ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಎಂದಾಗ ತಕ್ಷಣ ನೆನಪಿಗೆ ಬರುವುದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಅವರ ಕುಟುಂಬ. ಈ ಹಿಂದೆ ತಂದೆ ಮಕ್ಕಳಿಗೆ ಸೀಮಿತವಾಗಿದ್ದ ಈ ರಾಜಕಾರಣ ಇದೀಗ ಮೊಮ್ಮಕ್ಕಳವರೆಗೂ ವಿಸ್ತರಿಸಿದೆ. ಜತೆಗೆ ದೇವೇಗೌಡರ ಸೊಸೆಯೂ ಶಾಸಕಿ. ಹಾಗೆಂದು ಈ ಕುಟುಂಬದ ಯಾರೊಬ್ಬರೂ ಹಿಂಬಾಗಿಲ ರಾಜಕಾರಣದ ಮೂಲಕ ಬಂದವರಲ್ಲ. ಜನರ ಮಧ್ಯೆ ಗೆದ್ದು ಬಂದಿದ್ದಾರೆ. ಅಷ್ಟೇ ಅಲ್ಲ, ಈ ಕುಟುಂಬದ ರಾಜಕಾರಣ ನಡೆಯದೇ ಇದ್ದರೆ ಜೆಡಿಎಸ್ ಪಕ್ಷಕ್ಕೆ ಭವಿಷ್ಯವೂ ಕಮ್ಮಿ.
ಹೀಗಿರುವ ಜೆಡಿಎಸ್ ನಲ್ಲಿ ಮತ್ತೆ ಕುಟುಂಬಕ್ಕಾಗಿ ತ್ಯಾಗದ ರಾಜಕಾರಣ ಮಾಡುವ, ಮಕ್ಕಳನ್ನು ಗೆಲ್ಲಿಸಿಕೊಳ್ಳುವ ರಾಜಕೀಯದ ಮಾತು ಜೋರಾಗುತ್ತಿದೆ. ಪ್ರಸ್ತುತ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಅವರು ರಾಜ್ಯ ವಿಧಾನಸಭೆ ಸದಸ್ಯರು. ಇನ್ನು ದೇವೇಗೌಡ, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಮೂವರೂ ಗೆದ್ದಿದ್ದರೆ ವಿಧಾನಸಭೆಯಂತೆ ಲೋಕಸಭೆಯಲ್ಲೂ ಕುಟುಂಬದ ಮೂವರು ಇರುವಂತಾಗುತ್ತಿತ್ತು. ಆದರೆ, ಕುಟುಂಬದ ದುರಾದೃಷ್ಟ. ದೇವೇಗೌಡ ಮತ್ತು ನಿಖಿಲ್ ಸೋತು, ಪ್ರಜ್ವಲ್ ಮಾತ್ರ ಗೆಲ್ಲುವಂತಾಗಿತ್ತು. ಆದರೆ, ಈ ಗೆಲುವನ್ನು ಸಂಭ್ರಮಿಸದ ಪ್ರಜ್ವಲ್ ತಾವು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಹಾಸನ ಕ್ಷೇತ್ರದಲ್ಲಿ ಮತ್ತೆ ತಾತನನ್ನು (ದೇವೇಗೌಡ) ಗೆಲ್ಲಿಸುವುದಾಗಿ ಹೇಳಿದ್ದರು. ಆದರೆ, ಹೇಳಿಕೆ ಅಷ್ಟಕ್ಕೇ ನಿಂತಿತ್ತು.
ಇದೀಗ 17 ಶಾಸಕರು ರಾಜಿನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದ ಬಳಿಕ ಮತ್ತೆ ಕುಟುಂಬಕ್ಕಾಗಿ ತ್ಯಾಗದ ಮಾತುಗಳು ಕೇಳಿಬರಲಾರಂಭಿಸಿವೆ. ರಾಜಿನಾಮೆ ನೀಡಿದ 17 ಶಾಸಕರ ಪೈಕಿ ಜೆಡಿಎಸ್ ನ ಮೂವರು ಇದ್ದಾರೆ (ಹುಣಸೂರು- ಎಚ್. ವಿಶ್ವನಾಥ್, ಕೆ. ಆರ್. ಪೇಟೆ- ಕೆ. ಸಿ. ನಾರಾಯಣ ಗೌಡ, ಮಹಾಲಕ್ಷ್ಮಿ ಲೇಔಟ್- ಕೆ. ಗೋಪಾಲಯ್ಯ). ಮೂವರೂ ಶಾಸಕರು ಅನರ್ಹಗೊಂಡಿದ್ದು, ಮೂರೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಈ ಮೂರು ಕ್ಷೇತ್ರಗಳನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಆ ಪೈಕಿ ಹುಣಸೂರು ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಮತ್ತು ಕೆ. ಆರ್. ಪೇಟೆ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬರುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರಿನಿಂದ ಕಣಕ್ಕಿಳಿಸಿ ಗೆಲ್ಲಿಸಿದರೆ ಆಗ ಹಾಸನ ಲೋಕಸಭಾ ಕ್ಷೇತ್ರ ಖಾಲಿಯಾಗುತ್ತದೆ. ಅಲ್ಲಿಂದ ದೇವೇಗೌಡರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬಹುದು ಎಂಬುದು ಪಕ್ಷದ ಒಂದು ವಲಯದಲ್ಲಿ ನಡೆಯುತ್ತಿರುವ ಲೆಕ್ಕಾಚಾರ.
ಕುಮಾರಸ್ವಾಮಿ, ರೇವಣ್ಣ ಇಬ್ಬರಿಗೂ ಇಷ್ಟವಿಲ್ಲ:
ದೇವೇಗೌಡರ ಆಪ್ತ ವಲಯದಲ್ಲಿ ನಡೆಯುತ್ತಿರುವ ಈ ಲೆಕ್ಕಾಚಾರ ಕುಮಾರಸ್ವಾಮಿ ಮತ್ತು ರೇವಣ್ಣ ಅವರಿಬ್ಬರಿಗೂ ಇಷ್ಟವಿಲ್ಲ. ದೇವೇಗೌಡರಿಗೂ ಪೂರ್ಣ ಸಮ್ಮತವಿಲ್ಲ. ಇದರಲ್ಲಿ ಕುಮಾರಸ್ವಾಮಿ ಅವರದ್ದು ರಾಜಕೀಯದ ಲೆಕ್ಕಾಚಾರವಾದರೆ, ರೇವಣ್ಣ ಅವರದ್ದು ಸಂಖ್ಯಾಶಾಸ್ತ್ರದ ಲೆಕ್ಕ. ದೇವೇಗೌಡರದ್ದು ಪಕ್ಷದ ಭವಿಷ್ಯದ ಲೆಕ್ಕ.
ರೇವಣ್ಣ ಲೆಕ್ಕಾಚಾರ:
9 ಸಂಖ್ಯೆ ದೇವೇಗೌಡರ ಕುಟುಂಬಕ್ಕೆ ಆಗಿ ಬರುವುದಿಲ್ಲ ಎಂಬ ಮಾತು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಚರ್ಚೆಯ ವಿಚಾರ. 1999, 2009ರ ಚುನಾವಣೆಗಳಲ್ಲಿ ದೇವೇಗೌಡರ ಕುಟುಂಬ ಸೋತಿತ್ತು. 2019ರ ಚುನಾವಣೆಯಲ್ಲೂ ಸೋಲುತ್ತದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಎ. ಮಂಜು ಹೇಳಿದ್ದರು. ಇದು ಅರ್ಧ ಸತ್ಯವಾಗಿ ಇಬ್ಬರು ಸೋತು ಮಂಜು ವಿರುದ್ಧವೇ ಪ್ರಜ್ವಲ್ ರೇವಣ್ಣ ಗೆದ್ದಿದ್ದರು. ಇದೀಗ ಉಪ ಚುನಾವಣೆ 2019ರಲ್ಲೇ ಬರುತ್ತಿರುವ ಕಾರಣ ಹುಣಸೂರು ಕ್ಷೇತ್ರದಿಂದ ಪ್ರಜ್ವಲ್ ನನ್ನು ಕಣಕ್ಕಿಳಿಸಲು ರೇವಣ್ಣ ಹಿಂದೇಟು ಹಾಕುತ್ತಿದ್ದಾರೆ. 9ರ ಸಂಖ್ಯೆ ಕುಟುಂಬಕ್ಕೆ ರಾಜಕೀಯವಾಗಿ ಆಗಿ ಬಾರದೇ ಇದ್ದರೂ ಅದೃಷ್ಟ ಪ್ರಜ್ವಲ್ ಒಬ್ಬರ ಕೈ ಹಿಡಿದಿತ್ತು. ಈಗ ಆ ಅದೃಷ್ಟವನ್ನೂ ಒದ್ದು ಹುಣಸೂರಿಗೆ ಬಂದರೆ ಪುತ್ರ ಸೋಲಬೇಕಾಗುತ್ತದೆಯೇನೋ ಎಂಬ ಆತಂಕ ರೇವಣ್ಣ ಅವರನ್ನು ಕಾಡುತ್ತಿದೆ. ಹೀಗಾಗಿ ತಾತನಿಗಾಗಿ ಹಾಸನ ತ್ಯಾಗ ಮಾಡಿ ಹುಣಸೂರಿಗೆ ಬರಲು ಪ್ರಜ್ವಲ್ ಸಿದ್ಧವಿದ್ದರೂ ರೇವಣ್ಣ ಮಾತ್ರ ಒಪ್ಪುತ್ತಿಲ್ಲ.

