ಪ್ರಧಾನಿ ನರೇಂದ್ರ ಮೋದಿಯವರು ಇಂದು (17-09-2019) 69ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ತಮ್ಮ ತವರು ರಾಜ್ಯ ಗುಜರಾತ್ ಗೆ ಭೇಟಿ ನೀಡಿ ನರ್ಮದಾ ನದಿಯ ಸರ್ದಾರ್ ಸರೋವರ್ ಡ್ಯಾಮ್ ನಲ್ಲಿ ನಡೆದ ‘ನರ್ಮದಾ ಆರತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದಾರೆ.
ಕೇವಡಿಯಾದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, “ಪ್ರಕೃತಿಯನ್ನು ರಕ್ಷಿಸಿಕೊಂಡೇ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ನಮ್ಮ ಸಂಸ್ಕೃತಿಯಾಗಿದೆ, ಪ್ರಕೃತಿಯು ನಮ್ಮ ಪಾಲಿಗೆ ಅಮೂಲ್ಯ ಆಭರಣವಿದ್ದಂತೆ” ಎಂಬುದಾಗಿ ಹೇಳಿದ್ದಾರೆ. ಜೊತೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿ ಬಂದಿದ್ದಾರೆ.
ಆದರೆ ಸರ್ದಾರ್ ಸರೋವರ ನಿರ್ಮಾಣದೊಂದಿಗೆ ಹುಟ್ಟಿಕೊಂಡಿರುವ ಮೂಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆಯೇ ಎಂದು ಪರಿಶೀಲಿಸಿದರೆ ನಿರಾಶೆಯ ಉತ್ತರ ದೊರೆಯುತ್ತದೆ. ಅಣೆಕಟ್ಟೆಯ ಎತ್ತರವನ್ನು 2017 ರಲ್ಲಿ ಹೆಚ್ಚಿಸಿದ ನಂತರ ಅಣೆಕಟ್ಟೆಯ ಗರಿಷ್ಠ ಮಟ್ಟ 138.68 ಮೀಟರ್ (ಸಮುದ್ರ ಮಟ್ಟದಿಂದ) ಎತ್ತರಕ್ಕೆ ಇದೇ ಮೊದಲ ಬಾರಿಗೆ ನೀರು ಭರ್ತಿಯಾಗಿದೆ. ನೀರನ್ನು ಹೊರಬಿಡದೆ ಮಂಗಳವಾರದ ವೇಳೆಗೆ ಅಣೆಕಟ್ಟೆಯ ಗರಿಷ್ಠ ಮಟ್ಟಕ್ಕೆ ನೀರು ತುಂಬಿಸಲಾಗಿದೆ. ಪ್ರಧಾನಿ ಜನ್ಮ ದಿನಕ್ಕಾಗಿಯೇ ಗುಜರಾತ್ ಸರ್ಕಾರ ಸುರಕ್ಷತಾ ನಿಯಮಗಳನ್ನು ಕಡೆಗಣಿಸಿ ಆತುರಾತುರವಾಗಿ ಅಣೆಕಟ್ಟೆಯನ್ನು ಗರಿಷ್ಠ ಮಟ್ಟಕ್ಕೆ ತುಂಬಿಸಿದೆ ಎಂದು ಹೇಳಲಾಗುತ್ತಿದೆ.
ಅಣೆಕಟ್ಟೆಯ ಗರಿಷ್ಠ ಮಟ್ಟಕ್ಕೆ ನೀರು ತುಂಬಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಣೆಕಟ್ಟೆಯ ಸುತ್ತಮುತ್ತಲ ಗ್ರಾಮಗಳ ಜನರಿಗೆ ಭೂಮಿ ಕಂಪಿಸಿರುವ ಅನುಭಗಳಾಗಿವೆ ಎಂದು ‘ದಿ ಹಿಂದು’ ವರದಿ ಮಾಡಿದೆ. ಗಣಿ ಪ್ರದೇಶದಲ್ಲಿ ಡೈನಾಮೈಟ್ ಸಿಡಿಸಿದಾಗ ಉಂಟಾಗುವ ಭಾರೀ ಶಬ್ದ ಕೇಳಿರುವುದಾಗಿ ಸಹ ಸ್ಥಳೀಯ ನಿವಾಸಿಗಳು ಹೇಳಿಕೊಂಡಿದ್ದಾರೆ.

