ಅಮೆರಿಕೆಯ ಬಹುರಾಷ್ಟ್ರೀಯ ಕಾರ್ಪೊರೇಟ್ ದೈತ್ಯ ಪೆಪ್ಸಿಕೋ ಗುಜರಾತಿನ ಒಂಬತ್ತು ಮಂದಿ ಬಡಪಾಯಿ ರೈತರನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ಕೃತ್ಯ ಇದೀಗ ಜಾಗತಿಕ ಸುದ್ದಿ. ಆಲೂ ಬೆಳೆಗಾರರ ವಿರುದ್ಧ ಖಟ್ಲೆ ಹೂಡಿರುವ ಪೆಪ್ಸಿ, ಅವರಿಂದ ತಲಾ ಒಂದು ಕೋಟಿ ರುಪಾಯಿಯ ಪರಿಹಾರ ಕೇಳಿದೆ.
ತಾನು ಅಭಿವೃದ್ಧಿಪಡಿಸಿರುವ ಆಲೂ ತಳಿಯನ್ನು ಈ ರೈತರು ತನ್ನ ಅನುಮತಿಯಿಲ್ಲದೆ ಬೆಳೆದಿದ್ದಾರೆ. ತನ್ನ ಬೌದ್ಧಿಕ ಆಸ್ತಿ ಹಕ್ಕು ಮತ್ತು ಈ ತಳಿಯ ಮೇಲಿನ ತನ್ನೇ ಏಕಾಧಿಕಾರದ ಉಲ್ಲಂಘನೆಯಾಗಿದೆ ಎಂಬುದು ಪೆಪ್ಸಿಕೋ ದಾವೆಯ ಸಾರಾಂಶ.
ಸಾಮಾನ್ಯ ಆಲೂಗೆಡ್ಡೆ ಚಿಪ್ಸ್ ತಯಾರಿಕೆಗೆ ಯೋಗ್ಯವಲ್ಲ. ಇದರಲ್ಲಿ ತೇವಾಂಶ ತಗ್ಗಿಸಲು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಸಕ್ಕರೆಯ ಅಂಶ ಜಾಸ್ತಿ ಇದ್ದರೆ ಕರಿದ ನಂತರ ಆಲೂ ಚಿಪ್ಸ್ ಕಪ್ಪಾಗುತ್ತದೆ. ಈ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡೇ ಪೆಪ್ಸಿ ಅಭಿವೃದ್ಧಿಪಡಿಸಿ ನೋಂದಣಿ ಮಾಡಿಸಿಕೊಂಡಿರುವ ಆಲೂ ತಳಿ ಎಫ್.ಸಿ-5. ಚಿಪ್ಸ್ ತಯಾರಿಕೆಗೆ ಪ್ರಶಸ್ತ. ಇದರಲ್ಲಿ ತೇವಾಂಶ ಮತ್ತು ಸಕ್ಕರೆಯ ಅಂಶ ಎರಡೂ ಕಮ್ಮಿ. ‘ಲೇಯ್ಸ್’ ಎಂಬ ಬ್ರ್ಯಾಂಡಿನ ಆಲೂ ಉಪ್ಪೇರಿಯನ್ನು ಪೆಪ್ಸಿ ಜಗತ್ತಿನ ನಾನಾ ಭಾಗಗಳಲ್ಲಿ ತಯಾರಿಸಿ ಮಾರಾಟ ಮಾಡುತ್ತದೆ.
