ಈ ವಾರವಷ್ಟೇ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ವಲಯ ನೀಡುತ್ತಿರುವ ಧಾರಾಳ ದೇಣಿಗೆಯ ವರದಿಯನ್ನು ಅಸೋಷಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms – ADR) ಪ್ರಕಟಿಸಿತ್ತು. ಇದೀಗ ಕಾರ್ಪೊರೇಟ್ ವಲಯ (ಸರ್ಕಾರ ಸ್ವಾಮ್ಯ ಹಾಗೂ ಖಾಸಗಿ) ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (Corporate Social Responsibility – CSR) ವ್ಯಯಿಸಿರುವ ಒಟ್ಟು ಮೊತ್ತದ ವಿವರ ಲಭ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ (2014-15 ರಿಂದ 2017-18 ರವರೆಗೆ) ಒಟ್ಟು ರೂ 47,199 ಕೋಟಿ ಹಣ ಬಳಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಜೊತೆಗೆ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದ ಸಂಬಂಧ ಅನುಮಾನವೂ ಹೆಚ್ಚಿದೆ. ಇದಕ್ಕೆ ಪೂರಕ ಎಂಬಂತೆ 366 ಕಾರ್ಯಕ್ರಮಗಳ ಬಗ್ಗೆ ಮೇಲ್ನೋಟದ ತನಿಖೆ ಬಳಿಕ ಅಭಿಯೋಜನಾ ಮಂಜೂರಾತಿ ನೀಡಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.
Also Read: ಕಳೆದ 2 ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ವ್ಯಾಪಾರಿಗಳ ದೇಣಿಗೆ 985 ಕೋಟಿ!
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಅನುಷ್ಟಾನಗೊಳಿಸಿದ ಮೊದಲ ದೇಶ ಭಾರತ. 2013ರ ನೂತನ ಕಂಪೆನಿ ಕಾಯ್ದೆಯ (Companies Act) ಪ್ರಕಾರ ಕಂಪೆನಿಗಳು ಮೂರು ವರ್ಷಗಳ ಸರಾಸರಿ ಆದಾಯದ ಶೇಕಡಾ 2 ರಷ್ಟು ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಗಳಿಗೆ ಒದಗಿಸಬೇಕು. ವಾರ್ಷಿಕ 1 ಸಾವಿರ ಕೋಟಿ ಅಥವಾ ಹೆಚ್ಚಿನ ವಹಿವಾಟು ನಡೆಸುವ, 500 ಕೋಟಿ ಅಥವಾ ಹೆಚ್ಚಿನ ಮೌಲ್ಯದ ಕಂಪೆನಿಗಳು, ವಾರ್ಷಿಕ 5 ಕೋಟಿಗೂ ಹೆಚ್ಚಿನ ನಿವ್ವಳ ಲಾಭ ಗಳಿಸುತ್ತಿರುವ ಕಂಪೆನಿಗಳು ಶೇಕಡಾ 2ರಷ್ಟು ಲಾಭಾಂಶವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಗಳಿಗೆ ಒದಗಿಸಬೇಕು.
