ಮುಂಬೈನ ಬುಡಕಟ್ಟು ಆರೋಗ್ಯ ತಜ್ಞರ ಸಮಿತಿ, 2016ರಲ್ಲಿ ಪರಿಶಿಷ್ಟ ಪಂಗಡ (ಎಸ್ ಟಿ) ಜನಸಂಖ್ಯೆಯ ಜೀವಿತಾವಧಿ ಕುರಿತು ವರದಿಯನ್ನು ಲ್ಯಾನ್ಸೆಟ್ ನಲ್ಲಿ ಪ್ರಕಟಿಸಿತು. ಹಾಗೂ ದೇಶದಲ್ಲಿ ಅಪೌಷ್ಟಿಕತೆಯಿಂದ ಪ್ರತಿವರ್ಷ ನೂರಾರು ಜನ ಸಾವನಪ್ಪುತ್ತಿದ್ದಾರೆ ಎಂದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ವರದಿ ಹೇಳಿತ್ತು. ಮುಂಬೈನ ಆರೋಗ್ಯ ತಜ್ಞರ ಸಮಿತಿ 2011ರ ಜನಗಣತಿಯ ದತ್ತಾಂಶವನ್ನಿಟ್ಟುಕೊಂಡು ಭಾರತದಲ್ಲಿ ಎಸ್ ಟಿ ಜನಸಂಖ್ಯೆಯ ಜೀವಿತಾವಧಿ 63.9 ವರ್ಷಗಳು ಮತ್ತು ಸಾಮಾನ್ಯ ವರ್ಗದ ಜನಸಂಖ್ಯೆಯ ಜೀವಿತಾವಧಿ 67 ವರ್ಷಗಳು ಎಂದು ಅಂದಾಜಿಸಿದೆ. ಅಲ್ಲದೆ, ಪೌಷ್ಟಿಕಾಂಶದ ಕೊರತೆ, ಶಿಕ್ಷಣದ ಮಟ್ಟ,ಬಡತನ, ಸಾಂಪ್ರದಾಯಿಕ ಜೀವನ ಶೈಲಿಗಳು ಹಾಗೂ ವಾಸ ಸ್ಥಳಗಳು ಅನನುಕೂಲಕರವಾಗಿರುವುದರಿಂದ ಜೀವಿತಾವಧಿ ಕಡಿಮೆಯಾಗಿರಬಹುದು ಎಂಬ ಕಾರಣವನ್ನು ಸಹ ಕೊಟ್ಟಿದೆ.
ಸದ್ಯದ ಸ್ಥಿತಿಯಲ್ಲಿ ಎಸ್ ಟಿ ಜನಸಂಖ್ಯೆಯ ಸರಾಸರಿ ವಯಸ್ಸನ್ನು ಹೆಚ್ಚಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರೂ, ಫಲಾನುಭವಿಗಳು ಯಾರು ಎಂಬುದು ಅಸ್ಪಷ್ಟ.
ಕೇಂದ್ರ ಸರ್ಕಾರ, ಪರಿಶಿಷ್ಟ ಪಂಗಡ (ಎಸ್ ಟಿ) ಜನಸಂಖ್ಯೆಯ ಜೀವಿತಾವಧಿ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳು
ದೇಶದ ಎಲ್ಲಾ ರಾಜ್ಯಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಜಾರಿಗೆ ತಂದಿದೆ. ಅಲ್ಲದೆ, ಹೆಚ್ಚು ಆರೋಗ್ಯ ಸೌಲಭ್ಯ ಒದಗಿಸುವ ಸಲುವಾಗಿ, 3000 ಜನಸಂಖ್ಯೆಯ ಬುಡಕಟ್ಟು ಪ್ರದೇಶಗಳಿಗೆ ಉಪ ಆರೋಗ್ಯ ಕೇಂದ್ರ, 20,000 ಜನಸಂಖ್ಯೆ ಇರುವ ಪ್ರದೇಶಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 80,000 ಜನಸಂಖ್ಯೆಯುಳ್ಳ ಪ್ರದೇಶಗಳಿಗೆ ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ. ಹಾಗೂ ಆರೋಗ್ಯ ಸೌಲಭ್ಯವನ್ನು ಮನೆಬಾಗಿಲಿಗೆ ತಲುಪುವ ಸಲುವಾಗಿ ಮೊಬೈಲ್ ಮೆಡಿಕಲ್ ಯುನಿಟ್ (MMU) ಸೇವೆಯನ್ನು ಸಹ ಅನುಷ್ಠಾನಗೊಳಿಸಿದೆ.
