ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಮೃತ್ಯುಂಜಯ ನದಿ ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಹರಿಯುವಾಗ ಈ ಬಾರಿ ತನ್ನ ಹಾದಿ ಬದಲಾಯಿಸಿದೆ. ಮೇಲಿನ ಘಟ್ಟದ ಪ್ರದೇಶದಲ್ಲಿ ಉಂಟಾದ ಮೇಘಸ್ಪೋಟಕ್ಕೆ ಬೃಹತ್ ಗಾತ್ರದ ಮರಗಳ ಸಹಿತ ಮಣ್ಣನ್ನು ಕೊಚ್ಚಿಕೊಂಡು ಬಂದ ಪ್ರವಾಹದ ನೀರು ನದಿಯ ಗಾತ್ರವನ್ನು ವಿಶಾಲಗೊಳಿಸಿದೆ. ಇದರಿಂದ ಚಾರ್ಮಾಡಿ, ದಿಡುಪೆ, ಮಲಂವತಿಕೆ ಸಹಿತ ಹಲವಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ. ನೂರಾರು ಕುಟುಂಬಗಳು ಮನೆ ಮತ್ತು ಫಲವತ್ತಾದ, ಗದ್ದೆ, ಅಡಕೆ ಹಾಗೂ ತೆಂಗಿನ ತೋಟಗಳನ್ನು ಕಳೆದುಕೊಂಡಿವೆ.
ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ ಅವರ ಪ್ರಕಾರ ಮೃತ್ಯುಂಜಯ ನದಿ ಸುಮಾರು 25 ಕಿ. ಮೀ ಉದ್ದಕ್ಕೂ ತನ್ನ ಎರಡೂ ಬದಿಗಳ ಭೂಮಿಯನ್ನು ಕೊರೆದು ಕಳೆದುಕೊಂಡಿದೆ. ಹಲವೆಡೆ ನದಿಯ ಹಾದಿಯನ್ನು ಕೊಂಚ ಬದಲಾಯಿಸಿದೆ. ಕಳೆದ ಎಪ್ಪತ್ತು ದಶಕಗಳಲ್ಲಿ ಇಂತಹ ಪ್ರವಾಹ ಬಂದಿಲ್ಲ ಎನ್ನುತ್ತಾರೆ.
ಮೇಘಸ್ಪೋಟ ಶಬ್ದಾಲಂಕಾರ ಆಗಿರದೆ ವಾಸ್ತವದಲ್ಲಿ ಇಂತಹ ನೈಸರ್ಗಿಕ ಘಟನೆ ಸಂಭವಿಸುತ್ತಿದೆ. ಸಾಮಾನ್ಯವಾಗಿ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಘಟಿಸುವ ಮೇಘ ಸ್ಪೋಟ ಮತ್ತು ಲಘು ಮೇಘ ಸ್ಟೋಟಗಳು ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ, ಕರಾವಳಿ ತೀರದಲ್ಲಿ ಕೂಡ ನಡೆದಿರುವುದನ್ನು ಸಂಶೋಧಕರು ದಾಖಲಿಸಿದ್ದಾರೆ.
ಆಗಸ್ಟ್ 9ರಂದು ಶುಕ್ರವಾರ ಸಾಯಂಕಾಲ ವೇಳೆ ಘಾಟಿ ಪ್ರದೇಶದ ಬೆಟ್ಟಗಳಿಂದ ಭಾರಿ ಶಬ್ದದೊಂದಿಗೆ ಕೆಸರು, ಕಲ್ಲು ಸಹಿತ ಪ್ರವಾಹ ಉರುಳುತ್ತಾ ಬರುವುದು ಕಂಡು ಬಂತು. ಇದನ್ನು ನೋಡಿ ಮನೆಯಿಂದ ಹೊರಗೆ ಓಡಿದೆವು. ಅರ್ಧ ಗಂಟೆಯ ಕಾಲ ಪ್ರವಾಹದಲ್ಲಿ ಮಣ್ಣು, ಕಲ್ಲು, ಮರಳು, ದೊಡ್ಡ ದೊಡ್ಡ ಮರಗಳು ಎಲ್ಲವೂ ಉರುಳುತ್ತಾ ಬಂತು. ನಮಗೆ ನಾವು ನಿಂತಿದ್ದ ಭೂಮಿಯೇ ಕುಸಿದಂತೆ ಭಾಸವಾಯಿತು. ಎಲ್ಲೆಡೆ ಜನರ ಕೂಗಾಟ. ಎಲ್ಲ ನಿಂತ ಮೇಲೆ ನೋಡಿದಾಗ ನನ್ನ ತೋಟದಲ್ಲಿ ಹೊಸ ಹೊಳೆಯೊಂದು ಹರಿಯುತ್ತಿತ್ತು. ಎಲ್ಲೆಡೆ ಕಲ್ಲು ಬಂಡೆಗಳು, ಮರದ ಕಾಂಡಗಳು, ಮರಳ ರಾಶಿ, ಕೆಸರಿನ ಕೊಚ್ಚೆ. ಅರ್ಧ ಗಂಟೆಯಲ್ಲಿ ನಮ್ಮ ಊರಿನ ಸ್ವರೂಪವೇ ಬದಲಾಗಿತ್ತು ಎನ್ನತ್ತಾರೆ ಮಲವಂತಿಕೆ ಗ್ರಾಮದ ನಂದಿಕಾಡು ಹಾಡಿಯ ರುಕ್ಮಯ್ಯ ಮಲೆಕುಡಿಯ.
