ನಮ್ಮ ರಾಜಕಾರಣಿಗಳು, ನಾಯಕರು ಹಾಗೂ ಮುಂತಾದ ಗಣ್ಯರು ಕರೋನಾ ಚಿಕಿತ್ಸೆಗೆ ಕಾರ್ಪೋರೇಟ್ ಹಾಸ್ಪಿಟಲ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಪತ್ನಿ ಶಿವಶಂಕರಿ ಅವರಿಗೆ ಗದಗ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದು ಪ್ರಶಂಶನೀಯವಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪಾರ ಪ್ರಮಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸುಂದರೇಶ ಬಾಬು ಅವರು ಮೂಲತಃ ತಮಿಳುನಾಡಿನವರು. 2012 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಗದುಗಿಗೆ ಬಂದು ಈಗ ಎರಡು ತಿಂಗಳಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶ್ರೀಮಂತರು ಹಾಗೂ ಗಣ್ಯರು ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುತ್ತಾರೆ. ಅಲ್ಲಿ ಒಳ್ಳೆಯ ಸೌಲಭ್ಯವಿರುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ, ಇಂಥ ಸಮಯದಲ್ಲಿ ಗದುಗಿನ ಜಿಲ್ಲಾಧಿಕಾರಿಗಳು ತಮ್ಮ ಮಡದಿಯ ಹೆರಿಗೆಯನ್ನು ಗದುಗಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿ, ಸರ್ಕಾರಿ ಆಸ್ಪತ್ರೆಗಳು ಉತ್ತಮ ಎಂದು ಸಾಬೀತುಪಡಿಸಿದ್ದಾರೆ. ಈ ಹಿಂದೆ ನಕುಲ್ ಎಂಬ ಜಿಲ್ಲಾಧಿಕಾರಿಗಳು ಇದೇ ಮಾರ್ಗವನ್ನು ಅನುಸರಿಸಿದ್ದು ಇಲ್ಲಿ ಸ್ಮರಣೀಯ.
ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರು ತಮ್ಮ ಗರ್ಭಿಣಿ ಪತ್ನಿಯ ನಿಯಮಿತ ತಪಾಸಣೆಯನ್ನೂ ಕಳೆದ ಎರಡು ತಿಂಗಳಿನಿಂದ ಗದಗ್ ನ ದಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯಲ್ಲೇ ತಪಾಸಣೆ ಮಾಡಿಸುತ್ತಿದ್ದರು.
ಗದಗ್ ನಗರದ ಕೆಸಿ ರಾಣಿ ರಸ್ತೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಡಿಸಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಮಗು 3.4 ಕೆಜಿ ಇದ್ದು, ಇದು ಡಿಸಿ ಯವರ ಎರಡನೇಯ ಮಗು. ಮೊದಲ ಹೆಣ್ಣು ಮಗು ಇದ್ದು, ಈಗ ಡಿಸಿ ಯವರಿಗೆ ಅರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂದು ಸಂತಸದಲ್ಲಿದ್ದಾರೆ.
ಡಿಸಿ ಅವರ ಪ್ರಕಾರ ‘ಕರೋನಾದ ಸಂಕಷ್ಟ ಕಾಲದಲ್ಲೂ ಸರ್ಕಾರಿ ಆಸ್ಪತ್ರೆಗಳು ಅತ್ಯಂತ ಸುರಕ್ಷಿತ. ನುರಿತ ವೈದ್ಯ, ಉತ್ತಮ ವೈದ್ಯಕೀಯ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಕೇವಲ ಕಡುಬಡವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎನ್ನುವ ತಪ್ಪು ಕಲ್ಪನೆ ಹೋಗಬೇಕಿದೆ’
ಅವರ ಈ ನಡೆ ಎಲ್ಲರಿಗೂ ಅನುಕರಣೀಯವಾಗಲಿ, ಮಾದರಿಯಾಗಲಿ ಎಂದು ನೆಟ್ಟಿಗರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಡಿಸಿ ಕಚೇರಿಯ ಅಧಿಕಾರಿಯೊಬ್ಬರ ಪ್ರಕಾರ, “ಡಿಸಿ ಸರ್ ಅವರು ಇದನ್ನು ಪಬ್ಲಿಸಿಟಿ ಮಾಡೋದು ಬೇಡ ಎಂದೇ ಹೇಳಿದ್ದರು. ಆದರೂ ಕೆಲವು ಸುದ್ದಿ ಸಂಸ್ಥೆಗಳು ಜಾಲತಾಣಗಳಲ್ಲಿ ಬಿತ್ತರಿಸಿದ್ದು, ಸಾಕಷ್ಟು ವೈರಲ್ ಆಗಿದೆ. ಗದುಗಿನ ಜನರು ನಮ್ಮ ಡಿಸಿ ಎಂದು ಹೆಮ್ಮೆಯಿಂದ ವಾಟ್ಸ್ಯಾಪ್ ಗ್ರೂಪ್ ಗಳಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಅವರ ಫೋಟೊ ಹಾಕಿ ಸಂಭ್ರಮಿಸುತ್ತಿದ್ದಾರೆ.
