ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪ ಹೆಸರು ಉಲ್ಲೇಖಿಸದ ಹೊರತು ಬಿಜೆಪಿಯ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಪಾತ್ರವಿದೆ. ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಕಮಲ ಅರಳಲು ತಮ್ಮ ಬದುಕು ಸವೆಸಿದ 76 ವರ್ಷದ ಯಡಿಯೂರಪ್ಪ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಲು ವಯಸ್ಸಿನಲ್ಲಿ ತಮಗಿಂತ ಕಿರಿಯರಾದ 68 ವರ್ಷದ ಪ್ರಧಾನಿ ನರೇಂದ್ರ ಮೋದಿ ಹಾಗೂ 54 ವರ್ಷದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ-ಗೃಹ ಸಚಿವ ಅಮಿತ್ ಶಾ ಅನುಮತಿಗಾಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ.
ಜನ ಹೋರಾಟದ ಮೂಲಕ ಪ್ರಬಲ ನಾಯಕನಾಗಿ ಬೆಳೆದ ಮಂಡ್ಯ ಜಿಲ್ಲೆಯ ಬೂಕನಕೆರೆಯವರಾದ ಯಡಿಯೂರಪ್ಪ ಅಧಿಕಾರ ದಾಹಕ್ಕೆ ಸಿಲುಕಿದ್ದರಿಂದ ಕುಟಿಲ ತಂತ್ರಗಳೇ ರಾಜಕಾರಣ ಎಂದುಕೊಂಡು ಮಹತ್ತರ ಸ್ಥಾನಗಳನ್ನು ಕಬಳಿಸಿದ ನಾಯಕರ ಮುಂದೆ ಶಿರಬಾಗಿ ನಿಲ್ಲುವ ಮಟ್ಟಕ್ಕೆ ಕುಸಿದಿದ್ದಾರೆ. ಇದು ಕರ್ನಾಟಕ ರಾಜಕೀಯದ ಶ್ರೀಮಂತ ಪರಂಪರೆಯ ವಿನಾಶದ ಹಾದಿಗೆ ದ್ಯೋತಕ. ಮೋದಿ ಸೇರಿದಂತೆ ಬಿಜೆಪಿಯ ಇಂದಿನ ಹಲವು ಪ್ರಮುಖ ನಾಯಕರು ರಾಜಕೀಯ ಪ್ರವೇಶಿಸುವ ಮೊದಲೇ ಯಡಿಯೂರಪ್ಪ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದವರು. ಬಿಜೆಪಿ ಹೈಕಮಾಂಡ್ ಕಳಹೀನವಾಗಿದ್ದ ಸಂದರ್ಭದಲ್ಲೇ ಯಡಿಯೂರಪ್ಪ 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 110 ಸ್ಥಾನ ಗೆದ್ದುಕೊಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದರು. ಮೋದಿ ಪ್ರಧಾನಿಯಾಗಿ ಪ್ರಚಾರ ಮಾಡಿದರೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದು, 105 ಸ್ಥಾನ ಮಾತ್ರ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
ಇಷ್ಟಾದರೂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲು ಬಿಜೆಪಿ ಉತ್ಸುಕತೆ ತೋರದಿರಲು ಹಲವು ಕಾರಣಗಳಿವೆ. ತನ್ನ ಕಾರ್ಯಸೂಚಿಗಳನ್ನು ಯಡಿಯೂರಪ್ಪ ಮೂಲಕ ಜಾರಿಗೊಳಿಸಲಾಗದು ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿಯ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಾಧ್ಯತೆಗಳತ್ತ ಚಿತ್ತಹರಿಸಿದೆ ಎನ್ನುವುದು ಬಿಜೆಪಿಯ ಒಳಗಿನವರ ಅಭಿಪ್ರಾಯ.