ಮಲೆಕುಡಿಯ ಜನಾಂಗದ ಕುಟುಂಬಗಳು ವಾಸಿಸುವ ಸಿಂಗನೂರು, ನಂದಿತೋಟ, ಪೆರ್ನಡ್ಕ ಪ್ರದೇಶದಲ್ಲಿ ಮೇಘಸ್ಫೋಟದ ಪ್ರವಾಹಕ್ಕೆ ಹಲವಾರು ಮನೆಗಳು ಮಣ್ಣಿಗೆ ಆಹುತಿ ಆಗಿವೆ. ನಂದಿಕಾಡು ಕಾಡು ಪ್ರದೇಶದಲ್ಲಿ ತೋಡು (ನೀರಿನ ತೊರೆ) ಮರೆಯಾಗಿ ನದಿ ಸೃಷ್ಟಿಯಾಗಿದೆ. ಗುಲಾಬಿ ಮಲೆಕುಡಿಯ ಅವರ ಮನೆಯ ಅಂಗಳದಲ್ಲಿಯೇ ಈಗ ನದಿ ಹರಿಯುತ್ತಿದೆ. ಸುಮಾರು ಮೂರು ಎಕರೆ ಅಡಕೆ ತೋಟ ಕೊಚ್ಚಿಕೊಂಡು ಹೋಗಿದೆ. ಕೆಲವೆಡೆ ಹತ್ತಡಿ ಕಲ್ಲು ಮಿಶ್ರಿತ ಕೆಸರು ರಾಶಿ ಬಿದ್ದಿದೆ. ಗಿರಿಜನರ ಅಲ್ಪಸ್ವಲ್ಪ ಕೃಷಿಯೂ ನಾಶವಾಗಿದೆ.

ಉಜಿರೆ – ಕೊಟ್ಟಿಗೆಹಾರ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆ ಮುದರಗೌಡರ ಮಗ ಹರೀಶ್ ಎಂಬವರ ಮನೆ ಸಂಪೂರ್ಣ ಮೃತ್ಯುಂಜಯ ನದಿ ಪಾಲಾಗಿದೆ. ಪಕ್ಕದ ಪ್ರಶಾಂತ್ ಎಂಬವರ ಮನೆ ಭಾಗಶಃ ಕುಸಿದು ಬಿದ್ದಿದ್ದು, ವಾಸಕ್ಕೆ ಆಯೋಗ್ಯವಾಗಿದೆ. ಮಧ್ಯಾಹ್ನ ನದಿಯಲ್ಲಿ ವಿಪರೀತ ಮಳೆ ನೀರು ಬರತೊಡಗಿತು. ನಮ್ಮನ್ನು ಸಂಜೆ ವೇಳೆಗೆ ಬೇರೆಡೆ ಸ್ಥಳಾಂತರ ಮಾಡಿದರು. ಮರುದಿನ ಬೆಳಗ್ಗೆ ನೋಡಿದಾಗ ನಮ್ಮ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಸಂಪರ್ಕ ರಸ್ತೆ ಮಾಯ ಆಗಿತ್ತು. ಅಡಕೆ ತೋಟ, ಮೂವತ್ತಕ್ಕೂ ಹೆಚ್ಚಿದ ತೆಂಗಿನ ಮರಗಳ ಸಾಲನ್ನು ಮೃತ್ಯುಂಜಯ ನದಿ ನುಂಗಿ ಹಾಕಿತ್ತು ಎನ್ನುತ್ತಾರೆ ಕೊಳಂಬೆ ನಿವಾಸಿಗಳು.
