ವಿರೇಂದ್ರ ಪಾಟೀಲರು ಈ ರಾಜ್ಯ ಕಂಡ ಅಪರೂಪದ, ಸ್ವಚ್ಛ ಹಸ್ತದ, ದಕ್ಷ ಆಡಳಿತಕ್ಕೆ ಹೆಸರಾದ ರಾಜಕಾರಣಿ. 1967ರ ವಿಧಾನಸಭೆ ಚುನಾವಣೆಯಲ್ಲಿ ಅವಿಭಾಜ್ಯ ಕಾಂಗ್ರೆಸ್ಸಿನ ನಾಯಕತ್ವ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ಸಮರ್ಥ ಆಡಳಿತಗಾರ.
1969, ಕಾಂಗ್ರೆಸ್ ಇಬ್ಭಾಗವಾದ ವರ್ಷ. ಇಂದಿರಾ ಗಾಂಧಿ ಒಂದು ಕಡೆ. ನಿಜಲಿಂಗಪ್ಪ, ವಿರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ ಇನ್ನೊಂದು ಕಡೆ. ಇಂದಿರಾ ಆಡಳಿತದ ಕಾಂಗ್ರೆಸ್, ನಿಜಲಿಂಗಪ್ಪರದು ಸಂಸ್ಥಾ ಕಾಂಗ್ರೆಸ್. 1971ರಲ್ಲಿ ಲೋಕಸಭೆ ಚುನಾವಣೆ. ರಾಜ್ಯದಲ್ಲಿದ್ದ ಎಲ್ಲ 26 ಲೋಕಸಭೆ ಸ್ಥಾನಗಳನ್ನೂ ಇಂದಿರಾ ಕಾಂಗ್ರೆಸ್ ಗೆದ್ದಿತು. ವಿರೇಂದ್ರ ಪಾಟೀಲರ ಸಂಪುಟದ ವಸಂತ ರಾವ್ ಪಾಟೀಲ, ಗದಗಿನ ಕೆ.ಎಚ್.ಪಾಟೀಲ, ವಿಜಯಪುರದ ಬಿ.ಎಮ್.ಪಾಟೀಲ ಸಹಿತ 14 ಶಾಸಕರು ರಾಜಿನಾಮೆ ನೀಡಿ ಹೊರಬಂದರು. ಅಲ್ಪಮತಕ್ಕೆ ಇಳಿದ ವಿರೇಂದ್ರ ಪಾಟೀಲರು, ರಾಜ್ಯಪಾಲ ಧರ್ಮವೀರ ಬಳಿ ಹೋಗಿ ತಮ್ಮ ಸರಕಾರದ ರಾಜಿನಾಮೆ ಸಲ್ಲಿಸಿದರು. ಸರಕಾರ ಉರುಳಿಸಿದ ಅಪಖ್ಯಾತಿ ಪಾಟೀಲತ್ರಯರಿಗೆ ಅಂಟಿತು.
1972ರ ವಿಧಾನಸಭೆ ಚುನಾವಣೆಯಲ್ಲಿ ದೇವರಾಜ ಅರಸು ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬಂತು. 1975ರಿಂದ 1977ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ. ಇಂದಿರಾ ಅಧಿಕಾರ ಕಳೆದುಕೊಂಡು ಮುರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಅಧಿಕಾರಕ್ಕೆ ಬಂತು.
ರಾಜಕೀಯ ವನವಾಸ ಅನುಭವಿಸುತ್ತಿದ್ದ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ಕಲ್ಪಿಸಲು ಅರಸು ಮುಂದಾದರು. ಸಂಸದ ಡಿ.ಬಿ.ಚಂದ್ರೇಗೌಡರು ತಮ್ಮ ಚಿಕ್ಕಮಗಳೂರು ಸ್ಥಾನವನ್ನು ತೆರವು ಮಾಡಿ ಉಪಚುನಾವಣೆಗೆ ಸ್ಪರ್ಧಿಸಲು ಇಂದಿರಾ ಗಾಂಧಿಯವರಿಗೆ ಅವಕಾಶ ಮಾಡಿಕೊಟ್ಟರು. ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಲು ಜನತಾ ಪಕ್ಷದಿಂದ ಯಾರು ಎಂಬ ಪ್ರಶ್ನೆ ಉದ್ಭವಿಸಿತು. ಡಾ.ರಾಜಕುಮಾರ ಅವರನ್ನು ಜನತಾ ಪಕ್ಷದ ನಾಯಕರು ಕೇಳಿದರು. ಅವರು ಒಪ್ಪಲಿಲ್ಲ. ಕೊನೆಗೆ ವಿರೇಂದ್ರ ಪಾಟೀಲರನ್ನು ಒಪ್ಪಿಸಿದರು.
