ಲಾಠಿ ಹಿಡಿದ ಪೊಲೀಸಪ್ಪ ಏನು ತಾನೇ ಮಾಡಬಲ್ಲ ಎಂಬ ತಾತ್ಸಾರದ ಮಾತುಗಳನ್ನಾಡುವ ಸಾಕಷ್ಟು ಮಂದಿಯನ್ನು ನಮ್ಮ ಸುತ್ತ ದಿನಬೆಳಗಾದರೆ ನೋಡುತ್ತಲೇ ಇರುತ್ತೇವೆ. ನಮ್ಮ ಪೊಲೀಸ್ ವ್ಯವಸ್ಥೆಯೂ ಹಾಗೇ ಇದೆ ಬಿಡಿ.
ಪ್ರಥಮ ವಿಶ್ವ ಮಹಾಯುದ್ಧದ ಕಾಲದ ಆಂಟಿಕ್ ಪೀಸ್‌ಗಳಾದ 0.302 ರೈಫಲ್‌ಗಳನ್ನೇ ಇನ್ನೂ ಪೊಲೀಸ್ ಸ್ಟೇಷನ್‌ಗಳಲ್ಲಿ ಸ್ಟಾಂಡರ್ಡ್ ವೆಪನ್ ಆಗಿಟ್ಟುಕೊಂಡಿರುವುದಲ್ಲದೇ, ಈ ಪೊಲೀಸ್ ಪೇದೆಗಳನ್ನು ವಿಐಪಿಗಳ ಕಾವಲಿಗೆ ಸೀಮಿತ ಮಾಡಿಕೊಂಡಿರುವ ನಮ್ಮದೇ ವ್ಯವಸ್ಥೆಯ ಸೀಮಿತತೆಗಳನ್ನೂ ಮೀರಿ ಅಪ್ರತಿಮ ಸಾಧನೆಗಳು ಮಾಡಿದ್ದ ಅದೆಷ್ಟೋ ಪೊಲೀಸಪ್ಪಂದಿರು ಇತಿಹಾಸ ಪುಟಗಳಲ್ಲಿ ತಮ್ಮ ಶೌರ್ಯದ ಗಾಥೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದು ಹೋಗಿದ್ದಾರೆ.
2008ರ 26/11 ಮುಂಬಯಿ ದಾಳಿ ಸಂದರ್ಭದಲ್ಲಿ ಜೀವಂತ ಸೆರೆ ಹಿಡಿಯಲಾದ ಪಾಕಿಸ್ತಾನದ ಭಯೋತ್ಪಾದ ಅಜ್ಮಲ್ ಕಸಬ್‌ನನ್ನು ಹಿಡಿದುಕೊಟ್ಟಿದ್ದು ಯಾರು ಗೊತ್ತೇ? ತುಕಾರಾಂ ಒಂಬ್ಳೆ ಎಂಬ ಮುಖ್ಯ ಪೇದೆ… ಅದೂ ಕೈಯಲ್ಲಿ ಲಾಠಿ ಹಿಡಿದುಕೊಂಡು, AK-47 ಸಜ್ಜಿತ ಕಸಾಬ್ ತನ್ನ ಮೇಲೆ ಗುಂಡಿನ ಮಳೆಗರೆದರೂ ಸಹ, ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ತನ್ನ ಸಹೋದ್ಯೋಗಿಗಳ ಪ್ರಾಣಕ್ಕೆ ಸಂಚಕಾರ ಬಾರದಂತೆ ಮಾಡಿದ ಒಂಬ್ಳೆ ಸಾಹಸ ನಿಜಕ್ಕೂ ಅಪ್ರತಿಮವಾದದು.
ಅಂತಹ ಧೀರರನ್ನು ಕಂಡ ಈ ದೇಶದಲ್ಲಿ, ಪ್ರಜೆಗಳು ಹಾಗೂ ಸಹೋದ್ಯೋಗಿಗಳ ಜೀವಗಳಿಗೆ ಮೊದಲ ಆದ್ಯತೆ ಕೊಟ್ಟು, ತಮ್ಮದೇ ಪ್ರಾಣವನ್ನು ಒತ್ತೆ ಇಟ್ಟು ಹೋರಾಡುವ ಧೀರ ಪೇದೆಗಳ ಸಾಲಿಗೆ ಸೇರಿಕೊಂಡಿರುವ ಮತ್ತೊಂದು ಹೆಸರು ಈ ದೀಪಕ್ ದಹಿಯಾ.