ಇದರ ಭಾಗವಾಗಿಯೇ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ ತೋರಿದ ಆತುರವನ್ನು ಸರ್ಕಾರ ರಚಿಸಲು ಬಿಜೆಪಿ ಹಾಗೂ ಆರ್ ಎಸ್ ಎಸ್ ತೋರುತ್ತಿಲ್ಲ ಎನ್ನಲಾಗುತ್ತಿದೆ. ಹಾಗೆಂದು, ಬಿ ಎಸ್ ವೈ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ದಶಕಗಳಿಂದ ಬಿಜೆಪಿಯ ಬೆನ್ನಿಗೆ ಬೆಂಬಲವಾಗಿ ನಿಂತಿರುವ ರಾಜ್ಯದ ಪ್ರಮುಖ ಸಮುದಾಯವಾದ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಆತಂಕವೂ ಆರ್ ಎಸ್ ಎಸ್ ಹಾಗೂ ಬಿಜೆಪಿಯ ನಾಯಕರಲ್ಲಿ ಮನೆ ಮಾಡಿದೆ. ವೀರೇಂದ್ರ ಪಾಟೀಲ್ ಅವರನ್ನು ಅನುಚಿತವಾಗಿ ನಡೆಸಿಕೊಳ್ಳುವ ಮೂಲಕ ಲಿಂಗಾಯತ ಸಮುದಾಯದ ವಿಶ್ವಾಸ ಕಳೆದುಕೊಂಡು ರಾಜಕೀಯ ಶಾಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಎಸಗಿದ ಪ್ರಮಾದವನ್ನು ತಾನೂ ಮಾಡಲು ಬಿಜೆಪಿ ಸಿದ್ಧವಿಲ್ಲ.

ಈ ನೆಲೆಯಲ್ಲಿ ಕಾನೂನು ತೊಡಕುಗಳನ್ನು ಮುಂದಿಟ್ಟು ಒಂದಷ್ಟು ದಿನ ಸರ್ಕಾರ ರಚನೆಯನ್ನು ಮುಂದೂಡುವುದು. ಈ ಮೂಲಕ ಯಡಿಯೂರಪ್ಪ ತಾಳ್ಮೆ ಪರೀಕ್ಷಿಸುವುದು. ಅಂತಿಮವಾಗಿ ಸರ್ಕಾರ ರಚಿಸಲು ಅನುಮತಿಸಿ, ಯಡಿಯೂರಪ್ಪ ಅವರಿಗೆ ಕಾಲಮಿತಿ ನಿಗದಿಗೊಳಿಸುವ ಮೂಲಕ ಅವರಿಗೆ ಗೌರವಯುತ ಬೀಳ್ಕೊಡುಗೆ ಕಾರ್ಯತಂತ್ರವನ್ನು ಆರ್ ಎಸ್ ಎಸ್ ಹೆಣೆದಿದೆ. ಇದರ ಹಿಂದೆ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಅಪಾಯದಿಂದ ಪಾರಾಗುವ ತಂತ್ರವಿದೆ. ಇದನ್ನು ಅರಿತಂತಿರುವ ಯಡಿಯೂರಪ್ಪ ಅವರು ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿದ್ದು ಮಹತ್ವ ಪಡೆದಿದೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ. ಹೀಗಾದಲ್ಲಿ ಒಂದಷ್ಟು ದಿನ ಆರ್ ಎಸ್ ಎಸ್ ಕಾರ್ಯಸೂಚಿಗೆ ಹಿನ್ನಡೆಯಾಗಲಿದೆ. ಇದಕ್ಕೆ ಪರ್ಯಾಯವಾಗಿ ಸರ್ಕಾರ ಮತ್ತು ಪಕ್ಷದ ಪ್ರಮುಖ ಸ್ಥಾನಗಳಿಗೆ ಸಂಘ ಹಾಕಿದ ಗೆರೆ ಮೀರದ ವ್ಯಕ್ತಿಗಳನ್ನು ನೇಮಿಸುವ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಇದನ್ನು ಒಪ್ಪದ ಕೆಲವು ಬಿಜೆಪಿ ನಾಯಕರು, ಪಕ್ಷ ಕಟ್ಟಿ ಬೆಳೆಸಿದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರಂಥ ನಾಯಕರಿಗೆ ವಿಶ್ರಾಂತಿ ನೀಡಿರುವ ಮೋದಿ-ಶಾ ಹಾಗೂ ಆರ್ ಎಸ್ ಎಸ್ ಶಕ್ತಿಕೇಂದ್ರಗಳಿಗೆ ಯಡಿಯೂರಪ್ಪ ಅವರನ್ನು ಗೌಣವಾಗಿಸುವುದು ಕಷ್ಟವಾಗಲಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಮುಂದಿನ ಚುನಾವಣೆಯಲ್ಲಿ ಅವರನ್ನು ಕೇಂದ್ರ ಸ್ಥಾನದಲ್ಲಿಟ್ಟು ಮತ ಕೇಳಲಾಗದು. ಇದರ ಜೊತೆಗೆ ಪಕ್ಷವು ನಿರ್ದಿಷ್ಟ ಜಾತಿಗೆ ಸೀಮಿತವಾಗಿಲ್ಲ ಎನ್ನುವ ಸಂದೇಶ ರವಾನಿಸುವ ಅಗತ್ಯವಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ” ಎನ್ನುವ ಮೂಲಕ ಬಿಜೆಪಿಯ ನಾಯಕರೊಬ್ಬರು ಪಕ್ಷದ ನಿಲುವನ್ನು ಸೂಚ್ಯವಾಗಿ ದಾಟಿಸಿದ್ದಾರೆ.
ಕಳೆದ ವರ್ಷ ನಡೆದ ವಿಧಾನಸಭೆ ಹಾಗೂ ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಚುನಾವಣಾ ತಯಾರಿ ಹಾಗೂ ಪ್ರಚಾರ ಕಾರ್ಯತಂತ್ರ ರೂಪಿಸುವ ಪ್ರಮುಖ ವಿಚಾರಗಳಲ್ಲಿ ಯಡಿಯೂರಪ್ಪ ನಿರ್ಣಾಯಕರಾಗಿರಲಿಲ್ಲ. ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ದ್ವಿತೀಯ ಪುತ್ರ ಬಿ ವೈ ವಿಜಯೇಂದ್ರಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಿರಲಿಲ್ಲ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಯುವ ಮುಖಂಡ ತೇಜಸ್ವಿ ಸೂರ್ಯಗೆ ನೀಡಿದ್ದ ನಿರ್ಣಯ ಯಡಿಯೂರಪ್ಪ ಗಮನಕ್ಕೇ ಬಂದಿರಲಿಲ್ಲ. ಅಷ್ಟರಮಟ್ಟಿಗೆ ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವ ಹಾಗೂ ಆರ್ ಎಸ್ ಎಸ್ ಕತ್ತಲಲ್ಲಿಟ್ಟಿದ್ದವು. ಈ ನಿರ್ಣಯವನ್ನೇ ಗಂಭೀರವಾಗಿ ಅವಲೋಕಿಸಿದರೆ ಆರ್ ಎಸ್ ಎಸ್ ಹಾಗೂ ಬಿಜೆಪಿ ಆದ್ಯತೆಗಳೇನು ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಸರ್ಕಾರ ರಚಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆದರೂ ಹದಿನೈದನೆ ವಿಧಾನಸಭೆಯ ಬಾಕಿ ಮೂರು ವರ್ಷ ಹತ್ತು ತಿಂಗಳನ್ನು ಯಡಿಯೂರಪ್ಪ ಅವರೇ ಪೂರೈಸುತ್ತಾರೆ ಎಂದು ಸ್ಪಷ್ಟವಾಗಿ ನುಡಿಯುವ ಧೈರ್ಯವನ್ನು ಬಿ ಎಸ್ ವೈ ಅವರ ಆಪ್ತರೇ ಮಾಡಲಾರರು.