ಮಳೆಗಾಲ ಸಮೀಪಿಸುತ್ತಿದ್ದಂತೆ, ಮಡಿಕೇರಿ ಜಿಲ್ಲೆಯಲ್ಲಿ ಪ್ರವಾಹ ಸನ್ನದ್ಧತೆ ಸಂಬಂಧ ಜಿಲ್ಲಾಡಳಿತದ ಪೂರ್ವ ಸಿದ್ಧತೆ ಎಲ್ಲರ ಸಾಮಾನ್ಯ ನಿರೀಕ್ಷೆ. ಆದರೆ, ಈ ವಾರ ಸನ್ನದ್ಧತೆ ಹಿನ್ನೆಲೆಯಲ್ಲಿ ನಡೆದ ಒಂದು ಘಟನೆ ಮತ್ತು ಅದರ ಸುತ್ತ ಜಿಲ್ಲಾಡಳಿತ ತಲೆಕೆಡಿಸಿಕೊಂಡ ಪರಿ ಹಲವರ ಹುಬ್ಬೇರಿಸಿದೆ.
ಜಿಲ್ಲೆಯಲ್ಲಿ 600ಕ್ಕೂ ಹೆಚ್ಚಿನ ಹೋಂ ಸ್ಟೇಗಳು ಇದ್ದು, ಹೆಚ್ಚಿನ ಹೋಂ ಸ್ಟೇಗಳು ಮಳೆಗಾಲದಲ್ಲಿ ಬುಕಿಂಗ್ ನಿಲ್ಲಿಸಲು ಒಪ್ಪುತ್ತಿಲ್ಲ. ಇನ್ನೊಂದೆಡೆ, ಜಿಲ್ಲೆಯಲ್ಲಿ ಎಷ್ಟು ರೆಸಾರ್ಟ್ ಗಳಿವೆ ಎಂಬ ಲೆಕ್ಕ ಪ್ರವಾಸೋದ್ಯಮ ಇಲಾಖೆ ಬಳಿ ಇಲ್ಲ.
ಕೆಲವು ದಿನಗಳ ಹಿಂದೆ, ಅಂದರೆ ಜೂನ್ 1ರಂದು ಮಕ್ಕಂದೂರು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿರುವ ಹೋಂ ಸ್ಟೇಗಳಿಗೆ ಸೂಚನೆಯೊಂದನ್ನು ನೀಡಿ, ಮುಂದಿನ ಮೂರು ತಿಂಗಳುಗಳ ಕಾಲ ಆದಷ್ಟು ಬುಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿತ್ತು. ಮಕ್ಕಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆಂಗಪ್ಪ, ಪಂಚಾಯತ್ ಸಭೆಯ ನಿರ್ಣಯದಂತೆ ಮಕ್ಕಂದೂರು ವ್ಯಾಪ್ತಿಯ ಎಲ್ಲಾ ಹೋಂ ಸ್ಟೇಗಳಿಗೆ ಈ ಸೂಚನೆಯನ್ನು ನೀಡಿದ್ದರು. ಸೂಚನೆಯ ಹೊರತಾಗಿಯೂ ಪ್ರವಾಸಿಗರ ಬುಕಿಂಗ್ ಮುಂದುವರಿಸಿ, ಅವಘಡ ಸಂಭವಿಸಿದರೆ, ಹೋಂ ಸ್ಟೇ ಮಾಲಿಕರನ್ನು ಹೊಣೆ ಮಾಡುವುದಾಗಿಯೂ ಹೇಳಲಾಗಿತ್ತು. ಮಕ್ಕಂದೂರು ಪಂಚಾಯತ್ ವ್ಯಾಪ್ತಿಯಲ್ಲಿ ನೊಂದಣಿಯಾದ 21 ಹೋಂ ಸ್ಟೇಗಳಿವೆ ಹಾಗೂ ಒಂದು ರೆಸಾರ್ಟ್ ಇದೆ.