ಪೌರತ್ವ ತಿದ್ದುಪಡಿ ಕಾಯಿದೆ (CAA) ವಿರೋಧಿ ಪ್ರತಿಭಟನೆ ವೇಳೆ ಈಶಾನ್ಯದ ದೆಹಲಿಯ ಜಫರಾಬಾದ್‌ನಲ್ಲಿ ಪಿಸ್ತೂಲ್ ಹಿಡಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಲು ಬಂದ ಪಾತಕಿಯನ್ನು ಬರೀ ಲಾಠಿಯಲ್ಲಿ ಇದ್ದ ಪೊಲೀಸ್ ಸಿಬ್ಬಂದಿಯೊಬ್ಬರು ದಿಟ್ಟವಾಗಿ ಎದುರಿಸುತ್ತಿದ್ದ ಚಿತ್ರವೊಂದು ವೈರಲ್ ಆಗಿದ್ದು, ದೇಶವಾಸಿಗಳು ಆ ದಿಟ್ಟತನಕ್ಕೆ ಸಲ್ಯೂಟ್ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಪೊಲೀಸ್ ಸಿಬ್ಬಂದಿಯತ್ತ ಪಾತಕಿ ಶಾಹ್‌ರುಖ್ ಪಿಸ್ತೂಲ್ ತೋರುತ್ತಾ ನಿಂತಿದ್ದು, ಇದಕ್ಕೆ ಬೆದರದ ಪೊಲೀಸ್ ಪೇದೆ ದೀಪಕ್ ದಹಿಯಾ ಒಂಚೂರೂ ಅಲುಗಾಡದೇ, ಆ ಪಾತಕಿಯ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.
ಪೊಲೀಸ್ ಇಲಾಖೆಗೆ ತನ್ನ ಮಕ್ಕಳನ್ನು ತಲೆಮಾರುಗಳಿಂದ ಕಳುಹಿಸುತ್ತಲೇ ಇರುವ ಕುಟುಂಬದಿಂದ ಬಂದ ದಹಿಯಾ, “ಇಂಥ ಪರಿಸ್ಥಿತಿಗಳನ್ನು ಎದುರಿಸಲು ಪೊಲೀಸರಿಗೆ ತರಬೇತಿ ಕೊಡಲಾಗುತ್ತದೆ. ತನ್ನ ಜೀವಕ್ಕಿಂತಲೂ ನಾಗರೀಕರ ಜೀವಗಳನ್ನು ಮೊದಲು ಎನ್ನುವ ರೀತಿಯಲ್ಲಿ ಇವರಿಗೆ ತರಬೇತಿ ಕೊಡಲಾಗುತ್ತದೆ,” ಎಂದು ಹೇಳುತ್ತಾರೆ.
ಮೌಜ್ಪುರ ಚೌಕದಲ್ಲಿ ತಾವು ಎದುರಿಸಿದ ಆ ಕ್ಷಣಗಳ ಬಗ್ಗೆ ದಹಿಯಾ ಹೇಳುವುದು ಹೀಗೆ — “ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ಅವನತ್ತ ಹೋದೆ. ಆತನ ಹಾದಿಯಲ್ಲಿ ಬೇರೆ ಯಾರನ್ನೂ ಹತ್ತಿರ ಬರಲು ಬಿಡಲು ಸಾಧ್ಯವಿರಲಿಲ್ಲ. ಯಾರಿಗೂ ಗಾಯಗಳಾಗದಂತೆ ನೋಡಿಕೊಳ್ಳುವುದು ನನ್ನ ಪ್ರಾಶಸ್ತ್ಯವಾಗಿತ್ತು. ಇದು ನನ್ನ ಕರ್ತವ್ಯ ಮತ್ತು ನಾನು ಅದನ್ನೇ ಮಾಡುತ್ತಿದ್ದೆ.”
