ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ ಹುಡುಕುವ ಪ್ರಯತ್ನದಲ್ಲಿ ಮೊದಲ ಹೆಜ್ಜೆಯಾಗಿ ಬಿಜೆಪಿ ಅವರ ಮಂತ್ರಿ ಮಂಡಲದಲ್ಲಿ, ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಿದೆ. ಇದು ಮುಖ್ಯಮಂತ್ರಿಗಳಿಗೇ ಬೇಕಾಗಿರಲಿಲ್ಲ. ಹಾಗೆಂದು, ಈ ಹುದ್ದೆ ಕಣ್ಣಿಟ್ಟವರಿಗೆ ಸಿಗಲಿಲ್ಲ. ನೇಮಕವಾದವರೆಲ್ಲ ಬಿಜೆಪಿಯ ಹಳೆಯ ಹುಲಿಗಳೂ ಅಲ್ಲ. ಅವರೆಲ್ಲರೂ ಹೊಸ ತಲೆಗಳೇ.
ಬಿಜೆಪಿ ದೃಷ್ಟಿಯಿಂದ ನೋಡಿದರೆ ಪಕ್ಷಕ್ಕೆ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವಅತೀ ಅವಶ್ಯಕವಾಗಿದೆ. ಏಕೆಂದರೆ, ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು. ಮತ್ತು ಇಡೀ ದಕ್ಷಿಣ ಭಾರತದಲ್ಲಿ ಸದ್ಯದ ವಾತಾವರಣದಲ್ಲಿ, ಕರ್ನಾಟಕ ಒಂದರಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಕೈಗೆ ಬಂದ ಅಧಿಕಾರವನ್ನು ಉಳಿಸಿಕೊಂಡು, ಬೆಳೆಸಿಕೊಳ್ಳುವ ತನ್ನ ರಾಜಕೀಯ ಗುರಿ ಸಾಧಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಹಲವಾರು ಕಾರಣಗಳಿಂದ ಅದು ಹೇಳಿದಷ್ಟು ಸುಲಭವಲ್ಲ.
ಜೆಡಿಎಸ್ ಜೊತೆಗೆ 2006ರಲ್ಲಿ ರಚಿಸಿದ ಸಮ್ಮಿಶ್ರ ಸರಕಾರದಿಂದ 2008ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಸಮರ್ಪಕವಾಗಿ ಸರಕಾರ ನಡೆಸಲು ವಿಫಲವಾಯಿತು. ಮೊದಲು ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ನಂತರ ಅವರ ಸ್ಥಾನಕ್ಕೆ ಬಂದ ಜಗದೀಶ ಶೆಟ್ಟರ್ ಮತ್ತು ಸದಾನಂದಗೌಡ ಸುಭದ್ರ ಮತ್ತು ಸಮರ್ಥ ಸರಕಾರ ಕೊಡಲಾಗಲಿಲ್ಲ. ಒಳಜಗಳ, ಭ್ರಷ್ಟಾಚಾರ ಮತ್ತು ಹಿಡಿತವಿಲ್ಲದ ಆಡಳಿತದ ಸುಳಿಯಲ್ಲಿ ಸಿಲುಕಿದ ಬಿಜೆಪಿ ತನ್ನ ಹೆಸರನ್ನು ಪೂರ್ತಿ ಕೆಡಿಸಿಕೊಂಡು, ಆಡಳಿತ ನಡೆಸಲು ಬರುವದಿಲ್ಲ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಚುನಾವಣೆಯಲ್ಲಿ ಪರಾಭವ ಅನುಭವಿಸಿತು.
2008ರಲ್ಲಿ ಕಂಡು ಬಂದ ಪರಿಸ್ಥಿತಿ ಸ್ವಲ್ಪ ಹೆಚ್ಚೂ ಕಡಿಮೆ ಈಗಲೂ ಮರುಕಳಿಸಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ವಂಚಿತವಾದ ಬಿಜೆಪಿ ಸರಕಾರ ಮಾಡಲಾಗಲಿಲ್ಲ. ಆ ಕಾರಣಕ್ಕೆ ಅವಕಾಶವಾದಿ ರಾಜಕಾರಣ ಮಾಡಿ, ಬಿಜೆಪಿಗಿಂತ ಕಡಿಮೆ ಸ್ಥಾನ ಪಡೆದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಒಂದು ವರ್ಷದ ನಂತರ ಒಳಜಗಳದಿಂದ ಕುಸಿದ ನಂತರ ಮತ್ತೆ ಈಗ ಬಿಜೆಪಿ ಕೈಗೆ ಅಧಿಕಾರ ಬಂದಿದೆ.
