ಮಾರಣಾಂತಿಕ ನಿಫಾ ವೈರಸ್ ಸೋಂಕಿನ ಭೀತಿ ಕೇರಳ ಗಡಿ ದಾಟಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಆದರೆ, “ಸುಖಾಸುಮ್ಮನೆ ಆತಂಕ ಪಡುವುದರಲ್ಲಿ ಅರ್ಥವಿಲ್ಲ. ಮುಂಜಾಗ್ರತೆ ವಹಿಸಿದರೆ ಸಾಕು,” ಎಂಬುದು ಕರ್ನಾಟಕದ ವೈದ್ಯರುಗಳ, ವೈದ್ಯಾಧಿಕಾರಿಗಳ ಸ್ಪಷ್ಟ ನುಡಿ. ಈ ಮಧ್ಯೆ, ಕೇರಳದ ಕೊಚ್ಚಿಯಿಂದ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಸ್ಯಾಂಪಲ್ಸ್ ಕಳಿಸಲಾಗಿದ್ದ ಆರು ಮಂದಿ ಶಂಕಿತ ಸೋಂಕಿತರಿಗೆ ಯಾವುದೇ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿದೆ. ಹಾಗಾಗಿ, ಕರ್ನಾಟಕದ ಜೊತೆಗೆ ಕೇರಳ ಕೂಡ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ. ಆದರೆ, ಈ ವರ್ಷ ಮತ್ತು ಕಳೆದ ವರ್ಷ ಸೋಂಕು ಪತ್ತೆಯಾದ ಕೇರಳದ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಕಳೆದ ವರ್ಷ ಕೇರಳವನ್ನು ಕಾಡಿದ್ದ ನಿಫಾ ಸೋಂಕು ಇದೇ ಜೂನ್‌ನಲ್ಲಿ ಮತ್ತೆ ಕಾಣಿಸಿಕೊಂಡಿತ್ತು. ಎರ್ನಾಕುಲಂ ಜಿಲ್ಲೆಯ 23 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ತಕ್ಷಣ ಹೈ ಅಲರ್ಟ್ ಘೋಷಿಸಿದ ಕೇರಳ ಸರ್ಕಾರ, ಸೋಂಕು ತಗುಲಿದ ಅವಧಿಯಲ್ಲಿ ವಿದ್ಯಾರ್ಥಿಯು ಭೇಟಿಯಾದ, ಮಾತನಾಡಿಸಿದ 300ಕ್ಕೂ ಹೆಚ್ಚು ಮಂದಿಯನ್ನು ಪತ್ತೆಹಚ್ಚಿ, ಅವರನ್ನು ತಪಾಸಣೆಗೆ ಒಳಪಡಿಸಿತು. ಅದರಲ್ಲಿ ಆರು ಮಂದಿಯನ್ನು ಶಂಕಿತ ಸೋಂಕಿತರೆಂದು ಗುರುತಿಸಿ, ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ನಿಗಾ ವಹಿಸಲಾಗಿತ್ತು. ಸದ್ಯ ಈ ಆರು ಮಂದಿಗೆ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿದೆ. ಆದರೂ, ಆ ಆರು ಜನರನ್ನು ಸಾಮಾನ್ಯ ವಾರ್ಡ್‌ನಲ್ಲೇ ಇರಿಸಿ ಮುಂಜಾಗ್ರತಾ ಚಿಕಿತ್ಸೆ ನೀಡಲಾಗುತ್ತಿದೆ.
ನಿಫಾ ನಿಯಂತ್ರಣಕ್ಕೆ ಕರ್ನಾಟಕದ ಎಂಟು ಜಿಲ್ಲೆಗಳು ಸಜ್ಜು
ಕೇರಳದ ಕೋಜಿಕ್ಕೋಡ್ ಜಿಲ್ಲೆಯಲ್ಲಿ ಈ ಹಿಂದೆ ನಿಫಾ ವೈರಸ್ ಪತ್ತೆಯಾದಾಗ ಮಾಡಿದಂತೆಯೇ ಈ ಬಾರಿಯೂ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳ ಗಡಿಗೆ ಹೊಂದಿಕೊಂಡ ಚಾಮರಾಜನಗರ, ಕೊಡಗು, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳ ಸುತ್ತಮುತ್ತಲ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ನಿಗಾ ವಹಿಸಲಾಗಿದೆ. ಈ ಎಂಟೂ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಈಗಾಗಲೇ ಭೇಟಿಯಾಗಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಎಂಟೂ ಜಿಲ್ಲೆಗಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು, ತಾಲೂಕು ಸರ್ಕಾರಿ ಆಸ್ಪತ್ರೆಗಳು ನಿಫಾ ಸೋಂಕು ನಿಯಂತ್ರಣಕ್ಕೆ ಸಂಪೂರ್ಣ ಸಜ್ಜಾಗಿವೆ.
“ಎಂಟೂ ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಐಸೋಲೇಶನ್ ಸೆಂಟರ್ (ಪ್ರತ್ಯೇಕ ಚಿಕಿತ್ಸಾ ಕೇಂದ್ರ) ಸಜ್ಜುಗೊಳಿಸಲಾಗಿದೆ. ಕೇರಳದ ಜೊತೆ ಗಡಿ ಹಂಚಿಕೊಂಡ ನಾಲ್ಕು ಜಿಲ್ಲೆಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳನ್ನೂ ಗುರುತಿಸಿ ಸಜ್ಜು ಮಾಡಲಾಗಿದೆ. ಈ ಎಲ್ಲ ಆಸ್ಪತ್ರೆಗಳಲ್ಲೂ ಕನಿಷ್ಠ ಒಂದು ಆಕ್ಸಿಜನ್ ವೆಂಟಿಲೇಟರ್ ಅನ್ನು ಹೆಚ್ಚುವರಿಯಾಗಿ ಎತ್ತಿಡಲು ಸೂಚನೆ ನೀಡಲಾಗಿದೆ. ಈ ಕುರಿತು ಸಾಧ್ಯವಾದಷ್ಟೂ ಜಾಗೃತಿ ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ,” ಎಂದಿದ್ದಾರೆ ಆರೋಗ್ಯ ಇಲಾಖೆಯ ಮೈಸೂರು ವಲಯದ ಜಂಟಿ ನಿರ್ದೇಶಕರಾದ ಡಾ.ರಾಮಚಂದ್ರ ಬಾಯರಿ.
ನೀವು ಮಾಡಬೇಕಾದ ಕೆಲಸ ಇದೊಂದೇ
“ಕರ್ನಾಟಕದಲ್ಲಿ ಆತಂಕ ಪಡುವಂಥದ್ದು ಏನೂ ಇಲ್ಲ. ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಸೋಂಕು ಪತ್ತೆಯಾದರೆ ಏನೆಲ್ಲ ಮಾಡಬೇಕು ಎಂಬ ಬಗ್ಗೆಯೂ ಸ್ಪಷ್ಟ ಕ್ರಮ ಜರುಗಿಸಲಾಗಿದೆ. ಹಾಗೆಯೇ, ಜ್ವರಪೀಡಿತರು ಬಂದರೆ, ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡುವಂತೆ ಎಂಟೂ ಜಿಲ್ಲೆಗಳ ಆಯುರ್ವೇದ ವೈದ್ಯರುಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಮಾಡಬೇಕಿರುವುದು ಒಂದೇ ಒಂದು ಸುಲಭ ಕೆಲಸ; ಅದೇನೆಂದರೆ, ಯಾವುದೇ ಬಗೆಯ ಜ್ವರ ಕಾಣಿಸಿಕೊಂಡ 24 ಗಂಟೆಯೊಳಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವುದು. ಇದೊಂದನ್ನು ಎಲ್ಲರೂ ಪಾಲಿಸಿದರೆ ನಮಗೆ ಈ ಸೋಂಕು ಕಂಡುಬಂದಲ್ಲಿ ನಿಯಂತ್ರಿಸುವುದು ಅತ್ಯಂತ ಸುಲಭವಾಗಲಿದೆ,” ಎಂದು ಮನವಿ ಮಾಡುತ್ತಾರೆ ಡಾ.ರಾಮಚಂದ್ರ ಬಾಯರಿ.

