ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಎರಡನೇ ಬಾರಿ ಬಹುದೊಡ್ಡ ಬಹುಮತದಿಂದ ಗೆದ್ದಿರುವ ಸಂಭ್ರಮ ಬಹಳ ದಿನ ಇರಲಿಲ್ಲ. ಅದಾಗಲೇ ಆರ್ಥಿಕ ಸಂಕಷ್ಟದ ಮುನ್ಸೂಚನೆ ಆರಂಭ ಆಗಿತ್ತು. ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ನೂರು ದಿನದ ಆಡಳಿತ ಪೂರ್ಣಗೊಳ್ಳುವ ಮೊದಲೇ ಆರ್ಥಿಕ ಸಂಕಷ್ಟದ ದಿನಗಳು ಖಾತ್ರಿ ಆಗಿವೆ. ಈ ನೂರು ದಿನಗಳಲ್ಲಿ ತರಾತುರಿಯಲ್ಲಿ ಸಂಸತ್ತಿನಲ್ಲಿ ಜಾರಿ ಆಗಿರುವ ಕೆಲವು ಕಾನೂನುಗಳ ಫಲಿತಾಂಶ ಸದ್ಯದಲ್ಲೇ ಗೊತ್ತಾಗಲಿದೆ. ಈ ಹಿನ್ನೆಲೆಯಲ್ಲಿ ಸಮೂಹ ಮಾಧ್ಯಮದಲ್ಲಾಗಲಿ, ಬಿಜೆಪಿಯ ಬಹು ಪ್ರಿಯವಾದ ಸೋಶಿಯಲ್ ಮಿಡಿಯಾದಲ್ಲಾಗಲಿ ವಿಶೇಷ ಸಂಭ್ರಮ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ.
ಮೊದಲ ಬಾರಿ ಮೋದಿ ಪ್ರಧಾನಿ ಆದಾಗ ಮೊದಲ 100 ದಿನಗಳಲ್ಲಿ ಡಿಜಿಟಲ್ ಇಂಡಿಯ, ವಿಮಾ ಸಹಿತ ಜನಧನ್ ಯೋಜನೆ, ಮೂಲಭೂತ ಸೌಕರ್ಯ ಯೋಜನೆಗಳ ಮಂಜೂರಿಗೆ ಏಕಗವಾಕ್ಷಿ ಯೋಜನೆ, ಹಳೆ ನಿರುಪಯುಕ್ತ ಕಾನೂನುಗಳ ಅನೂರ್ಜಿತಗೊಳಿಸುವುದು, ರೈಲ್ವೇ, ರಕ್ಷಣಾ, ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ರಹದಾರಿ ಸೇರಿದಂತೆ ಹಲವಾರು ರಚನಾತ್ಮಕ ಮತ್ತು ತೋರಿಕೆಯ ಎರಡೂ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವುಗಳ ಪರಿಣಾಮ ಏನು ಎಂಬುದು ಚರ್ಚಾಸ್ಪದ ವಿಚಾರ. ಆದರೆ, ಈ ಬಾರಿ ಕೆಲವೊಂದು ಭಾವನಾತ್ಮಕ ಉದ್ದೇಶ ಹೊಂದಿರುವ ಕಾನೂನು ತಿದ್ದುಪಡಿ ಅಥವ ಹೊಸ ಕಾನೂನುಗಳ ಅಂಗೀಕಾರ ಮಾತ್ರ ಕಳೆದ ನೂರು ದಿನಗಳಲ್ಲಿ ಕೇಂದ್ರ ಸರಕಾರದ ಬಹುದೊಡ್ಡ ಸಾಧನೆ ಎನ್ನಬೇಕಾಗಿದೆ.
