಡಿಕೇರಿ ನವವಧುವಂತೆ ಸಿಂಗಾರಗೊಳ್ಳುತ್ತಿತ್ತು. ಆದರೆ ಈ ಬಾರಿ ದಸರಾ ಕಳೆಯಿಲ್ಲ. ಜತೆಗೆ ಆಗಾಗ್ಗೆ ಮಳೆ ಸುರಿಯುತ್ತಿರುವುದು ದಸರಾ ಸಂಭ್ರಮಕ್ಕೆ ಅಡ್ಡಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಪ್ರವಾಹದ ಹೊಡೆತಕ್ಕೆ ಸಿಲುಕಿ ತೊಂದರೆ ಅನುಭವಿಸಿರುವ ಜನಕ್ಕೆ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದಂತಾಗಿದೆ. ಆದರೂ ಸಾಂಪ್ರದಾಯಿಕವಾಗಿ ನಡೆದು ಬಂದಿರುವ ದಸರಾವನ್ನು ಆಚರಿಸಲೇಬೇಕಾಗಿರುವುದರಿಂದ ಎಲ್ಲವನ್ನೂ ಸರಳವಾಗಿ ಮಾಡಲಾಗುತ್ತಿದೆ.

ಮುಂದಿನ ಸೆಪ್ಟೆಂಬರ್ 29 ರಂದು ಮಡಿಕೇರಿ ದಸರಾಕ್ಕೆ ಚಾಲನೆ ಸಿಗಲಿದ್ದು ಮಡಿಕೇರಿ ದಸರಾ ಸೂತ್ರಧಾರಿಯಾಗಿರುವ ನಾಲ್ಕು ಶಕ್ತಿದೇವತೆಗಳ ಕರಗಗಳು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನ ಕೆರೆ ಬಳಿ ಪೂಜಾ ಕೈಂಕರ್ಯಗಳೊಂದಿಗೆ ಹೊರಡಲಿವೆ.
ನಗರ ದಸರಾ ಸಮಿತಿಯು ಸಾಂಪ್ರದಾಯಿಕ ಪೂಜೆಯನ್ನರ್ಪಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಿದೆ. ಆ ನಂತರ ಒಂಬತ್ತು ದಿನಗಳ ಕಾಲ ನಗರದ ಪ್ರದಕ್ಷಿಣೆ ಮಾಡುವ ಕರಗಗಳು ವಿಜಯದಶಮಿಯಂದು ಬನ್ನಿ ಪೂಜೆ ನೆರವೇರಿಸುವ ಮೂಲಕ ದಸರಾಕ್ಕೆ ತೆರೆ ಬೀಳಲಿದೆ. ಮಡಿಕೇರಿ ದಸರಾ ವೀಕ್ಷಿಸಲು ಬಂದಂತಹ ಲಕ್ಷಾಂತರ ಜನರಿಗೆ ವಿವಿಧ ದೇವಾಲಯಗಳ ವೈವಿಧ್ಯಮಯ ಮಂಟಪಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ ನಂತರ ಪೂಜಾ ವಿಧಿ
ವಿಧಾನಗಳನ್ನು ಮುಗಿಸಿ ಜನಸಾಗರದೊಂದಿಗೆ ದಶ ಮಂಟಪಗಳು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ರಾತ್ರಿಯಿಂದಲೇ ಮೆರವಣಿಗೆ ಪ್ರಾರಂಭವಾಗುತ್ತದೆ.
ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ 150 ವರ್ಷದ ಇತಿಹಾಸ ಇರುವ ಪೇಟೆ ಶ್ರೀರಾಮ ಮಂದಿರ, 96 ವರ್ಷದ ದೇಚೂರು ಶ್ರೀರಾಮ ಮಂದಿರ, 85 ವರ್ಷದ ದಂಡಿನ ಮಾರಿಯಮ್ಮ ದೇವಾಲಯ, 52 ವರ್ಷದ ಚೌಡೇಶ್ವರಿ ದೇವಾಲಯ, 51 ವರ್ಷದ ಕಂಚಿ ಕಾಮಾಕ್ಷಿ ದೇವಾಲಯ, 41 ವರ್ಷದ ಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ, 39 ವರ್ಷದ ಕೋಟೆ ಮಾರಿಯಮ್ಮ ದೇವಾಲಯ, 39 ಕೋಟೆ ಗಣಪತಿ ದೇವಾಲಯ, 40 ವರ್ಷದ ಮಲ್ಲಿಕಾರ್ಜುನ ಶ್ರೀ ರಾಮ ಮಂದಿರ, 19 ವರ್ಷದ ಕರವಾಲೆ ಭಗವತಿ ದೇವಾಸ್ಥಾನಗಳ ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ ಮತ ಭೇದ ವಿಲ್ಲದೆ ದಸರಾ ನಾಡ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಮತಿಯ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭಯುತವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಮಾತ್ರ ದಸರಾ ಸಂಭ್ರಮ ಕಳೆ ಕಟ್ಟಲಿದೆ.