ಬೇಸಿಗೆ ಶುರುವಾಗುತ್ತಿದ್ದಂತೆ ಎಲ್ಲೆಡೆ ನೀರಿಗೆ ಹಾಹಾಕಾರ ಶುರು. ಏಪ್ರಿಲ್ ಮತ್ತು ಮೇ ತಿಂಗಳು ನೀರಿಗೆ ತತ್ವಾರ ಆಗದಂತೆ ನೀರನ್ನು ಕಾಪಾಡಿಕೊಳ್ಳುವುದು ಉತ್ತರ ಕರ್ನಾಟಕದ ಹಲವು ಪ್ರದೇಶಗಳ ದೊಡ್ಡ ಚಿಂತೆ. ಈ ಭಾಗದಲ್ಲಿ ಯಾವಾಗಲೂ ಬಿರು ಬಿಸಿಲು ಹಾಗೂ ಬರ ಕಾಡುತ್ತಲೇ ಇರುತ್ತದೆ. ಇಂತಹ ಸಮಯದಲ್ಲಿ ಲಭ್ಯವಿದ್ದ ನೀರಿನ ಮೂಲಗಳನ್ನು ಉಳಿಸಿಕೊಳ್ಳುವುದು, ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ದೊಡ್ಡ ಸವಾಲು. ಇಂಥ ಸವಾಲುಗಳಲ್ಲಿ ಬೆಣ್ಣೆಹಳ್ಳವೂ ಒಂದು.
ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಂದರೆ ಹಾವೇರಿ, ಧಾರವಾಡ ಮತ್ತು ಗದಗದಲ್ಲಿ ಹರಿದು ಮಲಪ್ರಭೆ ಒಡಲ ಸೇರುವ ಬೆಣ್ಣೆಹಳ್ಳ ಈ ಭಾಗದ ಜೀವಜಲ ಎಂದರೆ ಅತಿಶಯೋಕ್ತಿಯೇನಲ್ಲ. ಒಟ್ಟು 138 ಕಿಮೀಗಳಷ್ಟು ಹರಿಯುವ ಈ ಹಳ್ಳದ ಮಣ್ಣು ಬೆಣ್ಣೆಯಂತೆ ಮೃದುವಾಗಿರುವುದರಿಂದ ಇದಕ್ಕೆ ಬೆಣ್ಣೆಹಳ್ಳ ಎಂಬ ಹೆಸರು. ಈ ಹಳ್ಳ ಈಗ ಸರಾಗವಾಗಿ ಹರಿಯುತ್ತಿಲ್ಲ. ಅದರ ಒಡಲಲ್ಲಿರುವ ಮರಳಿನ ಮೇಲೆ ಅನೇಕರ ಕೆಂಗಣ್ಣು ಬಿದ್ದು, ಅಕ್ರಮ ಮರಳು ಸಾಗಣೆ ಎಲ್ಲೆ ಇಲ್ಲದಂತೆ ನಡೆಯುತ್ತಿದೆ. ಈ ಹಳ್ಳದ ಕೆಲ ಭಾಗಗಳಲ್ಲಿ ಸೇತುವೆ ಚಿಕ್ಕದಾಗಿದ್ದು, ಕೆಲವು ಕಡೆಗೆ ಹಳ್ಳ ಯಾವುದೋ – ಹೊಲ ಯಾವುದೋ ಅನ್ನುವ ಹಾಗಿದೆ. ಪ್ರವಾಹ ಬಂದಾಗ ಹಲವು ಹೊಲಗಳು ಜಲಾವೃತವಾಗಿ ಬೆಳೆಹಾನಿಯಾಗುತ್ತದೆ. ಬರಗಾಲ ಬಂದಾಗ ಈ ಹಳ್ಳ ಸೊರಗಿ ಸಣ್ಣದಾಗಿರುತ್ತದೆ. ಎಲ್ಲ ಕಾಲಗಳಲ್ಲೂ ಈ ಹಳ್ಳದ ನೀರು ರೈತರಿಗೆ ಸಿಗುವಂತಾಗಬೇಕು ಎಂಬುದು ಈ ಭಾಗದ ಜನರ ಹಲವು ವರ್ಷಗಳ ಕನಸು. ಆದರೆ, ಇಂಥ ಬೆಣ್ಣೆಹಳ್ಳ ಈಗ ತೀವ್ರ ಮಾಲಿನ್ಯಕ್ಕೆ ಸಿಲುಕಿದೆ.
