ಇವತ್ತು ಪಶ್ಚಿಮ ಬಂಗಾಳ ಏನನ್ನು ವಿಚಾರ ಮಾಡುತ್ತದೆಯೋ, ಇಡೀ ದೇಶ ಅದನ್ನು ನಾಳೆ ಮಾಡುತ್ತದೆ. ವೈಚಾರಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಲ್ಲಿ ಅದಕ್ಕಿರುವ ಪ್ರಾಮುಖ್ಯತೆಯನ್ನು ಬಿಂಬಿಸುವ ನಾಣ್ಣುಡಿ ಒಂದು ಕಾಲದಲ್ಲಿ ಪ್ರಸಿಧ್ಧವಾಗಿತ್ತು. ಈಗೆಲ್ಲ ತದ್ವಿರುಧ್ಧ. ಪ.ಬಂಗಾಳವು ಮಾಡಿದ್ದನ್ನು ಅನುಸರಿಸಬಾರದೆಂದು ಹೇಳುವ ಕಾಲ ಬಂದಿದೆ.
ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಪ್ರಚಾರದ ವೈಖರಿಯನ್ನು ನೋಡಿ. ಏಳು ಹಂತದ ಚುನಾವಣೆಯಲ್ಲಿ ಆರು ಹಂತಗಳನ್ನು ಪ.ಬಂಗಾಳವು ಹಿಂಸೆ, ಗಲಭೆ, ದೊಂಬಿಗಳ ನಡುವೆ ಕಳೆದಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತರು ರಾಜ್ಯದಲ್ಲಿ ಗೂಂಡಾರಾಜ್ಯದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ, ಚುನಾವಣೆಗಳು ನ್ಯಾಯಯುತವಾಗಿ ಸರಿಯಾಗಿ ನಡೆಯದಂತಹ ವಾತಾವರಣವನ್ನು ಕಲ್ಪಿಸಿದ್ದಾರೆ. ಅದಕ್ಕೆ ನೀರು ಎರೆದು ಪೋಷಿಸಿದವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು. ಅಂತಹ ಎಲ್ಲ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿ, ಇವೆಲ್ಲಕ್ಕೂ ಭಾಜಪವೇ ಹೊಣೆ ಎನ್ನುವ ವಿತಂಡವಾದ ಮಾಡುತ್ತಿದ್ದಾರೆ.
ಇವುಗಳೆಲ್ಲವನ್ನೂ ಗಮನಿಸುತ್ತಿದ್ದ ಇದ್ದ ಚುನಾವಣಾ ಆಯೋಗ ಮೊದಲ ಬಾರಿ, ಸಂವಿಧಾನದ 324 ಕಲಮಿನಲ್ಲಿ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ಚುನಾವಣಾ ಪ್ರಚಾರದ ವೇಳೆಯಲ್ಲಿ ಕಡಿತ ಮಾಡಿ, 24 ತಾಸುಗಳ ಮೊದಲೇ ಮತದಾನ ನಡೆಸುವುದಾಗಿ ಹೇಳಿದೆ. ಮತ್ತೂ ಪರಿಸ್ಥಿತಿಯನ್ನು ನಿರ್ವಹಿಸಲು, ಅಸಮರ್ಥರಾದ ಪ.ಬಂಗಾಳದ ಗೃಹಶಾಖೆ ಕಾರ್ಯದರ್ಶಿ ಮೊದಲಾದ ಹಿರಿಯ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಿದ್ದರಿಂದ ಮಮತಾ ಬ್ಯಾನರ್ಜಿ ಕೆಂಡಾಮಂಡಲರಾಗಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರನ್ನು ವಾಚಮಗೋಚರವಾಗಿ ನಿಂದಿಸಲು ಶುರುಮಾಡಿದ್ದಾರೆ. ಚುನಾವಣಾ ಪದ್ಧತಿ ಬಂದ ಮೇಲೆ ಮೊದಲ ಬಾರಿ, ತಮಗೆ ಕಾನೂನಿನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಇಂತಹ ಕಠಿಣ ಕ್ರಮ ಕೊಂಡಿದೆ. ಬಹುಶಃ ಈ ಹಿಂದೆ ಅವಹೇಳನಾತ್ಮಕ ಭಾಷಣಗಳನ್ನು ತಡೆಯಲು ಮೀನಮೇಷ ಎಣಿಸಿದ ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯ ಬೀಸಿದ ಚಾಟಿ ಏಟನ್ನು ಚುನಾವಣಾ ಅಯೋಗ ಮರೆತಿಲ್ಲವೆಂದು ಕಾಣಿಸುತ್ತದೆ.
