ನಾಟಕಕಾರ, ನಿರ್ದೇಶಕ, ನಟ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಮ್ಮನ್ನು ಅಗಲಿದ್ದಾರೆ. ಎಂಬತ್ತರ ಪೂರ್ಣ ಜೀವನವನ್ನು ಕಳೆದು ನಮ್ಮಿಂದ ದೂರವಾಗಿದ್ದಾರೆ. ಕಾರ್ನಾಡ್ ಇದಿಷ್ಟೇ ಆಗಿದ್ದರೆ ಸಾಂಸ್ಕೃತಿಕ ಲೋಕ ಇಷ್ಟೊಂದು ದುಃಖ ಪಡಬೇಕಿರಲಿಲ್ಲ. ಆಯಾ ಕಾಲದ ಸಾಮಾಜಿಕ, ಸಾಂಸ್ಕೃತಿಕ ಕೇಡುಗಳ ವಿರುದ್ಧ ಧ್ವನಿ ಎತ್ತುತ್ತಾ, ಪ್ರಶಸ್ತಿ- ಗೌರವಗಳ ಭಾರ ತಮ್ಮನ್ನು ಮುಳುಗಿಸಿಬಿಡದಂತೆ ಎಚ್ಚರವಾಗಿದ್ದದ್ದು ಕಾರ್ನಾಡರ ಬಗೆಗಿನ ಬಹುಮುಖ್ಯ ಸಂಗತಿ.
ಕಾರ್ನಾಡ್ ಸಾಮಾಜಿಕ ತಲ್ಲಣಗಳಿಗೆ ಪ್ರತಿಕ್ರಿಯಿಸುವ ಕಾಳಜಿಯ ಜೊತೆಗೇ ತಮ್ಮ ನಾಟಕ, ರಂಗಭೂಮಿ ಮೂಲಕ ಕೂಡ ಇದನ್ನು ಕಾಪಾಡಿಕೊಂಡು ಬಂದಿದ್ದರು. ಕನ್ನಡಕ್ಕೆ 7 ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾರ್ನಾಡ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಸಾಹಿತ್ಯ, ಭಾಷೆ ಕನ್ನಡವಲ್ಲದೆ ಮರಾಠಿ, ಹಿಂದಿ, ಪಂಜಾಬಿ ಇಂಗ್ಲೀಷ್ ಇತ್ಯಾದಿ ಭಾಷೆಗಳ ಬಗ್ಗೆ ಜ್ಞಾನ ಹೊಂದಿದ್ದರು.
ಪುರಾಣಗಳನ್ನು ಮುರಿದು ಸದ್ಯಕ್ಕೆ ಸ್ಪಂದಿಸುವಂತೆ ನಾಟಕ ಬರೆದರು. ಹೀಗಾಗಿ ಭಾರತೀಯ ರಂಗಭೂಮಿಯಲ್ಲಿ ಅವರು ಅತಿ ಬೇಗ ಪ್ರಸಿದ್ದಿಗೆ ಬಂದರು. ಅವರ ನಾಟಕಗಳು ಮನುಷ್ಯನೊಳಗೆ ಸುಪ್ತವಾಗಿರುವ ಮೂಲ ಸ್ಥಾಯಿಗಳಾದ ಕಾಮ, ಪ್ರೇಮ, ಬೋಗ, ಬಯಕೆಗಳನ್ನು ಅನ್ವೇಷಿಸುತ್ತವೆ. ನಾಗರಿಕತೆ, ಶ್ರೇಷ್ಠತೆ, ಸಂಸ್ಕಾರ ಮತ್ತು ಇಂದ್ರಿಯ ನಿಗ್ರಹದ ಸೋಗು ಹಾಕಿದರೂ ಹಸಿವು, ಕಾಮ, ಪ್ರೇಮ, ಕೇಡುಗಳಿಂದ ಹೊರತಲ್ಲ ಎಂಬುದನ್ನು ನಿರೂಪಿಸುತ್ತವೆ.
ಅವರು 1961ರಲ್ಲಿ ಬರೆದ ಮೊದಲ ನಾಟಕ ಯಯಾತಿ ಪುರಾಣದಲ್ಲಿ ಬರುವ ಒಬ್ಬ ರಾಜ. ನಾಲ್ಕೂ ದಿಕ್ಕುಗಳಲ್ಲೂ ದಂಡಯಾತ್ರೆ ಮಾಡಿ ಇತರ ರಾಜರುಗಳನ್ನು ಬಗ್ಗು ಬಡಿದು ದಿಗ್ವಿಜಯ ಸಾಧಿಸಿ ಸಾಮ್ರಾಜ್ಯ ವಿಸ್ತರಿಸಿದವನು ಯಯಾತಿ. ಆದರೇನು ಅವನು ತನ್ನೊಳಗೆ ಗುಮ್ಮನೆ ಕುಳಿತಿರುವ ಭೋಗ ಲಾಲಸೆಯ ಶಿಶು. ಗುರು ಶುಕ್ರಾಚಾರ್ಯನ ಮಗಳು ದೇವಯಾನಿಯನ್ನು ವರಿಸಿದ್ದರೂ ಅವಳ ಸ್ನೇಹಿತೆ ಶರ್ಮಿಷ್ಠೆಯನ್ನೂ ತನ್ನ ಕಾಮ ಪಾಶದಲ್ಲಿ ಹಿಡಿದಿರುತ್ತಾನೆ. ಅಲ್ಲದೆ ತನಗಿರುವ ಶಕ್ತಿಯನ್ನು ಬಳಸಿ ತನ್ನ ವೃದ್ದಾಪ್ಯವನ್ನು ತನ್ನ ಮಗ ಪುರುವಿಗೆ ಹಸ್ತಾಂತರಿಸಿ ಅವನ ಆಯುಷ್ಯವನ್ನು ಪಡೆದು ಸುಖಾನಂದದಲ್ಲಿ ಮುಳುಗುತ್ತಾನೆ. ಕೊನೆಗೆ ಯಾವ ತಪ್ಪೂ ಮಾಡದ ಮಗ ಪುರು ತನ್ನ ಚಿರ ಯೌವನದ ಬದಲು ವೃದ್ಧಾಪ್ಯವನ್ನು ಅನುಭವಿಸಬೇಕಾಗಿ ಬಂದ ಸನ್ನಿವೇಶದಿಂದಾಗಿ ಯಯಾತಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಪ್ರಾಯಶ್ವಿತ್ತಕ್ಕಾಗಿ ಅವನು ರಾಜ್ಯ, ಕೋಶಗಳನ್ನು ಬಿಟ್ಟು ಸನ್ಯಾಸವನ್ನು ಸ್ವೀಕರಿಸುವ ಕಥೆಯನ್ನು ಕಾರ್ನಾಡರು ನಾಟಕದಲ್ಲಿ ಆಪ್ತವಾಗಿ ರಚಿಸಿದ್ದಾರೆ.
