ಜೀವರಕ್ಷಕವಾದ ನೀರಿನ ಅಭಾವದ ಸಂಬಂಧ ದೇಶದ ಅನೇಕ ಭಾಗಗಳಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಉಂಟಾಗಿದೆ. ಈ ಸ್ಥಿತಿ ಮುಂಬರುವ ವರ್ಷಗಳಲ್ಲಿ ಯಾವ ಹಂತ ತಲುಪಬಹುದು ಎಂಬುದು ಊಹೆಗೂ ನಿಲುಕದ ಸಂಗತಿ.
ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿಯೇ ನಡೆಯುತ್ತದೆ ಎಂಬ ಮಾತು ಅತಿಶಯೋಕ್ತಿಯೇನಲ್ಲ. ದೇಶದ ಅನೇಕ ರಾಜ್ಯಗಳ ನಡುವೆ ನದಿ ನೀರಿನ ವಿವಾದಗಳು, ಇವುಗಳನ್ನು ಪರಿಹರಿಸಲು ಟ್ರಿಬ್ಯುನಲ್ ಗಳು, ಈ ಟ್ರಿಬ್ಯುನಲ್ ಗಳು ನೀಡಿದ ತೀರ್ಪುಗಳ ವಿರುದ್ಧ ಸರ್ವೋನ್ನತ ನ್ಯಾಯಾಲಯಗಳ ಮುಂದೆ ದಾಖಲಾದ ಮೇಲ್ಮನವಿಗಳು. ಇದು ಕಳೆದ ನಾಲ್ಕೈದು ದಶಕಗಳಿಂದ ನಡೆದೇ ಇದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈಗ ನದಿಗಳ ಜೋಡಣೆ ಎಂಬ ಕಲ್ಪನೆಗೆ ಈಗ ಒತ್ತು ಕೊಡಲು ಆರಂಭಿಸಿದೆ. ಜಲಶಕ್ತಿ ಹೆಸರಿನಲ್ಲಿಯೇ ಒಂದು ಇಲಾಖೆಯನ್ನು ತೆರೆದು ಒಬ್ಬ ಸಂಪುಟ ದರ್ಜೆಯ ಸಚಿವರನ್ನೂ ನೇಮಕ ಮಾಡಿದೆ.
ನದಿ ನೀರಿನ ಹಂಚಿಕೆಯ ಸಂಬಂಧ ಹೆಚ್ಚು ಸದ್ದು ಮಾಡುತ್ತಿರುವ ರಾಜ್ಯಗಳೆಂದರೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರ ಪ್ರದೇಶ. ಕಾವೇರಿ, ಕೃಷ್ಣೆ ಮತ್ತು ಮಹಾದಾಯಿ ನದಿಗಳ ನೀರಿನ ಹಂಚಿಕೆಯ ವಿಷಯದಲ್ಲಿ ಈ ರಾಜ್ಯಗಳ ಮಧ್ಯೆ ವಿವಾದಗಳಿವೆ. ಕಾವೇರಿ ವಿಷಯದಲ್ಲಿ ನ್ಯಾಯಮಂಡಳಿಯು 2007 ರಲ್ಲಿ ತೀರ್ಪು ನೀಡಿದ್ದು, ಸರ್ವೋನ್ನತ ನ್ಯಾಯಾಲಯವು 2017 ರಲ್ಲಿ ತನ್ನ ಅಂತಿಮ ತೀರ್ಪು ನೀಡಿದೆ. ಈಗ ಕರ್ನಾಟಕದ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ತಮಿಳುನಾಡು ಯತ್ನಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆಗೆ ತನ್ನ ಸಮ್ಮತಿ ನೀಡಿದ್ದು ರಾಜ್ಯ ಸರಕಾರವೂ ಸಹ 9 ಸಾವಿರ ಕೋಟಿ ರೂ.ಗಳ ವಿಸ್ತ್ರತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ.
ಮಹಾದಾಯಿ ನದಿ ನೀರಿನ ಹಂಚಿಕೆಯ ಸಂಬಂಧ ನ್ಯಾ.ಮೂ.ಜೆ.ಎನ್.ಪಾಂಚಾಲ ನೇತೃತ್ವದ ನ್ಯಾಯ ಮಂಡಳಿಯು 2018 ರ ಅಗಸ್ಟ್ 14 ರಂದು ತನ್ನ ತೀರ್ಪು ನೀಡಿದೆ. ಆ ನಂತರ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ.
ಇನ್ನು, ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಮಿನ ಎತ್ತರವನ್ನು ಸದ್ಯದ 519 ಮೀ.ದಿಂದ 524 ಮೀ.ಗೆ ಹೆಚ್ಚಿಸುವ ಮೂಲಕ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಸರ್ವೋನ್ನತ ನ್ಯಾಯಾಲಯವು ಸಮ್ಮತಿಸಿದ್ದು ಇದರ ಅನುಷ್ಠಾನಕ್ಕೆ 50 ಸಾವಿರ ಕೋ .ರೂ. ಗಳ ಅವಶ್ಯಕತೆಯಿದೆ. ಈ ಹಣವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬಹುದೆಂಬುದು ಇನ್ನೂ ಗೊತ್ತಾಗಬೇಕಿದೆ.