ಪಶ್ಚಿಮ ಘಟ್ಟದಿಂದ ಇಳಿದು ಬರುವ ಮೃತ್ಯುಂಜಯ ನದಿಯ ಘಟ್ಟದ ತಳಭಾಗದಲ್ಲೇ ಮೂರು ಸೇತುವೆಗಳು, ಒಂದೆರಡು ಕಿಂಡಿ ಅಣೆಕಟ್ಟುಗಳು ಪ್ರವಾಹಕ್ಕೆ ಧ್ವಂಸ ಆಗಿವೆ. ಇದರಿಂದಾಗಿ ಹೆಚ್ಚು ಕಡಿಮೆ ಸಾವಿರದ ಐನೂರು ಮಂದಿ ಮುಖ್ಯ ಪೇಟೆಯಿಂದ ಸಂಪರ್ಕ ಕಳಕೊಂಡಿದ್ದಾರೆ. ಇದರಲ್ಲಿ ಗಿರಿಜನ ಸಮುದಾಯದ ಮಲೆಕುಡಿಯರು ಸೇರಿದ್ದಾರೆ.
ಚಾರ್ಮಾಡಿ ಗ್ರಾಮದ ಅಂತರ – ಅಮುಟಾಜೆ ಪ್ರದೇಶದಲ್ಲಿ ಮೇಘಸ್ಪೋಟದಿಂದ ಉಂಟಾದ ಪ್ರವಾಹದ ಅನಾಹುತ ಇನ್ನಷ್ಟು ಮನಕಲುಕುವಂತಿತ್ತು. ಭತ್ತದ ಗದ್ದೆಯಲ್ಲಿ ಪೂರ್ಣ ಮರಳು ತುಂಬಿತ್ತು. ಅಡಕೆ ತೋಟದೊಳಗೆ ಮರಗಳು ತುಂಬಿ ಹೋಗಿದ್ದವು. ಮೃತ್ಯುಂಜಯ ನದಿಗೆ ಅಡ್ಡಲಾಗಿ ಕಟ್ಟಲಾದ ಚೆಕ್ ಡ್ಯಾಂ ಕಮ್ ಸೇತುವೆಯ ಎರಡು ಕಡೆಗಳಲ್ಲಿ ನದಿ ತನ್ನ ಹಾದಿಯನ್ನು ಅಗಲಗೊಳಿಸಿತ್ತು. ಇದರಿಂದಾಗಿ ಕೊಳಂಬೆಯ ಮತ್ತೊಂದು ಕಡೆಯ 30 ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು, ಹಗ್ಗದ ಮೂಲಕ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಕೊಳಂಬೆ, ಅಂತರ, ಅಮುಟಾಜೆ ಪ್ರದೇಶದ ಸುಮಾರು 40 ಮನೆಗಳನ್ನು ಖಾಲಿ ಮಾಡಲಾಗಿದೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ನಡೆದ ಈ ಭೂ ಕುಸಿತವು ಅಪಾರ ಪ್ರಮಾಣದ ಮಣ್ಣು ಮಾತ್ರವಲ್ಲದೆ, ಬೃಹತ್ ಮರಗಳನ್ನು, ಟನ್‌ಗಟ್ಟಲೆ ಮರಳನ್ನು ಕೆಳಗಿನ ಪ್ರದೇಶಗಳಿಗೆ ದೂಡಿದೆ. ಘಟ್ಟದ ಪ್ರದೇಶ ಕೆಳಗಡೆ ನೂರಾರು ಮೀಟರ್‌ನಷ್ಟು ಗುಡ್ಡ ಜಾರಿ ಹೋಗಿದೆ. ಭೂಕುಸಿತದೊಂದಿಗೆ ಬಂದ ಭಾರಿ ಮಳೆಯಿಂದಾಗಿ ಮಣ್ಣಿನ ಹಲವು ಪದರಗಳು ಕೊಚ್ಚಿ ಹೋಗಿರುವುದು ದಿಡುಪೆ, ಚಾರ್ಮಾಡಿ, ಮಲವಂತಿಕೆ ಹಾಗೂ ಶಿಶಿಲದಲ್ಲಿ ನಡೆದಿದೆ. ಕುದುರೆಮುಖ ಶ್ರೇಣಿಯ ಕೆಳಗಡೆ ಇರುವ ನಾವೂರು, ಇಂದಬೆಟ್ಟು, ದಿಡುಪೆ, ಕೊಲ್ಲಿ ಮುಂತಾದ ಹಳ್ಳಿಗಳಲ್ಲಿಯೂ ಇದೇ ದೃಶ್ಯಗಳು ಕಂಡುಬಂದಿವೆ. ದಿಡುಪೆಯ ಎದುರಿನ ಪರ್ವತ ಶ್ರೇಣಿಯಲ್ಲಿರುವ ಬಲ್ಲಾಳರಾಯನ ದುರ್ಗ, ಎರ್ಮಾಯಿ ಫಾಲ್ಸ್ ಇರುವ ಪ್ರದೇಶ, ಆನಡ್ಕ ಜಲಪಾತದ ಸ್ಥಳ, ಆನಡ್ಕ ಜಲಪಾತದ ಪರಿಸರದಲ್ಲಿ ಭೂಕುಸಿತ ಆಗಿದೆ.

