ರಾಜ್ಯದಲ್ಲಿ ಭಾರೀ ಮಳೆ ಮತ್ತು ಜಲ ಪ್ರವಾಹದಿಂದ ಆಗಿರುವ ನಷ್ಟ 38,451 ಕೋಟಿ ರೂ ಎನ್ನುತ್ತಿದೆ ಸರ್ಕಾರ. ನಿಜವಾದ ಹಾನಿ ಇದಕ್ಕಿಂತ ದುಪ್ಪಟ್ಟು ಇರಬಹುದಾದರೂ ಸರ್ಕಾರ ತನ್ನದೇ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ನೀಡಿರುವ ಅಂಕಿ ಅಂಶವಿದು. ಈ ನಷ್ಟಕ್ಕೆ ರಾಷ್ಟ್ರೀಯ ವಿಕೋಪ ಪರಿಹಾರ ನಿಯಮದ (ಎನ್ ಡಿಆರ್ ಎಫ್) ಮಾರ್ಗಸೂಚಿಯನ್ವಯ 3818.89 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಅಷ್ಟು ಮೊತ್ತವನ್ನೂ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಂದರೆ, ಸಂತ್ರಸ್ತರ ನೆರವಿಗೆ ಕೇಂದ್ರದಿಂದ ನಿರೀಕ್ಷಿತ ಪರಿಹಾರ ಸಿಗುವುದಿಲ್ಲ ಎಂಬುದು ಖಾತರಿಯಾಗಿದೆ. ಅಷ್ಟೇ ಅಲ್ಲ, ಪರಿಹಾರ ಮೊತ್ತ ಬರುವುದು ಕೂಡ ವಿಳಂಬವಾಗುತ್ತದೆ.
ರಾಜ್ಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ, ಜಲ ಪ್ರವಾಹದಿಂದ ಆಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇದುವರೆಗೂ ಒಂದು ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬುದು ಪ್ರತಿ ಬಾರಿ ಬರ, ನೆರೆ, ಭಾರೀ ಮಳೆ ಬಂದು ರಾಜ್ಯದ ಜನ-ಜಾನುವಾರುಗಳು ಸಂಕಷ್ಟಕ್ಕೀಡಾದಾಗ ಕೇಳಿಬರುವ ಸಾಮಾನ್ಯ ಆರೋಪ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಆ ಪಕ್ಷಕ್ಕೆ ರಾಜಕೀಯ ವಿರೋಧಿಗಳಾಗಿರುವ ಪಕ್ಷಗಳ ಮುಖಂಡರಂತೂ ಎಲ್ಲಕ್ಕೂ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ, ಕೇಂದ್ರದ ಮನವೊಲಿಸಿ ಹೆಚ್ಚಿನ ಪರಿಹಾರ ಮೊತ್ತ ತರುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಅದಾವುದೂ ಈಡೇರುವುದೇ ಇಲ್ಲ. ಕರ್ನಾಟಕದ ಮಟ್ಟಿಗೆ ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.
ಹಾಗೆಂದು ಇಲ್ಲಿ ಅಧಿಕಾರದಲ್ಲಿರುವವರನ್ನು ದೂರಿ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯ ನಿಯಮಗಳು ಜನಸ್ನೇಹಿಯಾಗಿ ಬದಲಾವಣೆಯಾಗುವವರೆಗೆ ಬರ, ನೆರೆಯಿಂದ ಆಗುವ ಹಾನಿಗಳಿಗೆ ಸೂಕ್ತ ಪರಿಹಾರವೂ ಸಿಗುವುದಿಲ್ಲ. ಸಮಸ್ಯೆ ಬಗೆಹರಿಯುವುದೂ ಇಲ್ಲ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಕೇಂದ್ರದಲ್ಲಿ ಅಧಿಕಾರ ನಡೆಸಿದ ಪಕ್ಷಗಳು ಈ ನಿಯಮಗಳನ್ನು ಜನಸ್ನೇಹಿಯಾಗಿ ಮತ್ತು ಜನರಿಗೆ ನ್ಯಾಯ ಸಿಗುವ ರೀತಿಯಲ್ಲಿ ಬದಲಾವಣೆ ಮಾಡಲು ಆಸಕ್ತಿಯನ್ನೂ ತೋರಿಸಿಲ್ಲ. ಇದರ ಪರಿಣಾಮ, ಕೇಂದ್ರದಿಂದ ಸಿಗುವ ಪ್ರಕೃತಿ ವಿಕೋಪ ಪರಿಹಾರ ಎಂಬುದು ಸಂತ್ರಸ್ತರ ಪಾಲಿಗೆ ಮರೀಚಿಕೆಯಾಗುತ್ತಿದೆ. ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದರೆ, ಕೆಲವೇ ನೂರು ಕೋಟಿ ರೂಪಾಯಿ ಪರಿಹಾರ ನೀಡಿ ಕೇಂದ್ರ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ತಲೆದೋರಿದ ಅತಿವೃಷ್ಟಿ ಮತ್ತು ಜಲ ಪ್ರವಾಹದಿಂದ ಸುಮಾರು 38 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಕೇಂದ್ರದ ಹಣಕಾಸು ಸಚಿವರು ಮತ್ತು ಗೃಹ ಸಚಿವರು ರಾಜ್ಯಕ್ಕೆ ಬಂದು ಸಮೀಕ್ಷೆ ನಡೆಸಿದ್ದಾರೆ. ತಕ್ಷಣದ ಪರಿಹಾರವಾಗಿ 4000 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಕೇಂದ್ರದಿಂದ ಅಧ್ಯಯನ ತಂಡದವರು ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಇದೀಗ ಮತ್ತೆ ನೆರೆ ಹಾವಳಿ, ಭಾರೀ ಮಳೆಯಿಂದ ಜನ ಮತ್ತಷ್ಟು ತತ್ತರಿಸುತ್ತಿದ್ದಾರೆ. ಈ ಮಧ್ಯೆ ಎನ್ ಡಿಆರ್ ಎಫ್ ಮಾನದಂಡದಡಿ 3818.89 ಕೋಟಿ ರೂ. ಪರಿಹಾರ ನೀಡಿ ಎಂದು ರಾಜ್ಯದಿಂದ ಅಧಿಕೃತ ಪ್ರಸ್ತಾವನೆಯೂ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಹೀಗಿದ್ದರೂ ಕೇಂದ್ರದಿಂದ ಪ್ರವಾಹ ಪರಿಹಾರಕ್ಕಾಗಿ ಚಿಕ್ಕಾಸು ಕೂಡ ಬಿಡುಗಡೆಯಾಗಿಲ್ಲ. ಇದರ ಪರಿಣಾಮ ಪ್ರತಿಪಕ್ಷಗಳ ನಾಯಕರು ಕೇಂದ್ರ ಸರ್ಕಾರ, ಪ್ರಧಾನಿ, ಗೃಹ ಸಚಿವರು, ಹಣಕಾಸು ಸಚಿವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಲೆಕ್ಕಾಚಾರ ಹೇಗೆ?
ರಾಜ್ಯದಲ್ಲಿ ಈ ಬಾರಿಯ ಜಲ ಪ್ರಳಯದಿಂದ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 450 ಕೋಟಿ ರೂ. ನಷ್ಟು ನಷ್ಟವಾಗಿದೆ. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ಕೇಂದ್ರದಿಂದ ಬರಬಹುದಾದ ಪರಿಹಾರದ ಮೊತ್ತ 14ರಿಂದ 17 ಕೋಟಿ ರೂ.ನಷ್ಟು ಮಾತ್ರ ಎಂದು ಇಲಾಖೆಯೇ ಹೇಳುತ್ತದೆ.. ಆದರೆ, ಅದು ಬರಬೇಕಾದರೆ ಇನ್ನೂ ಕೆಲ ತಿಂಗಳು ಬೇಕಾಗಬಹುದು. ಪ್ರಮುಖವಾಗಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಕನಿಷ್ಟ ರೈತರಿಗೆ ಹಾನಿಯಾದ ಭೂಮಿಯನ್ನು ಸರಿಪಡಿಸಿ ಮತ್ತೆ ಬಿತ್ತನೆ ಮಾಡಬೇಕಾದಷ್ಟು ಪರಿಹಾರವಾದರೂ ನಿಗದಿಯಾಗಬೇಕು. ಅಂದರೆ, ಒಂದು ಎಕರೆ ಭೂಮಿಯಲ್ಲಿ ನಿಗದಿತ ಬೆಳೆ ತೆಗೆಯಲು 1 ಲಕ್ಷ ರೂ. ವೆಚ್ಚವಾಗುತ್ತದೆ ಎಂದಾದರೆ ಅಷ್ಟಾದರೂ ಪರಿಹಾರ ನಿಗದಿಪಡಿಸಬೇಕು. ಇಲ್ಲದೇ ಇದ್ದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗೆಲ್ಲಾ ರಾಜಕೀಯ ಕೆಸರೆರಚಾಟ ತಪ್ಪುವುದಿಲ್ಲ, ಜನರಿಗೆ ನ್ಯಾಯವೂ ಸಿಗುವುದಿಲ್ಲ.