ಈ ಸೂಚನೆಯ ಹಿಂದೆ ಒಂದು ಸಕಾರಣ ಇದೆ. 2018ರ ಅನಾಹುತದ ನಂತರ ಎಚ್ಚೆತ್ತ ಜಿಲ್ಲಾಡಳಿತ ಈ ವರ್ಷ ಸೂಕ್ಷ್ಮ ಪ್ರದೇಶಗಳ ಬಗ್ಗೆ ವರದಿಯೊಂದನ್ನು ನೀಡುವಂತೆ ಭಾರತೀಯ ಭೂವೈಜ್ಞಾನಿಕ ಸರ್ವೆ ಸಂಸ್ಥೆಗೆ (Geological Survey of India – GSI) ಮನವಿಮಾಡಿತ್ತು. ಪೂರ್ಣ ವರದಿ ನೀಡಲು ಇನ್ನೂ ಸಮಯ ಬೇಕಾಗಿದ್ದರೂ, ಜಿಲ್ಲಾಡಳಿತದ ಮನವಿ ಮೇರೆಗೆ ಮಧ್ಯಂತರ ವರದಿ ನೀಡಿದ GSI ಕಳೆದ ವರ್ಷ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಅಷ್ಟೂ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದು ಹೇಳಿತ್ತು. ವರದಿಯಂತೆ, ಮಡಿಕೇರಿಯ ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೋಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ, ಮೊಣ್ಣಂಗೇರಿ ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಗಮನಾರ್ಹ ಅಂಶವೆಂದರೆ, 2017 ರಲ್ಲಿಯೂ GSI ವರದಿಯೊಂದನ್ನು ನೀಡಿತ್ತು. ಆಗ 2018ರಲ್ಲಿ ಭೂಕುಸಿತ ಉಂಟಾದ ಹೆಚ್ಚಿನ ಪ್ರದೇಶಗಳನ್ನು `ದುರ್ಬಲ’ ಎಂದು ವರದಿ ಹೇಳಿತ್ತು.

ಆದರೆ, ಮಕ್ಕಂದೂರು ಪಂಚಾಯತ್ ನಿರ್ಣಯದಿಂದ ಜಿಲ್ಲಾಡಳಿತ ತನ್ನನ್ನು ತಾನು ದೂರವಿರಿಸಿತು. ಜಿಲ್ಲಾಧಿಕಾರಿ ಆನೀಸ್ ಕಣ್ಮಣಿ ಜಾಯ್ ಮಾಧ್ಯಮಗಳಿಗೆ ಒಂದು ಹೇಳಿಕೆ ನೀಡಿ, ಜಿಲ್ಲೆಯಲ್ಲಿ ಅನಾಹುತ ಆಗುವ ಯಾವ ಮುನ್ಸೂಚನೆಯೂ ಇಲ್ಲ ಮತ್ತು ಮಕ್ಕಂದೂರು ಪಂಚಾಯತ್ ನಿರ್ಣಯವನ್ನು ಕೇವಲ ಆ ಪಂಚಾಯತ್ ವ್ಯಾಪ್ತಿಗಷ್ಟೇ ಪರಿಗಣಿಸಬೇಕು ಎಂದರು. ಮುಂದಿನ ಎರಡು ದಿನಗಳ ಕಾಲ ಹಲವಾರು ಬೆಳವಣಿಗೆಗಳು ನಡೆದು, ಕೊನೆಗೂ ಹಲವಾರು ಒತ್ತಡಗಳಿಗೆ ಮಣಿದು ಮಕ್ಕಂದೂರು ಪಂಚಾಯತ್ ತನ್ನ ಜೂನ್ 1 ರ ಸೂಚನೆಯನ್ನು ಜೂನ್ 4 ರಂದು ಹಿಂಪಡೆಯಿತು. ಹಲವು ಅಧಿಕಾರಿಗಳ ಪ್ರಕಾರ, ಹೋಂ ಸ್ಟೇ ಮಾಲಿಕರು ಹಾಗೂ ಕೆಲವು ಸ್ಥಳೀಯ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳ ಒತ್ತಡದಿಂದಾಗಿ ಮಕ್ಕಂದೂರು ಪಂಚಾಯತ್ ತನ್ನ ನಿರ್ಣಯದಿಂದ ಹಿಂದೆ ಸರಿದಿದೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.