ಬೆಣ್ಣೆಹಳ್ಳದ ತೀರದಲ್ಲಿ ಬಾಗಿನ ಸಮರ್ಪಿಸಿದ ಪೂಜಾ ಸಾಮಗ್ರಿಗಳನ್ನು ಹಳ್ಳದಲ್ಲಿ ಎಸೆಯುವುದು ತೀರಾ ಸಾಮಾನ್ಯವಾಗಿದೆ. ಅರಿಷಿಣ, ಕುಂಕುಮ, ಹೂವು, ಕರ್ಪೂರ, ಎಣ್ಣೆ, ಕಡ್ಡಿ ಪೆಟ್ಟಿಗೆ, ಪ್ಲಾಸ್ಟಿಕ್ ಡಬ್ಬ ಇವೆಲ್ಲ ಜಲಜೀವಿಗಳಿಗೆ ಅಪಾಯಕಾರಿ ಎಂಬುದನ್ನು ಮರೆವ ಜನ ಈ ಎಲ್ಲ ವಸ್ತುಗಳನ್ನು ಹಳ್ಳದಲ್ಲಿ ಎಸೆಯುತ್ತಾರೆ. ಜೊತೆಗೆ, ತಾವು ತಂದ ನಾನಾ ಥರದ ಪ್ಲಾಸ್ಟಿಕ್ ಚೀಲಗಳನ್ನೂ ಎಸೆಯುತ್ತಾರೆ. ಈ ಚೀಲಗಳು ಹಳ್ಳದ ಮಧ್ಯೆ ಹಾಗೂ ಅಂಚಿನಲ್ಲಿ ಬೆಳೆದಿರುವ ಗಿಡಗಳಿಗೆ ಸಿಕ್ಕಿಹಾಕಿಕೊಳ್ಳುತ್ತವೆ. ಇತ್ತೀಚೆಗೆ ಇದೇ ಬೆಣ್ಣೆಹಳ್ಳದಲ್ಲಿ ಒಂದು ಹಾವು ಪ್ಲಾಸ್ಟಿಕ್ ಇದ್ದಿದ್ದನ್ನು ಗಮನಿಸದೆ ಅದರಲ್ಲಿ ಸಿಕ್ಕಿಕೊಂಡು ಸತ್ತಿದ್ದು ವಿಷಾದನೀಯ.

ಇನ್ನು, ಅಮವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಸಮೂಹ ಸ್ನಾನಕ್ಕೆ ಭಕ್ತರ ದೊಡ್ಡ ದಂಡೇ ಇರುತ್ತದೆ. ಬೆಣ್ಣೆಹಳ್ಳದಲ್ಲಿ ಸಾವಿರಾರು ಜನರ ಸಮೂಹ ಸ್ನಾನ ಮಾಡುವುದರಿಂದ ಆ ನೀರು ಅವರೆಲ್ಲ ಬಳಸುವ ಸೋಪು ಮತ್ತು ಶ್ಯಾಂಪೂವಿನಿಂದ ಕಲುಷಿತಗೊಳ್ಳುತ್ತಿದೆ.
ಪ್ರತಿದಿನ ಜಾನುವಾರಗಳನ್ನು ಹಳ್ಳದಲ್ಲಿ ಸ್ನಾನ ಮಾಡಿಸುವಾಗ ಅವುಗಳಿಗೆ ಬಳಸುವ ಶ್ಯಾಂಪೂ, ಪ್ರತಿದಿನ ಬಟ್ಟೆಗಳನ್ನು ಹಳ್ಳದ ದಡದಲ್ಲಿ ತೊಳೆಯುವುದು ಹಾಗೂ ಹಳ್ಳದ ಪಕ್ಕದಲ್ಲಿ ಶೌಚ ಮಾಡುವುದು ಇವೆಲ್ಲ ಮಾಮೂಲಾಗಿಬಿಟ್ಟಿದೆ.
