ಕಡುಕಷ್ಟವಾಗಿ ಪರಿಣಮಿಸಿರುವ ಕರೋನಾ ಇರಲಿ, ರಾಷ್ಟ್ರೀಯ ಭದ್ರತೆಯಂತಹ ಸೂಕ್ಷ್ಮ ವಿಷಯವಿರಲಿ, ಕೇಂದ್ರ ಸರ್ಕಾರ ಜನರನ್ನು ಗೊಂದಲಕ್ಕೀಡು ಮಾಡಿ ನಿಜ ಸಮಸ್ಯೆಗೆ ಸ್ಪಂದಿಸದೆ ಪಲಾಯನಗೈಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಈ ‘ಕನ್ಫೂಸ್ ಪೀಪಲ್’ ಎಂಬ ನೀತಿಯನ್ನು ಇಂದು ‘ಪಿಎಂ ಕೇರ್ಸ್’ ಹಣವನ್ನು ಬಿಡುಗಡೆ ಮಾಡಿರುವ ರೀತಿ ಬಹಳ ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.
ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ವೆಂಟಿಲೇಟರ್ಗಳನ್ನು ಖರೀದಿಸಲು ಪಿಎಂ ಕೇರ್ಸ್ ನಿಧಿಯಿಂದ ಎರಡನೇ ಹಂತದ ಅನುದಾನ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇಲ್ಲಿರುವ ಗೊಂದಲ ಏನು ಎಂಬುದನ್ನು ತಿಳಿಯಲು ಸ್ವಲ್ಪ ಹಿಂದೆ ತಿರುಗಿ ನೋಡಬೇಕು. ಮೊದಲ ಹಂತದ ಲಾಕ್ಡೌನ್ ಜಾರಿ ಮಾಡಿದಾಗ ಘೋಷಿಸಲ್ಪಟ್ಟಿದ್ದ 1.70 ಲಕ್ಷ ಕೋಟಿ ರೂಪಾಯಿ ಹಾಗೂ ಆನಂತರದಲ್ಲಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜಿನಲ್ಲೇ ವೈದ್ಯಕೀಯ ಸವಲತ್ತುಗಳ ಖರೀದಿಗೆ ಎಂದು ಹಣ ನೀಡಲಾಗಿತ್ತು. ಈಗ ಪಿಎಂ ಕೇರ್ಸ್ ನಿಧಿಯಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದೆ. ಹಾಗಿದ್ದರೆ ನಿಜವಾಗಿಯೂ ವೆಂಟಿಲೇಟರ್ ಗಳ ಖರೀದಿಯ ಖರ್ಚನ್ನು ಯಾವ ಬಾಬತ್ತಿನಿಂದ ನೀಡಲಾಗುತ್ತಿದೆ?
ಯಾವುದೋ ಒಂದು ಕಡೆಯಿಂದ ನೀಡಲಾಗುತ್ತಿದೆ ಎಂದಾದರೆ ಮತ್ತೊಂದರ ಉಲ್ಲೇಖ ಏಕೆ? ಈಗಾಗಲೇ ‘ಪ್ರಧಾನ ಮಂತ್ರಿಗಳ ವಿಪತ್ತು ನಿಧಿ’ ಇದ್ದೂ ‘ಪಿಎಂ ಕೇರ್ಸ್’ ಏಕೆ? ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ನರೇಂದ್ರ ಮೋದಿ ಸ್ಪಷ್ಟೀಕರಣ ಕೊಟ್ಟಿಲ್ಲ. ನಂತರ ‘ಪಿಎಂ ಕೇರ್ಸ್ ಗೆ ಎಷ್ಟು ದೇಣಿಗೆ ಬಂದಿದೆ?’ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೂ ಮೋದಿ ಸರ್ಕಾರ ಮೌನವಾಗಿಯೇ ಇದೆ. ಈ ನಡುವೆ ಒಂದೇ ಕೆಲಸಕ್ಕೆ ಎರಡೆರಡು ಕಡೆಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಕರೋನಾ ಕಷ್ಟ ಶುರುವಾದ ಬಳಿಕ ಮೊದಲ ಬಾರಿ ಮಾತನಾಡಿದ ಮೋದಿ, ‘ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿದುಹೋಯಿತು. ಕರೋನಾ ಮಹಾಭಾರತಕ್ಕಿಂತಲೂ ದೊಡ್ಡ ಯುದ್ಧ. ಅದಕ್ಕಾಗಿ 21 ದಿನ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು, ಗೆಲ್ಲಬೇಕು’ ಎಂದಿದ್ದರು. ಆದರೆ ದೇಶದಲ್ಲಿ ಮೊದಲ ಕರೋನಾ ಪ್ರಕರಣ ಕಂಡುಬಂದಿದ್ದು ಜನವರಿ 30ರಂದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಮುಂದೊಂದು ದಿನ ಇದು ದೊಡ್ಡ ಸಮಸ್ಯೆ ಆಗುತ್ತೆ’ ಎಂದು ಎಚ್ಚರಿಸಿದ್ದು ಫೆಬ್ರವರಿ 12ರಂದು. ಆದರೆ ಮೋದಿ ಲಾಕ್ಡೌನ್ ಘೋಷಣೆ ಮಾಡಿದ್ದು ಮಾರ್ಚ್ 24ರಂದು. ಇರಲಿ, ಮಾರ್ಚ್ 24ರಿಂದ ಇಲ್ಲಿಯವರೆಗೆ ಬರೋಬ್ಬರಿ 3 ತಿಂಗಳಾಗಿದೆ. ಈಗ ಮೋದಿ ಸರ್ಕಾರ ವೆಂಟಿಲೇಟರ್ ಖರೀದಿಗೆ ಹಣ ಬಿಡುಗಡೆ ಮಾಡುತ್ತಿದೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದು ಎಂದರೆ 3 ತಿಂಗಳು ಬಿಟ್ಟು ಮಾಡುವುದಾ ಎನ್ನುವುದನ್ನು ಮೋದಿಯೇ ತಿಳಿಸಬೇಕು.
ಇಷ್ಟಕ್ಕೂ 130 ಕೊಟಿ ಜನ ಇರುವ ದೇಶದಲ್ಲಿ ಕರೋನಾದಂಥ ಬೃಹತ್ ಸಮಸ್ಯೆಗೆ ಹಿಂದೆ 3,100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಈಗ 3,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 6,100 ಕೋಟಿ ರೂಪಾಯಿ ಬಿಡುಗಡೆ ಮಾಡಿದಂತಾಗಿದೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದು ಎಂದರೆ ಇದೇನಾ? 3,000 ಕೋಟಿ ರೂಪಾಯಿಗಳ ಪೈಕಿ 2,000 ಕೋಟಿ ರೂಪಾಯಿ ಮಾತ್ರ ವೆಂಟಿಲೇಟರ್ ಖರೀದಿಗೆ. ಉಳಿದ 1,000 ಕೋಟಿ ರೂಪಾಯಿ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ.