2001ರ ಭಾರತೀಯ ಸಸ್ಯ ಪ್ರಭೇದ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆಯು ತಮಗೆ ಬೇಕಾದ ಬೀಜ ಬಳಸಿ, ಬೆಳೆ ಬೆಳೆಯುವ ಸ್ವಾತಂತ್ರ್ಯವನ್ನು ರೈತರಿಗೆ ನೀಡಿರುವ ಕಾರಣ ಬೌದ್ಧಿಕ ಆಸ್ತಿ ಹಕ್ಕಿನ ಉಲ್ಲಂಘನೆಯ ಪ್ರಶ್ನೆಯೇ ಏಳುವುದಿಲ್ಲ. ದಾವೆಯನ್ನು ವಾಪಸು ಪಡೆದು ಕ್ಷಮೆ ಕೇಳಬೇಕೆಂದು ರೈತ ಸಂಘಟನೆಗಳು ಪೆಪ್ಸಿಯ ವಿರುದ್ಧ ಸಿಡಿದೆದ್ದಿವೆ. ಬಿತ್ತನೆ ಬೀಜದ ಸಾರ್ವಭೌಮತೆ, ಆಹಾರ ಉತ್ಪಾದನೆಯ ಸಾರ್ವಭೌಮತೆ ಹಾಗೂ ದೇಶದ ಸಾರ್ವಭೌಮತೆಗಳನ್ನು ಒಳಗೊಂಡಿರುವ ಗಂಭೀರ ಪ್ರಶ್ನೆಯಿದು ಎನ್ನತೊಡಗಿದ್ದಾರೆ ರೈತ ಹೋರಾಟಗಾರರು.
ಈ ನಡುವೆ, ಪೆಪ್ಸಿಯ ದಾವೆಯಲ್ಲಿ ಪ್ರಾಥಮಿಕ ನೋಟಕ್ಕೆ ಪ್ರಸ್ತುತವೆನಿಸುವ ಅಂಶಗಳಿವೆ ಎಂಬುದಾಗಿ ಅಹಮದಾಬಾದ್ ನ ನ್ಯಾಯಾಲಯ ಹೇಳಿದ್ದು, ಸಮಜಾಯಿಷಿ ನೀಡುವಂತೆ ರೈತರಿಗೆ ನೋಟೀಸು ಕಳಿಸಿದೆ. ವಿಚಾರಣೆಯನ್ನು ಮುಂಬರುವ ಜೂನ್ 12ಕ್ಕೆ ಮುಂದೂಡಿದೆ.
ಭಾರತದಲ್ಲಿ ಈ ಬಗೆಯ ಮೊದಲ ಮೊಕದ್ದಮೆಯಿದು. ಯಾವ ತೀರ್ಪು ಹೊರಬಿದ್ದರೂ ಅದು ಪೂರ್ವನಿದರ್ಶನವಾಗಿ ಸ್ಥಾಪಿತಗೊಳ್ಳಲಿದೆ.
ರೈತರ ಪ್ರತಿರೋಧ ಮತ್ತು ಪೆಪ್ಸಿಯ ಮೆದು ಪಾನೀಯ ಮತ್ತು ಚಿಪ್ಸ್ ಮುಂತಾದ ಉತ್ಪನ್ನಗಳನ್ನು ದೇಶಾದ್ಯಂತ ಬಹಿಷ್ಕರಿಸುವುದಾಗಿ ರೈತ ಸಂಘಟನೆಗಳು ಹಾಕಿರುವ ಬೆದರಿಕೆ ಈ ಕಂಪನಿಯನ್ನು ಅಲ್ಲಾಡಿಸಿದೆ. ಹೆಜ್ಜೆ ಹಿಂದಕ್ಕೆ ಇರಿಸಿರುವ ಪೆಪ್ಸಿಕೋ ವ್ಯಾಜ್ಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಇಂಗಿತ ನೀಡಿದೆ. ರೈತ ಸಂಘಟನೆಗಳಿಂದ ತಿರುಗೇಟಿನ ಬೆದರಿಕೆಯನ್ನು ಪೆಪ್ಸಿ ಪ್ರಾಯಶಃ ನಿರೀಕ್ಷಿಸಿರಲಿಲ್ಲವೆಂದು ತೋರುತ್ತದೆ. ಭಾರತದಲ್ಲಿನ ತನ್ನ ಶಾಖೆಯು ರೈತರೊಂದಿಗೆ ಸಂಘರ್ಷದ ಹಾದಿಗೆ ಇಳಿಯಬಾರದಿತ್ತು ಎಂಬ ನಿಲುವನ್ನು ಈ ಬಹುರಾಷ್ಟ್ರೀಯ ಕಂಪನಿಯ ಮುಖ್ಯ ಕಚೇರಿ ತಳೆದಿದೆ ಎನ್ನಲಾಗಿದೆ.