ಎರಡನೇ ಅವಧಿಗೆ ಮೋದಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಬೀದಿ ಬದಿ ದೊಂಬಿ ಗಲಭೆ ನಡೆಸಿ ಮನುಷ್ಯರನ್ನು ಸಾಯಿಸುವ ದುರ್ಘಟನೆಗಳು ಒಮ್ಮಿಂದೊಮ್ಮೆಲೇ ಹೆಚ್ಚಾಯ್ತು. ನಗರ ನಕ್ಸಲರ ಹೆಸರಿನಲ್ಲಿ ನಾಗರಿಕ ಹಕ್ಕುಗಳು ಮತ್ತು ಗಿರಿಜನ ಹಕ್ಕುಗಳ ಹೋರಾಟಗಾರರ ಮೇಲೆ ಕ್ರಿಮಿನಲ್ ದಾವೆಗಳನ್ನು ಹೂಡಿ ಜೈಲಿಗೆ ಹಾಕುವ ಪ್ರಕ್ರಿಯೆ ಹೆಚ್ಚಾಯಿತು. ಸರಕಾರದ ವಿರುದ್ಧ ಟೀಕೆ ಮಾಡುವವರು, ವಾಸ್ತವ ವಿಚಾರಗಳ ಬಗ್ಗೆ ವರದಿ ಮಾಡಲು ಬಾಕಿ ಇರುವ ಕೆಲವೇ ಕೆಲವು ಪತ್ರಕರ್ತರ ಮೇಲೂ ಸುಳ್ಳು ದಾವೆಗಳನ್ನು ಹೂಡಲಾಗುತ್ತಿದೆ. ಇವೆಲ್ಲ ವಿದ್ಯಮಾನಗಳು ತುರ್ತು ಪರಿಸ್ಥಿತಿಯ ದಿನಗಳಿಗಂತಲೂ ಕರಾಳವಾಗಿವೆ ಕಾಣತೊಡಗಿವೆ.

ತರಾತುರಿಯಲ್ಲಿ ಜಾರಿ ಆಗಿರುವ ಕಾನೂನು ಅಥವಾ ತಿದ್ದುಪಡಿಗಳಲ್ಲಿ ಟ್ರಿಪಲ್ ತಲಾಕ್, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತಗೊಳಿಸಿ ಅವರ ಹಕ್ಕುಗಳನ್ನು ಕಸಿದು ಕೊಂಡಿರುವುದು, ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ (ಯುಎಪಿಎ) ಕಾಯಿದೆ, ಭೂಸಾರಿಗೆ ಮೂಲಭೂತ ಸೌಕರ್ಯ ನೆಲಕಚ್ಚಿದ್ದರೂ ವಾಹನ ಚಾಲಕ ಮಾಲಕರಿಗೆ ದುಬಾರಿ ದಂಡ ವಿಧಿಸುವ ಸಾರಿಗೆ ತಿದ್ದುಪಡಿ ಕಾಯಿದೆ ಪ್ರಮುಖವಾಗಿವೆ.

ಆರ್ಥಿಕ ಪರಿಸ್ಥಿತಿ:
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ನೋಟು ಅಮಾನ್ಯ ಮತ್ತು ಸರಕು ಮತ್ತು ಸೇವಾ ತೆರಿಗೆ – ಜಿ ಎಸ್ ಟಿ ಅಂದಾದುಂಧಿಯೊಂದಿಗೆ ಆರಂಭ ಆಗಿತ್ತು. ಕಳೆದ ವರ್ಷದಿಂದಲೇ ನಿರುದ್ಯೋಗ ಸಮಸ್ಯೆ, ಜಿಡಿಪಿ ಕುಸಿತ, ಬಂಡವಾಳ ಹೂಡಿಕೆ ಇಳಿಕೆ ಆರಂಭ ಆಗಿತ್ತು. ಈ ಕಾರಣಕ್ಕಾಗಿಯೇ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಅಂಕಿ ಅಂಶಗಳನ್ನು ಫೋರ್ಜರಿ ಮಾಡಲಾಗಿತ್ತು. ಕೇಂದ್ರ ಸರಕಾರದ ಖಜಾನೆ ಸುಸ್ಥಿರ ಆಗಿರಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲೆಲ್ಲಾ ಮೀಸಲು ನಿಧಿ ಇರಿಸಲಾಗಿತ್ತೋ ಅದರ ಮೇಲೆ ಕೇಂದ್ರ ಸರಕಾರದ ವಕೃದೃಷ್ಟಿ ಬಿದ್ದಿತ್ತು. ಇಂತಹ ಪರಿಸ್ಥಿತಿಯಲ್ಲಿ ನಿರ್ಮಲಾ ಸೀತಾರಾಮನ್ ಎಂಬ ಮಹಿಳೆ ಹಣಕಾಸು ಸಚಿವೆ ಆಗಿದ್ದು ಮಾತ್ರವಲ್ಲದೆ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾದ ಬಜೆಟ್ ಮಂಡಿಸಿದ್ದು, ಇದರ ದುಷ್ಪರಿಣಾಮಗಳನ್ನು ಮುಂದಿನ ಕೆಲವು ವರ್ಷ ದೇಶದ ಬಡಪಾಯಿ ಜನತೆ ಅನುಭವಿಸಬೇಕಾಗಿದೆ.
