ಬಿಜೆಪಿ ಮೈತ್ರಿ ತೊರೆದು ಕಾಂಗ್ರೆಸ್-ಎನ್ ಸಿಪಿ ಜೊತೆ ಸೇರಿ ಮಹಾವಿಕಾಸ್ ಅಗಡಿ ಸರ್ಕಾರ ರಚಿಸಿದ ಶಿವಸೇನೆಯ ಉದ್ದವ್ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಾಡಿ (ಎಂವಿಎಸ್) ಸರ್ಕಾರ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ರಾಜಕೀಯ ಹೋರಾಟ ಆರಂಭವಾಗುವುದು ಸ್ಪಷ್ಟವಾಗಿದೆ. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಉರುಳಿಸುತ್ತಿರುವ ರಾಜಕೀಯ ದಾಳದಿಂದ ಕಂಗೆಟ್ಟಿರುವ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಜೋಡಿಯು ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆಯಂಥ (ಎನ್ ಐಎ) ಪ್ರತಿಷ್ಠಿತ ತನಿಖಾ ಏಜೆನ್ಸಿಗಳ ದುರ್ಬಳಕೆಗೆ ಇಳಿದಿದೆ ಎಂಬ ಅನುಮಾನ ಬಲವಾಗಿ ಕೇಳಿಬಂದಿದೆ.
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಭೀಮಾ-ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿದ್ದ ಗಲಭೆ ಹಾಗೂ ಆನಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಒಂಭತ್ತು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಿಜೆಪಿ-ಶಿವ ಸೇನಾ ಸರ್ಕಾರ ಬಂಧಿಸಿತ್ತು. ತಳ ಸಮುದಾಯಗಳ ಹಕ್ಕುಗಳಿಗೆ ಹೋರಾಟ ನಡೆಸಿದ ತೆಲುಗು ಕವಿ ವರವರ ರಾವ್, ಸುಧಾ ಭಾರದ್ವಾಜ್ ರಂಥವರ ವಿರುದ್ಧ ಕಠಿಣ ಕಾನೂನುಗಳನ್ನು ವಿಧಿಸಿ ಜೈಲಿಗೆ ಅಟ್ಟಲಾಗಿದೆ. ವಿರೋಧಿಗಳನ್ನು ಅಣಿಯುವ ಉದ್ದೇಶದಿಂದ ಸೃಷ್ಟಿಸಲಾದ ಬಿಜೆಪಿಯ ಪ್ರಸಿದ್ಧ ಚುನಾವಣಾ ಅಸ್ತ್ರವಾಗಿರುವ ‘ನಗರ ನಕ್ಸಲ್’ ಎಂಬ ಹಣೆಪಟ್ಟಿಯನ್ನೂ ಬಂಧಿತ ಸಾಮಾಜಿಕ ಕಾರ್ಯರ್ತರಿಗೆ ಅಂಟಿಸಲಾಗಿದೆ.
ಎರಡು ವರ್ಷಗಳಿಂದ ಸುಮ್ಮನಿದ್ದ ಮೋದಿ ಸರ್ಕಾರವು ಮಹಾರಾಷ್ಟ್ರ ವಿಕಾಸ್ ಅಗಾಡಿ ಸರ್ಕಾರದ ಸೂತ್ರದಾರ ಶರದ್ ಪವಾರ್ ಅವರು ಭೀಮಾ-ಕೋರೆಗಾಂವ್ ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್ ಐಟಿ) ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತಿದ್ದಂತೆ ಏಕಾಏಕಿ ಪ್ರಕರಣವನ್ನು ಎನ್‌ಐಎ ಹಸ್ತಾಂತರಿಸುವ ಮೂಲಕ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎನ್ನುವ ಶಂಕೆ ಬಲಗೊಳ್ಳುವುದಕ್ಕೆ ಇಂಬು ನೀಡಿದೆ. ಇದರ ಬೆನ್ನಲ್ಲೇ, ಶರದ್ ಪವಾರ್ ಗೆ ನೀಡಲಾಗಿದ್ದ ಭದ್ರತೆಯನ್ನು ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ಹಿಂಪಡೆದಿರುವುದು ಹಲವು ರಾಜಕೀಯ ದ್ವೇಷ ಭಾಗವಾಗಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.