ತನ್ನೊಂದಿಗೆ ಆಲೂ ಕೃಷಿ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಸಾವಿರಾರು ರೈತರ ಹಿತ ಕಾಪಾಡಲು ಕಟ್ಟಕಡೆಯ ಅಸ್ತ್ರವಾಗಿ ಅನಿವಾರ್ಯ ಕಾನೂನು ಕ್ರಮ ಜರುಗಿಸಬೇಕಾಯಿತು ಎಂದು ಪೆಪ್ಸಿಕೋ ಸಮಜಾಯಿಷಿ ನೀಡಿದೆ. ನಮ್ಮ ಅನುಮತಿ ಇಲ್ಲದೆ ಎಫ್.ಸಿ.-5 ತಳಿಯನ್ನು ಬೆಳೆದಿರುವ ರೈತರಿಗೆ ನಮ್ಮೊಡನೆ ಗುತ್ತಿಗೆ ಕೃಷಿ ಒಪ್ಪಂದಕ್ಕೆ ಸಹಿ ಹಾಕಲು ಇಷ್ಟವಿಲ್ಲದೆ ಹೋದರೆ ಒತ್ತಾಯವಿಲ್ಲ. ಇನ್ನು ಮುಂದೆ ಹೀಗೆ ಬೆಳೆಯುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಇತರೆ ತಳಿಯ ಆಲೂ ಕೃಷಿಯನ್ನೇ ಮುಂದುವರೆಸಬಹುದು ಎಂದು ಹೇಳಿದೆ.

ಭಾರತೀಯ ಸಸ್ಯಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆಯು ನಮ್ಮ ರೈತರಿಗೆ ವಿಶೇಷ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳ ಪ್ರಕಾರ ರೈತರು ತಾವು ಬಿತ್ತನೆ ಮಾಡುವ ಯಾವುದೇ ಸಂರಕ್ಷಿತ ಪ್ರಭೇದದ ಬೀಜವನ್ನು ಕೂಡ ಮರುವರ್ಷದ ಬಿತ್ತನೆಗೆ ಉಳಿಸಿಕೊಳ್ಳಬಹುದು, ಬಳಸಬಹುದು, ಬಿತ್ತಬಹುದು, ಮರುಬಿತ್ತನೆ ಮಾಡಬಹುದು ಹಾಗೂ ಹಂಚಿಕೊಳ್ಳಬಹುದಷ್ಟೇ ಅಲ್ಲದೆ ಮಾರಾಟ ಮಾಡಲೂಬಹುದು. ಆದರೆ ಅಂತಹ ಬೀಜಗಳನ್ನು ಯಾವುದೇ ರೀತಿ ಪ್ಯಾಕ್ ಮಾಡಿ, ಅಥವಾ ಡಬ್ಬದಲ್ಲಿ ತುಂಬಿಸಿ ಹೆಸರಿಟ್ಟು ಮಾರಾಟ ಮಾಡುವಂತಿಲ್ಲ ಅಷ್ಟೇ. ಪೆಪ್ಸಿಯ ಎಫ್.ಸಿ-5 ಆಲೂ ಬಿತ್ತನೆಯೂ ಈ ಕಾಯಿದೆಗೆ ಹೊರತಲ್ಲ.