ಪ್ರತಿಭಟನೆಗಳು ತೀವ್ರ ಹಿಂಸಾಚಾರಕ್ಕೆ ತಿರುಗಿದವು ಎಂದ ಈ ಮುಖ್ಯ ಪೇದೆ, “ಜನರು ಒಬ್ಬರಿಗೊಬ್ಬರು ಕಲ್ಲು ಎಸೆದುಕೊಳ್ಳಲು ಆರಂಭಿಸಿದ್ದರು. ಗಲಭೆ ನಡೆಯುತ್ತಿದ್ದ ಜಾಗದತ್ತ ನಾನು ಹೋಗುತ್ತಿದ್ದಂತೆ , ಗನ್ ಶಾಟ್ ಸದ್ದು ಕೇಳಿತು. ಕೆಂಪು ಬಣ್ಣದ ಶರ್ಟ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನು ನೋಡಿದೆ. ಅವನು ಪಿಸ್ತೂಲ್ ಹೊಂದಿದ್ದ. ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ತಕ್ಷಣ ಅಲ್ಲಿಗೆ ಹೋದೆ,” ಎನ್ನುತ್ತಾರೆ.
ಖುದ್ದು ದಹಿಯಾ ಹೇಳುವ ಪ್ರಕಾರ, ಮೊನ್ನಿನ ಘಟನೆಯ ಬಗ್ಗೆ ಹರಿಯಾಣಾದಲ್ಲಿರುವ ಅವರ ಕುಟುಂಬಕ್ಕೆ ಏನೂ ತಿಳಿದಿಲ್ಲ.ಈ ಬಗ್ಗೆ ತಮ್ಮ ಕುಟುಂಬದ ಬಳಿ ಏನೂ ಹೇಳದಿರಲು ಅವರು ನಿರ್ಧರಿಸಿದ್ದಾರೆ. ಆದರೆ, ಪ್ರತಿಷ್ಠಿತ ಪತ್ರಿಕೆಯೊಂದರ ವರದಿಯಿಂದಾಗಿ ಅವರ ಕುಟುಂಬಕ್ಕೆ ಈ ವಿಚಾರ ತಿಳಿದುಬಿಟ್ಟಿದೆ. ಈ ಚಿತ್ರದಲ್ಲಿ ದಹಿಯಾ ಮುಖ ಕಾಣದೇ ಇದ್ದರೂ ಸಹ ಅವರು ಧರಿಸಿದ್ದ ಬ್ಲೂ ಸ್ಟ್ರೈಪ್ ಇದ್ದ ಜಾಕೆಟ್ ಅವರ ಪತ್ನಿಯ ಗಮನ ಸೆಳೆದಿದ್ದು, ಅದರಿಂದ ಸಂಗತಿ ಇನ್ನಷ್ಟು ಸ್ಪಷ್ಟವಾಗಿದೆ.
“ಬಹಳ ಚಿಂತಿತಳಾಗಿದ್ದ ನನ್ನ ಪತ್ನಿ ಕರೆ ಮಾಡಿದ್ದಳು. ಆಕೆಯ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟು ಆಕೆಯ ಗಮನ ಬೇರೆಡೆ ಸೆಳೆಯಲು ಯತ್ನಿಸಿದೆ. ನನ್ನ ಮುಖವು ಪೇಪರ್‌ಗಳಲ್ಲಿ ಒಂದ ಚಿತ್ರಗಳಲ್ಲಿ ಕಾಣದೇ ಇದ್ದರೂ ಸಹ ನಾನು ಧರಿಸಿದ್ದ ನೀಲಿ ಬಣ್ಣದ ಅಂಗಿಯಿಂದ ಆಕೆ ನನ್ನ ಗುರುತು ಹಿಡಿದಿದ್ದಾಳೆ. ನನ್ನ ಮೇಲೆ ಆಕೆಗೆ ಪೂರ್ಣ ನಂಬಿಕೆ ಇರುವ ಕಾರಣ ನಾನು ಸುಮ್ಮನೇ ಆದೆ,” ಎಂದು ತಮ್ಮ ಪತ್ನಿ ಪಟ್ಟ ಪಾಡನ್ನು ವಿವರಿಸುತ್ತಾರೆ ದಹಿಯಾ.
”ಗಲಾಟೆಯಲ್ಲಿ ಒಂದು ವೇಳೆ ನನ್ನ ಮುಂದೆ ಯಾರಾದರೂ ಮೃತಪಟ್ಟಿದ್ದರೆ ನನಗೆ ಎಂದಿಗೂ ಮರೆಯಲಾಗದಷ್ಟು ನೋವಾಗುತ್ತಿತ್ತು,” ಎಂದು ಮನದಾಳದ ಮಾತುಗಳನ್ನಾಡಿದ್ದಾರೆ ಈ ಮುಖ್ಯ ಪೇದೆ.