ಭೀಮಾ-ಕೋರೆಗಾಂವ್ ಹಿಂಸಾಚಾರ ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನ ವಿಚಾರವು ಗಂಭೀರವಾಗಿದ್ದರೆ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಹಾಗೂ ದೇವೇಂದ್ರ ಫಡನವೀಸ್ ನೇತೃತ್ವದ ಬಿಜೆಪಿ ಸರ್ಕಾರವು ಏತಕ್ಕಾಗಿ ಸ್ವತಂತ್ರ ತನಿಖಾ ಸಂಸ್ಥೆಯಾದ ಎನ್‌ಐಎ ವಹಿಸಲಿಲ್ಲ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಶರದ್ ಪವಾರ್ ಪ್ರಕರಣದ ತನಿಖೆಗೆ ಎಸ್ ಐಟಿ ನೇಮಕ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪಿಸಿದ ಮರುದಿನವೇ ಗೃಹ ಇಲಾಖೆಯು ಪ್ರಕರಣವನ್ನು ತರಾತುರಿಯಲ್ಲಿ ಎನ್ ಐಎಗೆ ಹಸ್ತಾಂತರಿಸುವ ಅಗತ್ಯವೇನಿತ್ತು?
ಇದಕ್ಕೂ ಮುನ್ನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಹಾಗೂ ಕಾಂಗ್ರೆಸ್ ನಾಯಕ, ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರ ಜೊತೆ ಸಭೆ ನಡೆಸಿದ್ದು, ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಮೋದಿ ಸರ್ಕಾರವು ಪ್ರಕರಣವನ್ನು ಎನ್ ಐ ಗೆ ವರ್ಗಾಯಿಸಿರುವುದು ಅಗಾಡಿ ಸರ್ಕಾರವನ್ನು ಕೆರಳಿಸಿದೆ.
2008ರಲ್ಲಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಅಂದಿನ ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಪಿ ಚಿದಂಬರಂ ಅವರು ಎನ್ ಐ ಎ ವಿಶೇಷ ಕಾನೂನು ಜಾರಿಗೊಳಿಸಿದ್ದರು. ಇದರ ಪ್ರಕಾರ ಅನುಮಾನಾಸ್ಪದ ಅಥವಾ ಶಂಕಿತ ಭಯೋತ್ಪಾದನಾ ಕೃತ್ಯಗಳನ್ನು ರಾಜ್ಯ ಸರ್ಕಾರದ ಅನುಮತಿಯಿಲ್ಲದೇ ಎನ್ ಐಎ ತನಿಖೆ ನಡೆಸಲು ಅವಕಾಶ ಕಲ್ಪಸಿಲಾಗಿದೆ. ಈ ನಿಯಮದಡಿ ಮೋದಿ ಸರ್ಕಾರವು ಭೀಮಾ-ಕೋರೆಗಾಂವ್ ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಕರಣದ ತನಿಖೆಯನ್ನು ಎನ್ ಐ ಎ ವರ್ಗಾಯಿಸಿದೆ ಎಂದಾದರೂ ಎರಡು ವರ್ಷ ಸುಮ್ಮನೆ ಇದ್ದುದು ಏತಕ್ಕೆ? ವಿರೋಧ ಪಕ್ಷಗಳ ನಾಯಕರು ಈ ಬಗ್ಗೆ ಸ್ವತಂತ್ರ ತನಿಖೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಏಕಾಏಕಿ ಪ್ರಕರಣವನ್ನು ತನ್ನದೇ ಉಸ್ತುವಾರಿಯಲ್ಲಿರುವ ಎನ್‌ಐಎ ಹಸ್ತಾಂತರಿಸಿರುವುದರ ಹಿಂದೆ ಮೋದಿ ಸರ್ಕಾರಕ್ಕೆ ಅಳುಕಿದೆ ಎಂಬುದು ಸ್ಪಷ್ಟವಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಪ್ರಧಾನಿಯನ್ನು ಕೊಲ್ಲುವ ಸಂಚನ್ನು ಸಾಮಾಜಿಕ ಕಾರ್ಯಕರ್ತರು ರೂಪಿಸಿದ್ದರು ಎಂಬುದು ಘೋರ ಅಪರಾಧ. ಇಂಥ ಸಮಾಜ ದ್ರೋಹಿ ಕೃತ್ಯಗಳನ್ನು ಸದೆಬಡಿಯಲು ಮೋದಿ ಸರ್ಕಾರ ತಡ ಮಾಡಿದ್ದೇಕೆ?