ಈ ಹಿನ್ನೆಲೆಯಲ್ಲಿ ಗುಜರಾತಿನ ಒಂಬತ್ತು ಮಂದಿ ರೈತರು ಎಫ್.ಸಿ-5 ತಳಿಯ ಆಲೂ ಬೆಳೆದು ಯಾವುದೇ ತಪ್ಪು ಮಾಡಿಲ್ಲವೆಂಬುದು ನಿಚ್ಚಳ. ಪೆಪ್ಸಿಯ ಪೂರ್ವಾನುಮತಿ ಪಡೆದಿಲ್ಲ ಎಂಬ ಅಂಶವೂ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲಾರದು. ಒಂಬತ್ತು ರಾಜ್ಯಗಳಲ್ಲಿ 24 ಸಾವಿರ ರೈತರ ಜೊತೆ ತನ್ನ ಒಪ್ಪಂದವಿರುವುದಾಗಿ ಪೆಪ್ಸಿ ಹೇಳಿಕೊಂಡಿದೆ. ಗುಜರಾತಿನ ಒಂಬತ್ತು ಮಂದಿ ರೈತರು ಎಫ್.ಸಿ- 5 ತಳಿಯನ್ನು ಬೆಳೆದಿರುವುದು ಈ 24 ಸಾವಿರ ರೈತರ ಹಿತಕ್ಕೆ ಮಾರಕ ಎಂಬ ಅಂಶ ಕೂಡ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುವುದಿಲ್ಲ. ಬೌದ್ಧಿಕ ಆಸ್ತಿ ಹಕ್ಕಿನ ಉಲ್ಲಂಘನೆಯೂ ಆಗುವುದಿಲ್ಲ ಎಂದು ಕೃಷಿ ಮತ್ತು ಆಹಾರ ಸಂಸ್ಕರಣೆ ಕಾನೂನು ತಜ್ಞರು ಹೇಳುತ್ತಾರೆ.
ಬಹುರಾಷ್ಟ್ರೀಯ ದೈತ್ಯ ಕಾರ್ಪೊರೇಟ್ ಕಂಪನಿ ಪೆಪ್ಸಿಕೋ ಭಾರತದಲ್ಲಿ ಮೊದಲ ಆಲೂ ಚಿಪ್ಸ್ ತಯಾರಿಕೆ ಘಟಕ ಸ್ಥಾಪಿಸಿದ್ದು 1989ರಲ್ಲಿ. ತನ್ನೊಂದಿಗೆ ಒಪ್ಪಂದ ಮಾಡಿಕೊಂಡ ರೈತರಿಗೆ ಎಫ್.ಸಿ.-5 ತಳಿಯ ಆಲೂ ಬಿತ್ತನೆ ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ನೆರವನ್ನು ಒದಗಿಸುತ್ತದೆ. ಮೊದಲೇ ಒಪ್ಪಂದ ಮಾಡಿಕೊಂಡ ದರ ನೀಡಿ ರೈತರು ಬೆಳೆದ ಎಫ್.ಸಿ.-5 ಆಲೂ ಖರೀದಿಸುತ್ತದೆ. ಮುಕ್ತ ಮಾರುಕಟ್ಟೆಯ ದರಗಳ ಏಳು ಬೀಳುಗಳನ್ನು ಈ ಒಪ್ಪಂದ ಲೆಕ್ಕಿಸುವುದಿಲ್ಲ. ರೈತರ ಪಾಲಿಗೆ ಇದು ಕೆಲವೊಮ್ಮೆ ವರವಾದರೆ ಕೆಲವೊಮ್ಮೆ ಶಾಪ ಆಗಬಲ್ಲದು.