ಬಜೆಟ್ ಪ್ರಸ್ತಾವಗಳು ಹೂಡಿಕೆದಾರರಿಗೆ ಮತ್ತು ಉದ್ಯಮಿಗಳ ಕಂಗೆಡಿಸಿತ್ತು. ಮೊದಲೇ ಜಿ ಎಸ್ ಟಿ ಯಿಂದ ಕಂಗೆಟ್ಟಿದ್ದ ಉದ್ಯಮಗಳು ನಷ್ಟದಲ್ಲಿದ್ದವು. ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಹೌಸಿಂಗ್ ಕ್ಷೇತ್ರದಲ್ಲಿ ಹಿನ್ನಡೆ ಆಗುವುದರೊಂದಿಗೆ ಮೊದಲಿಗೆ ಮೋಟಾರು ವಾಹನ ಉದ್ಯಮ ಮಾರುಕಟ್ಟೆ ಕಳಕೊಳ್ಳತೊಡಗಿತ್ತು. ಇದಕ್ಕೆ ಇಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ನೀಡದ ಅತಿಯಾದ ಪ್ರೋತ್ಸಾಹ ಕೂಡ ಮತ್ತೊಂದು ಕಾರಣ. ಕಾರು ಮಾರಾಟ ಕಡಿಮೆ ಆಗುತ್ತಿದ್ದಂತೆ ಅದಕ್ಕೆ ಪೂರಕವಾದ ಉದ್ಯಮಗಳು ನೆಲಕಚ್ಚತೊಡಗಿದವು. ಕೈಗಾರಿಕಾ ಪ್ರಾಂಗಣಗಳಲ್ಲಿ ನೀರವ ಮೌನ ಅವರಿಸತೊಡಗಿತು.
ಬಜೆಟಿನ ಕೆಲವು ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ನಂತರ ಕೆಲವು ನಿಯಮಗಳ ಸಡಿಲಿಕೆ ಮಾಡಬೇಕಾಯಿತು. ಸರಕಾರ ಮತ್ತಷ್ಟು ಉದಾರೀಕರಣಕ್ಕೆ ಸಿದ್ಧವಾಗಿದ್ದರೂ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಯಾವ ಸೂಚನೆಗಳು ಕಾಣುತ್ತಿಲ್ಲ.

ಒಂದೆಡೆ ನಿರುದ್ಯೋಗ ಸಮಸ್ಯೆಯಾದರೆ ಇನ್ನೊಂದೆಡೆ ಉದ್ಯೋಗದಲ್ಲಿ ಇದ್ದವರು ಕೆಲಸ ಕಳಕೊಳ್ಳತೊಡಗಿದರು. ಮಕ್ಕಳು ಮತ್ತು ಬಡವರ ಆಹಾರವಾಗಿದ್ದ ಬಿಸ್ಕೆಟ್ ಕ್ಷೇತ್ರ ಕೂಡ ಅತಿಯಾದ ತೆರಿಗೆ ಸ್ಲಾಬ್ ನಿಂದ ತತ್ತರಿಸಿತು. ದೇಶದ ಎಲ್ಲೆಡೆ ಮುಂಬರುವ ವರ್ಷಗಳಲ್ಲಿ ಅತ್ಯಂತ ಕಠಿಣವಾದ ಆರ್ಥಿಕ ಸಂಕಷ್ಟ ಎದುರಾಗುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಇಂತಹದೊಂದು ಆರ್ಥಿಕ ದುಸ್ಥಿತಿಯನ್ನು ನೇರಾ ನೇರ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದು ತನ್ನ ಪಕ್ಷ ಕಾರ್ಯಚಟುವಟಿಕೆಯ ರೀತಿಯಲ್ಲೇ ಆರ್ಥಿಕ ಸಂಕಷ್ಟ ಇಲ್ಲ ಎಂದು ನಂಬಿಸಲು ಮುಂದಾಗಿರುವುದು ಈ ದೇಶದ ದುರ್ವಿಧಿಯೇ ಸರಿ.