ಒಕ್ಕೂಟ ವ್ಯವಸ್ಥೆಯಾದ ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಚಾರ ರಾಜ್ಯಗಳಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಕಾನೂನು-ಸುವ್ಯವಸ್ಥೆ ಪಾಲಿಸಲು ವಿಫಲವಾದ ರಾಜ್ಯ ಸರ್ಕಾರಗಳಿಗೆ ಹಲವು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಛೀಮಾರಿಯನ್ನೂ ಹಾಕಿದೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಚತ್ತೀಸ್ ಗಡದ ಕಾಂಗ್ರೆಸ್ ಸರ್ಕಾರವು ಎನ್ ಐ ಎ ಕಾನೂನಿನಲ್ಲಿ ರಾಜ್ಯಗಳ ಹಕ್ಕು ಮೊಟಕುಗೊಳಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೋದಿ-ಶಾ ಜೋಡಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಹೇಳುತ್ತಿವೆ.
ಸ್ವಪ್ರತಿಷ್ಠೆಗೆ ಬಿದ್ದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಿರುವ ಬಿಜೆಪಿಗೆ ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಎಲ್ಲಿಲ್ಲದ ಸಮಸ್ಯೆ ತಂದೊಡ್ಡಿದೆ. ಕೇರಳ, ರಾಜಸ್ಥಾನ, ಪಂಜಾಬ್ ಸರ್ಕಾರಗಳು ಈಗಾಗಲೇ ಸಿಎಎ ವಿರೋಧಿಸಿ ಸದನದಲ್ಲಿ ನಿಲುವಳಿಗೆ ಒಪ್ಪಿಗೆ ಪಡೆದಿವೆ. ವಿರೋಧಿಗಳು ಹಾಗೂ ವಿರೋಧ ಪಕ್ಷಗಳನ್ನು ದೇಶದ್ರೋಹಿ ಹಾಗೂ ನಗರ ನಕ್ಸಲರು ಎಂಬ ಪದಗಳ ಮೂಲಕ ಬ್ರ್ಯಾಂಡಿಂಗ್ ಇಳಿದಿರುವ ಬಿಜೆಪಿಯು ಭೀಮಾ ಕೋರೆಗಾಂವ್ ಪ್ರಕರಣ ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಕಾಗಿಸಿ ಮೋದಿ-ಶಾ ಜೋಡಿಗೆ ಸೋಲುಣಿಸಿದ ಶರದ್ ಪವಾರ್ ಅವರು ಬಿಜೆಪಿಯ ರಾಜಕೀಯ ಸಂಕಥನವನ್ನು ದೂಳೀಪಟ ಮಾಡಬಲ್ಲ ಮಹತ್ವದ ಪ್ರಕರಣಕ್ಕೆ ಕೈಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡುವುದರಲ್ಲಿ ಅನುಮಾನವೇ ಇಲ್ಲ. ನಿರುದ್ಯೋಗ, ಆರ್ಥಿಕ ಕುಸಿತ, ಜಾಗತಿಕ ಒತ್ತಡಗಳಿಂದ ಮೋದಿ ಸರ್ಕಾರದ ವರ್ಚಸ್ಸಿಗೆ ಹೊಡೆತ ಬಿದ್ದಿರುವ ನಡುವೆಯೇ ದೇಶೀಯ ರಾಜಕೀಯ ಬೆಳವಣಿಗೆಗಳನ್ನು ಮೋದಿ-ಶಾ ಜೋಡಿ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.