ಕರ್ನಾಟಕದ ಮಂದಿ ಆತಂಕಪಡಬೇಕಿಲ್ಲ
“ಕೇರಳದಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಯು ಅಡ್ಡಾಡಿದ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಅವರು ಭೇಟಿಯಾದ ವ್ಯಕ್ತಿಗಳನ್ನೆಲ್ಲ ತಪಾಸಣೆ ನಡೆಸಲಾಗುತ್ತಿದೆ. ಆದರೆ ಸೋಂಕು ಆತನಲ್ಲಿ ಮಾತ್ರವೇ ಕಂಡುಬಂದಿದ್ದು, ಆತ ಭೇಟಿಯಾದ ವ್ಯಕ್ತಿಗಳಲ್ಲಿ ಯಾರಿಗೂ ಕರ್ನಾಟಕದ ಸಂಪರ್ಕ ಆಗಿಲ್ಲ. ಹಾಗಾಗಿ, ಕರ್ನಾಟಕದ ಮಂದಿ ಸುಖಾಸುಮ್ಮನೆ ಭಯಪಡುವ ಅಗತ್ಯವಿಲ್ಲ. ಇನ್ನು, ಆ ರೋಗಿ ಅಡ್ಡಾಡಿದ ಸ್ಥಳಗಳಿಗೆ ಅದೇ ವೇಳೆಯಲ್ಲಿ ಕರ್ನಾಟಕದವರು ಯಾರಾದರೂ ಭೇಟಿ ನೀಡಿದ್ದರೇ ಎಂಬ ಮಾಹಿತಿ ಸಂಗ್ರಹ ನಡೆಯುತ್ತಿದೆ,” ಎಂದಿದ್ದಾರೆ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಸಜ್ಜನ್ ಶೆಟ್ಟಿ.
ಸಹಾಯವಾಣಿ ಆರಂಭಿಸಿದ ಬಿಬಿಎಂಪಿ
ಇನ್ನು, ಕರ್ನಾಟಕದಲ್ಲಿ ನಿಫಾ ಸೋಂಕು ಕುರಿತ ಯಾವುದೇ ಪ್ರಕರಣ ಪತ್ತೆಯಾಗದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಮಾಹಿತಿ ವಿನಿಯಮಕ್ಕೆಂದು ಸಹಾಯವಾಣಿ ಆರಂಭಿಸಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ). ಬಿಬಿಎಂಪಿ ವ್ಯಾಪ್ತಿಯ 85 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 24 ಹೆರಿಗೆ ಆಸ್ಪತ್ರೆಗಳು ಮತ್ತು 6 ರೆಫರಲ್ ಆಸ್ಪತ್ರೆಗಳಲ್ಲಿ ಸಹಾಯವಾಣಿ ಹಾಗೂ ಕಿಯೋಸ್ಕ್‌ಗಳನ್ನು ಆರಂಭಿಸಲಾಗಿದೆ. ನಿಫಾ ಕುರಿತು ಮಾಹಿತಿ ಕೇಳಲು ಅಥವಾ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಸಹಾಯವಾಣಿಯ 080 22660000 / 22221188 ಸಂಖ್ಯೆಗೆ ಕರೆ ಮಾಡಬಹುದು. ಸಹಾಯವಾಣಿ ಜೊತೆಗೆ ಸೋಂಕಿನ ಲಕ್ಷಣಗಳ ಕುರಿತ ಕರಪತ್ರ ಹಂಚಿಕೆ ಮತ್ತು ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೂ ಬಿಬಿಎಂಪಿ ಮುಂದಾಗಿದೆ.