ಈ ಕುರಿತು, ರೋಣದ ಜಯಪ್ರಕಾಶ ಬಳಗಾನೂರ ‘ಪ್ರತಿಧ್ವನಿ’ಗೆ ಪ್ರತಿಕ್ರಿಯಿಸಿದ್ದು ಹೀಗೆ: “ನರಗುಂದ ಹಾಗೂ ನವಲಗುಂದ ಭಾಗದಲ್ಲಿ ಮಹಾದಾಯಿ ನೀರಿಗಾಗಿ ನಾವೆಲ್ಲ ಸತತ ಮೂರು ವರ್ಷದಿಂದ ಹೋರಾಡುತ್ತಿದ್ದೇವೆ. ನೀರಿನ ಮೌಲ್ಯ ನಮ್ಮಷ್ಟು ಬೇರೆಯವರಿಗೆ ಅರಿವಾಗಲಿಕ್ಕಿಲ್ಲ. ಇಷ್ಟಿದ್ದರೂ ನಾವು ಅಂದರೆ, ನಮ್ಮ ಉತ್ತರ ಕರ್ನಾಟಕದ ಹಲವು ಹಳ್ಳಿಗರು ಗೊತ್ತಿದ್ದೂ-ಗೊತ್ತಿದ್ದೂ ಲಭ್ಯವಿರುವ ನೀರನ್ನು ಉಳಿಸಿಕೊಳ್ಳದೆ ಇದ್ದರೆ, ಪ್ರತಿವರ್ಷದಂತೆ ನೀರಿನ ಕೊಡ ಹಿಡಿದು ಮೈಲಿಗಟ್ಟಲೆ ನಡೆಯುವ ಪರಿಸ್ಥಿತಿ ಬಂದೇ ಬರುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುವುದು ನಾವೇ ಅಲ್ಲವೇ?”
ಹುಬ್ಬಳ್ಳಿಯ ಖಾಸಗಿ ಸಂಸ್ಥೆಯೊಂದರ ನೌಕರ ಪ್ರದೀಪ್ ಜಮಖಂಡಿ ಹೇಳುತ್ತಾರೆ: “ಕೆಲವು ಉತ್ಸವಗಳು, ಹಬ್ಬ ಹರಿದಿನಗಳು ಹಾಗೂ ಹುಣ್ಣಿಮೆ ದಿನಗಳಂದು ಪವಿತ್ರ ಸ್ನಾನ ಮಾಡುವ ಜನರ ಸಂಖ್ಯೆ ಈ ಭಾಗದಲ್ಲಿ ಹೆಚ್ಚು. ನಮ್ಮ ಧಾರವಾಡ ಜಿಲ್ಲೆಯ ಯಮನೂರು ಎಂಬಲ್ಲಿ ಚಾಂಗ್ ದೇವರ ಉರುಸು ಎಂಬ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಬೆಣ್ಣೆಹಳ್ಳದಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳು ಹಾಗೂ ಶ್ಯಾಂಪೂ ಚೀಟುಗಳನ್ನು ಎಸೆಯುತ್ತಾರೆ. ಇದೇ ನೀರು ಮುಂದಿನ ಹಳ್ಳಿಗಳತ್ತ ಸಾಗುತ್ತದೆ. ಅವರೆಲ್ಲ ಈ ಕಲುಷಿತ ನೀರನ್ನು ಹೇಗೆ ಬಳಸಬೇಕು ಎಂದು ಕಿಂಚಿತ್ತೂ ಯೋಚಿಸದೆ ಈ ರೀತಿ ವರ್ತಿಸುವುದು ಮನಸ್ಸಿಗೆ ಬೇಸರ ಉಂಟುಮಾಡುವ ಸಂಗತಿ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.”
ರಾಜಕೀಯ ಇಚ್ಛಾಶಕ್ತಿಯ ಕೊರತೆ
ಈ ಭಾಗದ ಶಾಸಕರು ಹಾಗೂ ಸಂಸದರು ನೀರಿನ ಬಳಕೆಯ ಬಗ್ಗೆ ಹಾಗೂ ಅದರ ಸಂಗ್ರಹಣೆ ಬಗ್ಗೆ ಇಚ್ಛಾಶಕ್ತಿಯನ್ನು ತೋರುತ್ತಿಲ್ಲ ಎಂದು ಮಹಾದಾಯಿ ಹೋರಾಟಗಾರರಿಂದ ಹಿಡಿದು ನವಲಗುಂದ ಹಾಗೂ ನರಗುಂದದ ಮಹಿಳೆ ಮತ್ತು ಮಕ್ಕಳಿಗೂ ತಿಳಿದಂತಹ ವಿಷಯ. ಮಹಾದಾಯಿ ಹೋರಾಟವೇ ಮೂರು ವರ್ಷಗಳಿಂದ ನಡೆಯುತ್ತಿದ್ದು, ಈಗ 1300 ದಿನಗಳನ್ನು ದಾಟಿ ನಾಲ್ಕನೆಯ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಸ್ವಲ್ಪ ಪ್ರಮಾಣದ ಮಹಾದಾಯಿ ನೀರು ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಒದಗಿಸುವತ್ತ ಗಮನ ಹರಿಸಿಲ್ಲ.