ಸರೋವರದ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸುವ ಪ್ರಕ್ರಿಯೆಗೆ ಸರೋವರ ಪ್ರೇರಿತ ಭೂಕಂಪನಶೀಲತೆ ಎಂದು ಹೇಳಲಾಗುತ್ತದೆ. ಸರೋವರ ತುಂಬಿದಾಗ ಸರೋವರ ಇರುವ ಭೂಮಿಯ ಮೇಲೆ ನೀರಿನ ಒತ್ತಡ ಹೆಚ್ಚುತ್ತದೆ. ಈ ಒತ್ತಡ ಒಮ್ಮೊಮ್ಮೆ ಯಾವ ಪ್ರಮಾಣದಲ್ಲಿರುತ್ತದೆ ಎಂದರೆ ಸರೋವರದ ಅಡಿಯ ಭೂ ಪದರಗಳು ಚಲಿಸುವಷ್ಟಿರುತ್ತದೆ. ಸರೋವರದ ತಳದಲ್ಲಿ ಬಿರುಕು ಮೂಡಿ, ಅದರೊಳಗೆ ನೀರು ಸೇರಿ, ಬಿರುಕು ಮತ್ತಷ್ಟು ದೊಡ್ಡದಾಗುವ, ಶಿಲಾಪದರಗಳು ಜರುಗುವ ಅಪಾಯ ಇರುತ್ತದೆ.
ಅದೂ ಅಲ್ಲದೆ, ಅಣೆಕಟ್ಟೆಯು ಮೊದಲ ಬಾರಿಗೆ ತುಂಬಿದಾಗ ಇಂತಹ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ. ಕೇರಳದಲ್ಲಿ ಕಳೆದ ವರ್ಷ ಭೀಕರ ಪ್ರವಾಹ ಉಂಟಾದ ನಂತರ ಅಣೆಕಟ್ಟೆಗಳ ಪ್ರದೇಶದಲ್ಲಿ ಸರೋವರ ಪ್ರೇರಿತ ಭೂಕಂಪನಶೀಲತೆ ಪ್ರಮಾಣ ಹೆಚ್ಚಾಗಿದೆ ಎಂಬುದಾಗಿ ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಕೇರಳದಲ್ಲಿ ಅಣೆಕಟ್ಟೆಗಳು ಗರಿಷ್ಠ ಮಟ್ಟಕ್ಕೆ ತುಂಬಲಾರಂಭಿಸಿದಾಗ ಗೇಟ್ ಗಳನ್ನು ತೆರೆದು ನೀರನ್ನು ಹೊರಬಿಡದೇ ಇದ್ದಿದ್ದರೆ, ಪ್ರವಾಹದ ಜೊತೆಗೆ ಭೂಕಂಪವೂ ಉಂಟಾಗುವ ಅಪಾಯ ಇತ್ತು ಎಂಬುದಾಗಿ ಅಧ್ಯಯನವು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 1967 ರಲ್ಲಿ ಉಂಟಾದ ಭಾರಿ ಭೂಕಂಪಕ್ಕೆ ಕೊಯ್ನಾ ಅಣೆಕಟ್ಟೆಯ ಸರೋವರ ಪ್ರೇರಿತ ಭೂಕಂಪನಶೀಲತೆಯೇ ಕಾರಣ ಎಂದು ಹೇಳಲಾಗುತ್ತದೆ. ಸರೋವರವು ಗರಿಷ್ಠ ಮಟ್ಟಕ್ಕೆ ತುಂಬಿದಾಗ ಅದು ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ತೋರುವ ಭೂಕಂಪಕ್ಕೆ ಪ್ರೇರಣೆ ನೀಡಿತು. ಇದರಿಂದ 177 ಜನ ಪ್ರಾಣ ಕಳೆದುಕೊಂಡರು. ಆದಾಗ್ಯೂ, ಕೆಲ ಅಧ್ಯಯನಗಳು ಸರೋವರ ತುಂಬಿದ್ದಕ್ಕೂ ಭೂಕಂಪಕ್ಕೂ ಸಂಬಂಧವಿಲ್ಲ ಎಂದು ಸಹ ಹೇಳಿವೆ.