ಈ ಚುನಾವಣೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಯಿತು. ಬಿಬಿಸಿ ಹಾಗೂ ಇನ್ನಿತರ ವಿದೇಶಿ ಸುದ್ಧಿ ಸಂಸ್ಥೆಗಳು ಚಿಕ್ಕಮಗಳೂರಿಗೆ ಧಾವಿಸಿ ಬಂದವು. ಜನತಾ ಪಕ್ಷದ ನಾಯಕರ ದಂಡೇ ಅಲ್ಲಿ ಬೀಡುಬಿಟ್ಟಿತು. ಬೆಳಗಾವಿ ಸಹಿತ ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಪ್ರವಾಹವಾಗಿ ಹರಿದುಹೋದರು. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಅವರಂತೂ ಆಚಾರ್ಯ ಕೃಪಲಾನಿ ಅವರಂಥ ಖ್ಯಾತನಾಮರ ಬಹಿರಂಗ ಭಾಷಣಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ಮಾಡಿದರು. ವಿರೇಂದ್ರ ಪಾಟೀಲರು ಒಮ್ಮೆಯೂ ಇಂದಿರಾ ಗಾಂಧಿ ವಿರುದ್ಧ ವ್ಯಕ್ತಿಗತ ದಾಳಿ ಮಾಡಲಿಲ್ಲ. ಅದೇ ಅವರ ವ್ಯಕ್ತಿತ್ವದ ವಿಶೇಷವಾಗಿತ್ತು. ಕೊನೆಗೂ ಇಂದಿರಾ 72,000 ಮತಗಳ ಅಂತರದಿಂದ ಗೆದ್ದರು. ವಿರೇಂದ್ರ ಪಾಟೀಲರು ಸೋತರು. ಇಂದಿರಾ ಮತ್ತೆ ಲೋಕಸಭೆ ಪ್ರವೇಶಿಸಿದರು.
ವಿರೇಂದ್ರ ಪಾಟೀಲರು ಜನತಾ ಪಕ್ಷದ ಆಂತರಿಕ ಗುದ್ದಾಟಗಳಿಗೆ ಬೇಸತ್ತು ಪಕ್ಷಾಂತರ ಮಾಡಬಹುದೆಂಬ ವದಂತಿಗಳು ಹಬ್ಬಿದವು. ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ದ ಸಹೋದರ ಸಾಪ್ತಾಹಿಕವಾಗಿದ್ದ ‘ಪ್ರಜಾಪ್ರಭುತ್ವ’ಕ್ಕೆ ಸಂದರ್ಶನ ನೀಡಿದ ವಿರೇಂದ್ರ ಪಾಟೀಲರು, “ಪಕ್ಷಾಂತರ ನನ್ನ ರಕ್ತದಲ್ಲಿಯೇ ಇಲ್ಲ,” ಎಂದು ಘೋಷಿಸಿದರು!
ಈ ಘೋಷಣೆ ಮಾಡಿದ ಕೆಲವು ತಿಂಗಳೂ ಕಳೆದಿರಲಿಲ್ಲ. ರಾಜ್ಯದಲ್ಲಿ ವಿರೇಂದ್ರ ಪಾಟೀಲರಿಗೆ, ಗುಜರಾತಿನಲ್ಲಿ ಹಿತೇಂದ್ರ ದೇಸಾಯಿಯವರಿಗೆ ಇಂದಿರಾ ಗಾಂಧಿ ಗಾಳ ಬೀಸಿದರು. ಈ ಇಬ್ಬರೂ ಕಾಂಗ್ರೆಸ್ ಸೇರಿದರು. ಇಂದಿರಾ ಭರ್ಜರಿಯಾಗಿ ಅಧಿಕಾರಕ್ಕೆ ಮರಳಿದರು. ವಿರೇಂದ್ರ ಪಾಟೀಲರು ಇಂದಿರಾ ಸಂಪುಟದಲ್ಲಿ ಪೆಟ್ರೋಲಿಯಂ ಖಾತೆಯ ಸಚಿವರಾಗಿಬಿಟ್ಟರು!