ದೇಶಾದ್ಯಂತ ನಡೆದಿರುವ ಲೋಕಸಭೆ ಚುನಾವಣೆಯಲ್ಲಿ, ಯಾವ ಇತರ ರಾಜ್ಯದಲ್ಲಿಯೂ, ವಿಶೇಷವಾಗಿ ಕಾಶ್ಮೀರದಲ್ಲಿ ಆಗದಿರುವ ಹಿಂಸಾ ಘಟನೆಗಳು ಪ.ಬಂಗಾಳದಲ್ಲಿ ಏಕೆ ಆಗುತ್ತಿವೆ? ಇದಕ್ಕೆ ಉತ್ತರ ಪ.ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸಿಗುತ್ತದೆ. ಅಲ್ಲಿ ಯಾವಾಗ ಅಧಿಕಾರವು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಸ್ತಾಂತರವಾಗುತ್ತದೋ, ಅದು ಹಿಂಸೆಯ ಮೂಲಕ ಮುಂದುವರಿಯುತ್ತದೆ ಎನ್ನವುದಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಕಾಂಗ್ರೆಸ್‌ನಿಂದ ಸಿ.ಪಿ.ಎಂ. ಅಧಿಕಾರ ಕಸಿದುಕೊಂಡು ಸುಮಾರು ಮೂರು ಮೂರೂವರೆ ದಶಕಗಳವರಗೆ ನಡೆಸಿಕೊಂಡು ಹೋಗಿದ್ದು ಇದೇ ಮಾರ್ಗದಿಂದಲೇ. ಸಿ.ಪಿ.ಎಂ ಶ್ರೇಣಿಯ ಕಾಯಕರ್ತರು ತಮ್ಮ ತಂತ್ರ, ಕುತಂತ್ರ, ಭುಜ ಮತ್ತು ಅಧಿಕಾರ ಬಲದಿಂದ ಸಾಮಾನ್ಯ ಜನರ ಜೀವನದೊಡನೆ ಚೆಲ್ಲಾಟವಾಡಿ, ಆ ರಾಜ್ಯದಲ್ಲಿ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ತಮ್ಮ ಕೈ ಚೆಂಡಾಗಿ ಮಾಡಿಕೊಂಡಿದ್ದರು. ಅವರಿಂದ ಅಧಿಕಾರವನ್ನು ಮಮತಾರವರ ಪಕ್ಷವು ಕಸಿದುಕೊಂಡಿತು. ಇದೇ ಮಾರ್ಗದಲ್ಲಿ, ಬೀದಿ ಬೀದಿ ಹಳ್ಳಿ ಹಳ್ಳಿ ಮತ್ತು ಗಲ್ಲಿ ಗಲ್ಲಿಗಳಲ್ಲಿ ಮಮತಾರವರು ಹಿರಿತನದಲ್ಲಿ ಹೋರಾಡಿ, ಹೊಡೆದಾಡಿ ಸಿ.ಪಿ.ಎಂ.ನ ಕಪಿಮುಷ್ಠಿಯಿಂದ ಜನರನ್ನು ಪಾರು ಮಾಡಿದರು.
ಕಾಂಗ್ರೆಸ್ ಮತ್ತು ಸಿ.ಪಿ.ಎಂ ಪಕ್ಷಗಳು ಪ.ಬಂಗಾಳದಲ್ಲಿ ರಾಜಕೀಯವಾಗಿ ನಿರಾಶ್ರಿತರಾದಾಗ ತೃಣಮೂಲದವರಿಗೆ ಸವಾಲು ಮಾಡುವವರೇ ಇಲ್ಲವಾಗಿ, ಅವರದೇ ನಿರಂಕುಶ ಪ್ರಭುತ್ವದ ಅಧ್ಯಾಯ ಶುರುವಾದಾಗ. ಯಾವ ರಾಜಕೀಯ ಶಕ್ತಿಯ ಬಲವಿಲ್ಲದೆ ಬಳಲುತಿದ್ದ ಜನರಿಗೆ ಆಶೆಯ ಕಿರಣವಾಗಿ ಬಂದವರು ನರೇಂದ್ರ ಮೋದಿ ಮತ್ತು ಶ್ರೀ ಅಮಿತ ಶಾ. ಅವರ ಧುರೀಣತ್ವದಲ್ಲಿ ಇಡೀ ದೇಶಾದ್ಯಂತ ತನ್ನ ಛಾಪನ್ನು ಬೆಳೆಸಲು ಪ್ರಯತ್ನಿಸುತ್ತಿದೆ ಭಾಜಪ. ಮೊದಲಿನ ಪರಿಸ್ಥಿತಿಯ ಪ್ರಕಾರ ಭಾಜಪವು ಪ.ಬಂಗಾಳದಲ್ಲಿ ಬೆಳೆಯಲು ಅವಕಾಶವೇ ಇರಲಿಲ್ಲ.