ಬಹಳ ಕಾಲದಿಂದ ಆಲೂ ಬೆಳೆಯುತ್ತ ಬಂದಿದ್ದೇವೆ. ಇಂತಹ ಸಮಸ್ಯೆ ಎಂದೂ ಎದುರಾಗಿರಲಿಲ್ಲ. ಒಂದು ಕಟಾವಿನಲ್ಲಿ ಉಳಿಸಿಕೊಂಡ ಬೀಜವನ್ನು ಮುಂದಿನ ವರ್ಷದ ಬಿತ್ತನೆಗೆ ಬಳಸುವುದು ನಮ್ಮಲ್ಲಿನ ರೂಢಿ. ಪೆಪ್ಸಿ ಆರೋಪಿಸಿರುವ ಬೀಜವನ್ನು ನಾವು ಮಾರುಕಟ್ಟೆಯಿಂದ ಖರೀದಿಸಿಲ್ಲ. ಅದು ಎಫ್.ಸಿ.-5 ಬೀಜ ಎಂಬುದೂ ನಮಗೆ ತಿಳಿದಿಲ್ಲ. ಎಂದು ಕೋಟಿ ರುಪಾಯಿ ಪರಿಹಾರ ನೀಡಬೇಕೆಂಬ ನ್ಯಾಯಾಲಯದ ನೋಟೀಸು ಪಡೆದಿರುವ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ದೂರಿದ್ದಾರೆ. ಈ ಹಿಂದೆ ಎಫ್.ಸಿ-5 ಬೀಜ ಪಡೆದು, ಆಲೂಗೆಡ್ಡೆಯನ್ನು ಪೂರೈಸುವ ಪೆಪ್ಸಿಯ ಆಹ್ವಾನ ಲಾಭದಾಯಕ ಅಲ್ಲವೆಂದು ಕಾರಣಕ್ಕಾಗಿ ನಾವು ತಿರಸ್ಕರಿಸಿದ್ದೆವೆಂದು ಗುಟ್ಟು ರಟ್ಟು ಮಾಡಿದ್ದಾರೆ.
ಗುತ್ತಿಗೆ ಒಪ್ಪಂದ ಮಾಡಿಕೊಂಡ ರೈತರ ಹೊಲಗಳ ಮೇಲೆ ಪೆಪ್ಸಿ ಬಿಗಿ ನಿಗಾ ಇರಿಸುತ್ತದೆ. ಹಾಗಿದ್ದಾಗ ಈ ತಳಿಯ ಬಿತ್ತನೆ ಇತರೆ ರೈತರ ಕೈ ಸೇರಿದ್ದಾದರೂ ಹೇಗೆ ಎಂಬುದನ್ನು ಪೆಪ್ಸಿ ತಾನೇ ವಿವರಿಸಬೇಕು ಎನ್ನುತ್ತಾರೆ ಕೃಷಿ ಕಾನೂನು ತಜ್ಞ ವಿಜಯ್ ಭಾರದ್ವಾಜ್.

ಭಾರತದಲ್ಲಿ ತನ್ನ ವ್ಯಾಪಾರ ವ್ಯವಹಾರಗಳ ಸಂಬಂಧ ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯನ್ನು ಬಿಗಿಯಾಗಿ ಜಾರಿಗೊಳಿಸುವಂತೆ ಅಮೆರಿಕೆ ಭಾರತ ಸರ್ಕಾರದ ಮೇಲೆ ವಿಶ್ವ ವ್ಯಾಪಾರ ಸಂಸ್ಥೆಯಂತಹ ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ಸತತ ಒತ್ತಡ ಹೇರುತ್ತಲೇ ಬಂದಿದೆ. ಕೋಟಿ ರುಪಾಯಿ ಪರಿಹಾರದ ನೋಟಿಸು ರೈತರ ಕೈ ತಲುಪಿದ ಮಾರನೆಯ ದಿನವೇ, ಬೌದ್ಧಿಕ ಆಸ್ತಿ ಹಕ್ಕಿನ ಬಿಗಿ ಜಾರಿಗೆ ಅನುಕೂಲಕರ ವಾತಾವರಣವನ್ನು ಭಾರತ ರೂಪಿಸಬೇಕು ಎಂಬುದಾಗಿ ಅಮೆರಿಕೆ ಎಚ್ಚರ ನೀಡಿದ್ದು ಕಾಕತಾಳೀಯ ಇದ್ದಿರಲಾರದು. ಮುಂದುವರೆದ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು ಹೊಸ ರೂಪದ ಹಳೆಯ ‘ಈಸ್ಟ್ ಇಂಡಿಯಾ ಕಂಪನಿ’ಗಳೇ ಎಂಬುದು ರೈತ ಹಕ್ಕುಗಳ ಪ್ರತಿಪಾದಕರ ವಾದ.
