ಉಡುಪಿಯಲ್ಲಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವೆ ಟ್ವಿಟ್ಟರ್ ಕಾಳಗವೊಂದನ್ನು ನೋಡಿದೆ. ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ‘ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ದೋಣಿಯ ಅವಶೇಷ ದೊರೆತ ಬಗ್ಗೆ ಮಾಜಿ ಶಾಸಕರು ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಭಾರತದ ನೌಕಾಪಡೆಯನ್ನು ‘ಕೊಲೆಗಡುಕರು’ ಅನ್ನುವ ಅರ್ಥದಲ್ಲಿ ಬರೆದರೆ, ಇನ್ನೊಬ್ಬರು ‘ಎಂ.ಪಿ’ (ಮೈತ್ರಿ ಅಭ್ಯರ್ಥಿ ಎಂಪಿ ಆಕಾಂಕ್ಷಿ ಎಂಬರ್ಥದಲ್ಲೋ ಏನೋ) ಅಂದರೆ ಮಂಡೆ ಪೆಟ್ಟು’ ಎಂದು ಬರೆದಿದ್ದಾರೆ.
ಒಬ್ಬ ಮನೋವೈದ್ಯನಾಗಿ ನನಗೆ ಈ ಇಬ್ಬರ ಭಾಷೆಯ ಬಗ್ಗೆಯೇ ಸ್ವಲ್ಪ ಬೇಸರ. ಜನರನ್ನು ಮುನ್ನಡೆಸಬೇಕಾದವರು ಈ ರೀತಿಯಾಗಿ ಜಗಳ ಮಾಡಿಕೊಂಡು ಕೂತರೆ ಹೇಗೆ? ಎಲ್ಲದಕ್ಕಿಂತ ಹೆಚ್ಚಾಗಿ ಈ ‘ಮಂಡೆ ಪೆಟ್ಟು’ ಎಂಬ ಪದದ ಬಗ್ಗೆ ನನ್ನ ಕೆಲವು ಯೋಚನೆಗಳು.
‘ಮಂಡೆ ಪೆಟ್ಟು’ ಎಂಬ ಈ ಶಬ್ದ ಉಡುಪಿ-ದಕ್ಷಿಣ ಕನ್ನಡದಲ್ಲಿ ಬಹಳ ಪ್ರಚಲಿತ. ಬೆಂಗಳೂರಿನಲ್ಲಿ ‘ಮೆಂಟಲ್’ ಅಂದ ಹಾಗೆ, ಮುಂಬಯಿಯಲ್ಲಿ ‘ಸೈಕೋ’ ಅಂದಹಾಗೆ. ಇವೆಲ್ಲ ಸಾಲದು ಅನ್ನುವಾಗ, ‘ಮೆಂಟಲ್ ಹೇ ಕ್ಯಾ’ ಅನ್ನುವ ಚಲನಚಿತ್ರ ಬೇರೆ ಬರುತ್ತಿದೆ!
ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಈ ‘ಮೆಂಟಲ್’ ಅನ್ನುವ ಶಬ್ದ ಮಾನಸಿಕ ಅಸ್ವಸ್ಥತೆಯನ್ನು ಬಣ್ಣಿಸಲು ನಮ್ಮ ಸ್ವಸ್ಥ (?) ಸಮಾಜ ಉಪಯೋಗಿಸುತ್ತಿರುವ ಶಬ್ದ. ಇಚ್ಛಿತ ಚಿತ್ತವಿಕಲತೆ (ಸ್ಕಿಜೋಫ್ರೇನಿಯಾ) ಎಂಬ ಕಾಯಿಲೆ, ಬೈಪೋಲಾರ್ ಕಾಯಿಲೆ, ತೀವ್ರ ಖಿನ್ನತೆ ಮುಂತಾದ ಕಾಯಿಲೆಗಳು ನಮ್ಮ ಮಿದುಳಿನ ನರವಾಹಕಗಳಲ್ಲಿ ಉಂಟಾಗುವ ತೊಂದರೆಯಿಂದ ಬರುವ ಸಮಸ್ಯೆಗಳು. ಈ ಕಾಯಿಲೆ ಇರುವವರು ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ ಇರುವವರು ಹೇಗೆ ಸಮಾಜದಲ್ಲಿ ತೊಡಕಿಲ್ಲದೆ ಬದುಕುತ್ತಾರೋ ಹಾಗೆಯೇ ಬದುಕುತ್ತಿದ್ದಾರೆ. ಇದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ನಮ್ಮ ನಾಯಕರಂತೂ ಇದರ ಬಗ್ಗೆ ಸ್ವಲ್ಪವಾದರೂ ತಲೆಕೆಡಿಸಿಕೊಳ್ಳುವುದು ತೀರಾ ಅಗತ್ಯ.