ನಿಫಾ ಬಗ್ಗೆ ನೀವು ಕೇಳಬಹುದಾದ ಹತ್ತು ಪ್ರಶ್ನೆಗೆ ಉತ್ತರ

ಏನಿದು ನಿಫಾ ವೈರಸ್?
ನಿಫಾ ಎಂಬುದು ಝೂನೊಟಿಕ್ ವೈರಸ್. ಅಂದರೆ, ಪ್ರಾಣಗಳಿಂದ ಮನುಷ್ಯರಿಗೆ ಹರಡುವಂಥ ವೈರಸ್. ಸಾಮಾನ್ಯವಾಗಿ ಬಾವಲಿಗಳಿಂದ ಇತರ ಪ್ರಾಣಿಗಳಿಗೆ (ವಿಶೇಷವಾಗಿ ಹಂದಿ, ನಾಯಿ, ಕುದುರೆ ಇತ್ಯಾದಿ) ಹರಡುತ್ತದೆ. ನಂತರ ಆ ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುವ ಜೊತೆಗೆ ಕಲುಷಿತ ಆಹಾರದಿಂದಲೂ ಹರಡುವ ಸಾಧ್ಯತೆ ಇದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಇದಕ್ಕೆ ನಿಫಾ ಹೆಸರು ಬಂದಿದ್ದು ಹೇಗೆ?
ಈ ವೈರಸ್ ಮೊದಲು ಪತ್ತೆಯಾಗಿದ್ದು ಮಲೇಷ್ಯಾದ ಸುಂಗೈ ನಿಫಾ ಎಂಬ ಹೆಸರಿನ ಹಳ್ಳಿಯಲ್ಲಿ, 1998-99ರಲ್ಲಿ. ಹಾಗಾಗಿ ಇದಕ್ಕೆ ಆ ಹೆಸರು.
ಕಳೆದ ವರ್ಷ ಕೇರಳದಲ್ಲಿ ಆಗಿದ್ದೇನು?
ಕೇರಳದಲ್ಲಿ ನಿಫಾ ಮೊದಲು ಕಾಣಿಸಿಕೊಂಡಿದ್ದು ಕಳೆದ ವರ್ಷ. ಮಣಪ್ಪುರಂ ಮತ್ತು ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ಕಂಡುಬಂದ ಈ ಸೋಂಕಿಗೆ ಒಟ್ಟು 17 ಮಂದಿ ಬಲಿಯಾದರು. 18 ಮಂದಿಗೆ ಈ ಸೋಂಕಿನ ಬೇರೆ-ಬೇರೆ ಪರಿಣಾಮಗಳಾದವು.
ಮನುಷ್ಯರಿಗೆ ಈ ಸೋಂಕು ಹೇಗೆ ತಗುಲುತ್ತದೆ?
ಸೋಂಕಿತ ಬಾವಲಿಗಳು ಇರುವ ಮರಗಳನ್ನು ಹತ್ತುವುದು, ಬಾವಲಿಗಳು ಕಚ್ಚಿದ ಹಣ್ಣುಗಳನ್ನು ತಿನ್ನುವುದು ಅಥವಾ ಸಾಗಿಸುವುದರಿಂದ ವೈರಸ್ ಹರಡುತ್ತದೆ. ಮುಂದುವರಿದು, ಸೋಂಕು ತಗುಲಿದ ವ್ಯಕ್ತಿ ಇರುವ ಮನೆ ಮತ್ತು ಆಸ್ಪತ್ರೆಯಲ್ಲಿ ಕೂಡ ವೈರಸ್ ಹರಡುತ್ತದೆ. ಸೋಂಕಿನಿಂದ ಮೃತಪಟ್ಟ ದೇಹದಿಂದಲೂ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆಯ ಸೂಚನೆ ಮೇರೆಗೆ ಅಂಥ ಮೃತದೇಹವನ್ನು ಸರ್ಕಾರದ ಸೂಚನೆಯಂತೆಯೇ ಸಂಸ್ಕಾರ ಮಾಡಬೇಕೆಂಬ ಆದೇಶವಿದೆ.