ಅಸಮಾನ ವ್ಯವಸ್ಥೆಯಲ್ಲಿ ಪ್ರತಿಕೂಲಗಳೇ ಮೈಮೇಲೆ ಎರಗಿರುವ ನಮ್ಮ ರೈತರಿಗೆ ಎಷ್ಟು ರಕ್ಷಣೆ ಇದ್ದರೂ ಸಾಲದು. ಕೇಂದ್ರ ಕೃಷಿ ಮಂತ್ರಾಲಯ ಅವರ ನೆರವಿಗೆ ಮುಂದಾಗಬೇಕು 2001ರ ಸಸ್ಯ ಪ್ರಬೇಧಗಳ ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯಿದೆಯು (PPVF) ಭಾರತೀಯ ರೈತರ ಹಿತ ಕಾಯುವ ಏಕೈಕ ವಿಶಿಷ್ಟ ಶಾಸನ. ಆದರೆ ರೈತರ ಹಕ್ಕುಗಳನ್ನು ಗುರುತಿಸುವ ಈ ಕಾಯಿದೆ ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯ (ಇಂಟೆಲೆಕ್ಚ್ಯೂಯಲ್ ಪ್ರಾಪರ್ಟಿ ರೈಟ್) ಸಂದರ್ಭದಲ್ಲಿ ಅದರ ಭಾಗವಾಗಿ ರೂಪುಗೊಂಡಿರುವುದು ಒಂದು ದೊಡ್ಡ ವಿಡಂಬನೆ. ತಮ್ಮ ಅನುದಿನದ ಕೃಷಿಯ ಭಾಗವಾಗಿ ಹೊರಹೊಮ್ಮಿದ ಯಾವುದೇ ಆವಿಷ್ಕಾರಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಭಾರತೀಯ ರೈತರು ಎಂದೂ ಕೋರಿದವರಲ್ಲ ಎನ್ನುತ್ತಾರೆ ನೀತಿ ನಿರೂಪಣೆ ವಿಶ್ಲೇಷಕಿ ಶಾಲಿನಿ ಭುತಾನಿ.
ತಳಿ ರೂಪಿಸಿದವರ ಹಕ್ಕುಗಳನ್ನು ಪಕ್ಕಕ್ಕೆ ತಳ್ಳುವಷ್ಟು ಸಶಕ್ತವಾಗಿದೆ ರೈತರ ಹಕ್ಕು ಕಾಯಿದೆ. ಈ ಸಂಗತಿ ಪೆಪ್ಸಿಕೋಗೆ ಗೊತ್ತು. ಆದರೂ ಈ ಕಾಯಿದೆಯನ್ನು ಪರೀಕ್ಷೆಗೆ ಒಡ್ಡಲು ಮತ್ತು ತನ್ನ ತಳಿಯನ್ನು ಅನಧಿಕೃತವಾಗಿ ಮಾರತೊಡಗಿರುವವರಿಗೆ ಎಚ್ಚರಿಕೆ ನೀಡಲು ಹಾಗೂ ರೈತರನ್ನು ಹೆದರಿಸಿ ಅವರನ್ನು ತನ್ನೊಂದಿಗೆ ಗುತ್ತಿಗೆ ಕೃಷಿ ಒಪ್ಪಂದಕ್ಕೆ ಸೆಳೆದುಕೊಳ್ಳುವುದು ಪೆಪ್ಸಿಕೋ ಹಂಚಿಕೆ. ಮೊದಲ ಬಾರಿಗೆ ಭಾರತೀಯ ರೈತರ ಹಕ್ಕು ಕಾಯಿದೆ ಪರೀಕ್ಷೆ ಎದುರಿಸಿದೆ ಎಂಬುದು ಅವರ ವಿಶ್ಲೇಷಣೆ.