ಕೊಡಗು ನಿರ್ವಿವಾದಿತವಾಗಿ ಪ್ರವಾಸಿಗರ ನೆಚ್ಚಿನ ಸ್ಥಳ. ಹಾಗಾಗಿಯೇ ಸ್ಥಳೀಯರಿಗಂತೂ ಪ್ರವಾಸೋದ್ಯಮ ದೈನಂದಿನ ಗಳಿಕೆಯ ಮೂಲವೂ ಹೌದು. ಆದರೆ, ಕಳೆದ ವರ್ಷ ಸುರಿದ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದಾಗಿ 40 ಪ್ರವಾಸಿಗರು ಸಿಲುಕಿದ್ದರು. ಮಕ್ಕಂದೂರು ಪಂಚಾಯತ್ ನ ನಿರ್ಣಯ ಹಿಂಪಡೆಯುವಲ್ಲಿ ಹೋಂ ಸ್ಟೇ ಮಾಲಿಕರ ಒತ್ತಡವಿದೆಯೇ?
ಹೋಂ ಸ್ಟೇ ಮಾಲಿಕರು ಇದನ್ನು ಒಪ್ಪುವುದಿಲ್ಲ. ಕಳೆದ ವರ್ಷದ ಅನಾಹುತಕ್ಕೆ ಮುಖ್ಯ ಕಾರಣ ಎಡೆ ಬಿಡದೇ ಸುರಿದ ಮಳೆ. ಮಡಿಕೇರಿ ಜಿಲ್ಲೆಯಲ್ಲಿ 2018 ರಲ್ಲಿ ವಾರ್ಷಿಕ ಸರಾಸರಿ ಮಳೆಗಿಂತ ಅಧಿಕ ಮಳೆಯಾಗಿತ್ತು. ಅದರಲ್ಲಿಯೂ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳಲ್ಲಿ ವಾರ್ಷಿಕ ಸರಾಸರಿಗಿಂತ ಅನುಕ್ರಮವಾಗಿ 28%, 30% ಹಾಗೂ 73% ಅಧಿಕ ಮಳೆಯಾಗಿತ್ತು.
ಹೋಂ ಸ್ಟೇ ಒಂದರ ಮಾಲಕರೂ, ಅಸೋಸಿಯೇಶನ್ ನ ಸದಸ್ಯರೂ ಆಗಿರುವ ಸಾಗರ ಅಪ್ಪರಾಂಡ ಅವರು ಹೇಳುವ ಪ್ರಕಾರ ಜಿಲ್ಲಾಡಳಿತ ಬೆನ್ನಿಗೆ ನಿಲ್ಲದಿದ್ದರೆ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತೆ ಚಿಗುರುವುದಕ್ಕೆ ಸಾಧ್ಯವೇ ಇಲ್ಲ. “ವರದಿಗಳ ಪ್ರಕಾರ ಕಳೆದ ವರ್ಷದ ಅನಾಹುತಕ್ಕೆ ಮುಖ್ಯ ಕಾರಣ ಒಂದು ಸಣ್ಣ ಭೂಕಂಪ ಮತ್ತು ಬಿಡದೇ ಸುರಿದ ಮಳೆ. ಈ ಅತಿ ವೃಷ್ಟಿಯಿಂದಾಗಿ ಭೂಕುಸಿತ ಉಂಟಾಗಿತ್ತು. ಇದೇ ರೀತಿ ಪ್ರವಾಸಿಗರನ್ನು ಭಯಪಡಿಸಿದರೆ, ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಏನಾಗಬೇಕು. ನಮ್ಮ ಮನವಿ ಇಷ್ಟೆ. ಕಳೆದ ವರ್ಷದ ಅನಾಹುತದ ಭೀತಿಯನ್ನು ಮುಂದಿಟ್ಟು ವಿನಾಕಾರಣ ಪ್ರವಾಸೋದ್ಯಮ ಕೆಡಿಸಿಬಾರದು,’’ ಎಂದು ಸಾಗರ ಹೇಳುತ್ತಾರೆ.