ಮಾನಸಿಕ ಕಾಯಿಲೆ ಇರುವವರನ್ನು ಕಡೆಗಣಿಸಿ ಮಾತನಾಡುವುದು ಅಥವಾ ತಮ್ಮ ಭಾಷೆಯಲ್ಲಿ ‘ಮೆಂಟಲ್’, ‘ಮಂಡೆ ಪೆಟ್ಟು’, ‘ಸೈಕೋ’ ಮುಂತಾದ ಶಬ್ದಗಳ ಉಪಯೋಗ ನಾಗರಿಕ ಸಮಾಜಕ್ಕೆ ಶೋಭೆ ತರುವ ವಿಚಾರವಲ್ಲ. ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಜಾನ್ ನ್ಯಾಶ್, ನೊಬೆಲ್ ಬಹುಮಾನವನ್ನು ಪಡೆದದ್ದು ಎಲ್ಲರಿಗೂ ಗೊತ್ತೇ ಇದೆ. ಆತನ ಜೀವನದ ಬಗ್ಗೆ ‘A Beautiful Mind’ ಎಂಬ ಒಂದು ಚಲನಚಿತ್ರವೇ ಬಂದಿದೆ. ಮಾನಸಿಕ ಕಾಯಿಲೆಯ ಮಾತ್ರೆಗಳನ್ನು ತೆಗೆದುಕೊಂಡಾಗ ಆತ ಹೇಗೆ ಇದ್ದ, ಮಾತ್ರೆಗಳನ್ನು ಬಿಟ್ಟಾಗ ಆತನ ಜೀವನದಲ್ಲಿ ಏನೆಲ್ಲ ಆಯಿತು ಎಂಬುದರ ಬಗ್ಗೆ ಈ ಜೀವನ ವೃತ್ತಾಂತ ಸಾಕಷ್ಟು ಹೇಳುತ್ತದೆ. ಇದನ್ನು ಏಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ, ‘ಮೆಂಟಲ್ ಹೇ ಕ್ಯಾ’ ಎಂಬ ಹೆಸರಿನ ಸಿನಿಮಾ ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ.

ಸಾರ್ವಜನಿಕ ಜೀವನದಲ್ಲಿ ಬದುಕುವ ಜನನಾಯಕರುಗಳಾದ ಸಿದ್ದರಾಮಯ್ಯ ಇನ್ನೊಬ್ಬ ಪ್ರತಿಪಕ್ಷದ ಜನನಾಯಕರಿಗೆ ‘ಹುಚ್ಚು ಹಿಡಿದಿದೆ’ ಅನ್ನುವುದು ಅಥವಾ ಉಡುಪಿಯ ಶಾಸಕರು ಇನ್ನೊಬ್ಬರಿಗೆ ‘ಮಂಡೆ ಪೆಟ್ಟು’ ಎನ್ನುವುದು, ರಾಜಕೀಯ ಪಕ್ಷದ ಕಾರ್ಯಕರ್ತರು ಕೆಲವೊಮ್ಮೆ ತಮ್ಮ ವಿರೋಧಿಗಳನ್ನು ‘ನಿಮ್ಹಾನ್ಸ್‌ಗೆ ಸೇರಿಸಬೇಕು’ ಅನ್ನುವುದು ಮಾನಸಿಕ ಕಾಯಿಲೆಯ ಬಗ್ಗೆ ಬಹಳ ಹಗುರವಾದ ಮಾತು ಅಂತ ಅನ್ನಿಸುತ್ತದೆ. ಹಾಗಾಗಿ ಜನಸಾಮಾನ್ಯರಿಗೆ ಈ ಕೆಳಗಿನ ವಿಷಯಗಳನ್ನು ತಿಳಿಹೇಳಬಯಸುತ್ತೇನೆ.