1995ರಲ್ಲಿ ಬರೆದ ಮತ್ತೊಂದು ಬಹುಮುಖ್ಯ ನಾಟಕ ಅಗ್ನಿ ಮತ್ತು ಮಳೆ. ಇಂಗ್ಲೆಂಡಿನ ರಂಗ ತಂಡವೊಂದಕ್ಕೆ ಬರೆದ ಈ ನಾಟಕ ನಂತರ ಕನ್ನಡಕ್ಕೆ ಅನುವಾದಗೊಂಡಿತು. ಭಾರತದ ಎರಡು ಬಹುಮುಖ್ಯ ಸಂಸ್ಕೃತಿಗಳಾದ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಯ ಸಂಘರ್ಷವನ್ನು ಈ ನಾಟಕದಲ್ಲಿ ಕಾರ್ನಾಡರು ಚಿತ್ರಿಸಿದ್ದರು.
ಅಗ್ನಿ ಯಜ್ಞ, ಯಾಗ, ಆರ್ಯ ಸಂಸ್ಕೃತಿಯ ಸಂಕೇತವಾಗಿದ್ದರೆ, ಮಳೆ, ಭೂಮಿ, ಕಾಡು ಇತ್ಯಾದಿಗಳು ದ್ರಾವಿಡ ಸಂಸ್ಕೃತಿಯ ಸಂಕೇತವಾಗಿವೆ. ಮಹಾಭಾರತದಲ್ಲಿನ ಎಳೆಯೊಂದನ್ನು ಕಥೆಯಾಗಿ ಪಡೆದಿರುವ ಕಾರ್ನಾಡರು ಇಡೀ ನಾಟಕವನ್ನೂ ಪುರಾಣದ ಹೊರತಾಗಿ ಚಿತ್ರಿಸಿದ್ದಾರೆ.
ಪುರಾಣದ ಕಥೆಗಳಂತೆ ಚರಿತ್ರೆಯ ಕಥೆಗಳನ್ನು ಮುರಿದು ಕಟ್ಟಿದರು. ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಂತೆ, “ಚರಿತ್ರೆಯನ್ನು ಆಧರಿಸಿದ ಕನ್ನಡದ ನಾಟಕಗಳು ತುಂಬಾ ಸಪ್ಪೆಯಾಗಿದ್ದವು. ಭಾರತದಲ್ಲೇ ಹಾಗಿತ್ತು. ವೇಷಭೂಷಣ, ವೈಭವ ಇರುವುದು, ಇಲ್ಲವಾದರೆ, ಶಹಜಹಾನನ ಕಣ್ಣೀರಿಡುವ ಪ್ರೇಮಕಥೆಯಂತಹ ನಾಟಕಗಳೇ ಇದ್ದವು. ಮುರಿದು ಕಟ್ಟಬೇಕೆನಿಸಿತು”.
ಹಾಗೇ ಬರೆದ ತುಘಲಕ್, ತಲೆದಂಡ, ಟಿಪ್ಪುವಿನ ಕನಸುಗಳು ಮತ್ತು ವರ್ಷದ ಹಿಂದೆ ಬಿಡುಗಡೆಯಾದ ನಾಟಕಗಳು ಇತಿಹಾಸ ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ಭಿನ್ನವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡಿದವು. ಸಾಹಿತಿ ಒಬ್ಬ ಕಲಾವಿದನೂ, ಚರಿತ್ರಕಾರನೂ ಆಗಿರುತ್ತಾನೆ. ಎಲ್ಲವನ್ನೂ ಮೇಳೈಸಿ ವರ್ತಮಾನದ ಪ್ರಜ್ಞೆಯನ್ನು ರೂಪಿಸುವ ಕೆಲಸ ಮಾಡುತ್ತಾನೆ. ಕಾರ್ನಾಡರ ನಾಟಕಗಳು ಮಾಡಿದ್ದು ಅದನ್ನೇ.
ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸುವ ಬಹಳ ಮಹತ್ವದಕೊಂಡಿಯಾಗಿದ್ದ ಕಾರ್ನಾಡ ಅಗಲಿಕೆ ಈ ಕಾಲಕ್ಕೆ ಬಹಳ ದೊಡ್ಡ ನಷ್ಟ.
ಲೇಖಕರು ಹವ್ಯಾಸಿ ರಂಗಕರ್ಮಿ
ಚಿತ್ರಕೃಪೆ: ಎಡೆಕ್ಸ್‌ಲೈವ್