ಪ್ರಯಾಣಿಕರ ವಾಹನ ಮಾರಾಟದಲ್ಲಿ ಕಳೆದ ಎಂಟು ವರ್ಷಗಳಲ್ಲಿಯೇ ಅತ್ಯಂತ ಕಳಪೆ ಮಾರಾಟ ಈ ವರ್ಷ ದಾಖಲಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ಮೇ 13ರಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ವರ್ಷದ ಏಪ್ರಿಲ್‌ನಲ್ಲಿ 2,98,504 ವಾಹನಗಳು (ಕಾರು, ಜೀಪು ಇತ್ಯಾದಿ) ಮಾರಾಟ ಆಗಿದ್ದವು. ಈ ವರ್ಷದ ಏಪ್ರಿಲ್‌ನಲ್ಲಿ ಅದು ಶೇಕಡ 17ರಷ್ಟು ಕೆಳಕ್ಕಿಳಿದು 2,47,541ಕ್ಕೆ ಬಂದುನಿಂತಿದೆ. ಇನ್ನು, ಎಸ್‌ಐಎಎಂ ಅಂಕಿ-ಅಂಶಗಳ ಪ್ರಕಾರ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೂಡ ಶೇಕಡ 16ರಷ್ಟು ಇಳಿಕೆ ಕಂಡುಬಂದಿದ್ದು, 1.6 ಮಿಲಿಯನ್ ವಾಹನ ಮಾರಾಟವಾಗಿವೆ.
ಭಾರತದ ಅತಿದೊಡ್ಡ ಆಟೊಮೊಬೈಲ್ ತಯಾರಿಕಾ ಸಂಸ್ಥೆಯಾದ ಮಾರುತಿ ಸುಝುಕಿ, ಮಾರ್ಚ್ 31ರ ಅಂತ್ಯಕ್ಕೆ ಮೂರು ತಿಂಗಳ ಅವಧಿಯಲ್ಲಿ 4,58,479 ವಾಹನ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದೆ. ಆದಾಗ್ಯೂ ಕಳೆ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಶೇಕಡ 0.7ರಷ್ಟು ಮಾರಾಟ ಇಳಿಮುಖವಾಗಿದೆ.
“ಕಳೆದ ವರ್ಷದ ಮಾರ್ಚ್‌ನಲ್ಲಿ ಮಾರಾಟ ಏರಿಕೆ ಕಂಡಿತ್ತು. ಆದರೆ, ಈ ಬಾರಿ ನಾನಾ ಕಾರಣಗಳಿಂದ ಚುನಾವಣೆ ವೇಳೆಯಲ್ಲಿ ವಾಹನ ಕೊಳ್ಳುವುದರಿಂದ ಗ್ರಾಹಕರು ಹಿಂದೆ ಸರಿದಿದ್ದಾರೆ. ನನ್ನ ಅಂದಾಜಿನಂತೆ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಹನಗಳ ಬೇಡಿಕೆ ಹೆಚ್ಚಾಗಲಾರದು,” ಎಂದಿದ್ದಾರೆ ಮಾರುತಿ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಭಾರ್ಗವ.
ಆದರೆ, ಈ ಪ್ರಮಾಣದಲ್ಲಿ ಅಲ್ಲದಿದ್ದರೂ ಈ ಬಗೆಯ ಇಳಿಕೆ ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಕಂಡುಬಂದಿದೆ ಎನ್ನಲಾಗಿದೆ. ಇದೇ ಫೆಬ್ರವರಿಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಫೆಡರೇಶನ್ ಆಫ್ ಆಟೊಮೊಬೈಲ್ ಡೀಲರ್ಸ್ ಅಸೋಶಿಯೇಷನ್, ದೇಶಾದ್ಯಂತ ವಾಹನ ಮಾರಾಟಗಾರರು ಮಾರಾಟ ಕುಸಿತದ ಮುನ್ನೆಚ್ಚರಿಕೆ ಗ್ರಹಿಸಿದ್ದಾರೆ ಎಂದಿತ್ತು. ಗ್ರಾಹಕರ ಭಾವನೆಗಳಲ್ಲಿನ ಏರುಪೇರು, ಕಠಿಣ ಆರ್ಥಿಕ ಪರಿಸ್ಥಿತಿಯಿಂದ ಬೇಡಿಕೆ ಕುಸಿದಿದೆ ಎಂಬುದು ಅಸೋಶಿಯೇಷನ್ ಅಭಿಪ್ರಾಯ. ಆದರೆ, ನಾನಾ ಕಾರಣಗಳಿಂದ ಕುಸಿದಿರುವ ಬೇಡಿಕೆ ಮತ್ತೆ ಸರಿದಾರಿಗೆ ಬರಲಿದೆ ಎಂಬುದು ವಾಹನ ಮಾರಾಟಗಾರರು ಮತ್ತು ತಯಾರಕರ ಆಶಯ.