ಮೊದಲೆರಡು ಬಾರಿ ಮಾಡಿದ ತಪ್ಪು ಮೂರನೆಯ ಬಾರಿ ಬಿಜೆಪಿಯಲ್ಲಿ ಮರುಕಳಿಸೀತೇ? ಏಕೆಂದರೆ ಯಡಿಯೂರಪ್ಪನವರ ಹೊಸ ಸರಕಾರದ ಸುಭದ್ರತೆಯ ಬಗ್ಗೆಯೂ ಹಲವಾರು ಶಂಕೆಗಳಿವೆ. ಮೊದಲನೆಯದಾಗಿ, ಅದಕ್ಕೆ ತನ್ನದೆ ಆದ ಅಧಿಕೃತ ಬಹುಮತವಿಲ್ಲ. ತಮ್ಮ ಪಕ್ಷಗಳಿಂದ ಹೊರ ಬಂದ ಮತ್ತು ಅತೃಪ್ತರೆಂದು ಹಣೆಪಟ್ಟಿ ಕಟ್ಟಿಸಿಕೊಂಡ 15-20 ಬಿಜೆಪಿಯೇತರ, ಆದರೆ ಬಿಜೆಪಿ ಸೇರಲು ಉತ್ಸುಕರಾಗಿರುನ ಶಾಸಕರ ಬೆಂಬಲದ ಮೇಲೆ ಬಹುಮತ ಅವಲಂಬಿಸಿದೆ. ಮೇಲಾಗಿ, ಮಹಾಮಳೆ ಮತ್ತು ನೆರೆಹಾವಳಿಯ ಪರಿಣಾಮವಾಗಿ ಬಂದ ವ್ಯಾಪಕ ಹಾವಳಿ, ಪೀಡಿತ ಜನರ ಮತ್ತು ಪ್ರದೇಶಗಳ ಪರಿಹಾರ ಪುನರ್ವಸತಿಯ ಹಿಂದೆಂದೂ ಕಾಣಲಾಗದ ದೊಡ್ಡ ಪ್ರಮಾಣದ ಆಡಳಿತಾತ್ಮಕ ಸವಾಲು ಒಡ್ಡಿದೆ.

ಈಗಿನ ಸರಕಾರ ತನ್ನ ರಾಜಕಿಯ ಮತ್ತು ತನಗೆ ಎದುರಾಗಿರುವ ಆಡಳಿತಾತ್ಮಕ/ರಾಜಕೀಯ ಸವಾಲುಗಳನ್ನು ಎದುರಿಸಿ, ಸುಭದ್ರವಾಗಿ ಮುಂದುವರಿದು, ತನ್ನ ಅವಧಿ ಮುಗಿಸಿ, ಈಗಿರುವ ಮೋದಿ/ಬಿಜೆಪಿ ಅಲೆಯ ರಾಜಕೀಯ ಲಾಭ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಪಡೆಯಬಹುದು ಎನ್ನುವದು ಬಿಜೆಪಿ ಅಂತರಿಕ ವಲಯಗಳಲ್ಲಿ, ವಿಶೇಷವಾಗಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆ. ಇಂದಿನ ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು, ಮತ್ತು ತಕ್ಕ ತಂತ್ರಗಾರಿಕೆಯನ್ನು ಯೋಜಿಸಲು ಬಿಜೆಪಿಯನ್ನು ಮುನ್ನಡೆಸುವುದಕ್ಕೆ ಕರ್ನಾಟಕಕ್ಕೆ ಪರ್ಯಾಯ ನಾಯಕತ್ವ ಬೇಕಾಗಿದೆ. ಪಕ್ಷದ ಹಳೆಯ ಹುಲಿಯಾದ ಯಡಿಯೂರಪ್ಪನವರ ಹೆಗಲು ಮೇಲೆ ಈ ಹೊರೆ ಹೊರಿಸುವದು ಸಾಧುವೂ ಅಲ್ಲ, ಅದು ಸಾಧ್ಯವೂ ಅಲ್ಲ ಎಂದು ಪ್ರಧಾನ ಮಂತ್ರಿ ಮೋದಿ ಮತ್ತು ರಾಷ್ಟ್ರೀಯ ಆದ್ಯಕ್ಷ ಅಮಿತ್ ಶಾ ಒಳಗೊಂಡ ಪಕ್ಷದ ವರಿಷ್ಠ ಮಂಡಳಿ ವಿಚಾರ ಮಾಡುತ್ತಿದೆ.

ಅದರ ಮೊದಲ ಹೆಜ್ಜೆಯೇ, ಯಾರೂ ಕೇಳದಿದ್ದರೂ, ಮುಖ್ಯವಾಗಿ ಯಡಿಯೂರಪ್ಪನವರು ಬಯಸದಿದ್ದರೂ, ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಿದ್ದು. ಅದೂ ಯಾರೂ ಉಹಿಸಲೂ ಆಗದಂತಹ ವ್ಯಕ್ತಿಗಳನ್ನೇ ನೇಮಕ ಮಾಡಲಾಗಿದೆ. ಅವರಲ್ಲಿ ಒಬ್ಬರಾದ ಬೆಳಗಾವಿ ಜಿಲ್ಲೆಯ ಅಥಣಿಯ ಲಕ್ಷ್ಮಣ ಸವದಿಯವರು ಶಾಸಕರೇ ಅಲ್ಲ. ಅವರು ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಮುಧೋಳದ ಶ್ರೀ ಗೋವಿಂದ ಕಾರಜೋಳರು ದಲಿತರು, ಮತ್ತು ಬೆಂಗಳೂರಿನ ಡಾ. ಆಶ್ವತ್ಥ ನಾರಾಯಣರು ಒಕ್ಕಲಿಗರು.
