ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಹಾಗೂ ಚುನಾವಣಾ ಪ್ರಚಾರದ ವೇಳೆ ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿದ್ದ ವಿಷಯಗಳಲ್ಲಿ ನಿರುದ್ಯೋಗವೂ ಒಂದು. ಕೇಂದ್ರದ ಬಿಜೆಪಿ ಸರ್ಕಾರಕ್ಕಂತೂ ದೊಡ್ಡ ತಲೆಬಿಸಿ ತಂದ ಸಂಗತಿ ಇದಾಗಿತ್ತು. ಆದರೆ, ಚುನಾವಣೆ ಮುಗಿಯುತ್ತ ಬಂದಂತೆ ಈ ಕುರಿತ ಚರ್ಚೆ ಹಿನ್ನೆಲೆಗೆ ಸರಿದಿದೆಯಾದರೂ, ಇದೇ ಹೊತ್ತಿಗೆ ಹುಬ್ಬೇರಿಸುವಂತೆ ಮಾಡುವ ಕೆಲವು ಅಂಕಿ-ಅಂಶಗಳು ಬೆಳಕಿಗೆ ಬಂದಿವೆ. ಸ್ವಾರಸ್ಯ ಎಂದರೆ, ಈ ಅಂಕಿ-ಅಂಶಗಳು ದೊರೆತಿರುವುದು ಕೇಂದ್ರ ಸಾಂಖ್ಯಿಕ ಇಲಾಖೆ ನಡೆಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಯಲ್ಲಿ.
ಸೋರಿಕೆಯಾದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಯ ಅಂಕಿ-ಅಂಶಗಳು ಸೇರಿದಂತೆ ಒಟ್ಟು ನಾಲ್ಕು ಸಮೀಕ್ಷೆಗಳಲ್ಲಿ ಸಿಕ್ಕ ವಾಸ್ತವಿಕ ಅಂಕಿ-ಅಂಶಗಳು ಮತ್ತು ಕ್ಷೇತ್ರಕಾರ್ಯದ ಮೂಲಕ ಕಂಡುಕೊಂಡ ಚಿತ್ರಣಗಳನ್ನು ಆಧರಿಸಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಸದ್ಯ ನಿರುದ್ಯೋಗಿಗಳಾಗಿರುವುದು ಯಾರು ಎಂಬ ಸಂಗತಿಯನ್ನು ಎಲ್ಲರ ಮುಂದೆ ಹಿಡಿದಿದೆ.
ವರದಿಯ ಪ್ರಕಾರ, ನಿರುದ್ಯೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು ನಿಜ. ಇದಕ್ಕೆ ಮುಖ್ಯವಾದ ಕಾರಣ, ವಿದ್ಯಾವಂತ ಯುವಜನ. ಶಿಕ್ಷಣ ಪಡೆದ ಯುವಜನ ತಮಗೆ ಇಂಥದ್ದೇ ಉದ್ಯೋಗ ಬೇಕೆಂದು ಹುಡುಕಾಟ ಶುರುಮಾಡುತ್ತಾರೆ. ಹಾಗಾಗಿ ಅನೌಪಚಾರಿಕ ಎನಿಸಿದ ಕ್ಷೇತ್ರಗಳಲ್ಲಿನ ಯಾವುದೇ ಉದ್ಯೋಗಳತ್ತ ಅವರು ತಲೆಹಾಕುವುದಿಲ್ಲ. ಹೀಗೆ ಬಹಳ ಕಾಲ ಹುಡುಕಾಟದಲ್ಲೇ ಕಾಲ ಕಳೆಯುವುದರಿಂದ ನಿರುದ್ಯೋಗಿಗಳಾಗಿ ಗುರುತಿಸಲ್ಪಡುತ್ತಾರೆ. ಹಾಗಾಗಿಯೇ ಒಟ್ಟಾರೆ ನಿರುದ್ಯೋಗ ಪ್ರಮಾಣ ಶೇಕಡ ಮೂರರಷ್ಟು ಇರುವ ಹೊತ್ತಿನಲ್ಲೇ, ಅಕ್ಷರಸ್ಥ ನಿರುದ್ಯೋಗಿಗಳ ಪ್ರಮಾಣ ಶೇಕಡ ಹತ್ತರಷ್ಟು ಇದೆ ಎಂದು ವರದಿ ವಿವರಿಸಿದೆ. ಇಂಥ ಅಕ್ಷರಸ್ಥ ನಿರುದ್ಯೋಗದ ಪ್ರಮಾಣ 2011ರಿಂದೀಚೆಗೆ ಶೇಕಡ 15ರಿಂದ 16ರಷ್ಟು ಏರಿಕೆ ಕಂಡಿದೆ.
ಅಧ್ಯಯನದಲ್ಲಿ ಕಂಡುಬಂದ ಮತ್ತೊಂದು ಗಮನಾರ್ಹ ಅಂಶವೆಂದರೆ, ಒಟ್ಟಾರೆ ನಿರುದ್ಯೋಗ ಮತ್ತು ಅಕ್ಷರಸ್ಥ ನಿರುದ್ಯೋಗಿಗಳ ಪೈಕಿ ಮಹಿಳೆಯರು ವಿಷಾದನೀಯ ಸ್ಥಿತಿಯಲ್ಲಿರುವುದು. ಕೇಂದ್ರ ಸಾಂಖ್ಯಿಕ ಇಲಾಖೆಯ ಸಮೀಕ್ಷೆಯಲ್ಲದೆ ಇತರ ಖಾಸಗಿ ಸಮೀಕ್ಷೆಗಳಲ್ಲೂ ಸಾಬೀತಾಗಿದೆ.
