ವಿರಾಟ್ ಕೊಹ್ಲಿಯ ಗುರುಗ್ರಾಮದ ಮನೆ ಮುಂದೆ ಕೆಲಸಗಾರರು ಪೈಪ್ ನಲ್ಲಿ ನೀರು ಬಿಟ್ಟು ಕಾರು ತೊಳೆದು ದಂಡ ಕಟ್ಟುತ್ತಿದ್ದರೆ, ಈ ಕಡೆ ಹೈದ್ರಾಬಾದಿನಲ್ಲಿ5000 ಲೀಟರ್ ನೀರಿಗೆ 3000 ರೂಪಾಯಿ ಕೊಡಲು ಸಿದ್ಧವಿದ್ದರೂ ಟ್ಯಾಂಕರ್ ಸಿಗದೆ ಹಲವರು ಕಂಗಾಲಾಗಿ ಕುಳಿತಿದ್ದಾರೆ.
ಚೆನ್ನೈ ಹಿಂದೆಂದೂ ಕಂಡಿರದ ತೀವ್ರ ನೀರಿನ ಅಭಾವ ಎದುರಿಸುತ್ತಾ, ಒಂದು ಕೊಡ ನೀರಿಗಾಗಿ ಜನ ಹೊಡೆದಾಡುವ ಮಟ್ಟಕ್ಕೆ ಇಳಿದಿದೆ. ಕೇರಳ ಸರ್ಕಾರ ಕುಡಿಯುವ ನೀರು ಕಳಿಸುತ್ತೇನೆಂದರೆ, ತಮಿಳುನಾಡು ಬೇಡ ಅಗತ್ಯವಿಲ್ಲಎನ್ನುತ್ತಿದೆ.
ಅತ್ಯಂತ ತ್ವರಿತಗತಿಯಲ್ಲಿ ಮುಗಿದ, ವಿಶ್ವದ ಅತೀ ದೊಡ್ಡ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಯೊಂದಿಗೆ ತೆಲಂಗಾಣದಲ್ಲಿ ಕಾಲೇಶ್ವರಂ ಯೋಜನೆ ಉದ್ಘಾಟನೆಯಾಗುತ್ತಿದ್ದರೆ, ಮುಂಗಾರು ಮೂರು ವಾರ ಮುಂದೆ ಹೋಗಿ ಸವಾಲು ಹಾಕುತ್ತಿದೆ.
ಇವೆಲ್ಲಕ್ಕೂ ಕಳಶವಿಟ್ಟಂತೆ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ಅಸಹಾಯಕ ಅಪ್ಪನೊಬ್ಬ ಕುಡಿಯುವ ನೀರಿಲ್ಲದೆ ಪಡುತ್ತಿರುವ ಪಾಡನ್ನು ಸಹಿಸಲಾರದೆ ತನಗೆ ಹಾಗು ತನ್ನ ಇಬ್ಬರು ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ಕೋರಿ ಪ್ರಧಾನಿಗೆ ಪತ್ರ ಬರೆದ ಮರುದಿನ, ಹೊಸ ಸಂಸದರು ಸ್ಪರ್ಧೆಗೆ ಬಿದ್ದಂತೆ ಸದನದಲ್ಲಿ ತಮ್ಮ ತಮ್ಮ ದೇವರುಗಳ ಮತ್ತು ತಾವು ದೇವರು ಅಂದುಕೊಂಡ ಮಾನವರ ಹೆಸರು ಕೂಗುತ್ತಾ, ತಮ್ಮ ಬುದ್ಧಿಹೀನತೆಯ ಮಟ್ಟ ಪ್ರದರ್ಶಿಸುತ್ತಿದ್ದರು.
ಭಾರತದ ದೊಡ್ಡ ಸಮಸ್ಯೆಯೇ ಇದು. ಸಮಸ್ಯೆ ಬಗೆಹರಿಸುವತ್ತ ಸೂಕ್ತವಾದ ಯೋಜನೆ ರೂಪಿಸಿ ಕಾರ್ಯಗತಗೊಳಿಸುವುದಿರಲಿ, ಸಮಸ್ಯೆಯನ್ನು ಗುರುತಿಸುವ ಕೆಲಸ ಕೂಡ ನಡೆಯುವುದಿಲ್ಲ. ಕಳೆದ ವರ್ಷವೇ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ನೀತಿ ಆಯೋಗ ವರದಿ ಕೊಟ್ಟಿತ್ತು.
-ದೆಹಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ಸೇರಿದಂತೆ ದೇಶದ 21 ನಗರಗಳು ಮುಂದಿನ ವರ್ಷದೊಳಗೆ (2020ರೊಳಗೆ) ಅಂತರ್ಜಲ ಕಳೆದುಕೊಳ್ಳಲಿವೆ ಮತ್ತು ಇದು 100 ದಶಲಕ್ಷ ಜನರಿಗೆ ಸಮಸ್ಯೆ ಒಡ್ಡಲಿದೆ.
-ಕುಡಿಯುವ ನೀರಿನ ವಿಷಯದಲ್ಲಿ ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಕ್ರಮ ಕೈಗೊಳ್ಳದೇ ಇದ್ದಲ್ಲಿ 2030ರೊಳಗೆ ಶೇಕಡಾ 40 ಭಾರತೀಯರಿಗೆ ಕುಡಿಯುವ ನೀರು ಸಿಗುವುದೇ ಇಲ್ಲ.
-ವಿಶ್ವದ ಶೇಕಡಾ 16 ಜನಸಂಖ್ಯೆ ಹೊಂದಿರುವ ಭಾರತದ ಬಳಿ ಇರುವುದು ವಿಶ್ವದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಶೇಕಡಾ 4ರಷ್ಟು ಮಾತ್ರ.
-ನೀರಿನ ಗುಣಮಟ್ಟ ಸೂಚ್ಯಾಂಕ ಪಟ್ಟಿಯಲ್ಲಿ 122 ರಾಷ್ಚ್ರಗಳ ಪೈಕಿ ಭಾರತ 120ನೇ ಸ್ಥಾನದಲ್ಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಎರಡು ಸ್ಥಾನ ಕೆಳಗಿಳಿದು ಕೊನೆಯದಾಗುವ ಸಾಧ್ಯತೆ ಇಲ್ಲದಿಲ್ಲ.
-ಪ್ರತೀ ವರ್ಷ 2,00,000 ಭಾರತೀಯರು ಸರಿಯಾದ ಕುಡಿಯುವ ನೀರು ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
-ಈಗಾಗಲೇ, 600 ದಶಲಕ್ಷ ಭಾರತೀಯರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಇಷ್ಟೆಲ್ಲಾ ಆತಂಕಕಾರಿ ವಿಷಯವನ್ನು ಆಯೋಗ ತಿಳಿಸಿ ಒಂದು ವರ್ಷವೇ ಆಗಿದೆ. ಅದರ ಪರಿಣಾಮ ಈ ವರ್ಷವೇ ಎಲ್ಲಾ ಕಡೆ ಎದ್ದು ಕಾಣುತ್ತಿದೆ. ನೀರಿನ ಸಮಸ್ಯೆಯನ್ನು ಪ್ರಮುಖ ಮತ್ತು ಗಂಭೀರ ವಿಷಯವಾಗಿ ತೆಗೆದುಕೊಂಡು ಸಂಸತ್ತಿನಲ್ಲಿ ಚರ್ಚಿಸಿ ದಾರಿ ಕಂಡಕೊಳ್ಳಬೇಕಿದ್ದ ಸಂಸದರು ಪ್ರಮಾಣ ವಚನದ ಹೆಸರಲ್ಲಿ ಘೋಷಣೆ ಕೂಗಿ ಬೀಗುತ್ತಿದ್ದಾರೆ.

ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ನೀರಿನ ಬಳಕೆಹಾಗು ದುರ್ಬಳಕೆ ಅತೀ ವೇಗವಾಗಿ ಹೆಚ್ಚಿದೆ. ಮುಚ್ಟಿದ ಕೆರೆಗಳು, ಮಲಿನಗೊಂಡ ನದಿಗಳು, ಬೇಕಾಬಿಟ್ಟಿ ಕೊರೆದ ಬೋರ್ ಗಳು, ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ, ಹೆಚ್ಚುತ್ತಿರುವ ಜನಸಂಖ್ಯೆ ಇವ್ಯಾವುದೂ ನೀರಿನ ಹಿತ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ ಎಂಬುದು ಗೊತ್ತಿದ್ದೂ ಇವುಗಳನ್ನು ತಡೆಯಲು ಸಮರ್ಪಕವಾದ ಯೋಜನೆಗಳನ್ನು ರೂಪಿಸುವತ್ತ ಮಾತ್ರ ಸರ್ಕಾರಗಳು ಹೆಚ್ಚಿನ ಆಸ್ಥೆ ವಹಿಸುತ್ತಿಲ್ಲ. ಪರಿಸರ ಸ್ನೇಹಿ ಕ್ರಮಗಳನ್ನು ಪ್ರೋತ್ಸಾಹಿಸುವ ಅಥವಾ ಕಡ್ಡಾಯಗೊಳಿಸುವ ಬದಲು ದೊಡ್ಡ ಯೋಜನೆಗಳು, ನದಿ ತಿರುವುಗಳತ್ತ ಮುಖ ಮಾಡುತ್ತಿದೆ.
ದೊಡ್ಡ ಆತಂಕದ ವಿಷಯವೆಂದರೆ ನೀರಿನ ಟ್ಯಾಂಕರ್ ಗಳ ಅನಿರ್ಬಂಧಿತ ವ್ಯವಹಾರ. ಭೂಮಿಯ ಒಡಲಿನ ಆಳಕ್ಕೆ ಕನ್ನ ಹಾಕಿ ತೆಗೆದ ನೀರು, ಕೊಳ್ಳುವ ಸಾಮರ್ಥ್ಯವಿರುವ ಜನರ ಮನೆಗಳಿಗೆ, ಆಫೀಸುಗಳಿಗೆ ಪೂರೈಕೆಯಾಗುತ್ತಿದೆ. ದೊಡ್ಡ ಐಷಾರಾಮಿ ಅಪಾರ್ಟಮೆಂಟ್ ಗಳ, ವಿಲ್ಲಾಗಳ, ಅವರ ಸ್ವಿಮ್ಮಿಂಗ್ ಪೂಲ್, ಲಾನ್ ಗಳ ನಿರ್ವಹಣೆಗೆ ಬಳಕೆಯಾಗುತ್ತಿವೆ. ಇವರು ವರ್ಷದ 365 ದಿನಗಳೂ ಟ್ಯಾಂಕರ್ ಬಳಸುವವರು. ಬೇಸಗೆಯಲ್ಲಂತೂ ಈ ಟ್ಯಾಂಕರ್ ಗಳ ಬೆಲೆ ಸಾಮಾನ್ಯರ ಕೈಗೆಟುಕುವಂತೆ ಇರುವುದಿಲ್ಲ. ಅಂದರೆ, ನಿಧಾನವಾಗಿ ನೀರು ಉಳ್ಳವರ ಪಾಲಾಗುತ್ತಿದೆ. ಬಡವರ ಬಾವಿಗಳು, ಬೋರ್ ಗಳು ಬತ್ತಿ ಹೋಗಿವೆ. ಸರ್ಕಾರ ಎರಡು ಬಕೆಟ್ ನೀರು ಕೊಟ್ಟರೆ ಉಂಟು, ಇಲ್ಲವಾದಲ್ಲಿಅದೂ ಇಲ್ಲ. ಅದು ಯಾವುದೇ ಗುಣಮಟ್ಟದ್ದಾಗಿರಲಿ, ಕುಡಿಯುವ ನೀರು ಕೊಳ್ಳುವ ಶಕ್ತಿ ಇಲ್ಲದ ಮಂದಿ ಅದನ್ನೇ ಕುದಿಸಿ, ಆರಿಸಿ ಕುಡಿಯಬೇಕು. 5,000 ಲೀಟರ್ ನೀರಿಗೆ 3000 ರೂಪಾಯಿ ಕೊಡುವ ಪರಿಸ್ಥಿತಿ ಇರುವಾಗ ಜನರ ಆಹಾರದ ಖರ್ಚಿಗಿಂತ ನೀರಿನ ಖರ್ಚೇ ಹೆಚ್ಚಾಗಲಿದೆ.