ನಿಫಾ ಸೋಂಕಿನ ಲಕ್ಷಣಗಳೇನು?
ಜ್ವರ, ಕಫ, ಉಸಿರಾಟದ ತೊಂದರೆ, ತಲೆನೋವು, ಮೈ-ಕೈ ನೋವು, ವಾಂತಿ, ಗಂಟಲು ಬೇನೆ ಇತ್ಯಾದಿ. ಇಂಥ ಯಾವುದೇ ಲಕ್ಷಣ ಇದ್ದರೆ ಮೊದಲು ಮಾಡಬೇಕಾದ ಕೆಲಸವೆಂದರೆ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು. ಆದರೆ, ಈ ಲಕ್ಷಣಗಳು ಇದ್ದ ಮಾತ್ರಕ್ಕೆ ನಿಫಾ ಆಗಬೇಕೆಂದಿಲ್ಲ. ಆದರೂ ಮುಂಜಾಗ್ರತೆ ಅತ್ಯವಶ್ಯ.
ನಿಫಾ ಸೋಂಕಿನಿಂದ ಬಚಾವಾಗಲು ಏನು ಮಾಡಬೇಕು?
ನಿಫಾ ಸೋಂಕಿತ ಸ್ಥಳವೆಂದು ಗುರುತಿಸಲಾದ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಈಚಲು ಮರಗಳಿಂದ ತಯಾರಿಸಲಾದ ಉತ್ಪನ್ನಗಳ ಬಳಕೆಯನ್ನು ಎಚ್ಚರದಿಂದ ಮಾಡಬೇಕು. ಬಾವಲಿಗಳು ಇವೆ ಎಂದು ಗೊತ್ತಾದ ಮರಗಳ ಬಳಿ ಹೋಗುವುದು ಮತ್ತು ಅದರ ಹಣ್ಣುಗಳನ್ನು ಹೊತ್ತೊಯ್ಯುವುದು ಅಥವಾ ತಿನ್ನುವುದನ್ನು ಬಿಡಬೇಕು. ಯಾವುದೇ ಹಣ್ಣುಗಳನ್ನು ತಿನ್ನುವ ಮೊದಲು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣುಗಳನ್ನು ತಿನ್ನದಿರುವುದು ಕ್ಷೇಮ.
ನಿಫಾ ಸೋಂಕಿಗೆ ಚಿಕಿತ್ಸೆ ಇದೆಯೇ?
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಇದುವರೆಗೂ ಯಾವುದೇ ನಿರ್ದಿಷ್ಟ ಔಷಧಿ ಕಂಡುಹಿಡಿಯಲಾಗಿಲ್ಲ. ರೋಗದ ತೀವ್ರತೆ ಪರಿಗಣಿಸಿ ಇದಕ್ಕೆ ಮದ್ದು ಕಂಡುಹಿಡಿಯುವ ಸಂಶೋಧನೆಗೆ ವೇಗ ನೀಡಲಾಗಿದೆಯಷ್ಟೆ. ಸೋಂಕಿತ ವ್ಯಕ್ತಿಯಿಂದ ಇತರರಿಗೆ ಹರಡದಂತೆ ಮುಂಜಾಗ್ರತೆ ವಹಿಸುವ ನಿಯಂತ್ರಣ ಕ್ರಮಗಳು ಮಾತ್ರವೇ ಸದ್ಯ ಚಾಲ್ತಿಯಲ್ಲಿವೆ.
ನಿಫಾ ಮೊದಲಿಗೆ ಕಾಣಿಸಿಕೊಂಡಲ್ಲಿ ಆಗಿದ್ದೇನು?