ಬಿ.ಪಿ, ಸಕ್ಕರೆ ಕಾಯಿಲೆ ಹೇಗೆ ದೇಹದ ಕೆಲವು ರಸದೂತಗಳ ಅಸಮತೋಲನದಿಂದ ಬರುತ್ತದೆಯೋ ಹಾಗೆಯೇ ಮೆದುಳಿನ ನರವಾಹಕಗಳಲ್ಲಿ ಬದಲಾವಣೆಗಳಿಂದ ಮಾನಸಿಕ ಕಾಯಿಲೆಗಳು ಬರುತ್ತವೆ. ಬಿಪಿ, ಸಕ್ಕರೆ ಕಾಯಿಲೆಗೆ ಹೇಗೆ ಚಿಕಿತ್ಸೆ ಇದೆಯೋ ಹಾಗೆಯೇ ಮಾನಸಿಕ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಮಾನಸಿಕ ಕಾಯಿಲೆ ಇರುವವರು ಕೂಡ ಸಮಾಜದಲ್ಲಿ ಸಾಕಷ್ಟು ಜವಾಬ್ದಾರಿಯುತ ಸ್ಥಾನಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಕಾಯಿಲೆಗಳ ಬಗ್ಗೆ ಹಗುರವಾದ ಮಾತುಗಳನ್ನು ಸಮಾಜದಲ್ಲಿ ತೇಲಿಬಿಟ್ಟರೆ ಹಲವರು ಮನೋರೋಗ ತಜ್ಞರಲ್ಲಿ ಚಿಕಿತ್ಸೆ ಪಡೆಯಲು ಹೆದರುತ್ತಾರೆ, ಹಿಂಜರಿಯುತ್ತಾರೆ. ಕಾಯಿಲೆಗೆ ಬೇಗ ಚಿಕಿತ್ಸೆ ಸಿಗದಿದ್ದರೆ ಆ ಕಾಯಿಲೆ ದೀರ್ಘಕಾಲ ಉಳಿಯಬಹುದು.
ಇಷ್ಟೆಲ್ಲ ಬರೆಯುವಾಗ ನನ್ನ ನೆನಪಿಗೆ ಬರುವುದು, ಉಡುಪಿ ಸಮೀಪದ ಬ್ರಹ್ಮಾವರ ಎಂಬ ಊರಿನಲ್ಲಿ ಪ್ರತಿ ತಿಂಗಳು ನಾವು ನಡೆಸುವ ಉಚಿತ ಮಾನಸಿಕ ಆರೋಗ್ಯ ಶಿಬಿರದ ಒಂದು ಘಟನೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧೆಯೊಬ್ಬರು ಒಂದು ವೃದ್ಧಾಶ್ರಮದಲ್ಲಿ ಜೀವನ ಮಾಡುತ್ತಾರೆ. ಅಲ್ಲಿ ಇನ್ನೂ ಇಬ್ಬರು ವೃದ್ಧರನ್ನು ಅವರು ನೋಡಿಕೊಳ್ಳುತ್ತಾರೆ. ಹಾಗೆಯೇ, ಕ್ರೋಶ ನೀಡಲ್‌ಗಳಿಂದ ಸ್ವೆಟ್ಟರ್, ಫೋನ್ ಕವರ್ ಹೊಲಿದು ಮಾರುತ್ತಾರೆ. ತನ್ನ ಕಾಲುಗಳ ಮೇಲೆ ತಾನು ನಿಂತಿದ್ದಾರೆ.
ಆದ್ದರಿಂದ, ಜನಪ್ರತಿನಿಧಿಗಳೇ, ದಯವಿಟ್ಟು ನೀವು ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡಿ. ಜನಸಾಮಾನ್ಯರೇ, ನೀವು ಕೂಡ ತಿಳಿದುಕೊಳ್ಳಿ- ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆ.
ಲೇಖಕರು ಮನೋವೈದ್ಯರು