ಕಾರ್ಮಿಕರಿಗೆ ಪಿಎಂ ಕೇರ್ಸ್ ನಿಂದ ಹಣ ಬಿಡುಗಡೆ ಮಾಡಿರುವುದು ಇನ್ನೊಂದು ಗೊಂದಲ. ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಸಂಕಷ್ಟಕ್ಕೆ ಈಡಾಗಿರುವ ಕಾರ್ಮಿಕರಿಗೆ ನೆರವು ನೀಡಲಾಗುವುದು ಎಂದು ಪ್ಯಾಕೇಜುಗಳಲ್ಲೂ ತಿಳಿಸಲಾಗಿತ್ತು. ಪ್ಯಾಕೇಜಿಗೆ ಪಿಎಂ ಕೇರ್ಸ್ ನಿಂದ ಹಣ ಕೊಡಲಾಗುತ್ತಿದೆಯೇ ಎನ್ನುವುದಾದರೆ ಆ ಸಾಧ್ಯತೆಯೂ ಇಲ್ಲ. ಏಕೆಂದರೆ ಕಾರ್ಮಿಕರಿಗೆ ನೆರವು ನೀಡಲು ಕಾರ್ಮಿಕರ ಕಲ್ಯಾಣ ನಿಧಿಯಿಂದ ಬಳಸಲಾಗುವುದೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
2,923 ವೆಂಟಿಲೇಟರ್ ತಯಾರಿಸಿದ್ದು 1,340 ವೆಂಟಿಲೇಟರ್ ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತಿಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಲಾಗಿದೆ. ಇಲ್ಲೂ ದಕ್ಷಿಣ ಭಾರತಕ್ಕೆ ದೋಖಾ ಮಾಡಲಾಗಿದೆ. ಕರ್ನಾಟಕಕ್ಕಿಂತ ಹೆಚ್ಚು ಕರೋನಾ ಸೋಂಕು ಪೀಡಿತರಿರುವ ತಮಿಳುನಾಡಿಗೆ ಎಷ್ಟು ವೆಂಟಿಲೇಟರ್ ಕೊಡಲಾಗಿದೆ ಎಂದು ತಿಳಿಸಲಾಗಿಲ್ಲ. ಕೇರಳ, ಆಂಧ್ರ ಮತ್ತು ತೆಲಂಗಾಣದ ಬಗ್ಗೆಯೂ ಮಾಹಿತಿ ಹಂಚಿಕೊಂಡಿಲ್ಲ.
ಇದೇ ರೀತಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಜನಸಂಖ್ಯೆ ಆಧಾರದ ಮೇಲೆ ಮಹಾರಾಷ್ಟ್ರಕ್ಕೆ 181 ಕೋಟಿ, ಉತ್ತರ ಪ್ರದೇಶಕ್ಕೆ 103 ಕೋಟಿ, ತಮಿಳುನಾಡಿಗೆ 83 ಕೋಟಿ, ಗುಜರಾತಿಗೆ 66 ಕೋಟಿ, ದೆಹಲಿಗೆ 55 ಕೋಟಿ, ಪಶ್ಚಿಮ ಬಂಗಾಳಕ್ಕೆ 53 ಕೋಟಿ, ಬಿಹಾರಕ್ಕೆ 51 ಕೋಟಿ, ಮಧ್ಯಪ್ರದೇಶಕ್ಕೆ 50 ಕೋಟಿ, ರಾಜಸ್ಥಾನಕ್ಕೆ 50 ಕೋಟಿ ಮತ್ತು ಕರ್ನಾಟಕಕ್ಕೆ 34 ಕೋಟಿ ರೂಪಾಯಿ ನೀಡಲಾಗಿದೆ. ಇದು ಕಾರ್ಮಿಕರ ಬೃಹತ್ ಸಮಸ್ಯೆ ಪರಿಹಾರಿಸಲು ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗುವುದಿಲ್ಲವೇ? ಒಟ್ಟಿನಲ್ಲಿ ಗೊಂದಲಗಳನ್ನು ಸೃಷ್ಟಿಸಿ ನಿಜ ಸಮಸ್ಯೆಯಿಂದ ಪಲಾಯನ ಮಾಡುತ್ತಿದೆ. ಇನ್ನಾದರೂ ಪ್ಯಾಕೇಜ್ ಮತ್ತು ಪಿಎಂ ಕೇರ್ಸ್ ಹಣದ ಬಗ್ಗೆ ಗೊಂದಲ ಸೃಷ್ಟಿಸುವುದನ್ನು ನರೇಂದ್ರ ಮೋದಿ ಸರ್ಕಾರ ನಿಲ್ಲಿಸಬೇಕಿದೆ. ಅದೂ ಈ ಸಂಕಷ್ಟದ ಸಂದರ್ಭದಲ್ಲಿ.