ಪ್ರಕೃತಿ ವಿಕೋಪ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಬೆಳೆ ಹಾನಿ, ಮನೆ ಹಾನಿ, ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ಹಾನಿ ಎಂದು ಹಲವು ವಿಭಾಗಗಳನ್ನಾಗಿ ಮಾಡಲಾಗುತ್ತದೆ. ನಂತರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಎಷ್ಟು ಪರಿಹಾರ ನೀಡಬಹುದು ಎಂದು ಲೆಕ್ಕ ಹಾಕಲಾಗುತ್ತದೆ. ಇಲ್ಲಿ ಪರಿಹಾರ ನಿಗದಿಪಡಿಸುವಾಗ ಇಷ್ಟು ಹಾನಿಗೆ ಇಂತಿಷ್ಟು ಪರಿಹಾರ ಎಂದು ಒಟ್ಟಾರೆ ಲೆಕ್ಕ ಹಾಕುವುದಿಲ್ಲ. ಬೆಳೆಹಾನಿಗೆ ಒಂದು (ಅದರಲ್ಲೂ ಇಂತಿಂಥ ಬೆಳೆಗೆ ಇಂತಿಷ್ಟು ಎಂದಿದೆ), ಮನೆ ಹಾನಿಗೆ ಇನ್ನೊಂದು, ಮೂಲ ಸೌಕರ್ಯ ಹಾನಿಗೆ ಮತ್ತೊಂದು ಎಂಬಂತೆ ಹತ್ತಾರು ಮಾನದಂಡಗಳಿವೆ. ಈ ಮಾನದಂಡಗಳನ್ನು ಅನುಸರಿಸಿ ನಷ್ಟದ ಲೆಕ್ಕಾಚಾರ ಹಾಕುವಾಗ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ಲಭ್ಯವಾಗುತ್ತದೆ.

ಪರಿಹಾರಕ್ಕಿಂತ ನಿಯಮ ಪಾಲನೆಗೇ ಹೆಚ್ಚು ಸಮಯ ಬೇಕು
ಇಷ್ಟಕ್ಕೆಲ್ಲಾ ಕಾರಣ ನಿಯಮಗಳು. ಊಹಿಸಲೂ ಸಾಧ್ಯವಾಗದ ಪ್ರಕೃತಿ ವಿಕೋಪಗಳು, ಉದಾಹರಣೆಗೆ ಕೇರಳದಲ್ಲಿ ಕಳೆದ ವರ್ಷ ಸಂಭವಿಸಿದ ಜಲ ಪ್ರಳಯ, ಒಡಿಶಾದ ಚಂಡಮಾರುತ ಮುಂತಾದವುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುತ್ತದೆ. ಉಳಿದಂತೆ ಬರ, ನೆರೆ, ಭಾರೀ ಮಳೆ ಏನೇ ಬಂದು ಲಕ್ಷಾಂತರ ಕೋಟಿ ಲುಕ್ಸಾನು ಸಂಭವಿಸಿದರೂ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತದೆ. ಅದರ ಪ್ರಕಾರ, ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಆ ಮನವಿಯಲ್ಲಿ ಇಂತಿಷ್ಟು ನಷ್ಟವಾಗಿದೆ ಎಂಬುದನ್ನು ತಿಳಿಸಬೇಕು. ಈ ಮನವಿ ಆಧರಿಸಿ ಕೇಂದ್ರದಿಂದ ಅಧ್ಯಯನ ತಂಡ ಕಳುಹಿಸಿಕೊಡಲಾಗುತ್ತದೆ. ಈ ತಂಡ ರಾಜ್ಯದಲ್ಲಿ ಅಧ್ಯಯನ ನಡೆಸಿ ಮತ್ತೊಂದು ವರದಿ ನೀಡುತ್ತದೆ. ಕೇಂದ್ರ ಸರ್ಕಾರ ಈ ಎರಡೂ ವರದಿಗಳನ್ನು ತುಲನೆ ಮಾಡಿ ಎಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡುತ್ತದೆ. ಆ ಮಾನದಂಡಗಳಡಿ ರಾಜ್ಯಕ್ಕೆ ಇಂತಿಷ್ಟು ಪರಿಹಾರ ಎಂದು ನಿಗದಿಪಡಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದರೂ ಅದರ ಪರಿಹಾರ ಬಂದು ರಾಜ್ಯಕ್ಕೆ ತಲುಪಲು ಮೂರು ತಿಂಗಳಿನಿಂದ ಒಂದು ವರ್ಷ ಬೇಕಾಗುತ್ತದೆ. ಇದಕ್ಕೆ ಉದಾಹರಣೆ ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರ ಬಂದು ಸಾವಿರಾರು ಕೋಟಿ ರೂ. ಹಾನಿಯಾಗಿದ್ದಕ್ಕೆ ಕಳೆದ ಆಗಸ್ಟ್ ತಿಂಗಳಲ್ಲಿ 1029.39 ಕೋಟಿ ರೂ. ಬಿಡುಗಡೆಯಾಗಿದ್ದು. ಈ ಬಾರಿಯ ಭಾರೀ ಮಳೆ ಮತ್ತು ಜಲ ಪ್ರವಾಹದಿಂದ ಆಗಿರುವ ನಷ್ಟಕ್ಕೂ ಪರಿಹಾರ ಬರುವುದು ಇದೇ ರೀತಿ ವಿಳಂಬವಾದರೂ ಅದು ಅಚ್ಚರಿಯಲ್ಲ.