ಬದಲಾದ ಸನ್ನಿವೇಶದಲ್ಲಿ ರಾಜ್ಯಗಳು ಕುಡಿಯುವ ನೀರಿಗಾಗಿ ಹೊಡೆದಾಡುವುದು ಸರಿಯೆ? ಕೋರ್ಟುಗಳಲ್ಲಿ ಹತ್ತಿಪ್ಪತ್ತು ವರ್ಷಗಳ ಕಾಲ ಹಣ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳುವಷ್ಟು ರಾಜ್ಯಗಳು ಸಶಕ್ತವಾಗಿವೆಯೆ? ರಾಜ್ಯಗಳು ಕೊಡು ಕೊಳ್ಳುವ ನೀತಿಯನ್ನು ಏಕೆ ಅನುಸರಿಸಬಾರದು? ಇವೆಲ್ಲ ಪ್ರಶ್ನೆಗಳಿಗೆ ಈಗ ದೇಶದ ಕೆಲವು ಕಡೆ ನಿಧಾನವಾಗಿ ಸಕಾರಾತ್ಮಕ ಪ್ರತಿಕ್ರಿಯೆ ದೊರಕಲಾರಂಭಿಸಿದೆ.
ಕೇಂದ್ರ ಸರಕಾರ ದೇಶದ 60 ನದಿಗಳ ಜೋಡಿಸುವ ಕಾರ್ಯಕ್ಕೆ ಕೈಹಾಕಿದೆ. ಈ ದಿಸೆಯತ್ತ ಗುಜರಾತ್ ನ ನರ್ಮದಾ ನದಿಯ ನೀರನ್ನು 68 ಕಿ. ಮೀ. ದೂರದಲ್ಲಿರುವ ಮಧ್ಯ ಪ್ರದೇಶದ ಶಿಪ್ರಾ ನದಿಗೆ ಜೋಡಿಸುವ ಕೆಲಸ 15 ದಿನಗಳ ಹಿಂದೆ ಯಶಸ್ವಿಯಾಯಿತು. 8 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಉದ್ಘಾಟಿಸಲಾಯಿತು. ನೀರಿಲ್ಲದೇ ಬತ್ತಿ ಹೋಗಿದ್ದ ಶಿಪ್ರಾ ನದಿಗೆ ಕೊಳವೆಗಳಿಂದ ನೀರು ಸಾಗಿಸಲಾಗಿದೆ. ಇದು ಗುಜರಾತ್ ಮತ್ತು ಮಧ್ಯಪ್ರದೇಶ ಸರಕಾರದ ಮಧ್ಯೆ ನಡೆದ ಸೌಹಾರ್ಧ ಸಂಬಂಧದ ಪರಿಣಾಮ.
ಇನ್ನು ಆಂಧ್ರಪದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ಜಗನ್ ಮೋಹನ ರೆಡ್ಡಿ ಮತ್ತು ಚಂದ್ರಶೇಖರ ರಾವ್ ಅವರು ನದಿ ತಿರುವು ಯೋಜನೆಯನ್ನು ರೂಪಿಸಲು ಕಳೆದ ಶುಕ್ರವಾರ ಜೂನ್ 28 ರಂದು ನಿರ್ಧಾರ ಕೈಕೊಂಡಿದ್ದಾರೆ.

ಉಭಯ ರಾಜ್ಯಗಳ ನಡುವಣ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ತಮ್ಮ ರಾಜ್ಯಗಳ ರೈತರ, ಸಾಮಾನ್ಯ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಮಹತ್ವದ ಹೆಜ್ಜೆ ಇರಿಸಿರುವ ಉಭಯ ಮುಖ್ಯಮಂತ್ರಿಗಳು, ಗೋದಾವರಿ ನದಿ ನೀರನ್ನು ಶ್ರೀಶೈಲಂ ಯೋಜನೆಗೆ ತಿರುಗಿಸಲು ನಿರ್ಣಯಿಸಿದ್ದಾರೆ. ಈ ಮೂಲಕ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಆಂಧ್ರಪದೇಶದ ರಾಯಲಸೀಮಾ ಜಿಲ್ಲೆಗಳಿಗೆ, ತೆಲಂಗಾಣದ ನಾಲ್ಗೊಂಡಾ, ಮೆಹಬೂಬ ನಗರ ಜಿಲ್ಲೆಗಳ ಜನತೆಯ ನೀರಿನ ದಾಹವನ್ನು ಪರಿಹರಿಸಲು ಉಭಯ ಮುಖ್ಯಮಂತ್ರಿಗಳು ನಿರ್ಧರಿಸಿರುವುದು ಐತಿಹಾಸಿಕ ಹೆಜ್ಜೆಯಾಗಿದ್ದು, ಇತರ ರಾಜ್ಯಗಳಿಗೂ ಒಂದು ಮಾದರಿಯಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಲಭ್ಯತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಸರಕಾರಗಳು ಈ ನಿರ್ಧಾರಕ್ಕೆ ಬಂದಿದ್ದು, ಪ್ರತಿವರ್ಷ ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ಗೋದಾವರಿಯ 3 ಸಾವಿರ ಟಿ ಎಮ್ ಸಿ ನೀರನ್ನು ಬಳಸಿಕೊಳ್ಳಲು ಮುಂದಾಗಿವೆ. ಗೋದಾವರಿ ತಿರುವು ಯೋಜನೆಯ ವಿಸ್ತ್ರತ ಯೋಜನಾ ವರದಿಯನ್ನು 15 ದಿನಗಳಲ್ಲಿ ತಯಾರಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಪ್ರತ್ಯೇಕ ತೆಲಂಗಾಣಕ್ಕಾಗಿ ಮೂರು ದಶಕಗಳ ಕಾಲ ಹೋರಾಟದ ನಾಯಕತ್ವ ವಹಿಸಿ ಯಶಸ್ವಿಯಾದ ಚಂದ್ರಶೇಖರರಾವ್ ಅವರು ಛಲದಂಕಮಲ್ಲ. ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಬಿಗಿಪಟ್ಟು ಅವರಲ್ಲಿದೆ. 80 ಸಾವಿರ ಕೋಟಿ ರೂ.ವೆಚ್ಚದ ಬೃಹತ್ ಕಾಳೇಶ್ವರ ನೀರಾವರಿ ಯೋಜನೆಯನ್ನು ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೆ ಇದರ ಉದ್ಘಾಟನೆಯಾಗಿದೆ. ಈ ಯೋಜನೆಯಿಂದ 45 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೊಳಪಡಲಿದೆ.
ನೆರೆಯ ರಾಜ್ಯಗಳಲ್ಲಿ ಈ ರೀತಿಯ ಆಶಾದಾಯಕ ಬೆಳವಣಿಗೆಗಳು ನಡೆದಿದ್ದರೆ ನಮ್ಮ ಕರ್ನಾಟಕದಲ್ಲಿ ಏನು ನಡೆದಿದೆ? ಇಲ್ಲಿ ನಡೆದಿರುವುದನ್ನು ನೋಡಿದರೆ ಕರ್ನಾಟಕದ ಪ್ರಜ್ಞಾವಂತರು ತಲೆತಗ್ಗಿಸುವ ಸ್ಥಿತಿಯಿದೆ. ಕಳೆದ ಕೆಲವು ತಿಂಗಳುಗಳಿಂದ ನೀರಿಗಾಗಿ ಹಾಹಾಕಾರ ಉಂಟಾದರೂ ನಮ್ಮ ಘನ ಸರಕಾರ ಕೈಕಟ್ಟಿ ಕುಳಿತುಬಿಟ್ಟಿತು. ಪ್ರತಿಪಕ್ಷ ಬಿಜೆಪಿ ಸಹ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಯಿತು. ಬರೀ ಅಧಿಕಾರದ ಕಚ್ಚಾಟದಲ್ಲಿ ಕಾಲಹರಣ ಮಾಡಿದ ಮೈತ್ರಿ ಸರಕಾರದ ಪಕ್ಷಗಳು ಒಂದು ಕಡೆಯಾದರೆ, ಸರಕಾರ ಯಾವಾಗ ಕುಸಿಯುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತ ಪಕ್ಷ ಇನ್ನೊಂದು ಕಡೆ! ಇವುಗಳ ಮಧ್ಯೆ ನೀರು, ನೀರು ಎಂದು ಹೈರಾಣಾದ ಸಾಮಾನ್ಯರು ಮತ್ತೊಂದು ಕಡೆ!
ನೆರೆಯ ರಾಜ್ಯಗಳ ಜೊತೆಗೆ ಉತ್ತಮ ಸಂಬಂಧವನ್ನು ಬೆಸೆಯುವ ಅವಶ್ಯಕತೆ ಕರ್ನಾಟಕಕ್ಕೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ನೀರು ಹಂಚಿಕೆಯ ಸಂಬಂಧದ ವ್ಯಾಜ್ಯಗಳನ್ನು ಕೇವಲ ಕೋರ್ಟುಗಳಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂಬ ಸಂಘರ್ಷ ಮನೋಭಾವ ಹೊಂದಿರುವ ನಾಯಕರ ಅವಶ್ಯಕತೆಯು ನಮಗಿಲ್ಲ. ಅಂದಾಗ ಮಾತ್ರ ಜೀವರಕ್ಷಕವಾದ ನೀರು ನಮಗೂ ಸಿಗುತ್ತದೆ, ನಮ್ಮ ನೆರೆಹೊರೆಯವರಿಗೂ ದೊರೆಯುತ್ತದೆ. ಇಂಥ ಸನ್ನಿವೇಶ ತಂತಾನೆ ಸೃಷ್ಟಿಯಾಗುವುದಿಲ್ಲ, ಅದಕ್ಕೆ ಜನರ ಒತ್ತಡವೂ ಬೇಕಾಗುತ್ತದೆ.