ಆದರೆ, ಸರ್ಕಾರವನ್ನುದೂರುವ ಮೊದಲು ನೀರಿನ ಮಿತ ಬಳಕೆಯನ್ನು ನಾವು ಕೂಡ ಸರಿಯಾಗಿ ಕಲಿತಿಲ್ಲ ಎಂಬ ಕಹಿ ಸತ್ಯವನ್ನೂ ಒಪ್ಪಿಕೊಳ್ಳಲೇ ಬೇಕು. ಕೋಟ್ಯಾಂತರ ರೂಪಾಯಿ ಸುರಿದು ದೊಡ್ಡ ಮನೆ ಕಟ್ಟುವ ಹಲವರು ಓವರ್ ಹೆಡ್ ಟ್ಯಾಂಕ್ ತುಂಬಿ ನೀರು ಸುರಿಯದಂತೆ ತಡೆಯುವ 2-3 ಸಾವಿರ ಬೆಲೆಯ ನಿಯಂತ್ರಕವನ್ನುಹಾಕುವಲ್ಲಿ ಮಾತ್ರ ಜಿಪುಣತನ ಮಾಡುತ್ತಾರೆ.
-ಶವರ್ ಕೆಳಗೆ ನಿಂತು ಅಳುವುದೋ, ಚಿಂತಿಸುವುದೋ ಅಥವಾ ಹಾಡುವುದೋ ಸಿನಿಮಾಗಳಲ್ಲಿ ಸರಿ ಅಷ್ಟೆ. ಮೈ ಸ್ವಚ್ಛಗೊಳಿಸಲು ಮಾತ್ರ ಸ್ನಾನ ಮಾಡಿ. ಜಲಪಾತದ ಕೆಳಗೆ ನಿಂತಿದ್ದೇವೆಂಬ ಭ್ರಮೆ ಬೇಡ.
-ನಲ್ಲಿಯಲ್ಲಿ ಸುರಿಯುವ ನೀರು ನಿಲ್ಲಿಸಿ ಹಲ್ಲು ಉಜ್ಜಿದರೂ, ಹಲ್ಲುಗಳು ಸ್ವಚ್ಛವಾಗುತ್ತವೆ. ಪ್ರಯತ್ನಿಸಿ ನೋಡಿ.
-ನೀರು ಶುದ್ದೀಕರಣ ಯಂತ್ರಗಳಿಂದ ಹೊರ ಬರುವ ಪರಿತ್ಯಕ್ತ ನೀರನ್ನು ಸಂಗ್ರಹಿಸಿ ಅದನ್ನು ಬೇರೆ ಕೆಲಸಗಳಿಗೆ ನೀವು ಬಳಸುತ್ತಿಲ್ಲವಾದರೆ ಅದು ಮಾನವಕುಲಕ್ಕೆ ಎಸಗುತ್ತಿರುವ ದೊಡ್ಡ ಅಪಚಾರ.
-ತರಕಾರಿ, ಸೊಪ್ಪು ತೊಳೆದ ನೀರನ್ನು ಮೋರಿಗೆ ಬಿಡುವ ಬದಲು ಅದನ್ನು ಸಂಗ್ರಹಿಸಿ ಗಿಡಗಳಿಗೆ ಹಾಕಿ.
-ಮಳೆ ನೀರು ಬಳಕೆ ಅಥವಾ ಮರುಪೂರಣ ಕಡ್ಡಾಯವಾಗಿ ಮಾಡಿ.