ಕಳೆದ ಜುಲೈ ತಿಂಗಳಿನಲ್ಲಿ ಮೊಬೈಲ್ ಮೆಡಿಕಲ್ ಯುನಿಟ್ (MMU) ಸೇವೆಯ ಅವ್ಯವಹಾರದ ಬಗ್ಗೆ ‘ಪ್ರತಿಧ್ವನಿ’ ಕಲೆಹಾಕಿದ ಮಾಹಿತಿ ಹಾಗೂ ದಾಖಲೆಗಳ ಪ್ರಕಾರ, ರಾಜ್ಯದ ಎರಡನೇ ಹಂತದ ಕಾಂಟ್ರಾಕ್ಟ್ ನಲ್ಲಿ ಕೆಲವು ತಾಲೂಕುಗಳ ಹಿಂದುಳಿದ ಪ್ರದೇಶಗಳಿಗೆ ಮೊಬೈಲ್ ಮೆಡಿಕಲ್ ಯುನಿಟ್ ಸೇವೆಯನ್ನೇ ಒದಗಿಸಿಲ್ಲ. ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ, ಫಲಾನುಭವಿಗಳಿಗೆ ತಲುಪದಿರುವುದು ದೊಡ್ಡ ದುರಂತ.
Also Read: ಮೊಬೈಲ್ ಮೆಡಿಕಲ್ ಯೂನಿಟ್: ಎರಡನೇ ಹಂತದ ಸೇವೆಯಲ್ಲಿ ದೋಷವೇ ಹೆಚ್ಚು
ಇದಲ್ಲದೆ, ಆರೋಗ್ಯ ಸೌಲಭ್ಯಗಳಿಗೆಂದು, ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜಾರಿಗೆ ತಂದಿರುವ ಸಾಕ್ಷರ್ ಭಾರತ ಯೋಜನೆ. ಉದ್ಯೋಗಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಗ್ರಾಮ ಸಡಕ್ ಯೋಜನೆ. ಇನ್ನಿತರ ಯೋಜನೆಗಳು / ಕಾರ್ಯಕ್ರಮಗಳು ಜನರ ಪಾಲಿಗೆ ಇದ್ದರೂ, ಇಲ್ಲದಂತಾಗಿದೆ. ಎಷ್ಟೋ ಪರಿಶಿಷ್ಟ ಪಂಗಡದವರು / ಬುಡಕಟ್ಟು ಜನಾಂಗದವರು ಅರಣ್ಯವನ್ನು ಬಿಟ್ಟು, ತಮ್ಮ ಹಳ್ಳಿಗಳನ್ನು ಬಿಟ್ಟು, ನಗರ / ಪಟ್ಟಣಗಳಿಗೆ ಬಂದು, ಕಡಿಮೆ ವೇತನದಲ್ಲಿ ಅಧಿಕವಾಗಿ ಶ್ರಮ ಪಟ್ಟು, ಈಗಲೂ ಜೀತದಾಳುಗಳಾಗಿ ಬದುಕುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಸರಿಯಾಗಿ ತಲುಪದೆ ಇದ್ದಾಗ ಇವರ ಜೀವಿತಾವಧಿ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ.
ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿ (ಪಿವಿಟಿಜಿ) ನೀತಿ
2012-13ರಲ್ಲಿ ಯುಪಿಎ ಸರ್ಕಾರ ರಾಷ್ಟ್ರೀಯ ಸಲಹಾ ಮಂಡಳಿಯ ಮುಖ್ಯಸ್ಥರ ಸೂಚನೆಯಂತೆ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿ’ (ಪಿವಿಟಿಜಿ) ನೀತಿಯನ್ನು ರಚಿಸಿತು. 27 ಲಕ್ಷ ಜನಸಂಖ್ಯೆಯ75 ಬುಡಕಟ್ಟು ಗುಂಪುಗಳನ್ನು ಪಿವಿಟಿಜಿ ಎಂದು ವರ್ಗೀಕರಿಸಲಾಯಿತು. ಶಿಕ್ಷಣದ ಕೊರತೆ, ಅತಿಯಾದ ಅಪೌಷ್ಟಿಕತೆ ಕಡಿಮೆ ಜೀವಿತಾವಧಿ ಹಾಗೂ ಕಳಪೆ ಜೀವನಮಟ್ಟ ಇರುವ ಕಾರಣದಿಂದ, ಕೇಂದ್ರ ಸರಕಾರದ, ಬುಡಕಟ್ಟು ಉಪ- ಯೋಜನೆಗಳ ಅಡಿಯಲ್ಲಿ ರೂಪಿಸಲಾಗುವ ಯೋಜನೆಗಳು ಮತ್ತು ನಿಧಿಗಳು, ಪಿವಿಟಿಜಿಗಳಿಗೆ ಆಗಬಹುದಾದ ಲಾಭವನ್ನು ಗಮನದಲ್ಲಿಟ್ಟು ರೂಪಿಸಿದೆ. ಇವರ ಕಲ್ಯಾಣಕ್ಕಾಗಿ 19ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ಬುಡಕಟ್ಟು ವ್ಯವಹಾರಗಳು ಸಚಿವಾಲಯ ಹಣವನ್ನು ಬಿಡುಗಡೆ ಮಾಡುತ್ತದೆ.