ಕುಮಾರಸ್ವಾಮಿ ಯೋಚನೆ:
ಇನ್ನು ಕೆ. ಆರ್. ಪೇಟೆ ಕ್ಷೇತ್ರದಿಂದ ಪುತ್ರ ನಿಖಿಲ್ ನನ್ನು ಕಣಕ್ಕಿಳಿಸುವುದು ಕುಮಾರಸ್ವಾಮಿ ಅವರಿಗೂ ಬೇಡ. ಮಂಡ್ಯ ಲೋಕಸಭೆ ಕ್ಷೇತ್ರದ ಮೂಲಕ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಲು ಮುಂದಾಗಿದ್ದ ನಿಖಿಲ್ ಕುಮಾರಸ್ವಾಮಿಗೆ ಪ್ರಥಮ ಚುಂಬನ ದಂತ ಭಗ್ನ ಎಂಬಂತೆ ಮೊದಲ ಪ್ರಯತ್ನದಲ್ಲಿ ಸೋಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ನಾರಾಯಣಗೌಡ ಈ ಕ್ಷೇತ್ರದಿಂದ ಸುಲಭವಾಗಿ ಗೆದ್ದು ಬಂದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇದ್ದಾಗ್ಯೂ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗಿಂತ ಹೆಚ್ಚು ಮತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಂದಿತ್ತು. ಇದೀಗ ನಾರಾಯಣ ಗೌಡ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೂ ಜೆಡಿಎಸ್ ಸೋಲಿಸಲು ಕೈಜೋಡಿಸುತ್ತಾರೆ.
ಇನ್ನೊಂದೆಡೆ, ಕಾಂಗ್ರೆಸ್ ಜತೆಗಿನ ಮೈತ್ರಿಯೂ ಇಲ್ಲ. ಅಲ್ಲದೆ, ಕ್ಷೇತ್ರದ ಮಾಜಿ ಶಾಸಕ ಕೆ. ಆರ್. ಪೇಟೆ ಕೃಷ್ಣ ಕೂಡ ಪಕ್ಷದಿಂದ ದೂರವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಖಿಲ್ ನನ್ನು ಹರಕೆಯ ಕುರಿಯಾಗಿಸುವುದು ಬೇಡ. ಮೊದಲ ಯತ್ನದಲ್ಲಿ ಸೋತ ನಿಖಿಲ್ ಎರಡನೇ ಪ್ರಯತ್ನದಲ್ಲೂ ವಿಫಲವಾದರೆ ಆತನ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಬೀಳುತ್ತದೆ. ಇನ್ನೊಂದೆಡೆ ಸೋತರೂ, ಗೆದ್ದರೂ ತಾತನಿಗಾಗಿ ತ್ಯಾಗ ಮಾಡಿದ ರೇವಣ್ಣ ಪುತ್ರ ಪ್ರಜ್ವಲ್ ರಾಜಕೀಯದಲ್ಲಿ ಬೆಳೆಯುತ್ತಾನೆ. ಹೀಗಾಗಿ ಕೆ. ಆರ್. ಪೇಟೆಯಿಂದ ನಿಖಿಲ್ ಕಣಕ್ಕಿಳಿಯುವುದು ಬೇಡ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೂ ನಿಖಿಲ್ ಕೆ. ಆರ್. ಪೇಟೆಯಿಂದ ಕಣಕ್ಕಿಳಿಯುವುದು ಸುತಾರಾಂ ಇಷ್ಟವಿಲ್ಲ.
ಮತ್ತೊಂದೆಡೆ, ದೇವೇಗೌಡರಿಗೂ ಇದು ಪೂರ್ಣ ಸಮ್ಮತವಿಲ್ಲ. ತಾವಂತೂ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿಯಾಗಿದೆ. ಈಗಾಗಲೇ ಇಬ್ಬರು ಪುತ್ರರು, ಒಬ್ಬ ಸೊಸೆ ವಿಧಾನಸಭೆಯಲ್ಲಿದ್ದಾರೆ. ಮತ್ತಿಬ್ಬರು ಮೊಮ್ಮಕ್ಕಳು ಕೂಡ ಹೋದರೆ ವಿಧಾನಸಭೆಯಲ್ಲಿ ದೇವೇಗೌಡರ ಕುಟುಂಬದ್ದೇ ಪಾರುಪತ್ಯ ಎಂಬಂತಾಗುತ್ತದೆ. ಭವಿಷ್ಯದಲ್ಲಿ ಪಕ್ಷಕ್ಕೆ ಇದು ಮಾರಕವಾಗಬಹುದು ಎಂಬುದು ದೇವೇಗೌಡರ ಅಭಿಪ್ರಾಯ. ಆದರೂ ಗೌಡರ ಮನವೊಲಿಸಲು ಅವರ ಆಪ್ತ ವಲಯದವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಮುಂದೇನಾಗುವುದೋ ಎಂಬುದು ದೇವೇಗೌಡ ಮತ್ತು ಅವರ ಕುಟುಂಬದವರೇ ಹೇಳಬೇಕು.