ಕಳೆದ ಕೆಲವು ದಿನಗಳಿಂದ ರಾಜಾಪುರ ಜಲಾಶಯದಿಂದ ಸತತವಾಗಿ ನೀರು ಬಿಡುಗಡೆಯಾಗುತ್ತಿದ್ದು, ಈ ನೀರು ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕುಗಳ ಜನತೆಯ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿದೆ.
ಇಂದು ಶುಕ್ರವಾರ ಸಂಜೆ ಜಲಾಶಯದ ಮತ್ತಷ್ಟು ಗೇಟುಗಳನ್ನು ತೆರೆಯಲಾಗಿದೆ. ಜಲಾಶಯದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. 2005-06ರಲ್ಲಿ ಜಲಾಶಯದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಪ್ರವಾಹ ಉಂಟಾಗಿ, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಈ ರೀತಿ ಪ್ರವಾಹ ಬಂದಲ್ಲಿ ಜಲಾಶಯದ ಗೇಟುಗಳನ್ನು ತೆರೆಯಲು ಸಾಧ್ಯವೇ ಇಲ್ಲ. ಇವು ಮ್ಯಾನ್ಯುವಲ್ ಗೇಟ್ ಆಗಿದ್ದರಿಂದ ಮಳೆಗಾಲದ ಮುನ್ನವೇ ತೆರೆದು ನೀರು ಬಿಡುವುದು ಅನಿವಾರ್ಯವಾಗಿತ್ತು.
ಕೃಷ್ಣೆಯಲ್ಲಿ ಸತತವಾಗಿ ನೀರು ಹರಿಯುತ್ತಿರುವುದರಿಂದ ಸಂತಸಗೊಂಡ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ರಾಜಾಪುರ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಚಿಕ್ಕೋಡಿಯ ಕಲ್ಲೋಳ, ಮಾಂಜರಿ, ಅಥಣಿ ತಾಲೂಕಿನ ಉಗಾರ ಬ್ಯಾರೇಜ್‌ಗಳಿಗೂ ಸಚಿವರು ಭೇಟಿ ನೀಡಿ, ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಚಿವರು ರಾಜಾಪುರ ಜಲಾಶಯಕ್ಕೆ ಭೇಟಿ ನೀಡುತ್ತಿರುವುದನ್ನು ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳಿಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವ ಸಂಬಂಧ ಮಾತುಕತೆಗೆ ಸಮಯ ಕೋರಿ ಶಿವಕುಮಾರ್ ಫತ್ರ ಬರೆದರೂ ಮಹಾರಾಷ್ಟ್ರ ಸರಕಾರ ಸ್ಪಂದಿಸಿರಲಿಲ್ಲ.ಕೊಯ್ನಾ ನೀರು ಬಿಡುಗಡೆ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೇಲೆ ಪ್ರಭಾವ ಬೀರುವಂತೆ ಶಿವಕುಮಾರ್ ಅವರು ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಮನವಿ ಮಾಡಿದ್ದರು.
ಈ ಮಧ್ಯೆ, ಕೃಷ್ಣೆಯಲ್ಲಿ ಹರಿಯುತ್ತಿರುವ ನೀರು ರಾಯಬಾಗ ತಾಲೂಕಿನ ಸಿದ್ದಾಪುರ, ಖೇಮಲಾಪುರ ದಾಟಿದ್ದು, ನಾಳೆ ಸಂಜೆ ವೇಳೆಗೆ ಅಥಣಿ ತಾಲೂಕಿನ ದರೂರ ಸೇತುವೆಯನ್ನು ತಲುಪಲಿದೆ.