ಕಳೆದ ಮೂರು ವರ್ಷಗಳಲ್ಲಿ ಪಿವಿಟಿಜಿ ಯೋಜನೆಯಡಿ ಹಣ ಬಿಡುಗಡೆ ಮಾಡಿದ ವಿವರ

ಈ ನಿರ್ದಿಷ್ಟ ದುರ್ಬಲ ಬುಡಕಟ್ಟಿನವರು ದೇಶದ ವಿವಿದ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಅದರಲ್ಲೂ ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಮಧ್ಯ ಪ್ರದೇಶ, ಒರಿಸ್ಸಾ, ತಮಿಳುನಾಡಿನಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಕೇಂದ್ರ ಸರ್ಕಾರದ ಪಿವಿಜಿಟಿ ಯೋಜನೆಯಡಿಯಲ್ಲಿ ಈ 75 ಬುಡಕಟ್ಟು ಗುಂಪಿಗೆ ಶಿಕ್ಷಣ, ವಸತಿ, ಭೂ ವಿತರಣೆ, ಭೂ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಪಶು ಸಂಗೋಪನೆ, ರಸ್ತೆಗಳ ನಿರ್ಮಾಣ ಹಾಗೂ ಸಮಗ್ರ ಸಾಮಾಜಿಕ – ಆರ್ಥಿಕ ಅಭಿವೃದ್ಧಿಗೆಂದು ವರ್ಷಕ್ಕೆ ರೂ. 200 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದರೂ, ಈ ಯೋಜನೆಗಳ ಹಣ ಇವರ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಗಳನ್ನು ತರುವಲ್ಲಿ ಸಫಲವಾಗಿಲ್ಲ.
ಈಗಲೂ ಈ ಜನರು ಅರಣ್ಯಗಳಲ್ಲೇ ಜೀವಿಸುತ್ತಿದ್ದಾರೆ ಹಾಗೂ ಪ್ರಾಚೀನ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಅನೇಕ ಕಡೆ ಕೆಲ ಸಮುದಾಯಗಳ ಜನಸಂಖ್ಯೆ ಹೆಚ್ಚುತ್ತಿರುವ ಪರಿಣಾಮದಿಂದ ಅನೇಕ ದಟ್ಟವಾದ ಅರಣ್ಯಗಳು ನಾಶವಾಗುತ್ತಿದ್ದು, ಈ ಗುಂಪಿನ ಜೀವನ ಪದ್ಧತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.
ಇತ್ತೀಚಿಗೆ ಜುಲೈ ತಿಂಗಳಿನಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಬುಡಕಟ್ಟು ಜನಾಂಗದವರ ಕುರಿತು ಶ್ಲಾಘನೀಯವಾದ ಹೇಳಿಕೆಯನ್ನು ಕೊಟ್ಟಿದ್ದರು “ಅರಣ್ಯ ಸಂರಕ್ಷಣೆಯಲ್ಲಿ ಸುಸ್ಥಿರ ಯಶಸ್ಸು ಸಾಧಿಸಲು ಬುಡಕಟ್ಟು ಜನಾಂಗದ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಈ ಜನರು ಸಂಪ್ರದಾಯ ಮತ್ತು ನಂಬಿಕೆಗಳ ಭಾಗವಾಗಿ ಕಾಡುಗಳನ್ನು ಗೌರವಿಸುತ್ತಾರೆ. ಸರ್ಕಾರ, ಈ ಜನರ ಮೂಲಭೂತ ಅಗತ್ಯಗಳು ಸಿಗುವ ಹಾಗೆ ಕಾಡನ್ನು ರಕ್ಷಿಸಬೇಕು. ಹಾಗೂ ಆದಿವಾಸಿಗಳು ಪಾಲುದಾರರಾಗಿ ಒಳಗೊಂಡಿರಬೇಕು”
ನಮ್ಮ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರಗಳು ರಾಷ್ಟ್ರಪತಿಯವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಬುಡಕಟ್ಟು ಜನಾಂಗದವರ ಜೀವನದ ಬಗ್ಗೆ, ಅಭಿವೃದ್ಧಿಯ ಬಗ್ಗೆ ಗಮನಹರಿಸಿದರೆ, ಆದಿವಾಸಿಗಳ ಜೀವಿತಾವಧಿಯನ್ನು ಹೆಚ್ಚಿಸಬಹುದು, ಜೊತೆಗೆ ಪರೋಕ್ಷವಾಗಿ ಅರಣ್ಯವನ್ನು ರಕ್ಷಿಸುವುದಕ್ಕೆ ಇದೊಳ್ಳೆ ಉಪಾಯ.