1989, ರಾಜ್ಯದಲ್ಲಿ ವಿಧಾನಸಭೆ, ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ. ಜನತಾದಳ ಇಬ್ಭಾಗವಾಗಿ ಸಮಾಜವಾದಿ ಜನತಾ ಪಕ್ಷವೂ ಅಸ್ತಿತ್ವಕ್ಕೆ ಬಂದಿತ್ತು. ಕಾಂಗ್ರೆಸ್ಸಿಗೆ ವಿರೇಂದ್ರ ಪಾಟೀಲರ ನಾಯಕತ್ವ. ರಾಜ್ಯದಲ್ಲಿಯೇ ಐತಿಹಾಸಿಕವೆನಿಸುವಷ್ಟು 224 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 179 ಸ್ಥಾನಗಳನ್ನು ಪಡೆಯಿತು. ವಿರೇಂದ್ರ ಪಾಟೀಲರು ರಾಜ್ಯದ ಚುಕ್ಕಾಣಿ ಹಿಡಿದರು.
ವಿರೇಂದ್ರ ಪಾಟೀಲರು ತಮ್ಮ ‘ಸಹಜ’ ಆಡಳಿತ ಆರಂಭಿಸಿದರು. ಅಬಕಾರಿ ಲಾಬಿಯನ್ನು ನಿಯಂತ್ರಿಸಿದರು. ಸೆಕಂಡ್ಸ್ ಹಾವಳಿಗೆ ಕಡಿವಾಣ ಹಾಕಿದರು. ರಾಜ್ಯದಲ್ಲೆಲ್ಲ ಮತೀಯ ಘರ್ಷಣೆಗಳು ಸ್ಫೋಟಗೊಂಡವು. ಅಧಿಕಾರ ವಹಿಸಿಕೊಂಡ ಒಂದೇ ವರ್ಷದಲ್ಲಿ ವಿರೇಂದ್ರ ಪಾಟೀಲರಿಗೆ ಪಾರ್ಶ್ವವಾಯು ಹೊಡೆಯಿತು. ಹಾಸಿಗೆ ಹಿಡಿದರು. ಅವರನ್ನು ಕಾಣಲು ದಿಲ್ಲಿಯಿಂದ ಪ್ರಧಾನಿ ರಾಜೀವ ಗಾಂಧಿ ಬೆಂಗಳೂರಿಗೆ ಬಂದರು. ಯೋಗಕ್ಷೇಮ ವಿಚಾರಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಒಂದು ತಪ್ಪು ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಕರ್ನಾಟಕದ ನಾಯಕತ್ವವನ್ನು ಬದಲಾಯಿಸುತ್ತಿದ್ದೇವೆ,” ಎಂದು ಪ್ರಕಟಿಸಿದ್ದು, ರಾಜ್ಯದ ಲಿಂಗಾಯತರಿಗೆ ಶಾಕ್ ಆಯಿತು! ಒಬ್ಬ ದಕ್ಷ ಆಡಳಿತಗಾರನ ಜೊತೆ ಅಮಾನುಷವಾಗಿ ವರ್ತಿಸಿದ್ದು ಕಾಂಗ್ರೆಸ್ ಪಕ್ಷದ ಬಗ್ಗೆ ಲಿಂಗಾಯತರಲ್ಲಿ ಆಕ್ರೋಶ ಉಂಟುಮಾಡಲು ಕಾರಣವಾಯಿತು.
ಅಬಕಾರಿ ಲಾಬಿಯ ಪ್ರಭಾವದಿಂದಾಗಿ ಬಂಗಾರಪ್ಪ ಅಧಿಕಾರಕ್ಕೆ ಬಂದರು. ಮುಂದೆ 1994ರಲ್ಲಿ ಕಾಂಗ್ರೆಸ್ ಹೊಡೆತ ತಿಂದು, ಜನತಾದಳ ಅಧಿಕಾರಕ್ಕೆ ಬಂತು. ಲಿಂಗಾಯತರು ಮತ್ತು ಒಕ್ಕಲಿಗರು ಸೇರಿಯೇ ಕಾಂಗ್ರೆಸ್ಸಿಗೆ ಕೈಕೊಟ್ಟಿದ್ದರು.
ಅಂಕಣಕಾರರು ಹಿರಿಯ ಪತ್ರಕರ್ತರು