ಯುವಕರು ಸುಮ್ಮನೆ ಕುಳಿತಿಲ್ಲ!
ಸಮಾಜಮುಖಿ ಯುವಕರ ತಂಡ, ನವಲಗುಂದದ ವಿಕಾಸ್ ಸೊಪ್ಪಿನ ಅವರ ನೇತೃತ್ವದಲ್ಲಿ ‘ಬೆಣ್ಣೆಹಳ್ಳ ಉಳಿಸಿ ಅಭಿಯಾನ’ ಆರಂಭಿಸಿದ್ದಾರೆ. ಇವರು ಮೊದಲು ಹೋಗಿದ್ದು ಯಮನೂರಿನ ಚಾಂಗ್ ದೇವ ಉತ್ಸವಕ್ಕೆ. ಚಾಂಗ್ ದೇವ ಉತ್ಸವದಲ್ಲಿ ಎಲ್ಲರೂ ಬೆಣ್ಣೆಹಳ್ಳದಲ್ಲಿ ಸ್ನಾನ ಮಾಡುತ್ತಾರೆ. ಚರ್ಮರೋಗ ಇದ್ದವರು ಈ ಹಳ್ಳದಲ್ಲಿ ಸ್ನಾನ ಮಾಡಿ ಧರಿಸಿದ ಬಟ್ಟೆಯನ್ನು ನೀರಲ್ಲೇ ಬಿಡುವ ವಾಡಿಕೆ ಇದೆ. ಇಲ್ಲಿಯ ಯುವಕರ ತಂಡವು, ಎಲ್ಲ ಭಕ್ತರಿಗೆ ಅವರೆಲ್ಲ ಧರಿಸಿದ ಬಟ್ಟೆಯನ್ನು ದಡದ ಒಂದೆಡೆ ಹೊಂದಿಸಿ ಇಟ್ಟರೆ ನೀರು ಕೊಳೆಯಾಗುದಿಲ್ಲ ಎಂದು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಸ್ವಲ್ಪ ಮಟ್ಟಿಗೆ ಈ ಪ್ರಯತ್ನ ಸಫಲವೂ ಆಗಿದೆ. ಇದು ಒಂದು ಚಿಕ್ಕ ಪ್ರಯತ್ನವಾದರೂ, ಈ ಸಣ್ಣ ಹೆಜ್ಜೆ ಮುಂದೆ ಬೃಹತ್ ದಾಪುಗಾಲು ಆಗಲಿ ಎಂಬುದು ‘ಪ್ರತಿಧ್ವನಿ’ ತಂಡದ ಆಶಯ.
ಇಂತಹ ಪ್ರಯತ್ನಗಳು ಹೆಚ್ಚಿ, ಎಲ್ಲರೂ ಶ್ರಮಿಸಿದರೆ ಬೆಣ್ಣೆಹಳ್ಳವನ್ನು ಕಾಪಾಡಿಕೊಳ್ಳಬಹುದು. ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಹಲವು ಹಳ್ಳಿಗಳು ಹನಿ ನೀರಿಗೂ ತಹತಹಿಸುವುದನ್ನು ತಪ್ಪಿಸಬಹುದು. ನೀರು ಅಮೂಲ್ಯ ಅಂತ ಹೇಳಿದರೆ ಸಾಲದು, ಅದನ್ನು ಉಳಿಸುವ ಕುರಿತೂ ಯೋಚಿಸಬೇಕು ಮತ್ತು ಉಳಿಸುವ ಕೆಲಸವನ್ನೂ ಮಾಡಬೇಕು, ಅಲ್ಲವೇ?