ಸಾಮಾನ್ಯವಾಗಿ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರು ಎಂಬ ವಿಚಾರ ಮಾಡಿದಾಗ ಬರುವ ಮೂರು ಹೆಸರುಗಳೆಂದರೆ ಹುಬ್ಬಳ್ಳಿಯ ಜಗದೀಶ ಶೆಟ್ಟರ್, ಶಿವಮೊಗ್ಗದ ಈಶ್ವರಪ್ಪ ಮತ್ತು ಬೆಂಗಳೂರಿನ ಆರ್ ಆಶೋಕ. ಇವರಲ್ಲಿ ಯಾರನ್ನೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಿಲ್ಲ. ದಶಕಗಳಿಂದ ಶಾಸಕರಾಗಿದ್ದರೂ, ಇವರಿಂದ ಪಕ್ಷ ಬಲವರ್ಧನೆ ಕೆಲಸಗಳು ಆಗಿಲ್ಲ. ಆಂತರಿಕ ಸಮೀಕ್ಷೆಯ ಪ್ರಕಾರ, ಇವರೆಲ್ಲರೂ, ತಮ್ಮ ರಾಜಕೀಯ ಬುಡ ಭದ್ರವಾಗಲು ಪಕ್ಷವನ್ನು ಉಪಯೋಗಿಸಿದರೇ ಹೊರತು, ಚುನಾವಣೆಯಲ್ಲಿ ಪಕ್ಷಕ್ಕೆ ತಮ್ಮ ನೆರೆಹೊರೆಯಲ್ಲಿ ಒಂದೂ ಹೆಚ್ಚಿನ ಸ್ಥಾನವನ್ನೂ ತಂದುಕೊಡಲಾಗಲಿಲ್ಲ. ವಿಶೇಷವಾಗಿ 1994ರಲ್ಲಿ ಶಾಸಕರಾದ ನಂತರ ಶೆಟ್ಟರ್ ಒಂದಲ್ಲ ಒಂದು ಅಧಿಕಾರವನ್ನು ಅನುಭವಿಸುತ್ತಲೇ ಬಂದಿದ್ದಾರೆ. ಹುಬ್ಬಳ್ಳಿಯ ನೀರು ಪೂರೈಕೆ, ರಸ್ತೆಗಳಲ್ಲಿನ ಗುಂಡಿಗಳನ್ನು ನೋಡಿದರೆ ಅವರು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದರು ಎಂದು ಯಾರಿಗೂ ಅರಿವಾಗದೇ ಇರದು.
ಇದೇ ಕಾರಣಗಳಿಗಾಗಿ, ಇನ್ನೊಬ್ಬ ಆಕಾಂಕ್ಷಿಯಾಗಿದ್ದ ಬಳ್ಳಾರಿಯ ಶ್ರೀ ರಾಮುಲು ಅವರನ್ನೂ ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಿಲ್ಲ. ಎಳೆಂಟು ಬಾರಿ ಗೆದ್ದು ಹಲವು ಬಾರಿ ಮಂತ್ರಿಯಾಗಿದ್ದ ಬೆಳಗಾವಿ ಜಿಲ್ಲೆಯ ಉಮೇಶ ಕತ್ತಿಯವರನ್ನಂತೂ ಮಂತ್ರಿಮಂಡಲದಲ್ಲಿಯೇ ಸೇರಿಸಿಕೊಂಡಿಲ್ಲ. ಸ್ಥಾನ ವಂಚಿತರು ಮೊದಲ ಕೆಲ ದಿವಸ ಈ ನಿರ್ಧಾರಕ್ಕೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೂ, ವರಿಷ್ಠ ಮಂಡಳಿಯು ಇಂತಹ ಗೊಡ್ಡು ಬೆದರಿಕೆಗಳಿಗೆ ತಾನು ಸೊಪ್ಪು ಹಾಕುವದಿಲ್ಲವೆಂದು ಸ್ಪಷ್ಪಪಡಿಸಿದುದರಿಂದ ಎಲ್ಲರೂ ತಣ್ಣಗಾಗಿದ್ದಾರೆ. ಪರಿಸ್ಥಿತಿ ಬಂದರೆ ಹೊಸ ಚುನಾವಣೆ ಹೋಗಲೂ ಸಿದ್ದ ಎಂದು ವರಿಷ್ಠ ಮಂಡಳಿ ಸ್ಪಷ್ಟ ಪಡಿಸಿದೆ.
ಲೇಖಕರು ಹಿರಿಯ ಪತ್ರಕರ್ತರು