ಬೆಳ್ತಂಗಡಿಯ ಕೊಲ್ಲಿ, ಕಿಲ್ಲೂರು, ಕಾಜೂರು, ದಿಡುಪೆ, ಕಡಿರುದ್ಯಾವರ, ನಿಡಿಗಲ್, ಕುಲ್ಲಾವು, ಮಲ್ಲ, ನಾವೂರು, ಸುಳ್ಯೋಡಿ, ಕುಂಡಡ್ಕ, ಮುಳಿಪಡ್ಪು, ನರ್ನೊಟ್ಟು, ಬರೆಮೇಲು, ಪುಣ್ಕೆದಡಿ, ಕೂಡುಬೆಟ್ಟು ಹಾಗೂ ಪೂರ್ವ ದಿಶೆಯ ಚರ್ಮಾಡಿ, ನೆರಿಯ, ಬೀಟಿಗೆ, ಚಿಬಿದ್ರೆ, ಅಂತರ, ಕೊಳಂಬೆ, ಅನಾರು, ಹೊಸ್ಮಠ, ಬಾಂಜಾರುಮಲೆ, ಕಾಟಾಜೆ, ಪರ್ಪಳ ಮುಂತಾದ ಪ್ರದೇಶಗಳು ಈಗ ಮೊದಲಿನಂತಿಲ್ಲ. ಮತ್ತೆ ಭೂ ಪ್ರದೇಶದಲ್ಲಿ ಕೃಷಿ ಮತ್ತು ಜನಜೀವನ ಎಂದಿನಂತೆ ಆಗಲು ಕೆಲವು ವರ್ಷಗಳೇ ಬೇಕಾಗಬಹುದು ಎನ್ನುತ್ತಾರೆ ಸ್ಥಳೀಯರು.
ಈ ಅರೆಮಲೆನಾಡು ಪ್ರದೇಶದ ರೈತರು ಬೇಸಾಯದೊಂದಿಗೆ ಹೈನುಗಾರಿಕೆ ನಡೆಸುತ್ತಿದ್ದು, ಕೆಲವು ಹಸುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಆರುವತ್ತಕ್ಕಿಂತ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಹಲವರ ಮನೆ, ಜಾನುವಾರು ಕೊಟ್ಟಿಗೆ ಬಿದ್ದು ಹೋಗಿದ್ದು ಗಂಜಿ ಕೇಂದ್ರದಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ. ಸರಕಾರ ಐದು ಲಕ್ಷ ರೂಪಾಯಿ ಮನೆ ನಿರ್ಮಿಸಲು ನೀಡುತ್ತೇವೆ ಎಂದು ಘೋಷಣೆ ಮಾಡಿದರೂ ಇದರಿಂದ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ.
ಹಿಂದೆಂದೂ ನಾವು ನೋಡಿರದ ಪ್ರಾಕೃತಿಕ ವಿಕೋಪ ಆಗಿದೆ. ಜನರಿಗೆ ತುರ್ತಾಗಿ ಬೇಕಾದ ಸಹಾಯ ಮಾಡುತ್ತಿದ್ದು, ಸರಕಾರದಿಂದ ದೊರೆಯುವ ಎಲ್ಲ ಸಹಾಯವನ್ನು ದೊರಕಿಸಿಕೊಡಬೇಕಾಗಿದೆ ಎನ್ನುತ್ತಾರೆ ಸೇವಾ ಭಾರತಿ ವತಿಯಿಂದ ನಿರಂತರವಾಗಿ ಸಂತ್ರಸ್ತರಿಗಾಗಿ ಸೇವಾ ನಿರತರಾಗಿರುವ ಪ್ರಕಾಶ್ ನಾರಾಯಣ್.
ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪ್ರಕಾಶ್ ಶೆಟ್ಟಿ ಪ್ರಕಾರ ಚಾರ್ಮಾಡಿ ಗ್ರಾಮವೊಂದರಲ್ಲೇ 50ರಿಂದ 80 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಸೊತ್ತು ನಷ್ಟವಾಗಿದೆ. ಮುನ್ನೂರು ಮನೆಯವರು ಸ್ಥಳಾಂತರ ಆಗಿದ್ದಾರೆ. ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟು, ಲೈಟ್ ಕಂಬ ಇತ್ಯಾದಿ ಹಾಳಾಗಿದೆ. ಜನರಿಗೆ ಆಗಿರುವ ಕೃಷಿ ಮತ್ತಿತರ ನಾಶವನ್ನು ಲೆಕ್ಕ ಹಾಕುವುದು ಸುಲಭ ಸಾಧ್ಯವಲ್ಲ ಎನ್ನುತ್ತಾರೆ.