ಮೊನ್ಸಾಂಟೋ ಎಂಬ ಮತ್ತೊಂದು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿ ಬಿ.ಟಿ.ಹತ್ತಿ ಬೀಜದ ಮೇಲೆ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಕಾರ ತನ್ನ ಏಕಸ್ವಾಮ್ಯ ಸಾಧಿಸುವ ಪ್ರಯತ್ನದಲ್ಲಿ ಕಡೆಗೂ ಹಿಂದೆ ಸರಿಯಬೇಕಾಯಿತು. ಭಾರತದಲ್ಲಿನ ತನ್ನ ವ್ಯವಹಾರವನ್ನೇ ಮೊಟಕು ಮಾಡಿತು. ಈ ಕಂಪನಿ ಇದೀಗ ಜರ್ಮನಿಯ ಬಾಯರ್ ಎ.ಜಿ. ಕಂಪನಿಯ ವಶವಾಗಿದೆ.
2001ರ ಭಾರತೀಯ ಸಸ್ಯಪ್ರಭೇದ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆಯು ಒಂದು ಅರ್ಥದಲ್ಲಿ ರೈತರ ಪಾಲಿಗೆ ಬಹಳ ಉದಾರ ಶಾಸನ. ಸಂಶೋಧನೆ ಆಧಾರಿತ ಆಹಾರ ಬೆಳೆ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಬರಬೇಕಿದ್ದರೆ ಈ ಕಾಯಿದೆಯನ್ನು ಬಿಗಿ ಮಾಡುವುದು ಅತ್ಯಗತ್ಯ ಎನ್ನುತ್ತಾರೆ ಭಾರತೀಯ ಬಿತ್ತನೆ ಬೀಜ ಉದ್ಯಮಗಳ ಮಹಾ ಒಕ್ಕೂಟದ ಮಹಾನಿರ್ದೇಶಕ ರಾಮ ಕೌಂಡಿನ್ಯ.
ಬೌದ್ಥಿಕ ಆಸ್ತಿ ಹಕ್ಕು ಎಂಬುದೇ ಸೂಕ್ತವಲ್ಲ. ಈ ಉಕ್ಕಿನ ಚೌಕಟ್ಟು ಜಾರಿಯಾದ ನಂತರ ತೃತೀಯ ಜಗತ್ತಿನ ನಾನಾ ದೇಶಗಳಲ್ಲಿ ರೈತರು ಮತ್ತು ಕಂಪನಿಗಳ ನಡುವೆ ಸತತ ಸಂಘರ್ಷ ಜರುಗಿದೆ ಎನ್ನುತ್ತಾರೆ ಕೃಷಿ ವೆಚ್ಚ ಮತ್ತು ದರಗಳ ಆಯೋಗದ ಮಾಜಿ ಸದಸ್ಯ ತಾಜಮುಲ್ ಹಕ್.
ತಾನು ರೈತರ ವಿರುದ್ಧ ನ್ಯಾಯಾಲಯದ ಮುಂದೆ ಹೂಡಿರುವ ದಾವೆಯನ್ನು ಬೇಷರತ್ತು ವಾಪಸು ಪಡೆಯುವುದು ಖುದ್ದು ಪೆಪ್ಸಿಗೇ ಕ್ಷೇಮಕರ. ಲಕ್ಷಾಂತರ ಕೋಟಿ ರುಪಾಯಿಗಳ ವಹಿವಾಟು ನಡೆಸುವ ಬಹುರಾಷ್ಟ್ರೀಯ ಕಂಪನಿಯೊಂದು ಬಡ ರೈತರಿಂದ ಕೇಳುತ್ತಿರುವ ತಲಾ ಕೋಟಿ ರುಪಾಯಿಗಳ ಪರಿಹಾರ ಕವಡೆ ಕಾಸಿಗೆ ಸಮ. ಮದ್ದಾನೆಯೊಂದು ಗುಬ್ಬಿಯ ಮೇಲೆ ಎರಗಿದರೆ ಸಹಾನುಭೂತಿ ಗುಬ್ಬಿಗೆ ದೊರೆವುದೇ ವಿನಾ ಮದ್ದಾನೆಗಲ್ಲ. ಸಾರ್ವಜನಿಕರ ಸಿಟ್ಟಿಗೆ ಗುರಿಯಾಗುವ ಮುನ್ನ ಪೆಪ್ಸಿ ತನ್ನ ಒಳಿತಿಗಾಗಿಯೇ ಎಚ್ಚೆತ್ತುಕೊಳ್ಳಬೇಕು.