1998-99ರಲ್ಲಿ ಮಲೇಷ್ಯಾದ ಸುಂಗೈ ನಿಫಾ ಎಂಬ ಹಳ್ಳಿಯಲ್ಲಿ ಕಂಡುಬಂದದ್ದು ಈ ವೈರಸ್. ಇದು ಕಂಡುಬಂದದ್ದು ಅಲ್ಲಿನ ಹಂದಿಗಳಲ್ಲಿ. ಸುಮಾರು ಮುನ್ನೂರು ಜನರಿಗೆ ಸೋಂಕು ತಗುಲಿ, ಒಂದು ವರ್ಷದ ಅವಧಿಯಲ್ಲಿ ನೂರು ಮಂದಿ ಮೃತಪಟ್ಟರು. ಆದರೆ, ಇಲ್ಲಿಯವರೆಗೆ ಆ ಪ್ರದೇಶದಲ್ಲಿ ಮತ್ತೆ ಈ ವೈರಸ್ ಕಾಣಿಸಿಕೊಂಡಿಲ್ಲ.
ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ, ಹೇಗೆ?
ನಿಫಾ ಸೋಂಕು ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು 2001ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ. ಆಗ ಸೋಂಕು ಪತ್ತೆಯಾದ 66 ಮಂದಿಯಲ್ಲಿ 45 ಜನ ಸಾವನ್ನಪ್ಪಿದರು. ನಂತರ 2007ರಲ್ಲಿ ಅದೇ ಪ.ಬಂಗಾಳದ ನಡಿಯಾ ಎಂಬಲ್ಲಿ ಕಾಣಿಸಿಕೊಂಡಿತಾದರೂ ಸಾವು ಸಂಭವಿಸಲಿಲ್ಲ. ನಂತರ ಪತ್ತೆಯಾಗಿದ್ದು ಕಳೆದ ವರ್ಷ ಕೇರಳದಲ್ಲಿ. ಆದರೆ, ಇತರ ದೇಶಗಳಂತೆ ಭಾರತದಲ್ಲಿ ಹಂದಿಗಳ ಮೂಲಕ ಸೋಂಕು ಪ್ರಸಾರ ಆಗಲಿಲ್ಲ ಎಂಬುದು ಗಮನಾರ್ಹ. ಇಲ್ಲಿ ಕಲುಷಿತ ಆಹಾರದ ಮೂಲಕ ವೈರಸ್ ಪ್ರಸಾರವಾಗಿತ್ತು; ಅಂದರೆ, ಸೋಂಕಿತ ಬಾವಲಿಗಳ ಮಲ-ಮೂತ್ರ ತಾಕಿದ ಹಣ್ಣು-ತರಕಾರಿ ಇತ್ಯಾದಿಗಳ ಮೂಲಕ.
ನಿಫಾ ಎಲ್ಲೆಲ್ಲಿ ಕಾಣಿಸಿಕೊಂಡಿದೆ?
ಇದುವರೆಗೂ ನಿಫಾ ಕಾಣಿಸಿಕೊಂಡಿರುವುದು ಮಲೇಷ್ಯಾ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಭಾರತದಲ್ಲಿ (ಪ.ಬಂಗಾಳ ಮತ್ತು ಕೇರಳ) ಮಾತ್ರ. ಹಾಗಂತ ಬೇರೆ ದೇಶಗಳಿಗೆ ಹರಡುವ ಸಾಧ್ಯತೆ ಇಲ್ಲ ಎಂದಲ್ಲ. ಆದರೆ ಬಾವಲಿಗಳು ಹೆಚ್ಚಿರುವ ಕಡೆ ಈ ವೈರಸ್ ಇರುವ ಸಾಧ್ಯತೆ ಹೆಚ್ಚಿದ್ದು, ಸೋಂಕಿನ ಸಾಧ್ಯತೆಯೂ ಅಧಿಕ ಮಟ್ಟದಲ್ಲಿರುತ್ತದೆ. ಹಾಗಾಗಿ ಹಣ್ಣುಗಳನ್ನು ತಿನ್ನುವಾಗ ಎಚ್ಚರ ವಹಿಸುವುದು ಅತ್ಯಗತ್ಯ.