ಆದರೆ, 2018 ರ ಅನಾಹುತದ ನಂತರವಾದರೂ, ಸಂಬಂಧಪಟ್ಟ ಯಾವುದಾರೂ ಇಲಾಖೆ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳ ಸಂಬಂಧ ಸಮೀಕ್ಷೆ ನಡೆಸಿದೆಯೇ ಎಂದು ತಿಳಿಯುವ ಪ್ರಯತ್ನ ಪ್ರತಿಧ್ವನಿ ನಡೆಸಿತು. ಪ್ರವಾಸೋದ್ಯಮ ಇಲಾಖೆ ಪ್ರಕಾರ, ರೆಸಾರ್ಟ್ ಗಳು ಪ್ರವಾಸೋದ್ಯಮ ಇಲಾಖೆಯ ನೊಂದಣಿ ಪಡೆಯಬೇಕಾದ ಅಗತ್ಯ ಏನೂ ಇಲ್ಲ. ಆದರೆ, ಹೋಂ ಸ್ಟೇಗಳು ಮಾತ್ರ ಕಡ್ಡಾಯವಾಗಿ ಇಲಾಖೆಯಿಂದ ನೊಂದಣಿ ಮಾಡಿಸಿಕೊಳ್ಳಬೇಕು.
ಜಿಲ್ಲೆಯಲ್ಲಿ ನೊಂದಣಿಯಾಗಿರುವ ಹೋಂ ಸ್ಟೇಗಳ ಸಂಖ್ಯೆ 600. ಅನಧಿಕೃತ ಹೋಂ ಸ್ಟೇಗಳ ಎಷ್ಟಿವೆ ಎಂದು ಪತ್ತೆ ಹಚ್ಚುವುದು ಸುಲಭದ ಕಾರ್ಯವಲ್ಲ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು. “ರೆಸಾರ್ಟ್ ಗಳು ಸಬ್ಸಿಡಿ ಅಥವಾ ಪ್ರೋತ್ಸಾಹ ಧನ ಬೇಕಾದಲ್ಲಿ ಮಾತ್ರ ನಮ್ಮ ಇಲಾಖೆಯ ಮಾನ್ಯತೆ ಪಡೆಯುತ್ತಾರೆ. ಇಲ್ಲದೇ ಹೋದಲ್ಲಿ ರೆಸಾರ್ಟ್ ಗಳು ನೇರ ಜಿಲ್ಲಾಡಳಿತದ ಅಧೀನದಲ್ಲಿ ಬರುತ್ತವೆ. ಇನ್ನು, ಅನಧಿಕೃತ ಹೋಂ ಸ್ಟೇ ಬಗ್ಗೆ ಮಾಹಿತಿ ದೊರಕಿ, ದಾಳಿ ನಡೆಸಿದರೂ, ಮನೆಯಲ್ಲಿ ಉಳಿದುಕೊಂಡವರು ಸಂಬಂಧಿಕರು ಎಂದಾಗ ಹೆಚ್ಚೇನೂ ಮಾಡಲಾಗುವುದಿಲ್ಲ,’’ ಎಂದು ಅಧಿಕಾರಿಯೊಬ್ಬರು ಹೇಳಿದರು.