ಲಾಭವೊಂದೇ ಪರಮ ಎಂಬ ನೀತಿಯ ಬಹುರಾಷ್ಟ್ರೀಯ ದೈತ್ಯ ಕಾರ್ಪೊರೇಟುಗಳು ತೃತೀಯ ಜಗತ್ತಿನ ದೇಶಗಳ ನೆಲ, ಜಲ, ಗಾಳಿ, ಕಾಡುಗಳನ್ನು ಕೂಡ ಲೆಕ್ಕಿಸುವುದಿಲ್ಲ.
ತಮ್ಮ ಮೆದು ಪಾನೀಯಗಳ ತಯಾರಿಕೆಗೆಂದು ಅತ್ಯಧಿಕ ನೀರು ಬಳಕೆ ಮಾಡಿವೆಯೆಂದು ಪೆಪ್ಸಿ ಮತ್ತು ಕೋಕಾ ಕೋಲಾ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಜನವಿರೋಧ ಎದುರಿಸಿದ್ದುಂಟು.
ದಕ್ಷಿಣ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ರೈತರ ಜೀವನಾಡಿಯಾಗಿದ್ದ ತಾಮಿರಭರಣಿ ನದಿಯಿಂದ ನಿತ್ಯ 15 ಲಕ್ಷ ಲೀಟರುಗಳಷ್ಟು ನೀರನ್ನು ಮೆದು ಪಾನೀಯ ಮತ್ತು ಮಿನರಲ್ ವಾಟರ್ ತಯಾರಿಕೆಗೆಂದು ಪ್ರತಿ ಲೀಟರಿಗೆ 3.75 ರೂಪಾಯಿ ದರದಲ್ಲಿ ಪೆಪ್ಸಿ ಕಂಪನಿಗೆ 99 ವರ್ಷಗಳ ಕಾಲ ನೀಡುವ ರಾಜ್ಯ ಸರ್ಕಾರದ ಒಪ್ಪಂದದ ವಿರುದ್ಧ 2015ರಲ್ಲಿ ಸ್ಥಳೀಯರು ಸಿಡಿದೆದ್ದಿದ್ದರು. ತನ್ನ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲು ದೈನಂದಿನ ನೀರಿನ ಬಳಕೆಯನ್ನು 9 ಲಕ್ಷ ಲೀಟರುಗಳಿಂದ 18 ಲಕ್ಷ ಲೀಟರುಗಳಿಗೆ ಏರಿಸುವ ಕೋಕಾ ಕೋಲಾ ಕಂಪನಿಯ ಪ್ರಸ್ತಾವದ ವಿರುದ್ಧ ತಮಿಳುನಾಡಿನ ರೈತರು ಹತ್ತು ವರ್ಷಗಳಷ್ಟು ಹಿಂದೆಯೇ ತಿರುಗಿ ಬಿದ್ದಿದ್ದರು. ಪ್ರತಿರೋಧಕ್ಕೆ ಮಣಿದ ಸರ್ಕಾರ ಈ ಪ್ರಸ್ತಾವಕ್ಕೆ ಅಂಗೀಕಾರ ನೀಡಲಿಲ್ಲ.
ಕಾನೂನು ಕಾಯಿದೆಗಳು ಅಂತಿಮವಾಗಿ ಜೇಡನ ಬಲೆಯಿದ್ದಂತೆ. ದುರ್ಬಲರು ಮತ್ತು ದರಿದ್ರರನ್ನು ಕೆಡವಿಕೊಳ್ಳುತ್ತದೆ. ಹಣವುಳ್ಳವರು ಮತ್ತು ಬಲವಿದ್ದವರು ಈ ಬಲೆಯನ್ನು ಹರಿದು ಒಗೆಯುತ್ತಾರೆ.