ಸಿ.ಪಿ.ಎಂ ಮತ್ತು ತೃಣಮೂಲಗಳ ಅಲ್ಪಸಂಖ್ಯಾತರ ತುಷ್ಟೀಕರಣದ ಧೊರಣೆಗಳಿಂದ ಬೇಸರಗೊಂಡಿದ್ದ ಬಂಗಾಳದ ಹಿಂದೂ ಜನರೆಲ್ಲ ಕೇಳುವವರು ಇರದೇ ಒಂದು ತರಹದ ರಾಜಕೀಯ ಶೂನ್ಯತೆಯ ವಾತಾವರಣದಲ್ಲಿ ಜೀವಿಸುತ್ತಿದ್ದರು. ಅವರನ್ನು ತಮ್ಮ ಕಡೆಗೆ ಎಳೆದುಕೊಳ್ಳುವುದಕ್ಕಾಗಿ, ಹಿಂದುತ್ವವನ್ನು ಉಳಿಸುವ ಪೋಷಿಸುವ ಕಾರ್ಯವನ್ನು ಕ್ರಮೇಣ ಆರಂಭಿಸಿ, ಶಕ್ತಿವರ್ಧನ ಕಾರ್ಯಕ್ರಮವನ್ನು ಕೈಕೊಂಡರು. ಚುನಾವಣೆಯಲ್ಲಿ ಭಾಜಪವು ತೃಣಮೂಲದ ರಾಜಕೀಯ ವೈರಿ ಎಂಬ ಭಾವನೆ ಬಂದುದೇ ಈಗ ಪ.ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸೆಗೆ ಕಾರಣವಾಗಿದೆ ಎಂದು ಹೇಳಬಹುದು.
ಕಳೆದ ವರ್ಷ ನಡೆದ ಪಂಚಾಯತ್ ಚುನಾವಣೆಯಲ್ಲಿಯೂ ಗಲಾಟೆ ಆಗದೇ ಇರಲಿಲ್ಲ. ಈಗಲೂ ಅದು ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿದಿದೆ. ಮತ್ತು ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆ, ಬೆಂಬಲ ತೃಣಮೂಲ ಕಾಂಗ್ರೆಸಿಗೆ ಕಣ್ಣು ಕಿಸರಾಗತೊಡಗಿದೆ. ಅದಕ್ಕಾಗಿ ಪ್ರಸಂಗ ಬಂದಾಗಲೆಲ್ಲ ಮೋದಿಯವರನ್ನು ಹೀಗಳೆಯುವದು ಮತ್ತು ಅವರನ್ನು ದೇಶದಿಂದ ಓಡಿಸಬೇಕೆಂದು ಜನರಿಗೆ ಕರೆಕೊಡುವ ಮಟ್ಟಿಗೆ ಮಮತಾ ಬ್ಯಾನರ್ಜಿ ಹೋಗಿದ್ದಾರೆ. ಮೇಲಾಗಿ, ಮಮತಾ ಬ್ಯಾನರ್ಜಿಯವರು ಅಸಹಿಷ್ಣುತೆಯ ಅಪರಾವತಾರ. ತಾವು ಹೇಳಿದ್ದೇ ಸತ್ಯ. ನಡೆದದ್ದೇ ದಾರಿ ಎಂಬ ಹಮ್ಮು ಬೇರೆ. ಮೋದಿ ಮತ್ತು ಮಮತಾರ ನಡುವಿನ ರಾಜಕೀಯ ಹಗ್ಗಜಗ್ಗಾಟದ ರಾಜಕೀಯ ಬೇಗೆ ಮುಗಿಯುವಂತಹದಲ್ಲ. ಎಲ್ಲಿಗೆ ಹೋಗಿ ಮುಟ್ಟುತ್ತದೋ ಎನ್ನುವದನ್ನು ಕಾಯ್ದು ನೋಡಬೇಕು.
ಅಂಕಣಕಾರರು ಹಿರಿಯ ಪತ್ರಕರ್ತರು