ಸಮಸ್ಯೆ ಏನೆಂದರೆ, ಬೇಸಗೆಯಲ್ಲಿ ನೀರಿನ ಅಭಾವದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಚರ್ಚೆ ನಡೆಸುವ ಜನರು ಮಳೆಗಾಲ ಬಂದ ಕೂಡಲೇ ಎಲ್ಲಾ ಮರೆತು ಪೈಪ್ ನಲ್ಲಿ ನೀರು ಹರಿಸಿ ಕಾರು, ಅಂಗಳ ತೊಳೆಯುತ್ತಾರೆ. ಕರೆಂಟ್ ಬಿಲ್ಲಿನ ಬಗ್ಗೆ ಸಾಕಷ್ಟು ಚಿಂತಿಸುವ ನಾವು ನೀರಿನ ಬಿಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಒದಗಿಸುವ ನೀರು, ವಿದ್ಯುತ್ ನಷ್ಟು ದುಬಾರಿಯಲ್ಲದಿರುವುದೇ ಇದಕ್ಕೆ ಕಾರಣವೇ?
ನಾನು ಬೆಳೆದ ಕರಾವಳಿಯ ಊರಿನಲ್ಲಿ ತೋಟಗಳ ಮಧ್ಯೆ ಮನೆಯಿದ್ದ ಹಲವು ಸ್ನೇಹಿತೆಯರಿದ್ದರು. ಸೀಳಿದ ಬಿದಿರಿನ ಕೋಲುಗಳನ್ನು ಸೇರಿಸಿ ಮನೆ ಹಿಂದೆ ಸ್ವಾಭಾವಿಕವಾಗಿ ಹರಿಯುವ ತೊರೆಗೂ ಮತ್ತು ಸ್ನಾನದ ಮನೆಗೂ ಸಂಪರ್ಕ ಕಲ್ಪಿಸಿರುತ್ತಿದ್ದರು. ಸ್ನಾನದ ಮನೆಯ ಗೋಡೆಗೆ ಕೊರೆದ ತೂತಿನಿಂದ ಒಳಬಂದಿರುತ್ತಿದ್ದ ಈ ಬಿದಿರಿನಲ್ಲಿ ಸದಾ ನೀರು ಹರಿಯುತ್ತಲೇ ಇರುತ್ತಿತ್ತು. ನಲ್ಲಿಯಾಗಲಿ, ನೀರು ನಿಲ್ಲಿಸುವ ಕೆಲಸವಾಗಲಿ ಇರಲಿಲ್ಲ. ಅಂತಹ ಕರಾವಳಿಗೂ ಈಗ ನೀರಿನ ಬರ.
ಸುಮಾರು 25 ವರ್ಷಗಳ ಹಿಂದಿನ ಈ ಚಿತ್ರ ನನಗೆ ಈಗ ಕನಸಿನಂತೆ ಅನಿಸುತ್ತದೆ. ನೀರು ಉಳಿಸಿ ಎಂಬ ವಾಕ್ಯ ಮೊದಲ ಬಾರಿಗೆ ಕೇಳಿದಾಗ ನಾನು ನಕ್ಕದ್ದು ಇನ್ನೂ ನೆನಪಿದೆ. ನೀರಿನಂತೆ ಖರ್ಚು ಮಾಡು ಎಂಬ ವಾಕ್ಯದ ಅರ್ಥವನ್ನು ಮಾತ್ರ ಗ್ರಹಿಸಲು ಸಾಧ್ಯವಾಗುವಂತಹ ಪರಿಸರದಲ್ಲಿ ಬೆಳೆದ ನನಗೆ ನೀರಿಲ್ಲದ ಭವಿಷ್ಯ ಮಹಾ ದುರಂತದಂತೆ ಕಾಣುತ್ತಿದೆ. ಮತ್ತು ಆ ದುರಂತ ಹತ್ತಿರದಲ್ಲೇ ಇದೆ ಎಂಬ ಸತ್ಯದ ಅರಿವಿದ್ದೂ ಎಚ್ಚೆತ್ತುಕೊಳ್ಳದಿದ್ದರೆ ಅದು ಆತ್ಮಹತ್ಯೆಗೆ ಸಮಾನ.
ಅಂಕಣಕಾರರು ಹವ್ಯಾಸಿ ಪತ್ರಕರ್ತರು