2016-17 ರಲ್ಲಿ 21,063 ಖಾಸಗಿ ಕಾರ್ಪೊರೇಟ್ ಕಂಪೆನಿಗಳು ದೇಶದಲ್ಲೆಡೆ CSR ಕಾರ್ಯಕ್ರಮದಡಿ ವ್ಯಯಿಸಿದ ಒಟ್ಟು ಮೊತ್ತ ರೂ. 10,956 ಕೋಟಿ. 407 ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳು (Public Sector Undertakings – PSU) ಇದೇ ವರ್ಷದಲ್ಲಿ ವ್ಯಯಿಸಿದ ಒಟ್ಟು ಹಣ ರೂ. 3,285 ಕೋಟಿ. 2017-18 (ಅಕ್ಟೋಬರ್ 2018ರವರೆಗೆ) ರ ಅವಧಿಯಲ್ಲಿ 3041 ಖಾಸಗಿ ಕಾರ್ಪೊರೇಟ್ ಕಂಪೆನಿಗಳು ರೂ. 6,886 ಕೋಟಿ ವ್ಯಯಿಸಿದರೆ, 76 ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳು ರೂ 1,479 ಕೋಟಿ ವ್ಯಯಿಸಿವೆ.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯ ಸರಿಯಾದ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಕೇಂದ್ರೀಕೃತ ಪರಿಶೀಲನೆ ಮತ್ತು ಅಭಿಯೋಜನೆ ಕಾರ್ಯವಿಧಾನ (Centralised Scrutiny and Prosecution Mechanism) ರೂಪಿಸಿದೆ. ಅದರಂತೆ, 2014-15ರ ಅವಧಿಯಲ್ಲಿ ಕಂಪೆನಿ ಕಾಯ್ದೆಯ ಪ್ರಕಾರ CSR ಪಾಲಿಸದ ಕಂಪೆನಿಗಳ ವಿರುದ್ಧದ 366 ಪ್ರಕರಣಗಳಲ್ಲಿ ಅಭಿಯೋಜನೆಗೆ (Prosecution) ಅನುಮತಿ ನೀಡಲಾಗಿದೆ. ಕಾರ್ಪೊರೇಟ್ ಸಚಿವಾಲಯದ ಪ್ರಕಾರ ನ್ಯೂನತೆಗಳು ಗಮನಕ್ಕೆ ಬಂದಾಗ ಆಯಾ ಕಂಪೆನಿಗಳಿಂದ ವಿವರ ಕೋರಿ ಪತ್ರ ಬರೆಯಲಾಗುತ್ತದೆ. ಈ ಸಂಬಂಧ 2015-16 ರಲ್ಲಿ ಬರೆಯಲಾಗಿರುವ ಪತ್ರಗಳ ಸಂಖ್ಯೆ 5,382. ಅಂದರೆ, ವರ್ಷದಿಂದ ವರ್ಷಕ್ಕೆ ನಿಯಮ ಪಾಲಿಸದಿರುವ ಅಥವಾ ನಿಯಮ ಉಲ್ಲಂಘಿಸಿ CSR ಚಟುವಟಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಇತ್ತೀಚಿಗಿನ ಒಂದು ವರದಿಯ ಪ್ರಕಾರ CSR ಚಟುವಟಿಕೆಗಳಿಗೆ ಖಾಸಗಿ ಕಾರ್ಪೊರೇಟ್ ವಲಯಗಳು ಕೆಲವು ಆಯ್ದ ಎನ್ ಜಿ ಒ ಗಳನ್ನು ಬಳಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಜೊತೆಗೆ, ಚುನಾವಣಾ ದೇಣಿಗೆ ನೀಡಲು ಮಧ್ಯವರ್ತಿ ಟ್ರಸ್ಟ್ ಗಳು ಸ್ಥಾಪನೆ ಆದಂತೆ CSR ಚಟುವಟಿಕೆಗಳಿಗೂ ಇಂತಹ ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿರುವುದೂ ಬೆಳಕಿಗೆ ಬಂದಿದೆ.
ಯಾವ ಕ್ಷೇತ್ರಕ್ಕೆ ಎಷ್ಟು ಹಣ:
CSR ಚಟುವಟಿಕೆಗಳಿಗಳ ಪೈಕಿ ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ವ್ಯಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಶಿಕ್ಷಣ ಕ್ಷೇತ್ರಕ್ಕೆ 2015-16 ರಲ್ಲಿ ರೂ 4,081 ಕೋಟಿ, 2016-17ರಲ್ಲಿ ರೂ. 4,459 ಕೋಟಿ ಹಾಗೂ 2017-18ರಲ್ಲಿ ರೂ 2,703 ಕೋಟಿ ಖರ್ಚು ಮಾಡಲಾಗಿದೆ. ಎರಡನೇ ಮತ್ತು ಮೂರನೆಯ ಅತಿ ಹೆಚ್ಚು CSR ಹಣ ಪಡೆದ ಕ್ಷೇತ್ರಗಳು ಗ್ರಾಮೀಣಾಭಿವೃದ್ಧಿ (ಮೂರು ವರ್ಷಗಳಲ್ಲಿ ರೂ 3,993 ಕೋಟಿ) ಮತ್ತು ಪರಿಸರ (ಮೂರು ವರ್ಷಗಳಲ್ಲಿ ರೂ 2,718 ಕೋಟಿ).