ಅಣೆಕಟ್ಟೆ ಸುರಕ್ಷತಾ ನಿಯಮಗಳ ಪ್ರಕಾರ, 48 ಗಂಟೆಗಳ ಅವಧಿಯಲ್ಲಿ ಅಣೆಕಟ್ಟೆಯಲ್ಲಿ 30 ಸೆಂಟಿಮೀಟರ್ ಗಳಿಗಿಂತ ಹೆಚ್ಚು ಎತ್ತರಕ್ಕೆ ನೀರು ತುಂಬಲು ಬಿಡಬಾರದು. ಆದರೆ ಗುಜರಾತ್ ಸರ್ಕಾರವು ಮೋದಿ ಜನ್ಮ ದಿನದ ಸಮಯಕ್ಕೆ ಅಣೆಕಟ್ಟೆ ತುಂಬುವಂತೆ ಮಾಡಲು 48 ಗಂಟೆಗಳ ಅವಧಿಯಲ್ಲಿ 60 ಸೆಂಟಿಮೀಟರ್ ಗಳಷ್ಟು ಎತ್ತರಕ್ಕೆ ನೀರು ತುಂಬಲು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ವೇಗವಾಗಿ ಅಣೆಕಟ್ಟೆ ತುಂಬಿದರೆ ಅಣೆಕಟ್ಟೆ ಸೋರುವ ಅಪಾಯ ಇರುತ್ತದೆ. ಅಣೆಕಟ್ಟೆ ಗೋಡೆ ನಿರ್ಮಿಸಲು ಬಳಸಿರುವ ವಸ್ತುಗಳು ನೆನೆದು, ಹಿಗ್ಗಿ, ಬಿಗಿಬಂಧ ಏರ್ಪಡಲು ಸಾಕಷ್ಟು ಸಮಯ ಸಿಗದ ಕಾರಣ ಗೋಡೆ ಬಿರುಕು ಬಿಟ್ಟು ಸೋರುವ ಅಥವಾ ಒಡೆದು ಪ್ರವಾಹ ಉಂಟಾಗುವ ಅಪಾಯದ ಸಾಧ್ಯತೆ ಹೆಚ್ಚುತ್ತದೆ ಎಂಬುದಾಗಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
“ಮುಂಗಾರು ಇನ್ನೂ ಮುಗಿದಿಲ್ಲ, ಈಗಲೇ ಅಣೆಕಟ್ಟೆ ತುಂಬಲು ಅವಕಾಶ ನೀಡುವುದು ಅಪಾಯಕ್ಕೆ ಎಡೆಮಾಡಿಕೊಡಲಿದೆ. ಮುಂಗಾರು ಮುಗಿಯವ ವೇಳೆಗೆ ಅಣೆಕಟ್ಟೆ ತುಂಬುವಂತೆ ನೋಡಿಕೊಂಡರೆ ಸಾಕು. ಇನ್ನೂ ಮಳೆಗಾಲ ಇರುವುದರಿಂದ ಅಣೆಕಟ್ಟೆಗೆ ಹರಿದು ಬರುವ ನೀರನ್ನು ಏನು ಮಾಡುವುದು? ಹೆಚ್ಚುವರಿ ನೀರು ಎಲ್ಲಿಗೆ ಹರಿದುಹೋಗುತ್ತದೆ? ಇದು ಪ್ರವಾಹಕ್ಕೆ ಎಡೆಮಾಡಿಕೊಟ್ಟು ಸುತ್ತಮುತ್ತಲ ಹಳ್ಳಿಗಳನ್ನು ಸಂಕಷ್ಟಕ್ಕೆ ದೂಡಲಿದೆ” ಎಂಬುದಾಗಿ ದಕ್ಷಿಣ ಏಷ್ಯಾ ಅಣೆಕಟ್ಟುಗಳು, ನದಿಗಳು ಮತ್ತು ಜನರ ಸಂಪರ್ಕಜಾಲ ಸಂಘಟನೆಯ ಸಂಯೋಜಕ ಹಿಮಾಂಶು ಠಕ್ಕರ್ ಎಚ್ಚರಿಸುತ್ತಾರೆ.
“ಅಣೆಕಟ್ಟೆ ತುಂಬಿಸಿದರೆ ಸಾಕೆ? ಅದನ್ನು ಉಪಯೋಗಿಸಿಕೊಳ್ಳಲು ಮೂಲಸೌಕರ್ಯ ಬೇಡವೆ?” ಎಂಬುದಾಗಿ ಗುಜರಾತ್ ನ ರೈತ ಸಂಘಟನೆಯಾದ ಗುಜರಾತ್ ಖೇದತ್ ಏಕತಾ ಸಮಿತಿ ಸ್ಥಾಪಕ ಅಧ್ಯಕ್ಷ ಸಾಗರ್ ರಾಬಡಿ ಪ್ರಶ್ನಿಸುತ್ತಾರೆ.
ಗುಜರಾತ್ ಗೆ ಹಂಚಿಕೆಯಾಗಿರುವ ಸರ್ದಾರ್ ಸರೋವರದ ನೀರಿನಲ್ಲಿ ಶೇಕಡ 32 ರಷ್ಟನ್ನೂ ರಾಜ್ಯ ಉಪಯೋಗಿಸಿಕೊಂಡಿಲ್ಲ. 2017-18 ರಲ್ಲಿ ನರ್ಮದಾ ನಿಯಂತ್ರಣ ಪ್ರಾಧಿಕಾರವು ಗುಜರಾತ್ ಗೆ 48 ಲಕ್ಷ ಎಕರೆ ಅಡಿಗಳಷ್ಟು ನೀರು ಹಂಚಿಕೆ ಮಾಡಿತ್ತು. ಆದರೆ ಉಪಯೋಗಿಸಿಕೊಂಡಿದ್ದು 32 ಲಕ್ಷ ಎಕರೆ ಅಡಿಗಳಷ್ಟು ಮಾತ್ರ ಎಂದು ಅವರು ತಿಳಿಸಿದ್ದಾರೆ.
ನೀರನ್ನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅಣೆಕಟ್ಟೆಯನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಿ ಜನರನ್ನು ಅಪಾಯಕ್ಕೊಡ್ಡುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಸಾಗರ್ ರಾಬಡಿ ಅವರ ಪ್ರಶ್ನೆಯಾಗಿದೆ.