ಬ್ಯಾಂಕಿಂಗ್ ಕ್ಷೇತ್ರದ ಸಂಕಷ್ಟ ಕಳೆದ ಮೂರು ತಿಂಗಳಲ್ಲಿ ಇನ್ನಷ್ಟು ಉಲ್ಭಣಗೊಂಡಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಬಹುದೊಡ್ಡ ಪ್ರಮಾಣದ ವಂಚನೆ ಪ್ರಕರಣಗಳು ವರದಿ ಆಗತೊಡಗಿದವು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಲ್ಲವೂ ಸರಿ ಇರಲಿಲ್ಲ. ಕೇಂದ್ರ ಸರಕಾರ ಹಲವು ಸರಕಾರಿ ಬ್ಯಾಂಕುಗಳನ್ನು ವಿಲೀನ ಮಾಡಿ ಬೃಹತ್ ಸಾಲಗಾರರಿಗೆ ಅನುಕೂಲ ಮಾಡುವ ಕೆಲಸ ಮಾಡಿದೆ. ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ಕಿರು ಮತ್ತು ಸಣ್ಣ ಕೈಗಾರಿಕೆಗಳು, ಕೃಷಿ ವಲಯಕ್ಕೆ ಸಾಲ ಕೊಡುವವರು ಯಾರು ಎಂಬುದನ್ನು ಮುಂಬರುವ ದಿನಗಳಲ್ಲಿ ನೋಡಬೇಕಾಗಿದೆ.
ಐದು ವರ್ಷಗಳ ಹಿಂದೆ ಕುಣಿದಾಡುತ್ತಿದ್ದ ಶೇರು ಮಾರುಕಟ್ಟೆ ಮತ್ತದನ್ನು ಅತಿ ರಂಜಿತವಾಗಿ ವರದಿ ಮಾಡುತ್ತಿದ್ದ ಮಾಧ್ಯಮಗಳು ಕಣ್ಮರೆ ಆಗಿವೆ. ಹಲವಾರು ಕೈಗಾರಿಕೆಗಳ ಆಸ್ತಿ ಮೌಲ್ಯ ಅಮೌಲ್ಯವಾಗಿದೆ. ರೂಪಾಯಿ ಮೌಲ್ಯ ಇನ್ನಿಲ್ಲದಂತೆ ಕಳಪೆ ಆಗುತ್ತಲೇ ಸಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಮಿಸುಕಾಡುವ ಪರಿಸ್ಥಿತಿಯಲ್ಲಿ ಇಲ್ಲ. ದುಬಾರಿ ಅಪಾರ್ಟ್ ಮೆಂಟ್ ಆಗಲಿ ಬಜೆಟ್ ಅಪಾರ್ಟ್ ಮೆಂಟ್ ಆಗಲಿ ಯಾವುದರ ಮಾರಾಟದ ಜಾಹಿರಾತು ಮಾಧ್ಯಮಗಳಲ್ಲಿ ಕಾಣುತ್ತಿಲ್ಲ. ಮೋದಿ ಸರಕಾರದ ಮೊದಲ ನೂರು ದಿನಗಳು ಮುಂದಿನ ಐದು ವರ್ಷಗಳ ಕರಾಳ ವರ್ಷದ ಟ್ರೈಲರಿನಂತಿದೆ.