ನಿರುದ್ಯೋಗಿಗಳ ಶೇಡಕವಾರು ಪ್ರಮಾಣ
- ವಿದ್ಯಾವಂತ ನಿರುದ್ಯೋಗಿಗಳು: 12.7%
- ವಿದ್ಯಾವಂತ ನಿರುದ್ಯೋಗಿ ಮಹಿಳೆಯರು: 9.7%
- ವಿದ್ಯಾವಂತ ನಿರುದ್ಯೋಗಿ ಗಂಡಸರು: 34%
- ದುಡಿಯಲು ಸೇರುವ ವಯಸ್ಸಿನವರು (20-24): 65%
ಇನ್ನೇನು ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂದಿರುವವರು ಹಾಗೂ ಕೆಲಸಕ್ಕಾಗಿ ಹುಡುಕಾಟ ನಡೆಸಿರುವವರನ್ನು ಕೂಡ ನಿರುದ್ಯೋಗಿಗಳು ಎಂದೇ ಗುರುತಿಸಿರುವುದರಿಂದ ಈ ಅಧ್ಯಯನ ಗಮನಾರ್ಹ ಎನಿಸಿದೆ. ಏಕೆಂದರೆ, ಇದುವರೆಗಿನ ಬಹುಪಾಲು ಸರ್ಕಾರಿ ಹಾಗೂ ಖಾಸಗಿ ಸಮೀಕ್ಷೆಗಳಲ್ಲಿ ಉದ್ಯೋಗದ ಹುಡುಕಾಟದಲ್ಲಿ ಇರುವವರು ಮತ್ತು ಇನ್ನೇನು ಕೆಲಸಕ್ಕೆ ಸೇರಲಿರುವವರನ್ನು ನಿರುದ್ಯೋಗಿಗಳು ಎಂದು ಪರಿಗಣಿಸುತ್ತಲೇ ಇರಲಿಲ್ಲ. ಹಾಗಾಗಿ, ದೇಶದ ನಿರುದ್ಯೋಗದ ನೈಜ ಪ್ರಮಾಣ ಗೊತ್ತೇ ಆಗುತ್ತಿರಲಿಲ್ಲ.
ಗ್ರಾಮೀಣ ಮತ್ತು ನಗರ ಹಾಗೂ ಪುರುಷರು ಮತ್ತು ಮಹಿಳೆಯರ ನಾಲ್ಕೂ ವಿಭಾಗಗಳಲ್ಲೂ ಹತ್ತನೇ ತರಗತಿಗಿಂತ ಹೆಚ್ಚು ಓದಿಕೊಂಡವರು, ಅದರಲ್ಲೂ ಮುಖ್ಯವಾಗಿ ಪದವಿ ಪಡೆದವರು ನಿರುದ್ಯೋಗದ ಪಟ್ಟಿಯಲ್ಲಿ ಹೆಚ್ಚಿದ್ದಾರೆ. ಇನ್ನು, ಒಟ್ಟಾರೆ ನಿರುದ್ಯೋಗಿಗಳ ಪೈಕಿ, ಇಪ್ಪತ್ತರಿಂದ ಇಪ್ಪತ್ನಾಲ್ಕು ವಯಸ್ಸಿನವರೇ ಹೆಚ್ಚು. ನಗರಗಳತ್ತ ನೋಡಿದರೆ, ಇದೇ ವಯಸ್ಸಿನ ಶೇಕಡ ಅರವತ್ತರಷ್ಟು ಗಂಡುಮಕ್ಕಳು ನಿರುದ್ಯೋಗದ ಹಣೆಪಟ್ಟಿ ಕಟ್ಟಿಕೊಂಡು ಅಲೆಯುತ್ತಿದ್ದಾರೆ. ನಗರದ ಈ ವಯಸ್ಸಿನವರನ್ನು ಬಿಟ್ಟರೆ, ಇಪ್ಪತ್ತೈದರಿಂದ ಮೂವತ್ನಾಲ್ಕು ವರ್ಷ ವಯಸ್ಸಿನ ಮಹಿಳೆಯರಲ್ಲೇ ಅತ್ಯಂತ ಹೆಚ್ಚು ಮಂದಿ ನಿರುದ್ಯೋಗಿಗಳು ಇದ್ದಾರೆ.
ಒಟ್ಟಾರೆ ಹೇಳುವುದಾದರೆ, ಇಂಡಿಯಾದಲ್ಲಿ ಮೂವತ್ತೈದು ವರ್ಷದೊಳಗಿನವರು ಮತ್ತು ಹತ್ತರಿಂದ ಹನ್ನೆರಡನೇ ತರಗತಿಯವರೆಗೆ ಓದಿಕೊಂಡವರ ಪೈಕಿಯೇ ನಿರುದ್ಯೋಗಿಗಳು ಹೆಚ್ಚು. 2011ರಿಂದೀಚೆಗೆ ನಿರುದ್ಯೋಗ ಪ್ರಮಾಣ ವೇಗವಾಗಿ ಏರುತ್ತಿದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ. ಉನ್ನತ ಶಿಕ್ಷಣ ಪಡೆದವರು ಮತ್ತು ಯುವಜನರೇ ಅತಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸ ಸಿಗದೆ ಹುಡುಕಾಟ ನಡೆಸುತ್ತಿರುವವರೊಂದಿಗೆ ಇದ್ದ ಕೆಲಸ ಕಳೆದುಕೊಂಡವರು ಕೂಡ ನಿರುದ್ಯೋಗಿಗಳ ಗುಂಪಿನಲ್ಲಿ ಸೇರಿಕೊಂಡಿದ್ದಾರೆ ಎಂಬುದು ಕಳವಳಕಾರಿ ಸಂಗತಿ.